Thursday, October 15, 2009

ಇದು ಸುಂದರ ಜೇಡ!


"ಸ್ಪೈಡರ್‌ಮ್ಯಾನ್... ಸ್ಪೈಡರ್‌ಮ್ಯಾನ್...ಸಿಂಪ್ಲಿ ನೈಬರ್‌ಹುಡ್ ಸ್ಪೈಡರ್‌ಮ್ಯಾನ್.."ತನ್ನ ಅಂಗೈಯಿಂದ ಸರ್ರಂತ ನೂಲನ್ನು ಹೊರ ಸೂಸುತ್ತಾ, ಎತ್ತರದ ಕಟ್ಟಡಕ್ಕೆ ಅದು ಅಂಟಿಕೊಳ್ಳುತ್ತಿದ್ದಂತೆ ಹಾರುತ್ತಾ ಸಾಗುವ ಈ ವಿಶಿಷ್ಟ ಪಾತ್ರವನ್ನು ನೋಡಿ ನಾವೆಲ್ಲಾ ಬೆರಗಾಗಿದ್ದೇವೆ.ಮ್ಯಾಕ್ರೋಲೆನ್ಸ್‌ನಲ್ಲಿ ಜೇಡವೊಂದನ್ನು ನೋಡುತ್ತಾ ಫೋಟೋ ತೆಗೆಯುವಾಗ ಇದೇ ಬೆರೆಗಾಯ್ತು. ನೋಡನೋಡುತ್ತಿದ್ದಂತೆಯೇ ತನ್ನ ದೇಹದ ಕೆಳಭಾಗದಿಂದ ಸುಯ್ಯನೇ ದಾರವನ್ನು ಹಾರಿಬಿಟ್ಟಿತು. ಅದರ ಹೊಟ್ಟೆಯಲ್ಲಿರುವ ರೇಷ್ಮೆಗ್ರಂಥಿ ಸ್ರವಿಸುವ ದ್ರವ ಗಾಳಿ ತಾಕಿದೊಡನೆ ಗಟ್ಟಿಯಾಗುತ್ತದೆ. ನುಗ್ಗಿ ಬಂದ ಆ ದಾರ ಸ್ವಲ್ಪ ದೂರದಲ್ಲಿದ್ದ ಗಿಡದ ಎಲೆಗೆ ತಗುಲಿತು. ತಕ್ಷಣ ಈ ಗಿಡದಿಂದ ಜೇಡ ದಾರದ ಮೂಲಕ ಸರ್ರನೆ ಸಾಗಿ ನಾನು ಕಣ್ಮುಚ್ಚಿ ಬಿಡುವುದರೊಳಗೆ ಆ ಗಿಡದ ಎಲೆಯ ಮೇಲಿತ್ತು.

ನೇಯುವುದರಲ್ಲಿ ಸಾಹಸಿಯಾದ ಜೇಡ ಪ್ರಕೃತಿಯ ನೇಕಾರನೇ ಸರಿ. ಇದರ ಬಲೆಯ ದಾರ ಕೂದಲೆಳೆಗಿಂತ ಸಣ್ಣದಿದ್ದರೂ ಅಷ್ಟೇ ಸಣ್ಣದಾದ ಉಕ್ಕಿನ ದಾರಕ್ಕಿಂತ ಗಟ್ಟಿ.


ಈ ಸಾಹಸಿ ಜೇಡ ಅನೇಕ ಸಾಹಸಿಗಳಿಗೆ ಪ್ರೇರಣೆಯೂ ನೀಡಿದೆ. ಬಹಳ ಹಿಂದೆ ಸ್ಕಾಟ್ಲೆಂಡಿನ ರಾಜ ರಾಬರ್ಟ್ ಬ್ರೂಸ್ ಇಂಗ್ಲೆಂಡಿನ ಮೇಲೆ ಧಾಳಿ ಮಾಡಿದನಂತೆ. ಒಂದಲ್ಲ ಎರಡಲ್ಲ.. ಆರು ಬಾರಿ ದಂಡೆತ್ತಿ ಹೋದರೂ ಗೆಲ್ಲಲಾಗಲಿಲ್ಲ. ಸಾಕಷ್ಟು ಜನ, ಶಕ್ತಿ ಕಳೆದುಕೊಂಡು ನಿರಾಶನಾಗಿ ಒಂದು ಕಡೆ ಕುಳಿತು ಆತ್ಮಾವಲೋಕನ ಮಾಡಿಕೊಳ್ಳುವಾಗ ಅವನು ಜೇಡವೊಂದನ್ನು ಗಮನಿಸಿದನಂತೆ. ಅದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಬಲೆ ಹೆಣೆಯುವ ಪ್ರಯತ್ನದಲ್ಲಿತ್ತು. ಮೊದಲ ಪ್ರಯತ್ನ.. ದಾರ ತುಂಡಾಯಿತು. ಎರಡು, ಮೂರು...ಊಹೂಂ... ಆರು ಬಾರಿ ಸೋಲಾಯಿತು. ಆದರೂ ಅದು ಅಷ್ಟೇ ಉತ್ಸಾಹದಿಂದ ಏಳನೇ ಬಾರಿ ಪ್ರಯತ್ನಿಸಿತು. ಗೆದ್ದಿತು. ಅದನ್ನು ನೋಡುತ್ತಾ ರಾಜನಿಗೂ ಉತ್ಸಾಹ ಮೂಡಿ ಬಂತು. ಮತ್ತೊಮ್ಮೆ ತನ್ನ ಶಕ್ತಿ, ಜನ, ಆಯುಧಗಳನ್ನೆಲ್ಲಾ ಸೇರಿಸಿಕೊಂಡ. ಯುದ್ಧದಲ್ಲಿ ಜಯಶಾಲಿಯೂ ಆದ.


ನನ್ನ ಸ್ನೇಹಿತ ಅಜಿತ್ ತನ್ನ ಮನೆ ಬಳಿ ಸಿಕ್ಕ ಮೂರ್ನಾಕು ಜೇಡಗಳನ್ನು ಒಂದು ಡಬ್ಬದಲ್ಲಿ ಹಾಕಿಟ್ಟಿದ್ದ. ಎರಡು ದಿನ ಬಿಟ್ಟು ನೋಡಿದಾಗ ಒಂದೇ ಜೇಡವಿದೆ! ಇದು ಹೇಗಾಯ್ತು ಎಂದು ಗಮನಿಸಿದಾಗ ಮಿಕ್ಕ ಜೇಡಗಳನ್ನು ಈ ಜೇಡ ಕಬಳಿಸಿ ಅವಶೇಷಗಳನ್ನು ಉಳಿಸಿದೆ. ಜೇಡ ತನ್ನ ಬಲೆಯಲ್ಲಿ ಬಿದ್ದ ಕೀಟಗಳನ್ನು ತಿನ್ನುವುದಲ್ಲದೆ ತನ್ನ ಕುಲದವರನ್ನೂ ಬಿಡುವುದಿಲ್ಲ. ಈ ಸ್ವಜಾತಿ ಭಕ್ಷಣೆಯ ಗುಣದಿಂದಲೇ ಇವುಗಳಲ್ಲಿ ಒಟ್ಟು ಕುಟುಂಬ ಎಂಬುದಿಲ್ಲ.


ಇದರ ದೇಹ ಎರಡು ಭಾಗಗಳನ್ನು ಒಳಗೊಂಡಿದೆ. ಈ ಎರಡನ್ನೂ ಸೇರಿಸುವ ಕುತ್ತಿಗೆಯಂತಹ ಅಂಗವಿರುತ್ತದೆ. ಬೇರೆ ಕೀಟಗಳಿಗೆ ಆರು ಕಾಲುಗಳಿದ್ದರೆ ಜೇಡಕ್ಕೆ ಎಂಟು ಕಾಲುಗಳು. ಕೀಟಗಳಿಗಿರುವಂತಹ ತಲೆಯ ಮೇಲಿನ ಸ್ಪರ್ಶಾಂಗ ಜೇಡಕ್ಕಿಲ್ಲ. ಎರಡು ಸಾಲುಗಳಲ್ಲಿರುವ ಎಂಟು ಕಣ್ಣುಗಳು ಇದರ ವೈಶಿಷ್ಟ್ಯ. ಗಂಡಿಗಿಂತ ಹೆಣ್ಣು ಜೇಡ ಗಾತ್ರದಲ್ಲಿ ದೊಡ್ಡದು ಮತ್ತು ಸಾಮಾನ್ಯವಾಗಿ ಹೆಣ್ಣು ಜೇಡವೇ ಬಲೆಯನ್ನು ನೇಯುತ್ತದೆ. ಕೀಟಗಳಿಗೆ ಅಂಟುವ ಜೇಡನ ಬಲೆ ಜೇಡನಿಗೆ ಮಾತ್ರ ಅಂಟದು.



೩೫೦ ಮಿಲಿಯನ್ ವರ್ಷಗಳಿಂದಲೂ ಇರುವ ಈ ಜೇಡದ ಬಗ್ಗೆ ಗ್ರೀಕ್ ದೇಶದ ದಂತಕಥೆಯೊಂದಿದೆ. ಒಂದಾನೊಂದು ಕಾಲದಲ್ಲಿ "ಅರಾಕ್ನಿ" ಎಂಬ ಸುಂದರ ತರುಣಿ ರೇಷ್ಮೆ ಎಳೆಗಳಿಂದ ಬಟ್ಟೆಗಳನ್ನು ನೇಯುವುದರಲ್ಲಿ ಪ್ರವೀಣೆಯಂತೆ. ತನ್ನ ಕಲೆಯ ಬಗ್ಗೆ ಅಹಂಕಾರದಿಂದಿದ್ದ ಅವಳನ್ನು ಜ್ಞಾನದೇವತೆ ಅಥೀನೆ ಶಪಿಸಿದಳಂತೆ. ಈ ಶಾಪದಿಂದ ಅರಾಕ್ನಿ ಜೇಡವಾದಳು. ಈಕೆಯ ಹೆಸರಿಂದ ಜೇಡಗಳಿರುವ ವರ್ಗಕ್ಕೆ ಅರಾಕ್ನೈಡ್ ಅನ್ನುವರು. ಜೇಡಗಳ ಕುರಿತಾದ ಅಧ್ಯಯನಕ್ಕೆ ಅರಾಕ್ನಾಲಜಿ ಎನ್ನುತ್ತಾರೆ.



ಜೇಡಗಳ ಪ್ರಣಯವೇ ವಿಶೇಷ. ಅದರ ಮಿಲನವೆಂದರೆ ಗಂಡು ಜೇಡದ ಮರಣವೆಂದೇ ಅರ್ಥ. ಗಂಡು ಜೇಡವು ಮಿಲನದ ನಂತರ ಹೆಣ್ಣು ಜೇಡದಿಂದ ಪಾರಾಗಲು ಓಡುತ್ತದೆ. ಇಲ್ಲದಿದ್ದರೆ ಹೆಣ್ಣುಜೇಡಕ್ಕೆ ಅದು ಆಹಾರವಾಗುತ್ತದೆ. ಕೆಲವೊಮ್ಮೆ ಗಂಡು ಹೆಣ್ಣಿಗೆ ಆಹಾರ ತಂದುಕೊಟ್ಟು ನಂತರ ಸೇರುವುದುಂಟು. ಆದರೂ ಸರಸವೆಂದರೆ ಸಾವೇ!



ಹೆಣ್ಣು ಜೇಡ ಒಂದು ಬಾರಿಗೆ ನೂರಾರು ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳನ್ನಿಡುವುದಕ್ಕಾಗಿಯೇ ಅದು ರೇಷ್ಮೆಯ ಚೀಲವನ್ನು ತಯಾರಿಸುತ್ತದೆ.


ಎಲ್ಲಾ ಜೇಡಗಳಲ್ಲೂ ವಿಷವಿರುತ್ತದೆ. ಆದರೆ ಮಾನವನ ಚರ್ಮವನ್ನು ಅವುಗಳ ಕೊಂಡಿ ಬೇಧಿಸಲು ಅಸಾಧ್ಯ. ಕೆಲವು ದೊಡ್ಡ ಜೇಡಗಳು ಮಾತ್ರ ಮಾನವನಿಗೆ ಅಪಾಯಕಾರಿ. ಜೇಡ ತನ್ನ ಬಲೆಗೆ ಬಿದ್ದ ಕೀಟವನ್ನು ವಿಷಪೂರಿತವಾದ ತನ್ನ ಕೊಂಡಿಯಿಂದ ಚುಚ್ಚಿ ಸಾಯಿಸುತ್ತದೆ. ಇದರ ಬಾಯಿ ದ್ರವ ಆಹಾರವನ್ನು ಸೇವಿಸಲು ಮಾತ್ರ ಸಮರ್ಥವಾಗಿರುವುದರಿಂದ ಸತ್ತ ಕೀಟದ ಮೈಯೊಳಗಿನ ದ್ರವವನ್ನು ಹೀರಿ ಹೊರ ಮೈಯನ್ನು ಹಾಗೇ ಬಿಡುತ್ತದೆ.


ನ್ಯೂಯಾರ್ಕ್‌ನ ಕಮ್ಮಿಂಗ್ ಎಂಬಲ್ಲಿ ೧೮೯೮ನೇ ಇಸವಿಯಲ್ಲಿ ಒಂದು ವಿಚಿತ್ರ ಘಟನೆ ನಡೆಯಿತು. ಚಾರ್ಲ್ಸ್ ಎಂಬುವವರು ತಮ್ಮ ಉಗ್ರಾಣವನ್ನು ಸ್ವಚ್ಛಗೊಳಿಸುವಾಗ ಒಂದು ಮೂಲೆಯಲ್ಲಿ ಜೇಡವೊಂದು ಕಾಣಿಸಿತು. ಅದನ್ನು ಸಾಯಿಸಲು ಹೋದ ಅವರು ಅದು ಮೊಟ್ಟೆಯಿಟ್ಟಿರುವುದನ್ನು ಕಂಡು ಮನಸ್ಸು ಬದಲಾಯಿಸಿ ವಾಪಸಾದರು. ಮರುದಿನ ಹೋಗಿ ನೋಡಿದಾಗ ಅವರಿಗೆ ಆಘಾತ ಕಾದಿತ್ತು. ಜೇಡ ಮೊಟ್ಟೆಯಿಟ್ಟಿದ್ದ ಸ್ಥಳದ ಬಳಿ ಹಾವೊಂದು ಮಲಗಿತ್ತು. ಜೇಡ ಪರದಾಡುತ್ತಿತ್ತು. ಆದರೂ ಇವರು ಏನೂ ಮಾಡದೆ ವಾಪಸಾದರು. ಕುತೂಹಲದಿಂದ ಬೆಳಿಗ್ಗೆ ಹೋಗಿ ನೋಡಿದರೆ ಹಾವು ಸತ್ತಿದೆ! ಹತ್ತಿರದಿಂದ ಪರಿಶೀಲಿಸಿದಾಗ ಜೇಡ ತನ್ನ ನೂಲಿನೆಳೆಯನ್ನು ಹಾವಿನ ಬಾಯಿ ಕುತ್ತಿಗೆ ಎಲ್ಲಾ ಸುತ್ತಿಬಿಟ್ಟಿದೆ. ಈ ಸಾಹಸಿ ಜೇಡನನ್ನು ಮನಸ್ಸಿನಲ್ಲೇ ಅವರು ಅಭಿನಂದಿಸಿದರು.


ಇಂಥಹ ಜೇಡ ಕೀಟಗಳನ್ನು ಭಕ್ಷಿಸುತ್ತಾ ತಾನೂ ಆಹಾರವಾಗುತ್ತಾ ಜೀವಜಾಲದ ಅಮೂಲ್ಯ ಕೊಂಡಿಯಾಗಿದೆ. ಇದುವರೆಗೂ ಭಾರತದಲ್ಲಿ ೧೫೦೦ ಜಾತಿಯ ಜೇಡಗಳನ್ನು ಗುರುತಿಸಿದ್ದಾರೆ.


ಎಲ್ಲೆಲ್ಲೂ ನೀನೇ... ಎಲ್ಲೆಲ್ಲೂ ನೀನೇ... ಅನ್ನುವಂತೆ ಬೇಡ ಬೇಡ ಅಂದರೂ ಜೇಡ ಎಲ್ಲೆಲ್ಲೂ ಕಾಣಿಸುತ್ತದೆ!ಮರದ ಮೇಲೆ, ತೊಗಟೆ ಮೇಲೆ, ಎಲೆ ಕೆಳಗೆ, ಕೊಂಬೆಗಳಲ್ಲಿ, ಹೂಗಳ ಮೇಲೆ, ಕಲ್ಲಿನ ಕೆಳಗೆ, ಮುರಿದುಬಿದ್ದ ಮರದಡಿ, ಕಸಕಡ್ಡಿಗಳಲ್ಲಿ, ನೀರಬಳಿ, ಹುಲ್ಲಿನಲ್ಲಿ, ಪೊದೆಯಲ್ಲಿ... ಇಷ್ಟೆಲ್ಲ ಏಕೆ ನಮ್ಮ ಮನೆಗಳಲ್ಲೂ ಇವೆ. ಇದನ್ನೆಲ್ಲ ಓದಿದ ಮೇಲೆ ಮನದೊಳಗೂ... ಬಲೆ ಹೆಣೆದ ಜೇಡ!


ಅಷ್ಟಪಾದ

ಸರ್ವಾಂತರ್ಯಾಮಿ ಜೇಡ

ಕೆಂಪುಬಣ್ಣದ ಜೇಡ

25 comments:

Giri said...

Nice photos.. and info.

ಕ್ಷಣ... ಚಿಂತನೆ... said...

ಮಲ್ಲಿಕಾರ್ಜುನ ಸರ್‍,
ನಿಮಗೂ ನಿಮ್ಮ ಕುಟುಂಬದವರೆಲ್ಲರಿಗೂ, ದೀಪಾವಳಿ ಹಬ್ಬದ ಶುಭಾಶಯಗಳು.

ಜೇಡಗಳ ಚಿತ್ರಗಳೂ, ಅದಕ್ಕೆ ಸಂಬಂಧಿಸಿದ ವಿವರಗಳೂ ತುಂಬಾ ಮಾಹಿತಿದಾಯಕವಾಗಿವೆ. ಎಂಟು ಕಾಲಿನ ಜೇಡಗಳು ನಮ್ಮ ಕ್ಯಾಂಪಸ್ಸಿನಲ್ಲಿ ತುಂಬಾ ಇವೆ. ಮರದಿಂದ ಮರಕ್ಕೆ ಇವು ದೊಡ್ಡಗಾತ್ರದ ಬಲೆಯನ್ನು ಹೆಣೆಯುತ್ತವೆ. ಬಹಳ ಗಟ್ಟಿಯಾದ ಇವುಗಳ ಬಲೆ ಎಂತಹ ಗಾಳಿ-ಮಳೆಗೂ ಜಗ್ಗದು, ಹರಿಯದು.

ಸ್ನೇಹದಿಂದ,

ಚಂದ್ರು

Unknown said...

ಜೇಡದ ನೂಲೂ ಸಹ ಅತ್ಯಂತ ಸ್ಪಷ್ಟವಾಗಿ ಗೋಚರಿಸವಂತೆ.... ವಾವ್! ಅದ್ಭುತ ಫೋಟೋಗಳು. ಮಲ್ಲಿ ಕಾರ್ಜುನ್ ನಿಮ್ಮ ಹುಡುಕಾಟಕ್ಕೆ ಶ್ರಮಕ್ಕೆ, ಸಹನೆಗೆ ನನಾನೊಂತೂ ಬೆರಗಾಗಿದ್ದೇನೆ. ಫೋಟೋ ತೆಗೆದ ಮೇಲೆ ಅದರ ಬಗ್ಗೆ ನೀವು ಕಲೆ ಹಾಕಿ ಕೊಟ್ಟಿರುವ ಮಾಹಿತಿಯಂತೂ ನಿಮ್ಮ ಹುಡುಕಾಟದ ತೀವ್ರತೆಯನ್ನು ತೋರಿಸುತ್ತದೆ. ನಿಮ್ಮ ಹುಡಕಾಟ ಹೀಗೇ ನಿರಂತರವಾಗಿರಲಿ.

Unknown said...

ಜೇಡ ಬಲೆಯ ನೇಯುತ್ತಿತ್ತು.... ಎಂಬ ಪದ್ಯದ ಸಾಲುಗಳೂ ನೆನಪಾದವು. ಎಷ್ಟೋ ಹೊತ್ತಿನ ತನಕ ಈ ಪದ್ಯದ ಸಾಲುಗಳು ನಾಲಿಗೆಯ ಮೇಲೆ ನಲಿಯುತ್ತಲೇ ಇರುತ್ತವೆ., ಅನ್ನಿಸುತ್ತಿದೆ.

ವಿನುತ said...

ಮಾಹಿತಿ ಭರಿತ ಸುಂದರ ಸಚಿತ್ರ ಲೇಖನ. ಅದೆಲ್ಲಿಂದ ಹುಡುಕಿ ತರುತ್ತೀರೋ ಅಂತು ದೀಪಾವಳಿಗೆ ಭರ್ಜರಿ ಭೋಜನವನ್ನೇ ಹಾಕಿದ್ದೀರಿ. ಧನ್ಯವಾದಗಳು
ಹಾಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.

ಸವಿಗನಸು said...

Superb fotos...& good Information

Guruprasad said...

ಮಲ್ಲಿಕಾರ್ಜುನ್
ಅದ್ಬುತ ವಾದ ಸಚಿತ್ರ ಲೇಖನ,,, ಜೇಡದ ಬಗ್ಗೆ ಕುತೂಹಲ ಇತ್ತು,,, ನಿಮ್ಮ ಫೋಟೋ ಸಮೇತ ವಿವರಣೆಯಿಂದ ಎಸ್ಟೋ ವಿಷಯ ತಿಳಿದುಕೊಂಡ ಹಾಗೆ ಆಯಿತು...ಧನ್ಯವಾದಗಳು ಇಂಥ ಒಳ್ಳೆಯ ಚಿತ್ರ ಸಹಿತ ಮಾಹಿತಿ ಕೊಟ್ಟದ್ದಕ್ಕೆ.
ಫೋಟೋ ಗಳನ್ತು,, ಅದ್ಬುತ.... ತುಂಬ ಚೆನ್ನಾಗಿ ಇದೆ...

ಗುರು

ಬಿಸಿಲ ಹನಿ said...

ಜೇಡನ ಕುರಿತಾದ ನಿಮ್ಮ ಚಿತ್ರ ಲೇಖನ ಸಂಗ್ರಹ ಯೋಗ್ಯವಾಗಿದೆ. ಬಹಳಷ್ಟು ವಿಷಯವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.

Keshav.Kulkarni said...

ಸುಪರ್ ಚಿತ್ರಗಳು!

- ಕೇಶವ

AntharangadaMaathugalu said...

ಒಳ್ಳೆಯ ಚಿತ್ರಗಳ ಸಮೇತದ ಮಾಹಿತಿ...ಧನ್ಯವಾದಗಳು.
ನಾವು ಕೊಲ್ಕತ್ತಾದಲ್ಲಿದ್ದಾಗ ಭಯಂಕರ ದೊಡ್ಡ
ಆಕಾರದ ಜೇಡವೊಂದು ನಮ್ಮನೆಯೊಳಗೆ ಬಂದು
ನನ್ನನ್ನೂ ನನ್ನ ಮಗನನ್ನೂ ಹೆದರಿಸಿದ್ದು ನೆನಪಾಯ್ತು !
ನಿಮಗೂ ನಿಮ್ಮ ಕುಟುಂಬದವರಿಗೂ ದೀಪಾವಳಿಯ
ಹಾರ್ದಿಕ ಶುಭಾಶಯಗಳು......
ಶ್ಯಾಮಲ

ಸಾಗರದಾಚೆಯ ಇಂಚರ said...

ಸರ್,
ಸುಂದರ ಫೋಟೋಗಳೊಂದಿಗೆ ಅತೀ ಸುಂದರ ವಿವರಣೆ,
ಜೇಡಗಳ ಬಗ್ಗೆ ಇಷ್ಟೊಂದು ವಿಷಯ ಗೊತ್ತೇ ಇರಲಿಲ್ಲ
ಹಬ್ಬದ ಸಂಭ್ರಮಕ್ಕೆ ಉತ್ತಮ ಲೇಖನ
ದೀಪಾವಳಿಯ ಶುಭಾಶಯಗಳು

Me, Myself & I said...

ಇದಕ್ಕೆ ಕೇವಲ ಆಸಕ್ತಿ ಇದ್ರೆ ಸಾಲ್ದು, ಪ್ರಯತ್ನ ಕೂಡ ಇರ್ಬೇಕು. ಒಂದೊಳ್ಳೆ ಮಾಹಿತಿನ ಚಿತ್ರ ಸಮೇತ ಹಾಕಿ ಅಷ್ಟೇ ಸ್ಪುಟವಾಗಿ ವಿವರಣೆ ನೀಡಿದ್ದೀರಾ! ನನ್ಕಡೆಯಿಂದ ಅಭಿನಂದನೆಗಳು ಸಾರ್.

shivu.k said...

ಮಲ್ಲಿಕಾರ್ಜುನ್,

ಜೇಡನ ಬಗೆಗಿನ ಚಿತ್ರಲೇಖನವನ್ನು ಚೆನ್ನಾಗಿ ಬರೆದಿದ್ದೀರಿ. ಅನೇಕ ವಿಚಾರಗಳನ್ನು ಚೆನ್ನಾಗಿ ಅದ್ಯಾಯನ ಮಾಡಿ ಚಿತ್ರಗಳನ್ನು ತೆಗೆದಿದ್ದೀರಿ.

ಜೇಡನ ಬದುಕು, ಬೆಳವಣಿಗೆ, ಮಕ್ಕಳು ಮರಿಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಿರುವುದು, ಅವುಗಳ ಚಿತ್ರಗಳಿಗಾಗಿ ನೀವು ಪಟ್ಟಿರುವ ಶ್ರಮ ಚಿತ್ರಗಳಲ್ಲಿ ಎದ್ದು ಕಾಣುತ್ತದೆ.

ಮುಂದಿನ ಪೀಳಿಗೆಯವರಿಗೆ ಇದೊಂದು ಖಂಡಿತ ಅಧ್ಯಾಯನ ಲೇಖನವಾಗಬಹುದು.

ಉತ್ತಮ ಚಿತ್ರ ಲೇಖನಕ್ಕೆ ಅಭಿನಂದನೆಗಳು.

ಚಂದ್ರಕಾಂತ ಎಸ್ said...

ಬಹಳ ಸುಂದರ ಚಿತ್ರಗಳು. ಅದಕ್ಕೆ ನೀವು ಹೊಂದಿಸಿರುವ ಮಾಹಿತಿಯಂತೂ ಅತ್ಯಂತ ಸುಂದರ ಜೋಡಣೆಯಾಗಿದೆ. ಹಾವನ್ನು ಕಟ್ಟಿ ಹಾಕಿದ ಜೇಡದ ಸೂಕ್ಷ್ಮ ಎಳೆಗಳು ಸುಂದರವಾಗಿದೆ.
ಸತ್ಯನಾರಾಯಣ್ ಅವರು ನೆನಪಿಸಿಕೊಂಡಿರುವ ..ಜೇಡಬಲೆ ನೇಯುತಿತ್ತು... ಕವನ ಕವಿ ಶಿವರುದ್ರಪ್ಪನವರ " ‘ ಕನಸಿನಿಂದ ನನಸಿಗೆ ’ಕವನದ "ಚಂದ್ರಜೇಡ ಬಲೆ ನೇಯುತಿತ್ತು ಬೆಳುದಿಂಗಳ ನೂಲಿನಲಿ" ಎಂಬ ಅದ್ಭುತ ವರ್ಣನೆ.

SSK said...

ಮಲ್ಲಿಕಾರ್ಜುನ್ ಅವರೇ,
ಮನೆಯಲ್ಲಿ ಜೇಡವೊಂದನ್ನು ಕಂಡರೆ ಮೂಗು ಮುರಿಯುವ ನಾವು, ನಿಮ್ಮ ಲೇಖನದಿಂದ ಅವುಗಳ ಸಾಹಸ ಗಾಥೆಯನ್ನು ತಿಳಿದುಕೊಳ್ಳುವಂತಾಯಿತು! ಮಾಹಿತಿಗೆ ಮತ್ತು ಚೆಂದದ ಫೋಟೋಗಳಿಗೆ ಧನ್ಯವಾದಗಳು.
"ನಿಮಗೆ ಮತ್ತು ಕುಟುಂಬದವರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು" !!!

ಜಲನಯನ said...

ಜೇಡನ ಸುತ್ತ ಹೆಣೆದ ನಿಮ್ಮ ಅತಿ ವಿಸ್ಮಯಕಾರಿ ಚಿತ್ರ-ಕಥನ ಬಹಳ ನೀಟಾಗಿ ಮೂಡಿಬಂದಿದೆ.
ಮಲ್ಲಿ ನಿಮಗೆ ನಿಮ್ಮೆಲ್ಲ ಕುಟುಂಬ ಸದಸ್ಯರಿಗೆ ದೀಪಾವಳಿ ಶುಭಾಷಯಗಳು

Ittigecement said...

ಹುಡುಕಾಟದವರೆ....

ವಿಜಯ ಕರ್ನಾಟಕದ "ದೀಪಾವಳಿ ವಿಶೇಷಾಂಕದಲ್ಲಿ" ನಿಮ್ಮ ಲೇಖನ ಓದಿದೆ...

ಎಷ್ಟು ನಿಖರವಾಗಿ , ಸ್ಪಷ್ಟವಾಗಿ...
ಸೂಕ್ಷ್ಮವಾಗಿ ಫೋಟೊಗಳನ್ನು ತೆಗೆದಿದ್ದೀರಿ...!!!!

ಅಬ್ಭಾ...!
ನಿಮ್ಮ ಕೈಚಳಕಕ್ಕೆ, ತಾಳ್ಮೆಗೆ ನನ್ನ ನಮನಗಳು...
ಬಹಳ ಉಪಯುಕ್ತವಾದ ಹೊಸದಾದ ಮಾಹಿತಿ ಕೊಟ್ಟಿದ್ದೀರಿ...

ದೀಪಾವಳಿಯ ಶುಭಾಶಯಗಳು...
ಚಂದದ ಚಿತ್ರ ಲೇಖನಕ್ಕೆ ಅಭಿನಂದನೆಗಳು...

ಸುಧೇಶ್ ಶೆಟ್ಟಿ said...

ತು೦ಬಾ ಚೆನ್ನಾಗಿತ್ತು.... ಇ೦ತಹ ಲೇಖನಗಳನ್ನು ಓದುವುದರಿ೦ದ ನಮ್ಮ ಜ್ಞಾನದ ಮಟ್ಟ ಹೆಚ್ಚುವುದು... ಜೇಡ ಎ೦ತಹ ವಿಚಿತ್ರ ಜೀವಿ ಅಲ್ವಾ...!

ಜೇಡನ ವಿಷದ ಕೊ೦ಡಿ ಮನುಷ್ಯನ ಚರ್ಮವನ್ನು ಭೇಧಿಸಲು ಆಗದು ಎ೦ಬ ವಿಷಯ ಕೇಳಿ ತ೦ಬಾ ಖುಷಿಯಾಯಿತು ;)

jomon varghese said...

ಕೇರಳದ ಲಾರಿಗಳು ಮುಗಿಯಿತು. ಈಗ ಕರ್ನಾಟಕದ ಜೇಡಗಳ ಬೆನ್ನು ಹತ್ತಿದ್ದೀರಾ? :)ಚೆಂದದ ಚಿತ್ರಗಳು.

prashi said...

ಸರ್, ನಿಮ್ಮ ಪರಿಶ್ರಮಕ್ಕೆ ನನ್ನಲ್ಲಿ ಪದಗಳಿಲ್ಲ. ತುಂಬಾ ಸೊಗಸಾಗಿದೆ. ಚಿತ್ರ ಲೇಖನ ಅಂದ್ರೆ ಹೀಗಿರಬೇಕು ಸರ್. ಹೇಗ್ಹೇಗೋ ನಿಮ್ಮ ಬ್ಲಾಗ್ ನೋಡಿದೆ. ಇನ್ನು ನಾ ನಿಮ್ಮ ಕಾಯಂ ಓದುಗ. ಹಾಗೆ ದಯವಿಟ್ಟು ಒಮ್ಮೆ ನನ್ನದೊಂದು ಬ್ಲಾಗ್ ಇದೆ ನೋಡಿ, ಓದಿ ತಮ್ಮ ಸಲಹೆಗಳೊಂದಿಗೆ ನಿಮ್ಮ ಜೊತೆ ನನ್ನೂ ಸೇರಿಸಿಕೊಳ್ಳುವಿರಾ? ಹಾಗಾದರೆ ನನ್ನ ಬ್ಲಾಗ್ Neenandre.blogspot.com

akshata said...

namaskaara,
nimagU nimma kyutumbakku dipaavaliya haardika shubhaashayagalu, phogalu haagU adakke sambandhisida maahiti adbhuta, nimma hudukaata hige mumnduvareyali.

Harihara Sreenivasa Rao said...

antoo keeralada la. mani, andh.nela guhe bittu photo jaadyada jeedanaagiddakke dhanyavaadagalu.geddalu, jeennona yaavaaga aaguteeri? Mundina deepaavaliya hottige d.h. aaguvirante.Intaha aparoopada chitragalannu prapancada atidodda spardhegalalli pradarshitavagali emba post deepaavaliya shubhaashayagalondige
Dr.Harihara Sreenivasas Rao

ಸೀತಾರಾಮ. ಕೆ. / SITARAM.K said...

ಅತ್ಯದ್ಭುತ ಛಾಯಾಚಿತ್ರಣ. ಜೊತೆಗೆ ಸು೦ದರ್ ಬಹು ಉಪಯುಕ್ತ ಮಾಹಿತಿ-ಅದ್ಭುತ್ ವಿವರಣೆಯೊ೦ದಿಗೆ.
ಧನ್ಯವಾದಗಳು

ರೂpaश्री said...

wonderful photos! very informative post:)
Thanks

ಸುನಿಲ್ ಜಯಪ್ರಕಾಶ್ said...

ಅದ್ಭುತ. ಸಿಂಪ್ಲಿ ಮಾರ್ವೆಲಸ್.