Friday, November 6, 2009

(ಅ)ಸ್ಥಿರ ಚಿತ್ರಗಳು


"ಮುನಿರಾಜು, ಬರಲಾ?" ಬೆಳೆಗ್ಗೆ ೬ ಗಂಟೆಗೇ ರಿಂಗ್ ಮಾಡಿದೆ.
"ಬಾ ಮಲ್ಲಿ. ಎರಡೇ ನಿಮಿಷ. ಬಂದೆ" ಅಂದ ಮುನಿರಾಜು.
ಈತ ಒಂದು ಕಾಲದಲ್ಲಿ ಒಳ್ಳೆ ಅಥ್ಲೀಟ್. ಈಗ ಹೊಟ್ಟೆ ಮುಂದೆ ಬಂದಿದೆ. ಎಲ್ಲಾ ಮಾಡುವುದೂ ಈ ಹೊಟ್ಟೆಗಾಗೇ ಅಲ್ವೆ. ಅದಕ್ಕೇ ಕ್ಷೌರಿಕ ವೃತ್ತಿ.
ಅವನು ಬರುವಷ್ಟರಲ್ಲಿ ಅವನ ಅಂಗಡಿ ಮುಂದೆ ನಿಂತಿದ್ದೆ.
"ಲೇಟಾಯ್ತಾ..." ಅಂದ. "ಇಲ್ಲ ಬಾ..." ಅಂದೆ.
ಅಂಗಡಿ ಮುಂದೆ ಚಪ್ಪಲಿ ಬಿಟ್ಟ. ರೋಲಿಂಗ್ ಷಟರ್‌ಗೆ ಮೂರು ಬಾರಿ ಕೈಯಲ್ಲಿ ಮುಟ್ಟಿ ಕಣ್ಣಿಗೊತ್ತಿಕೊಂಡ.
ಬೀಗದ ಕೈಯಿಂದ ಎಡಭಾಗದ ಬೀಗಕ್ಕೆ ಮೂರು ಬಾರಿ ಕುಟ್ಟಿದ. ಟಕ್ ಟಕ್ ಟಕ್...
ರೋಲಿಂಗ್ ಷಟರ್‌ಗೂ ಮೂರು ಬಾರಿ ಕುಟ್ಟಿದ. ಟಕ್ ಟಕ್ ಟಕ್...
ನಂತರ ಬೀಗ ತೆಗೆದ.
ಈಗ ಬಲಭಾಗದ ಸರದಿ! ಅಲ್ಲೂ ಬೀಗಕ್ಕೆ ಟಕ್ ಟಕ್ ಟಕ್...
ರೋಲಿಂಗ್ ಷಟರ್‌ಗೂ ಟಕ್ ಟಕ್ ಟಕ್...
ಬೀಗ ತೆಗೆದ. ಷಟರ್ ಮೇಲೆತ್ತಿದ.
ಬಾಗಿದವನೇ ಮೂರು ಬಾರಿ ನೆಲವನ್ನು ಮುಟ್ಟಿ ಕಣ್ಣಿಗೊತ್ತಿಕೊಂಡ.
ಅರ್ಧ ನೀರಿದ್ದ ಬಕೆಟ್ ತೆಗೆದು ಹೊರಗಿಟ್ಟ.
ಅಲ್ಲಿ ಎರಡು ಪೊರಕೆಗಳಿದ್ದವು. ಒಂದರಿಂದ ಅಂಗಡಿ ಮುಂದೆ ಗುಡಿಸಿದ. ಇನ್ನೊಂದರಿಂದ ಒಳಗೆ ಗುಡಿಸಿ, ಕಸವನ್ನು ಮೊರಕ್ಕೆ ತುಂಬಿ ಮೂಲೆಯಲ್ಲಿದ್ದ ಪ್ಲಾಸ್ಟಿಕ್ ಡಬ್ಬಕ್ಕೆ ಸುರಿದ. ಅಕ್ಕಸಾಲಿಗರಂತೆ ಕಸವನ್ನು ಅಮೂಲ್ಯವೆಂಬಂತೆ ಏಕೆ ಇಡುತ್ತಾನೆ. ಕೂದಲನ್ನು ಮಾರಬಹುದೇನೋ? ಕೇಳಲು ಮನಸ್ಸಾಗಲಿಲ್ಲ.
ನೀರನ್ನು ಅಂಗಡಿ ಮುಂದೆ ಚಿಮುಕಿಸಿದ.
"ಬಾ ಮಲ್ಲಿ" ಅಂದ. "ಅಬ್ಬಾ! ಮುಗಿಯಿತಾ ಇವನ ಪ್ರಾರಂಭೋತ್ಸವ" ಅಂದುಕೊಂಡು ಹೋಗಿ ಸಿಂಹಾಸನದ ಮೇಲೆ ಕುಳಿತೆ.
ದೇವರ ಪಟದ ಮೇಲಿದ್ದ ಹಳೆ ಹೂ ತೆಗೆದ. ಊದುಕಡ್ಡಿ ಬೆಳಗಿದ. ಸಿಕ್ಕಿಸಿದ. ಕೆಳಗೊಂದು ಪೇಪರ್ ಇಟ್ಟ, ಬೂದಿ ಬೀಳಲು. ಎಫ್.ಎಮ್. ಹಾಕಿದ. ಸುಪ್ರಭಾತ ಶುರುವಾಯ್ತು. ಡ್ರಾ ಒಳಗಿಂದ ಕತ್ತರಿ, ಬಾಚಣಿಗೆ ಇತ್ಯಾದಿ ತನ್ನ ಆಯುಧಗಳನ್ನು ಹೊರತೆಗೆದ. ಅದನ್ನೂ ಕಣ್ಣಿಗೊತ್ತಿಕೊಂಡ, ಮೂರು ಬಾರಿ!
ಬಟ್ಟೆ ತೆಗೆದು ನನ್ನ ಕುತ್ತಿಗೆಗೆ ಬಿಗಿದ. "ನನ್ನ ತಲೆ(ಕೂದಲನ್ನೂ) ಕೈಯಿಂದ ಮುಟ್ಟಿ ಕಣ್ಣಿಗೊತ್ತಿಕೊಂಡರೆ, ಅದೂ ಮೂರು ಬಾರಿ!" ಅಂದುಕೊಳ್ಳುತ್ತಿದ್ದಂತೆ ಕತ್ತರಿ ಬಾಚಣಿಗೆ ತೆಗೆದುಕೊಂಡು, "ಮೀಡಿಯಮ್ಮಾ? ಶಾರ್ಟಾ?" ಅಂದ...
ಬಚಾವಾಗಿದ್ದೆ!
* * * * *


ವೆಂಕಟರಮಣ ಮತ್ತು ನಾನು ಬೆಳಿಗ್ಗೆ ವಾಕಿಂಗ್ ಹೋಗಿ ಬರುವಾಗ ರಾಮಣ್ಣನ ಹೋಟೆಲ್‌ಗೆ ಹೋದೆವು. ಕಾಫಿ ಕುಡಿದು ಹಣಕೊಟ್ಟೆ.
"ಅಲ್ಲಿಡಿ ಸ್ವಾಮಿ" ಅಂದ ರಾಮಣ್ಣ. ಆತನ ಗಲ್ಲ(ಕ್ಯಾಷ್ ಟೇಬಲ್) ಮೇಲೊಂದು ಟ್ರೇ. ಅದರಲ್ಲಾಗಲೇ ಹತ್ತು ಮತ್ತು ಇಪ್ಪತ್ತು ರೂಗಳ ಒಂದೊಂದು ನೋಟುಗಳಿದ್ದವು.
ಎಲ್ಲರೂ ಹಣವನ್ನು ಒಳಗಿಟ್ಟರೆ, ಈತ ಏಕೆ ಎಲ್ಲರಿಗೂ ಕಾಣುವಂತೆ ಪ್ರದರ್ಶನಕ್ಕೆ ಇಟ್ಟಿದ್ದಾನೆ ಅಂದುಕೊಳ್ಳುತ್ತಾ ಇನ್ನೊಮ್ಮೆ, "ತಗೊಳ್ಳಿ ರಾಮಣ್ಣ" ಅಂದೆ.
ಮತ್ತೆ ಆತ " ಅಲ್ಲಿಡಿ ಸ್ವಾಮಿ" ಅಂದ.
"ಯಾಕ್ರೀ ರಾಮಣ್ಣ, ನೋಟು ಮುಟ್ಟಿದರೆ ಹೆಚ್೧ಎನ್೧ ವೈರಸ್ ಬರುತ್ತಾ?" ಕಿಚಾಯಿಸಿದೆ.
"ಹೆ..ಹ್ಹೆ...ಹ್ಹೆ... ಹಾಗಲ್ಲ ಸ್ವಾಮಿ. ಮೊದಲು ಬರೋ ಹತ್ತು ಗಿರಾಕಿಗಳ ನೋಟು ಮುಟ್ಟಲ್ಲ. ಇಲ್ಲಿ ಟ್ರೇನಲ್ಲಿ ಹಾಕಿಸಿಕೊಳ್ತೀನಿ. ಆ ಹತ್ತು ಜನರಲ್ಲಿ ಒಬ್ಬರದಾದ್ರೂ ಕೈಗುಣ ಚೆನ್ನಾಗಿರುತ್ತಲ್ಲ... ವ್ಯಾಪಾರ ಚೆನ್ನಾಗಿ ಆಗುತ್ತೆ" ಅಂದ.
ಅವನ ತರ್ಕಕ್ಕೆ ತಲೆದೂಗಿದ್ದೆ!
* * * * *

ನನ್ನ ಸ್ನೇಹಿತ ವೆಂಕಟರಮಣನದ್ದು ಮಿಲ್ಟ್ರಿ ಹೋಟೆಲ್. ಎಲ್ಲರದ್ದೂ ಬೆಳಿಗ್ಗೆ ವ್ಯಾಪಾರ ಶುರುವಾದರೆ ಈತನದ್ದು ಮದ್ಯಾಹ್ನ. ಎಲ್ಲರಿಗೂ ಭಾನುವಾರ ರಜವಾದರೆ ಇವರಿಗೆ ಶನಿವಾರ ರಜ.
ಆ ದಿನ ಚಿಲ್ಲರೆ ಬೇಕಾಗಿತ್ತು. ಇವನ ಹೋಟೆಲ್‌ಗೆ ಹೋಗಿ ಕೇಳಿದೆ. "ಇನ್ನೂ ಬೋಣಿನೇ ಆಗಿಲ್ಲ" ಅಂದ.
ಅಷ್ಟರಲ್ಲಿ ಯಾರೋ ಬಂದು, "ಚಿಕನ್, ಮಟನ್... ಏನಿದೆ?" ಅಂದರು.
"ಇನ್ನೂ ರೆಡಿಯಾಗ್ಬೇಕು. ಸ್ವಲ್ಪ ಹೊತ್ತಾಗುತ್ತೆ" ಅಂದುಬಿಟ್ಟ ವೆಂಕಟರಮಣ. ಅವರು ಹೊರಟುಹೋದರು.
ನನಗೆ ಅಚ್ಚರಿ. "ಅಲ್ಲಯ್ಯಾ ನೂರರಿಂದ ನೂರೈವತ್ತು ಬಿಲ್ ಮಾಡುವ ಹಾಗಿದ್ದರು. ಯಾಕೆ ಕಳಿಸಿಬಿಟ್ಟೆ? ನನಗೆ ನೋಡಿದರೆ ಬೋಣಿ ಆಗಿಲ್ಲ ಅಂತೀಯಲ್ಲ" ಅಂದೆ.
"ಮೊದ್ಲ ಬೋಣಿ ಜಾಸ್ತಿ ಬಿಲ್ ಮಾಡಿದ್ರೆ ಆ ದಿನ ಪೂರ್ತಿ ಸರಿಯಾಗಿ ವ್ಯಾಪಾರ ಆಗಲ್ಲ. ಅದಕ್ಕೇ ಕಳ್ಸಿದ್ದು" ಅಂದ.
ಅಷ್ಟರಲ್ಲಿ ರೈತರೊಬ್ಬರು ಬಂದು "ಸಂಗಟಿ ಉಂದಾಪ್ಪ?"(ಮುದ್ದೆ ಇದ್ಯಾಪ್ಪ?) ಅಂದರು.
"ಉಂದನ್ನ"(ಇದೆಯಣ್ಣ) ಎನ್ನುತ್ತಾ ವೆಂಕಟರಮಣ ತಾನೇ ಎದ್ದು ಓಡುತ್ತಾ "ಏ... ಒಂದು ಪ್ಲೇಟ್ ಮುದ್ದೆ" ಎಂದು ಹುಡುಗರಿಗೆ ಕೂಗಿ ಹೇಳುತ್ತಾ ಹೋದ.
ತಟ್ಟೆಗೆ ಮುದ್ದೆ ಇಟ್ಟು ಲೋಟದಲ್ಲಿ ಶೇರ್ವಾ ಹಾಕುತ್ತಿದ್ದ ಹುಡುಗನಿಂದ ತಟ್ಟೆ ತಗೊಂಡು ಬಂದು ಟೇಬಲ್ ಮೇಲೆ ಆ ರೈತರ ಮುಂದಿಟ್ಟ. ಹುಡುಗನಿಗೆ ನೀರು ತರಲು ಹೇಳಿದ.
ಐದು ಹತ್ತು ರುಪಾಯಿ ಬಿಲ್‌ಗೆ ಇಷ್ಟು ಉತ್ಸಾಹ ತೋರುವ ಇವನನ್ನು ಅಚ್ಚರಿಯಿಂದ ನೋಡುತ್ತಿದ್ದ ನನ್ನ ಬಳಿ ಬಂದು, "ಮೊದಲ ಬೋಣಿ ಹಿಂಗೆ ಕಡಿಮೆ ಆಗ್ಬೇಕು. ಆಗ ದಿನ ಪೂರ್ತಿ ಚೆನ್ನಾಗಿ ವ್ಯಾಪಾರ ಆಗುತ್ತೆ" ಅಂದ.
* * * * *


ಅಂಗಡಿ ಮುಚ್ಚಿ ರಾತ್ರಿ ಮನೆಗೆ ಹೋಗುವಾಗ ಫ್ಯಾನ್ಸಿ ಸ್ಟೋರ್ ಚಂದು ಅಂಗಡಿ ಮುಂದೆ ಹೋದೆ.
"ಏನು ಚಂದು ಇನ್ನೂ ಕ್ಲೋಸ್ ಮಾಡಿಲ್ಲ?" ಅಂದೆ.
"ಈಗ ಮಾಡ್ಬೇಕು" ಎನ್ನುತ್ತಾ ತನ್ನ ಅಂಗಡಿ ಹೊರಗೆ ನೇತಾಕಿದ್ದ ಬ್ಯಾಗು, ಬಾಲು, ಕಾಯಿನ್‌ಬೂತ್ ಇತ್ಯಾದಿ ಒಳಗಿಡತೊಡಗಿದ.
ಜೊತೆಯಲ್ಲಿ ಹೋದರಾಯ್ತೆಂದು ನಾನೂ ಅಲ್ಲೇ ನಿಂತೆ.
ಸ್ವಿಚ್ಚುಗಳನ್ನೆಲ್ಲ ಆಫ್ ಮಾಡಿದ. ಮೈನ್ ಸ್ವಿಚ್ಚನ್ನೂ ಆರಿಸಿದ. ಕತ್ತಲಲ್ಲಿ ಏನನ್ನೋ ತಡಕಾಡುತ್ತಿರುವವನಂತೆ ಕಂಡ. ನೋಡಿದರೆ ಆಫ್ ಆಗಿದೆಯೋ ಇಲ್ಲವೋ ಎಂದು ಸ್ವಿಚ್ಚುಗಳ ಮೇಲೆ ಕೈಯಾಡಿಸುತ್ತಿದ್ದಾನೆ. ನೋಡುತ್ತಿದ್ದಂತೆಯೇ ಪ್ಲಗ್ ಪಾಯಿಂಟ್‌ನಲ್ಲೂ ಬೆರಳಿಟ್ಟುಬಿಟ್ಟ!
ರೋಲಿಂಗ್ ಷಟರ್ ಎಳೆದ. ಬೀಗಗಳನ್ನು ಹಾಕಿದ. ನಂತರ ಆ ದಪ್ಪ ಬೀಗವನ್ನು ಎರಡೂ ಕೈಗಳಲ್ಲಿಡಿದು ಎಳೆಯತೊಡಗಿದ. ರೋಲಿಂಗ್ ಷಟರ್ "ಗರಕ್...ಗರಕ್..." ಎಂದು ಶಬ್ದ ಮಾಡಿತು.
ಎರಡೂ ಕಡೆ ಹೀಗೆ ಬೀಗಗಳನ್ನು ಎಳೆದ. ಅಲ್ಲಿಂದ ಹೊರಟಾಗಲೂ ಅವನ ಮುಖದಲ್ಲಿ ಏನೋ ಕೊಂಚ ಅನುಮಾನ, ಅಸಮಾಧಾನವಿತ್ತು. ಅಕಸ್ಮಾತ್ ಇವನು ಚಿನ್ನದ ಅಂಗಡಿ ಇಟ್ಟಿದ್ದಿದ್ದರೆ?!
"ಮಗ ಹೇಗಿದ್ದಾನೆ ಚಂದು?" ಎಂದು ವಿಷಯಾಂತರ ಮಾಡಿದೆ. ಮನೆಕಡೆ ಹೆಜ್ಜೆ ಹಾಕಿದೆವು.

18 comments:

ರೂಪಾ ಶ್ರೀ said...

ಮನುಷ್ಯನಿಗಿಂತ ವಿಚಿತ್ರ ಪ್ರಾಣಿ ಬೇರೊಂದಿಲ್ಲ!!
ನೀವು ಕೊಟ್ಟ ಶೀರ್ಷಿಕೆ ತುಂಬಾ ಅರ್ಥಪೂರ್ಣವಾಗಿದೆ :) ನನಗೆ ಹೆಚ್ಚಿಗೆ ಹೇಳೋಕೆ ಬರಲ್ಲ, ತುಂಬಾ ಇಷ್ಟ ಆಯಿತು..

sunaath said...

ಬರೀ ಕ್ಯಾಮರಾದ observation ಅಷ್ಟೇ ಅಲ್ಲ, ಮನುಷ್ಯನ ನಡವಳಿಕೆಗಳ ವೈಚಿತ್ರ್ಯಗಳ observationದಲ್ಲೂ ಸಹ ನಿಮ್ಮದು ಕುಶಲಮತಿ. ಬರೆದದ್ದೂ ಸಹ ಸರಸ ಹಾಗೂ ನಿಖರವಾಗಿದೆ.
Hats off!

ಸವಿಗನಸು said...

ಮಲ್ಲಿ ಸರ್,
Observationನಲ್ಲಿ ಎಷ್ಟೆಲ್ಲಾ ಇದೆ....
ಚೆನ್ನಾಗಿ ಬರೆದಿದ್ದೀರ....

Keshav.Kulkarni said...

ನಿಮ್ಮ ಗಮನ ಶಕ್ತಿ ಮತ್ತು ಅದನ್ನು ಬರೆಯುವ ಶಕ್ತಿ ಎರಡೂ ಸಕತ್!
- ಕೇಶವ (www.kannada-nudi.blogspot.com)

Ittigecement said...

ಹುಡುಕಾಟದವರೆ....

ಕ್ಯಾಮರ ಇಲ್ಲದೆ ಸಾದಾ ಕಣ್ಣಿಂದಲೂ ಏನೆಲ್ಲ ನೋಡಿ ಬಿಡುತ್ತೀರಿ ಸ್ವಾಮಿ...!
ಇಲ್ಲಿ ಬಂದ ಎಲ್ಲ ನಡುವಳಿಕೆಗಳು..
ಅವುಗಳಿಗೆ ಕಾರಣಗಳು... ಮಸ್ತ್ ಆಗಿದೆ..

ನಮ್ಮ ನಿಮ್ಮಲ್ಲೂ ಗೊತ್ತಿಲ್ಲದಂತೆ ಇಂಥವುಗಳು ಇದ್ದಿರುತ್ತವೆ...

"ಬೋಣಿಗಳ" ವಿಚಾರ ಬರೆಯಿರಿ ಸಾರ್..! ಸಕತ್ ಆಗಿದೆ...

ಫೋಟೊಗಳ ಸಂಗಡ ಬರವಣಿಗೆಯನ್ನೂ ಉಣ ಬಡಿಸಿ...

ನಿಮ್ಮ ಇಂಥಹ ಬರಹಕ್ಕೆ ಫೋಟೊಗಳು ಬೇಕಿಲ್ಲ...
ಬರಹದಲ್ಲಿ ಬಿಡಿಸಿಟ್ಟ ಚಿತ್ರಗಳು ಮನಸ್ಸಲ್ಲಿ ಮೂಡಿಬಿಡುತ್ತವೆ...

ಅಭಿನಂದನೆಗಳು...

ಸುಮ said...

ಲೇಖನ ಚೆನ್ನಾಗಿದೆ . ಇಂತಹ ಚಿಕ್ಕ ಪುಟ್ಟ ನಂಬಿಕೆಗಳು ನೋಡುವವರಿಗೆ ನಗು ತರಿಸಿದರೂ ಆಚರಿಸುವವರಿಗೆ ತುಂಬ ನೆಮ್ಮದಿ ಕೊಡುತ್ತವಲ್ಲವೆ.

ಸೀತಾರಾಮ. ಕೆ. / SITARAM.K said...

ಮಾನವನ ನಡವಳಿಕೆಯಲ್ಲಿನ ಸ್ತಿರದೆಡೆಗಿನ ಅಸ್ತಿರತೆಯನ್ನು, ಸುಕ್ಷ್ಮಾವಲೋಕನ ಮಾಡಿ, ವಿಭಿನ್ನ ನಿರ್ಲಿಪ್ತ ದಾಟಿಯಲ್ಲಿ ಸುಮಧುರ ಲೇಖನದೊ೦ದಿಗೆ ಉಣಬಡಿಸಿದ್ದಿರಾ!! ಧನ್ಯವಾದಗಳು.

Unknown said...

ಮಲ್ಲಿಕಾರ್ಜುನ್ ಅದ್ಭುತವಾದ ವ್ಯಕ್ತಿಚಿತ್ರಣ ಬರೆದಿದ್ದೀರಿ. ಮನುಷ್ಯನ ಸ್ವಭಾವಗಳು ಇಷ್ಟೇ ಎಂದು ಹೇಳುವಂತೆಯೇ ಇಲ್ಲ! ನಮ್ಮಲ್ಲಿಯೂ ಒಬ್ಬ ಬಾಲರಾಜ್ ಅನ್ನುವ ಸಹಾಯಕರಿದ್ದಾರೆ. ಸಂಜೆ ಲೈಬ್ರರಿ ಕ್ಲೋಸ್ ಆಗುತ್ತಿದ್ದಂತೆ ಆರೇಳು ಬಾರಿಯಾದರೂ ಬೀಗ ಜಗ್ಗಿ ಎಳೆದಾಡುತ್ತಾರೆ. ನನ್ನ ರೂಮಿನ ಬೀಗ ಹಾಕಿದ್ದರೂ ತೆಗೆದು, ನನ್ನ ಕಂಪ್ಯೂಟರ್ ಶೆಡ್ ಡೌನ್ ಆಗಿದೆಯೇ, ಮೈನ್ ಸ್ವಿಚ್ ಆಗಿದೆಯೇ ಎಂದು (ನಾನು ಮಾಡಿದ್ದೇನೆ ಎಂದು ಹೇಳಿದರೂ) ಚೆಕ್ ಮಾಡಿಯೇ ಹೊರಡುವುದು.
ನಮ್ಮ ಮನೆಯ ಹತ್ತಿರ ಪ್ರಾವಿಜನ್ ಸ್ಟೋರ್ಸ್ ಇಟ್ಟುಕೊಂಡಿರುವ ಶೆಟ್ಟರೊಬ್ಬರು ಗಲ್ಲಾಪೆಟ್ಟುಗೆಯನ್ನೇ ಇಟ್ಟುಕೊಂಡಿರಲಿಲ್ಲ. ಪ್ಲಾಸ್ಟಿಕ್ ಕವರಿನಲ್ಲಿಯೇ ಚಿಲ್ಲರೆ ನೋಟು ಎಲ್ಲವನ್ನೂ ತುಂಬಿಸಿಟ್ಟುಕೊಳ್ಳುತ್ತಿದ್ದರು. ಆ ಕವರ್ ಹರಿದು ಹೋಗುವಂತಾಗಿದ್ದರೂ ಬದಲಾಯಿಸುತ್ತಿದ್ದುದು ತುಂಬಾ ಅಪರೂಪಕ್ಕೆ!
ಇದು ಸರಣಿಯಂತೆ ಮುಂದುವರೆಯಲಿ ಎಂಬುದು ನನ್ನ ಆಸೆ ಸಲಹೆ.

ಚಿತ್ರಾ said...

ಮಲ್ಲಿ,
ಮನುಷ್ಯ ಪ್ರಾಣಿಯ ಚಿತ್ರ-ವಿಚಿತ್ರ ಸ್ವಭಾವದ ಕೆಲವು ಚಿತ್ರಗಳನ್ನು ನಮ್ಮೆದುರಿಗೆ ಬಲು ಸುಂದರವಾಗಿ ಹರವಿದ್ದೀರಿ !
ನನ್ನ ಸ್ನೇಹಿತೆಯೊಬ್ಬಳಿಗೆ ಅವಳ ಅದೃಷ್ಟದ ಉಡುಪೊಂದಿತ್ತು . ಪರೀಕ್ಷೆಯ ಸಮಯದಲ್ಲಿ , ಪ್ರತಿ ಪೇಪರ್ ಗೂ ಅದೇ ಉಡುಪನ್ನು ಹಾಕಿಕೊಂಡು ಹೋಗುತ್ತಿದ್ದಳು . ಪರೀಕ್ಷೆ ಮುಗಿಯುವವರೆಗೂ ಆ ಬಟ್ಟೆ ನೀರು ಕಾಣುತ್ತಿರಲಿಲ್ಲ ! ಆ ಬಗ್ಗೆ ಯಾರು ಎಷ್ಟೇ ರೇಗಿಸಿದರೂ ಅವಳು ನಕ್ಕುಸುಮ್ಮನಾಗುತ್ತಿದ್ದಳು.

ಚಂದದ ಲೇಖನ !

AntharangadaMaathugalu said...

ಮಲ್ಲಿ ಸಾರ್...
ಬರಹ ಚೆನ್ನಾಗಿದೆ. ಹೌದು ಈ ನಂಬಿಕೆಗಳು ಎಲ್ಲ ಕಡೆಯೂ ಅಥವಾ ಎಲ್ಲರಲ್ಲೂ ಇದ್ದೇಇವೆ. ಕ್ರಿಕೆಟಿಗರ ಇಂಥ ನಂಬಿಕೆಗಳ ಬಗ್ಗೆ ನಾವು ಓದುತ್ತಲೇ ಇರುತ್ತೇವೆ. ನಾನು ಈಗಲೂ ತರಕಾರಿ, ಹಣ್ಣು ಏನಾದರೂ ತರಲು ಹೋದಾಗ ’ಬೋಣಿ’ ಎಂದು ಅವರು ಹೇಳಿಬಿಟ್ಟರಂತೂ... ನಾನು ೧೦ - ೧೨ ಸಲಿಯಾದರೂ ಒಳ್ಳೆಯ ವ್ಯಾಪಾರ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸಿರುತ್ತೇನೆ :-)

ಶ್ಯಾಮಲ

shivu.k said...

ಮಲ್ಲಿಕಾರ್ಜುನ್,

ಇದು ನಿಜಕ್ಕೂ ಕ್ಯಾಮರದಾಚೆಗಿನ ಕ್ಯಾಮೆರ ನೋಟ.
ಮೊದಲು ನೋಡುವುದನ್ನು ಬರೆಯುವುದು, ನಂತರ ಬರೆಯುತ್ತಲೇ ಬರೆದುದನ್ನು ಕ್ಯಾಮೆರ ಮೂಲಕ ನೋಡುವುದು, ಅಮೇಲೆ ಕ್ಯಾಮೆರಾ ಕಂಡ ಸೂಕ್ಷ್ಮತೆಗಳಿಗೆ ಬರಹದ ಮೂಲಕ ಮತ್ತಷ್ಟು finishing touch ಕೊಡುವುದು. ಎರಡನ್ನು ಪೂರಕವಾಗಿ ಬಳಸಿಕೊಂಡು ಬೆಳೆಯುವುದು ಅಂದರೆ ಇದೇ ಅಲ್ಲವೇ....

ಮೊದಲು ಚಿತ್ರಗಳ ಸಹಿತ ಲೇಖನವನ್ನು ಒಂದಕ್ಕೊಂದು ಆಧಾರವಾಗಿ ಬರೆದು ನಂತರ ಚಿತ್ರಗಳ ಮೂಲಕ ಬರಹದ ಎಲ್ಲಾ ಹೊಳಹುಗಳನ್ನು ಬರಹವಿಲ್ಲದೇ ಹೇಳಿಬಿಡುವುದು, ಅದರ ಮುಂದುವರಿಕೆಯೆಂದರೆ ಬರಹದ ಮೂಲಕ ಅನೇಕ ಸಾಲು ಚಿತ್ರಗಳ ಎಲ್ಲಾ ಹೊಳಹುಗಳನ್ನು ಚಿತ್ರಗಳ ಅವಶ್ಯಕತೆಯಿಲ್ಲದೇ ಹೀಗೆ ಬರೆದುಬಿಡುವುದು.....

ಈಗ ನಿಮಗೆ ಎರಡು ವಿಭಾಗದಲ್ಲಿ ಪಕ್ವತೆಯ ಮೂಡುತ್ತಿದೆಯೆನಿಸುತ್ತಿದೆ.
ಮುಂದುವರಿಸಿ....

ವಿನುತ said...

ನಿಮ್ಮ ಛಾಯಾಚಿತ್ರಗಳಂತೆ ನಿಮ್ಮ ಬರಹವೂ ವಿವಿಧ ಕೋನಗಳನ್ನು ಚೆನ್ನಗಿ ಚಿತ್ರಿಸುತ್ತದೆ. ಅರ್ಥಪೂರ್ಣ ಶೀರ್ಷಿಕೆ. ಅಭಿನಂದನೆಗಳು.

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ... ಚನ್ನಾಗಿದೆ..

ಸಾಗರದಾಚೆಯ ಇಂಚರ said...

ಸಕತ್ತಾಗಿದೆ ಸರ್ ಬರಹ,
ನಿಮ್ಮ ಕಣ್ಣುಗಳು ಬಹಳ ಸೂಕ್ಷ್ಮವಾಗಿ ಅಭ್ಯಸಿಸುತ್ತವೆ

ಬಾಲು said...

ತುಂಬಾ ಚೆನ್ನಾಗಿ ಗಮನಿಸಿದ್ದಿರಿ. ಅದರಲ್ಲೂ ಎಲ್ಲ ಕ್ಶೌರಿಕರಂತು ಹಾಗೇನೇ...

Anonymous said...

nimmanthe bareyalu barodillavadaru.... chitragalu...baraha thumbaa ishtavayithu.... nammalli kelavarige maatra oliyuva kale nimage karathalaamalakavagide...dhanyavaada nimage inthaa sundara chitragalige mattu chendhada barahakke....

ಕೃಷಿಕನ ಕಣ್ಣು said...

"Camera"dinda Chip mele sundar chitragalannu muudisaballa nimma adbhuta kaichalakadashte sogasaagidyallri illina canvas mele neevu muudisida"nudi chitra"
galu!!.Baraha tumbaa ishta aaytu.
Sheershike mttu barahada besuge.....vaaaaw!.
Hats off Malli!.
Putta... aadare.. putavitta baraha.
Nagendra Muthmurdu.

ಸುಧೇಶ್ ಶೆಟ್ಟಿ said...

ತು೦ಬಾ ಚೆನ್ನಾಗಿತ್ತು...

ನೀವು ಇದೇ ತರಹ ಏನಾದರೂ ಮಾಡ್ತೀರಾ ಫೋಟೋ ತೆಗೆಯುವು ಮೊದಲು....? :)