Sunday, April 19, 2009

ಅಮ್ಮ ಹೇಳಿದ ಎಂಟು ಸುಳ್ಳುಗಳು

"ಡಿಯರ್ ಮಲ್ಲಿಕ್, ನನ್ನ ಪುಸ್ತಕ ’ಅಮ್ಮ ಹೇಳಿದ ಎಂಟು ಸುಳ್ಳುಗಳು’ ಕವರ್ ಪೇಜಿಗೆ ಫೋಟೋ ಕಳಿಸಿಕೊಡಿ" ಎಂದು ಮಣಿಕಾಂತ್ ಮೆಸೇಜ್ ಮಾಡಿದ್ದರು. ನನ್ನ ಸಂಗ್ರಹದಲ್ಲಿದ್ದ ಒಂದು ಫೋಟೋ ಇಮೇಲ್ ಮಾಡಿದೆ.
ತಕ್ಷಣ ಮಣಿಕಾಂತ್, "ಇದು ಬೇಡ. ತಾಯಿ ಮಗು ಇರುವ ಚಿತ್ರ ಬೇಕು. ಸಾಧ್ಯವಾದರೆ ತೆಗೆದು ಕಳಿಸಿ" ಎಂದು ಮೆಸೇಜ್ ಮಾಡಿದರು.
ಏನು ಮಾಡುವುದೆಂದು ಅಂಗಡಿಯಲ್ಲಿ ಕುಳಿತು ಯೋಚಿಸುತ್ತಿದ್ದಾಗ ಗೆಳೆಯ ವೆಂಕಟರಮಣ ಬಂದ. ನನ್ನ ತಲೆಯಲ್ಲಿದ್ದ ಹುಳು ತೆಗೆದು ಅವನ ತಲೆಯಲ್ಲಿ ಬಿಟ್ಟೆ. ಅವನು ಒಂದು ಉಪಾಯ ಹೇಳಿದ. ಅವರ ಮನೆ ಅಕ್ಕಪಕ್ಕದವರೆಲ್ಲ ಬಹಳ ಆತ್ಮೀಯರು. ಭಾನುವಾರದಂದು ಎಲ್ಲರೂ ಟೇರೇಸ್ ಮೇಲೆ ಸೇರುತ್ತಾರೆ. ಮೂರೂ ಮನೆಯ ಮಕ್ಕಳಿಗೆಲ್ಲ ಕೈತುತ್ತಿನ ಊಟ. "ಭಾನುವಾರ ರಾತ್ರಿ ಬನ್ನಿ. ನಿಮಗೆ ಯಾವ ತಾಯಿ ಮಗು ಇಷ್ಟವಾದರೆ ಅವರ ಫೋಟೋ ತೆಗೀರಿ. ಜೊತೆಯಲ್ಲಿ ಆಕಾಶದಲ್ಲಿರುವ ಚಂದ್ರನೂ ಫೋಟೋದಲ್ಲಿ ಬೀಳಲಿ. ಚೆನ್ನಾಗಿರುತ್ತೆ" ಎಂದು ಹೇಳಿದ. ಫೋಟೋ ತೆಗೆದು ಮಾಣಿಕಾಂತ್ ಗೆ ಕಳಿಸಿದೆ.
"ಇದಲ್ಲ ಮಲ್ಲಿಕ್. ನನ್ನ ಲೇಖನದಲ್ಲಿ ಬರೋದು ಗಂಡುಮಗು. ಆ ಲೇಖನ ನನ್ನ ಬ್ಲಾಗಲ್ಲಿದೆ, ಓದಿ" ಎಂಬ ಮೆಸೇಜ್ ಬಂತು.
ಇದೇ ಗುಂಗಿನಲ್ಲಿದ್ದಾಗ ಒಮ್ಮೆ ಗೆಳೆಯ ನಾಗಭೂಷಣ್ ಹೆಂಡತಿ ಮಗನೊಂದಿಗೆ ಮಾತ್ರೆ ಕೊಳ್ಳಲು ನನ್ನ ಅಂಗಡಿಗೆ ಬಂದರು. ಅವರಿರುವುದು ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರ ಗ್ರಾಮದಲ್ಲಿ. ಅವರು ವರದನಾಯಕನಹಳ್ಳಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು. ಅವರ ಪತ್ನಿ ವೀರಾಪುರ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿ. ಅವರ ಮಗ ಐದು ವರ್ಷದ ಮಧುಸೂದನ್. ಅವರನ್ನು ನೋಡುತ್ತಿದ್ದಂತೆಯೇ ನನ್ನ ಕಲ್ಪನೆ ಗರಿಗೆದರಿತು. ನಾಗಭೂಷಣ್ ಗೆ ಸೂಕ್ಷ್ಮವಾಗಿ ವಿಷಯ ತಿಳಿಸಿದೆ. ಅವರು ಸಮ್ಮತಿ ಸೂಚಿಸಿದರು. "ನಿಮ್ಮ ಮನೆಯವರಿಗೆ ಮತ್ತು ಮಗನಿಗೆ ಹೇಳಬೇಡಿ. ಹೇಳಿದರೆ ಫೋಟೋಗಾಗಿ ಡ್ರೆಸ್ ಮಾಡಿಕೊಂಡು ಪೋಸ್ ಕೊಡಲು ಶುರುಮಾಡಿದರೆ ಆಗ ನೈಜತೆಯಿರುವುದಿಲ್ಲ" ಎಂದು ಹೇಳಿದೆ.
ಒಂದು ಭಾನುವಾರ(ಅವರಿಬ್ಬರಿಗೂ ರಜವೆಂದು) ಬೆಳೆಗ್ಗೆ ಅವರ ಮನೆಗೆ ಹೋದೆ. ಅವರ ಮನೆಯಲ್ಲಿ ದೋಸೆ ಮಾಡಿದ್ದರು. ನಾನೂ ತಿಂದೆ. ನಾಗಭೂಷಣ್ ರ ಪತ್ನಿ ಮಗನಿಗೆ ತಿನ್ನಿಸುವಾಗ ಫೋಟೋ ತೆಗೆದೆ. ಅಮ್ಮನನ್ನು ಕೂಸುಮರಿ ರೀತಿ ಹಿಡಿದಿದ್ದ. ಆ ಫೋಟೋ ಮಣಿಕಾಂತ್ ಗೆ ಕಳಿಸಿದೆ.
"ಚೆನ್ನಾಗಿದೆ ಮಲ್ಲಿಕ್. ಇನ್ನೂ ಸ್ವಲ್ಪ ಇಂಪ್ರೂವ್ ಮಾಡೋಕಾಗುತ್ತ ನೋಡಿ. ಯಾರು ನೋಡಿದರೂ ತಮ್ಮ ತಾಯಿ ತಿನ್ನಿಸಿದ್ದು ನೆನಪಾಗಬೇಕು. ತಾಯಿಯ ಮುಖವೂ ಸ್ವಲ್ಪ ಕಾಣುವಂತಿರಲಿ. ಭಾವನೆಗಳು ಮುಖ್ಯ" ಎಂಬ ಮೆಸೇಜ್ ಬಂತು.
ಈಗೇನು ಮಾಡುವುದು? ಸ್ವಲ್ಪ ದಿನ ಸುಮ್ಮನಾದೆ. ಪುನಃ ನಾಗಭೂಷಣ್ ಸಿಕ್ಕಾಗ ಹೇಳಿದೆ, "ಇನ್ನೊಂದೇ ಒಂದು ಬಾರಿ ಫೋಟೋ ತೆಗೆಯುವೆ. ಬೇಜಾರು ಮಾಡಿಕೊಳ್ಳಬೇಡಿ" ಎಂದು. "ಪರವಾಗಿಲ್ಲ, ಮೊಹರಂ ಹಬ್ಬದ ದಿನ ರಜ ಇದೆ. ಮದ್ಯಾಹ್ನ ಬಂದುಬಿಡಿ" ಅಂದರು.ಹನುಮಂತಪುರಕ್ಕೆ ಹೋದೆ. ನಾನು ಹೋಗುತ್ತಿದ್ದಂತೆಯೆ, "ಬೇಗ ಬನ್ನಿ. ಹಿತ್ತಲಲ್ಲಿ ನಮ್ಮವರು ಮಧುಗೆ ತಿನ್ನಿಸುತ್ತಿದ್ದಾರೆ. ಫೋಟೋ ತಕ್ಕೋಳ್ಳಿ" ಎಂದರು ನಾಗಭೂಷಣ್. ಆ ದೃಶ್ಯ ನೋಡುತ್ತಿದ್ದಂತೆ ನನಗೆ ನನ್ನ ಬಾಲ್ಯ ನೆನಪಿಗೆ ಬಂತು. ಚಕಚಕನೆ ಕ್ಲಿಕ್ಕಿಸಿದೆ. ಅಷ್ಟರಲ್ಲಿ ಅವರದೂ ತಿನ್ನಿಸಿದ್ದು ಮುಗಿದಿತ್ತು. "ಚೆನ್ನಾಗಿ ಬಂತಾ? ಇನ್ನೊಮ್ಮೆ ತೆಗೀತೀರಾ? ಮತ್ತೆ ತಿನ್ನಿಸಲು ಹೇಳಲಾ?" ಅಂದರು ನಾಗಭೂಷಣ್. "ನಂಗೆ ಸಾಕು" ಎನ್ನುತ್ತಾ ಮಧು ಆಡಲು ಓಡಿದ. ಹಿಡಿಯಲು ಹೋದ ನಾಗಭೂಷಣ್ ಗೆ "ಬಿಟ್ಬಿಡಿ ಸರ್. ಬಲವಂತ ಮಾಡುವುದು ಬೇಡ. ಅದು ಚೆನ್ನಾಗೂ ಬರಲ್ಲ" ಎಂದು ಹೇಳಿ ಅವರ ಮನೇಲಿ ಪೊಂಗಲ್ ತಿಂದು ಬಂದೆ.
ಮಣಿಕಾಂತ್ ಗೆ ತೆಗೆದಿದ್ದ ಫೋಟೋಗಳನ್ನು ಸಿಡಿಯಲ್ಲಿ ಹಾಕಿ ಕೊರಿಯರ್ ಮಾಡಿದೆ.
"ಅದ್ಭುತವಾಗಿದೆ ಮಲ್ಲಿಕ್. ನನ್ನ ಮನಸ್ಸಿನಲ್ಲಿದ್ದ ಕಲ್ಪನೆಗೆ ತಕ್ಕಂತೆ ಫೋಟೋ ಕಳಿಸಿದ್ದೀರಿ" ಎಂದು ಮಣಿಕಾಂತ್ ರಿಂದ ಸರ್ಟಿಫಿಕೇಟ್ ಬಂತು. ನನಗೆ ದೊಡ್ಡ ಪರೀಕ್ಷೆ ಪಾಸಾದಂತಾಗಿತ್ತು.
ಈಗ ಮಣಿಕಾಂತರ ಪುಸ್ತಕ ಬಿಡುಗಡೆ ರವೀಂದ್ರ ಕಲಾಕ್ಷೇತ್ರದಲ್ಲಿ. ಅದರ ಆಹ್ವಾನ ಪತ್ರಿಕೆ ಇಲ್ಲಿದೆ. ಎಲ್ಲರೂ ಶುಭ ಹಾರೈಸಿ, ಪ್ರೋತ್ಸಾಹಿಸಿ.
ಮಣಿಕಾಂತ್ ಗೆ ಶುಭಹಾರೈಕೆಗಳು.
-ಮಲ್ಲಿಕಾರ್ಜುನ.ಡಿ.ಜಿ.ಶಿಡ್ಲಘಟ್ಟ.

44 comments:

Ittigecement said...

ಹುಡುಕಾಟದ ಮಲ್ಲಿಕಾರ್ಜುನ್.....

ಮಣಿಕಾಂತ್ ಪುಸ್ತಕದ ಬಗೆಗೆ ಬಹಳ ಕುತೂಹಲವಿದೆ...
ಮುಖಪುಟ ನೋಡಿ ಖುಷಿಯಾಗಿತ್ತು...
ಅದರ ಹಿಂದೆ ಇಷ್ಟೆಲ್ಲ ಹುಡುಕಾಟವಿತ್ತು ಎನ್ನುವದು ತಿಳಿದಿಲ್ಲವಾಗಿತ್ತು....

ಈ ಥರಹ "ಹುಡುಕಾಟ"ವಿದ್ದ ನಿಮಗೆ ಮಾತ್ರ ಇಂಥಹ ದ್ರಶ್ಯ ಸಿಗಲು ಸಾಧ್ಯ...!

ತಾಯಿಯಯ ಮಮತೆ..
ಮಗುವಿನ ಲಲ್ಲೆತನ...
ಚೆನ್ನಾಗಿ ಸೆರೆ ಹಿಡಿದಿದ್ದೀರಿ...

ಅಭಿನಂದನೆಗಳು...

ಮೆಚ್ಚಿನ "ಮಣಿಕಾಂತರ" ಪುಸ್ತಕವೂ..
ಯಶಸ್ವಿಯಾಗಲೆಂದು ಹಾರೈಸುವೆ....

ಬಿಸಿಲ ಹನಿ said...

ಮಲ್ಲಿಕಾರ್ಜುನವರೆ,
ಮಣಿಕಾಂತವರ ಪುಸ್ತಕಕ್ಕೆ ನಿಮ್ಮ ಫೋಟೊವೊಂದು ಮುಖಪುಟಕ್ಕೆ ಅಲಂಕಾರವಾಗಿರುವದು ಬಹಳ ಸಂತೋಷ. ನಿಜ, ಅವರ ಲೇಖನಕ್ಕೆ ತಕ್ಕಂತೆ ನಿಮ್ಮ ಫೋಟೊ ಬಂದಿದೆ. ಎಷ್ಟೊಂದು ತಾಳ್ಮೆಯಿಂದ, ಎಷ್ಟೊಂದು ಸಾರಿ ಪ್ರಯತ್ನಪಟ್ಟು ಇದನ್ನು ತೆಗೆದಿದ್ದೀರಿ. ಸೃಜನಶೀಲ ಮನಸ್ಸಿದ್ದರೆ ಏನು ಬೇಕಾದರು ಮಾಡಬಹುದು ಎನ್ನುವದಕ್ಕೆ ನೀವೇ ಸಾಕ್ಷಿ!

Anonymous said...

ಚಿತ್ರಗಳು ತುಂಬಾ ಚೆನ್ನಾಗಿ ಬಂದಿದೆ, ಎಂದಿನಂತೆ :)

Naveen ಹಳ್ಳಿ ಹುಡುಗ said...

ನಮಸ್ತೆ ಅಣ್ಣ... ನನ್ನ ಮೆಚ್ಹಿನ ಲೇಖಕ ಮಣಿಕಾಂತ್ ರವರ ಪುಸ್ತಕಕ್ಕೆ ನಿಮ್ಮ ಫೋಟೋ.. ಸೂಪರ್ ಫೋಟೋ.. ಸೂಪರ್ ಕಾಮ್ಬಿನಶನ್.. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬೇಟಿಯಗೋಣ...

PARAANJAPE K.N. said...

ಮಲ್ಲಿಯವರೇ
ಪುಸ್ತಕದ ಮುಖಪುಟದ ಆಯ್ಕೆಯು ಹಿನ್ನೆಲೆಯಲ್ಲಿನ ನಿಮ್ಮ ಶ್ರಮ, ಮತ್ತು ಅದು ಸಾರ್ಥಕ್ಯ ಕ೦ಡ ಗಳಿಗೆ ನಿಮ್ಮ ಚಿತ್ರ-ಲೇಖನ ದಲ್ಲಿ ಸಚಿತ್ರವಾಗಿ ಪಡಿಮೂಡಿದೆ. ಪುಸ್ತಕ ಬಿಡುಗಡೆ ದಿನ ನಾನು ಬಿಡುವು ಮಾಡಿಕೊ೦ಡು ಬರಬೇಕೆ೦ದಿದ್ದೇನೆ. ಅಲ್ಲೇ ಸಿಗೋಣ.

ಮನಸು said...

ಸರ್,
ನಿಜಕ್ಕೋ ನೀವು ತೆಗೆದ ಚಿತ್ರ ತುಂಬಾ ಚೆನ್ನಾಗಿದೆ.. ದೊಡ್ಡ ಸಾಹಸವನ್ನೇ ಮಾಡಿಬಿಟ್ಟಿರಿ ಕೊನೆಗೆ ಪ್ರತಿಫಲ ಒಳ್ಳೆಯದೇ ಆಗಿದೆ ಬಿಡಿ... ಫೋಟೋದಲ್ಲಿನ ನೈಜತೆ ಎದ್ದು ಕಾಣುತ್ತಲಿದೆ. ಪುಸ್ತಕದ ಹೆಸರು ಕೇಳಿದರೆ ಓದಬೇಕೆನ್ನುವ ಮನಸಾಗಿದೆ.. ಒಳ್ಳೆಯ ಪುಸ್ತಕಕ್ಕೆ ಒಳ್ಳೆಯ ಯಶಸ್ಸು ಸಿಗಲೆಂದು ಆಶಿಸುತ್ತೇವೆ..
ಧನ್ಯವಾದಗಳು ನಮ್ಮೊಂದಿಗೆ ಇಂತಹ ಚಿತ್ರ ಹಾಗು ಘಟನೆಯನ್ನು ಹಂಚಿಕೊಂಡಿದ್ದಕ್ಕೆ..
ವಂದನೆಗಳು..

ವಿನುತ said...

ಅಬ್ಬಾ! ಪುಸ್ತಕದ ಮುಖಪುಟಕ್ಕಾಗಿ ಎಷ್ಟೊ೦ದು ಹುಡುಕಾಟ! ನಿಮ್ಮ ಶ್ರಮ ಹಾಗು ಮಣಿಕಾ೦ತರ ಬರವಣಿಗೆಗಳು ಯಶಸ್ಸು ಕಾಣುತ್ತವೆ೦ಬ ವಿಶ್ವಾಸ ನಮ್ಮದು. ನಿಮ್ಮ ಮಿಕ್ಕೆಲ್ಲ ಚಿತ್ರಗಳಿಗಾಗಿ ಹಾಗು ಸು೦ದರ ಬರಹಕ್ಕಾಗಿ ಅಭಿನ೦ದನೆಗಳು .

Unknown said...

ಒಂದು ಒಳ್ಳೆಯ ಫೋಟೋಗಾಗಿ ನೀವು ಎಷ್ಟೊಂದು ಕಷ್ಟ ಪಡುತ್ತೀರಿ! ಇದೇ ನಿಜವಾದ ತಪಸ್ಸು. ಅದು ನಿಮಗೆ ಸಿದ್ದಿಸಿದೆ. ಅಭಿನಂದನೆಗಳು ಮಲ್ಲಿಕಾರ್ಜುನ್.

Haldodderi said...

ಮಲ್ಲಿಕಾರ್ಜುನ್

ಮುಖಪುಟದ ಹೇಗಿರಬೇಕೆಂಬ ಲೇಖಕನ ಕಲ್ಪನೆಗೆ ಪೂರಕವಾಗಿ ನೀವು ಶ್ರಮಪಟ್ಟು ತೆಗೆದ ಚಿತ್ರ simply superb!

ಎಲ್ಲಕ್ಕಿಂತ ನನಗೆ ಹೆಚ್ಚು ಇಷ್ಟವಾದ ಸಂಗತಿಯೆಂದರೆ, entire exercise ಅನ್ನು ಅಕ್ಷರಲೋಕದಲ್ಲಿ ಕಟ್ಟಿರುವ ನಿಮ್ಮ ಸಂಭ್ರಮ. ಮಣಿಕಾಂತರ ಬರಹದಷ್ಟೇ ಸರಳ, ನೇರ ಹಾಗೂ ಆಪ್ತವಾಗಿದೆ ನಿಮ್ಮ ಈ blog entry. ಬಹುಶಃ ಮಣಿಕಾಂತ್ ಕೂಡಾ ಈ ಮಾತನ್ನು ಒಪ್ಪುತ್ತಾರೇನೊ?

ವಿಶ್ವಾಸದಿಂದ
ಹಾಲ್ದೊಡ್ಡೇರಿ ಸುಧೀಂದ್ರ

armanikanth said...

Akkareya Mallik,
Haldidderi sudhindra avara baraha kke nanna sammati ide.
Nimma Baraha nodi nimage tumbaa kaata kotte annistu.photo tegeyoke aledaadabekaagi bandaaga nimage kuda besara aagirabeku...kshamisibidi...
aadare illi ondu maatu...nanna mechhhina photo ivaga kuda nimma kadeya prayatnaddee...
preetiyinda...
Manikanth.

shivu.k said...

ಮಲ್ಲಿಕಾರ್ಜುನ್,

ಮುಖಪುಟ ಕತೆ ತುಂಬಾ ಸ್ವಾರಸ್ಯವಾಗಿದೆ....

ಅಂತಿಮ ಪಲಿತಾಂಶಕ್ಕಿಂತ ಇಂಥ ಸ್ವಾರಸ್ಯಕರ ಅನುಭವಕ್ಕಾಗಿಯೇ ಅಲ್ಲವೇ ನಾವು ಕ್ಯಾಮೆರಾವನ್ನು ಹೆಗಲಿಗೇರಿಸುವುದು....

ನನಗೂ ನನ್ನ ಹಳೇ ಚಿತ್ರಗಳ " ಕ್ಲಿಕ್" ಶಬ್ದಕ್ಕಿಂತ ಮೊದಲಿನ ಅನುಭವ ತಾಪತ್ರಯ, ತರಲೆಗಳನ್ನೆಲ್ಲಾ ಹಂಚಿಕೊಳ್ಳಬೇಕೆನಿಸುತ್ತಿದೆ...

ಚಂದ್ರಕಾಂತ ಎಸ್ said...

ಈಗಾಗಲೇ ಎಲ್ಲರೂ ಹೇಳಬೇಕಾದ್ದನ್ನೆಲ್ಲಾ ಹೇಳಿಬಿಟ್ಟಿದ್ದಾರೆ. ನನಗೆ ಬಹಳ ಹಿಡಿಸಿದ ಮಾತುಗಳು HNS ಅವರದು

ನನಗೆ ಆಶ್ಚರ್ಯವಾಗುವ ವಿಚಾರವೆಂದರೆ ನೀವು ತೆಗೆದಿರುವ ಎಲ್ಲಾ ಫೋಟೋಗಳೂ ಸುಂದರವಾಗಿವೆ. ಲೇಖಕರೊಬ್ಬರಿಗೆ ತಮ್ಮ ಮುಖಪುಟ ಚಿತ್ರ ಹೀಗೇ ಇರಬೇಕೆಂಬ ಕರಾರುವಾಕ್ಕಾದ ಕಲ್ಪನೆ ಇರುತ್ತದೆಯೇ? ಎಂದು, ಹಾಗೂ ಅವರು ಹೇಳಿದಂತೆಲ್ಲಾ ನೀವು ವಸ್ತುವಿಗೆ ಮತ್ತಷ್ಟು ಸನಿಹವಾಗುವ ಫೋಟೋಗಳನ್ನು ತೆಗೆಯುವ ಪರಿ.ನಿಜವಾಗಿಯೂ ನಿಮ್ಮ ಫೋಟೋಗಳು ಅಷ್ಟೊಂದು ಅದ್ಭುತವಾಗಿರುವುದಕ್ಕೆ ಕಾರಣ ನಿಮ್ಮ ಅವಿರತ ಪರಿಶ್ರಮ.

ಬಾಲು said...

lekhakana kalpane thakkanthe photo thegeyuvudu dodda saahasa ve sari.

pustaka bidugadeya dina eduru nodutta iruve!!

ಶಿವಪ್ರಕಾಶ್ said...

ಪುಸ್ತಕದ ಮುಖಪುಟ ತುಂಬಾ ಮಹತ್ವದ್ದು.
The Picture Worth A Million Words
ಪುಸ್ತಕದ ಮುಖಪುಟ ತುಂಬಾ ಚನ್ನಾಗಿ ಬಂದಿದೆ...
ಧನ್ಯವಾದಗಳು...
ಮಣಿಕಾಂತ್ ಅವರಿಗೆ ಶುಭಹಾರೈಕೆಗಳು....

Guruprasad said...

ಮಲ್ಲಿಕಾರ್ಜುನ್.
ಇವೊತ್ತು ವಿಜಯ ಕರ್ನಾಟಕ ಪೇಪರ್ ನಲ್ಲಿ ಇದನ್ನ ನೋಡಿದೆ... ತುಂಬ ಚೆನ್ನಾಗಿ ಇದೆ ಮುಖ ಪುಟದ ಚಿತ್ರ, ತುಂಬ ಇಷ್ಟ ಆಯಿತು ..... ಇಂಥ ಒಂದು ಫೋಟೋ ಗಾಗಿ ಇಷ್ಟು ಕಷ್ಟ ಪಟ್ಟಿದಿರ ಅಂತ ಗೊತ್ತಿರಲಿಲ್ಲ ... ಕಷ್ಟ ಪಟ್ಟರು ಒಳ್ಳೆ ಫೋಟೋ ಸಿಕ್ಕಿದೆ...
ಅದ್ಬುತ ಭಾವ ...ನಿಜವಾಗ್ಲೂ ನಮ್ಮ ಬಾಲ್ಯದ ನೆನಪು ಬರ್ತಾ ಇದೆ......
ಗುರು

Rajesh Manjunath - ರಾಜೇಶ್ ಮಂಜುನಾಥ್ said...

ಮಲ್ಲಿಕಾರ್ಜುನ್ ಸರ್,
ಫೋಟೋ ಮತ್ತು ಅದರ ಹಿಂದಿನ ಶ್ರಮ ಎರಡು ಪ್ರಶಂಸಾರ್ಹ..
ಮುಖ ಪುಟಕ್ಕೆ ಸೊಗಸಾಗಿದೆ ಈ ಫೋಟೋ...

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಸರ್,
ಮಣಿಕಾಂತ್ ಅವರ ಪುಸ್ತಕಕ್ಕೆ ಅವರ ಮನಸ್ಸಿಗೆ ಒಪ್ಪುವಂತಹ ಚಿತ್ರ ತೆಗೆಯುವುದು Challenging ಆಗಿತ್ತು. ಹಾಗೇ ಚಿತ್ರಗಳನ್ನು ತೆಗೆಯುವಾಗ ನಾನು ತುಂಬಾ enjoy ಮಾಡಿರುವೆ. ಅಷ್ಟು ಚಂದದ ಪುಸ್ತಕಕ್ಕೆ ನಾನು ಚಿತ್ರ ತೆಗೆಯುವಂತಾಗಿದ್ದು ಖುಷಿಕೊಟ್ಟಿತು.

ಮಲ್ಲಿಕಾರ್ಜುನ.ಡಿ.ಜಿ. said...

ಉದಯ್ ಸರ್,
ಧನ್ಯವಾದಗಳು.
ಮಣಿಕಾಂತ್ ಅವರ ಬರವಣಿಗೆಯಲ್ಲಿನ ಭಾವನೆಗಳಿಗೆ ಸ್ವಲ್ಪವಾದರೂ ಹತ್ತಿರವಾಗಬಲ್ಲ ಚಿತ್ರ ತೆಗೆಯಬೇಕೆಂದು ಪ್ರಯತ್ನಿಸಿರುವೆ.

ಮಲ್ಲಿಕಾರ್ಜುನ.ಡಿ.ಜಿ. said...

ಮನೋಜ್ ಅವರೆ,
ಧನ್ಯವಾದಗಳು.
Flickr ನಲ್ಲಿ ನಿಮ್ಮ ಫೋಟೋಗಳನ್ನು ನೋಡಿದೆ. ತುಂಬಾ ಚೆನ್ನಾಗಿವೆ. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

ಧರಿತ್ರಿ said...

ನಿಮಗೆ ಅಭಿನಂದನೆಗಳು ಮಲ್ಲಿಯಣ್ಣ...ಫೋಟೋಗಳು ತುಂಬಾ ಚೆನ್ನಾಗಿವೆ.
-ಧರಿತ್ರಿ

ಕಾರ್ತಿಕ್ ಪರಾಡ್ಕರ್ said...

ಚೆನ್ನಾಗಿದೆ. ಫೋಟೋ ತೆಗೆಯುವ ಹಿಂದಿನ ನಿಮ್ಮ ಕಸರತ್ತನ್ನು ಆಗಾಗ ಬರೆಯುತ್ತಿರಿ

ಶಾಂತಲಾ ಭಂಡಿ (ಸನ್ನಿಧಿ) said...

ಮಲ್ಲಿಕಾರ್ಜುನ ಅವರೆ...

ಚೆಂದದ ಭಾವಗಳನ್ನೆಲ್ಲ ಚಿತ್ರವಾಗಿಸಿದ ಹಿನ್ನೆಲೆಯನ್ನು ಚೆಂದವಾಗಿ ವಿವರಿಸಿದ್ದೀರಿ. ಭಾವಚಿತ್ರಗಳಂತೂ ಒಂದಕ್ಕಿಂತ ಒಂದು ಇಷ್ಟವಾದವು.

Unknown said...

ಮಲ್ಲಿಕಾರ್ಜುನ್, ಶಿವು ಅವರ ಅಭಿಪ್ರಾಯ ಸರಿ. ತಲಪುವ ಗುರಿಯಷ್ಟೇ, ಅದಕ್ಕಾಗಿ ನಾವು ಹಿಡಿಯುವ ದಾರಿಯೂ ಮುಖ್ಯ. ಕೃಪಾಕರ ಸೇನಾನಿಯವರ ಲೇಖನದಲ್ಲಿ ತೇಜಸ್ವಿ ಹೇಳುತ್ತಿದ್ದರೆಂದು 'ತಲಪುವ ಗುರಿಗಿಂತ ನಡೆಯುವ ಹಾದಿಯೇ ಮುಖ್ಯ' ಎಂದು ಉಲ್ಲೇಖಿಸಿದ್ದಾರೆ. ಹಕ್ಕಿಯ ಫೋಟೋ ಅದರ ನೋಡುಗರಿಗೆ ವಿವಿಧ ಭಾವನೆಗಳನ್ನು ಹುಟ್ಟು ಹಾಕುತ್ತದೆ. ಆದರೆ ಅದನ್ನು ತೆಗೆದವನಿಗೆ ಆಗುವ ಖುಷಿಯೇ ಬೇರೆ. ನಮ್ಮ ನಮ್ಮ ಕೆಲಸವನ್ನು ನಾವು ಅನುಭವಿಸಿ ಮಾಡಿದಾಗ ೀ ರೀತಿಯ ಖುಷಿ ಸಿಗುತ್ತದೆ. ಅದಕ್ಕೆಲ್ಲಾ ಭಯಂಕರ ತಾಳ್ಮೆ ಬೇಕು. ಅದು ನಿಮಗೆ ಸಿದ್ಧಿಸಿದೆ.

ಮಲ್ಲಿಕಾರ್ಜುನ.ಡಿ.ಜಿ. said...

ನವೀನ್,
ಮಣಿಕಾಂತ್ ಬರಹಗಳು ನನಗೂ ಇಷ್ಟ. ಅವರು ನನ್ನ ಫೋಟೋ ಬಯಸಿದ್ದು ಮತ್ತು ಅದು ಅವರು ಬಯಸಿದಂತೆ ಬಂದದ್ದು ನನಗೆ ಖುಷಿಕೊಟ್ಟಿದೆ.

ಮಲ್ಲಿಕಾರ್ಜುನ.ಡಿ.ಜಿ. said...

ಪರಂಜಪೆ ಸರ್,
ಫೋಟೋ ತೆಗೆಯುವಾಗ ನಾನಗೆ ಕಷ್ಟ ಅನಿಸಲಿಲ್ಲ. ಏಕೆಂದರೆ ಇಷ್ಟಪಟ್ಟು ಮಾಡಿದ್ದರಿಂದ! ಪುಸ್ತಕ ಬಿಡುಗಡೆಯ ದಿನ ಸಿಗೋಣ.

ಮಲ್ಲಿಕಾರ್ಜುನ.ಡಿ.ಜಿ. said...

ಮನಸು ಅವರೆ,
ಮಣಿಕಾಂತ ಬರಹ ಎಂತಹವರನ್ನೂ ತಟ್ಟುತ್ತದೆ. ನಿಮಗೆ ಖಂಡಿತ ನಿರಾಸೆಯಾಗುವುದಿಲ್ಲ. ಪುಸ್ತಕವನ್ನು ತಗೊಳ್ಳಿ.ಓದಿ.

ಮಲ್ಲಿಕಾರ್ಜುನ.ಡಿ.ಜಿ. said...

ವಿನುತ ಅವರೆ,
ಧನ್ಯವಾದಗಳು. ಕೆಲವೊಮ್ಮೆ ಮನಸ್ಸಿನಲ್ಲೇ ಯಾವುದೇ ವಿಷಯವನ್ನಿಟ್ಟುಕೊಂಡು ಧೇನಿಸತೊಡಗಿದರೆ, ಅದಕ್ಕೆ ಸೂಕ್ತ ಪರಿಹಾರ ಅಥವಾ ಉತ್ತರ ಕಂಡುಕೊಳ್ಳಬಹುದು ಅನ್ನಿಸುತ್ತೆ.

ಮಲ್ಲಿಕಾರ್ಜುನ.ಡಿ.ಜಿ. said...

ಸತ್ಯನಾರಾಯಣ್ ಸರ್,
ಎಷ್ಟು ಸುಂದರವಾದ ಮಾತು ತೇಜಸ್ವಿಯವರದು ಅಲ್ವಾ? 'ತಲಪುವ ಗುರಿಗಿಂತ ನಡೆಯುವ ಹಾದಿಯೇ ಮುಖ್ಯ'
ನೀವು ಹೇಳಿದಂತೆ process enjoy ಮಾಡುವವ ನಾನು. ಹಾಗಾಗಿ result ಚೆನ್ನಾಗಿರುತ್ತಾ?

ಮಲ್ಲಿಕಾರ್ಜುನ.ಡಿ.ಜಿ. said...

ಸುಧೀಂದ್ರ ಸರ್,
ತುಂಬಾ ಥ್ಯಾಂಕ್ಸ್. ನಿಮ್ಮ ಬರಹಗಳು ನನಗೆ ಸ್ಫೂರ್ತಿ. ಪ್ರತಿ ಸೋಮವಾರ ನಿಮ್ಮ ವಿಜ್ಞಾನ ಲೇಖನ ಓದುವುದು ಸರಳವಾಗಿ ಕನ್ನಡದಲ್ಲಿ ಬರೆಯುವುದಕ್ಕೆ ಪಾಠವಿದ್ದಂತೆ.

ಮಲ್ಲಿಕಾರ್ಜುನ.ಡಿ.ಜಿ. said...

ಮಣಿಕಾಂತ್ ಅವರೆ,
ನಾನು ಖಂಡಿತ ಬೇಸರಪಟ್ಟುಕೊಂಡಿಲ್ಲ. ಇಷ್ಟಪಟ್ಟೇ ಕೆಲಸ ಮಾಡಿರುವೆ.ಹಾಗಾಗಿ ಚಿತ್ರ ಚೆನ್ನಾಗಿದೆ.
ನನಗೊಂದು ಕಥೆ ನೆನಪಾಗುತ್ತಿದೆ:
ಶಹಜಹಾನನಿಗೆ ಹೆಂಡತಿ ನೆನಪಿಗಾಗಿ ಸ್ಮಾರಕ ಕಟ್ಟಿಸಬೇಕಿತ್ತು. ದೇಶದ ಉತ್ತಮ architectಗಳಿಂದ models ತರಿಸಿದರು. ಊಹುಂ..ಸಮಾಧಾನವಾಗಲಿಲ್ಲ. ಅವನ ಮಂತ್ರಿ ಒಂದು ಐಡಿಯಾ ಕೊಟ್ಟ. ಒಬ್ಬ ಕಲಾವಿದನಿದ್ದಾನೆ.ಅವನ ಮಗಳನ್ನು ಅಪಹರಿಸಿ ಸತ್ತಳೆಂದು ಪುಕಾರೆಬ್ಬಿಸೋಣ. ಅವನು ಅವಳ ನೆನಪಿಗೆ ಸ್ಮಾರಕದ ಪ್ರತಿಕೃತಿ ತಯಾರಿಸುತ್ತಾನೆ...
ಅಂದುಕೊಂಡಂತೆ ಆಯ್ತು. ಹುಣ್ಣಿಮೆಯ ದಿನ ರಾಜ ಮಂತ್ರಿ ಬಚ್ಚಿಟ್ಟುಕೊಂಡು ನೋಡುತ್ತಿದ್ದಾರೆ. ಆ ಕಲಾವಿದ ಹುಣ್ಣಿಮೆಯ ಬೆಳಕಲ್ಲಿ ಪ್ರತಿಕೃತಿ ಹಿಡಿದ. ಅದ್ಭುತವಾಗಿತ್ತು. ಛೆ! ಚೆನ್ನಾಗಿಲ್ಲವೆಂದು ಹೇಳಿ ನೀರಲ್ಲಿ ಬಿಸಾಡಿದ. ಹೀಗೇ ಹಲವು ಹುಣ್ಣಿಮೆಗಳು ನಡೆದವು. ಒಮ್ಮೆ ರಾಜನಿಗೆ ತಡೆಯಲಾಗದೇ ಇನ್ನೇನು ಬಿಸಾಡುವುದರಲ್ಲಿದ್ದ ಪ್ರತಿಕೃತಿಯನ್ನು ಕಸಿದು ತಂದು ಬಿಟ್ಟ. ಅದೇ ತಾಜ್ ಮಹಲ್!

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ನೀವು ಹೇಳಿದಂತೆ ಕೆಲವೊಂದು ಚಿತ್ರ ತೆಗೆಯುವ ಮುನ್ನ ನಡೆದ ಘಟನೆಗಳು ಸ್ವಾರಸ್ಯಕರವಾಗಿರುತ್ತೆ. ನೀವೂ ಬರೆಯಿರಿ. ಚೆನ್ನಾಗಿರುತ್ತೆ.

ಮಲ್ಲಿಕಾರ್ಜುನ.ಡಿ.ಜಿ. said...

ಚಂದ್ರಕಾಂತ ಮೇಡಂ,
ಕೆಲವೊಮ್ಮೆ ಲೇಖಕರು ಕವರ್ ಪೇಜ್ design ಮಾಡುವವರಿಗೇ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿರುತ್ತಾರೆ. ಕೆಲವೊಮ್ಮೆ ಲೇಖಕರು ಹೀಗೇ ಇರಬೇಕು ಎಂದು ಕಲ್ಪಿಸಿಕೊಳ್ಳುತ್ತಾರೆ. ಅದರಲ್ಲೂ ಮಣಿಕಾಂತ್ ಅವರಿಗೆ ಬೇಕೆನಿಸಿದ ಫೋಟೋ ತೆಗೆಯಲು ಸಾಧ್ಯವೇ? ಎಂಬ ಪ್ರಶ್ನೆ ನನ್ನಲ್ಲೂ ಮೂಡಿತ್ತು. ಆದರೂ ಎಲ್ಲವೂ ಹೊಂದಿಕೊಂಡು ಬಂತು.

ಮಲ್ಲಿಕಾರ್ಜುನ.ಡಿ.ಜಿ. said...

ಶಿವಪ್ರಕಾಶ್ ಅವರೆ,
ಧನ್ಯವಾದಗಳು. ನೀವಂದಂತೆ ಪುಸ್ತಕದ ಮುಖಪುಟ ನೋಡಿಯೇ ಮೊದಲು ಆಕರ್ಷಿತರಾಗುವುದು. ಅದಕ್ಕೇ ಮಣಿಕಾಂತ್ compromise ಆಗದೇ ಇದ್ದದ್ದು.

ಮಲ್ಲಿಕಾರ್ಜುನ.ಡಿ.ಜಿ. said...

ಗುರು ಅವರೆ,
ತುಂಬಾ Thanks. ನಿಮ್ಮ ಬಾಲ್ಯ ನೆನಪಾಯಿತು ಈ ಚಿತ್ರ ನೋಡಿ ಅಂದರೆ ನನ್ನ ಮತ್ತು ಮಣಿಕಾಂತರ ಶ್ರಮ ಸಾರ್ಥಕವಾಯ್ತು.

ಮಲ್ಲಿಕಾರ್ಜುನ.ಡಿ.ಜಿ. said...

ರಾಜೇಶ್,
ಧನ್ಯವಾದಗಳು. ಪುಸ್ತಕ ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ, ಆಯ್ತಾ?

ಮಲ್ಲಿಕಾರ್ಜುನ.ಡಿ.ಜಿ. said...

ಬಾಲು ಅವರೆ,
ಧನ್ಯವಾದಗಳು. ಖಂಡಿತ ಪುಸ್ತಕದ ಬಿಡುಗಡೆಯ ದಿನ ಸಿಗುವ.

ಮಲ್ಲಿಕಾರ್ಜುನ.ಡಿ.ಜಿ. said...

ಧರಿತ್ರಿ,
ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಕಾರ್ತಿಕ್,
ಥ್ಯಾಂಕ್ಸ್. ಮುಂದೆಂದಾದರೂ ಈ ರೀತಿ ಸ್ವಾರಸ್ಯಕರ ಫೋಟೋ ಹಿಂದಿನ ಕಥೆಗಳನ್ನು ಬರೆಯುವೆ. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

ಮಲ್ಲಿಕಾರ್ಜುನ.ಡಿ.ಜಿ. said...

ಶಾಂತಲಾ ಮೇಡಂ,
ಧನ್ಯವಾದಗಳು. ಹೀಗೇ ಪ್ರೋತ್ಸಾಹಿಸುತ್ತಿರಿ.

Archu said...

ನಾನು ನಿಮ್ಮ ಟಿ.ವಿ. ಸಂದರ್ಶನದ ವಿಡಿಯೋ ನೋಡಿದೆ. ಖುಷಿಯಾಯಿತು !
ಅಭಿನಂದನೆಗಳು!

Godavari said...

ಸುಂದರವಾದ ಭಾವಚಿತ್ರ cover page ಅನ್ನು ಅಲಂಕರಿಸಿದೆ..

ಮಲ್ಲಿಕಾರ್ಜುನ.ಡಿ.ಜಿ. said...

ಅರ್ಚನ ಅವರೆ,
ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

Krishnaveni said...

Neevu thegeda Mukha putada photo thumba chennagide:-) Arthapoornavaagide:-)
Thumba kushi aaythu odi..

guruve said...

ಮುಖಪುಟದ ಆ ಛಾಯಾಚಿತ್ರ ಅದ್ಭುತ, ಬರೀ ಛಾಯಾಚಿತ್ರ ಅಲ್ಲ, ಭಾವಚಿತ್ರವಾಗಿದೆ. ಆ ಮುಖಭಾವಗಳನ್ನು ಸೆರೆ ಹಿಡಿದಿರುವ ರೀತಿ, ವರ್ಣನಾತೀತ!