ಗೋಕರ್ಣದಲ್ಲಿ 'ಸ್ಟಡಿ ಸರ್ಕಲ್' ಸಂಸ್ಥೆಯನ್ನು ಹುಟ್ಟುಹಾಕಿ, ಒಂದು ಲಕ್ಷಕ್ಕೂ ಹೆಚ್ಚು ಅಮೂಲ್ಯ ಪುಸ್ತಕಗಳನ್ನು ಸಂಗ್ರಹಿಸಿ, ಗ್ರಂಥಭಂಡಾರವನ್ನು ಸ್ಥಾಪಿಸಿರುವವರು ಜಿ.ಎಂ.ವೇದೇಶ್ವರ್. ಅವರು ಜೀವನ ಕುರಿತಾದ ಮೂಲಭೂತ ಪ್ರಶ್ನೆಗಳಿಗೆ ನಾಡಿನಾದ್ಯಂತ ಹಿರಿಯರಿಂದ, ವಿದ್ವಜ್ಜನರಿಂದ ಉತ್ತರ ತರಿಸಿಕೊಂಡು, ಆ ಮೂಲ ಪ್ರತಿಗಳನ್ನು ೪೦-೫೦ ವರ್ಷಗಳಿಂದ ಜೋಪಾನ ಮಾಡಿ ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ.ಸರ್.ಸಿ.ವಿ.ರಾಮನ್, ಡಾ.ಎಸ್.ರಾಧಾಕೃಷ್ಣನ್, ದ.ರಾ.ಬೇಂದ್ರೆ, ಶಿವರಾಮ ಕಾರಂತರು, ಡಿ.ವಿ.ಜಿ..... ಸುಮಾರು ೬೦ ಜನರ ಹಸ್ತಾಕ್ಷರದ ಪತ್ರಗಳು, ಫೋಟೋಗಳು ನೋಡಲು ಮುದನೀಡುತ್ತವೆ. ಅಷ್ಟೂ ಜನರ ಮಧ್ಯೆ ಕುಳಿತಂತೆ ಭಾಸವಾಗುತ್ತದೆ.
* * * * *
ಸುಮಾರು ೧೯೯೪-೧೯೯೫ ರಲ್ಲಿ "ಸುಧಾ" ವಾರಪತ್ರಿಕೆಯಲ್ಲಿ "ಸಮಕ್ಷಮ" ಎಂಬ ಲೇಖನಮಾಲೆ ಪ್ರಕಟವಾಗುತ್ತಿತ್ತು. ಅದು ಕನ್ನಡದ ಸುಪ್ರಸಿದ್ಧ ಸಾಹಿತಿಗಳನ್ನು ಪರಿಚಯಿಸುವ ಲೇಖನಮಾಲೆ. ಲೇಖಕರ ಚಿತ್ರ, ಹಸ್ತಾಕ್ಷರ ಮತ್ತು ಮಾಹಿತಿ ಎರಡು ಪುಟಗಳಲ್ಲಿ ಪ್ರಕಟವಾಗುತ್ತಿತ್ತು. ಅದನ್ನೆಲ್ಲಾ ಈಗ ನೋಡುವಾಗ ಏನೋ ಖುಷಿ, ಸಂಭ್ರಮ, ಸಂತೋಷ...
* * * *
ಕೆ.ಜಿ.ಸೋಮಶೇಖರ್ ನಮ್ಮ ನಾಡಿನ ಅಪೂರ್ವ ಛಾಯಾಚಿತ್ರಗಾರರು. ತಮ್ಮ ಕ್ಯಾಮೆರಾ ಕಣ್ಣಿನಿಂದ ವಿಶ್ವವಿಖ್ಯಾತ ಸಾಹಿತಿ, ಕಲಾವಿದ, ನಟ, ನಿರ್ದೇಶಕರ ಕ್ರಿಯಾಶೀಲ ಭಾವಭಂಗಿಗಳನ್ನು ದಾಖಲಿಸಿದ್ದಾರೆ. "ತರಂಗ"ದಲ್ಲಿ ೧೯೯೬ ರಲ್ಲಿ "ಚಿತ್ರ-ಚಿತ್ರಣ" ಎಂಬ ಲೇಖನಮಾಲೆ ಪ್ರಕಟವಾಗುತ್ತಿತ್ತು. ಇದರಲ್ಲಿ ಕೆ.ಜಿ.ಸೋಮಶೇಖರ್ ಸಂಗ್ರಹದ ಪ್ರತಿಭಾವಂತರ ಚಿತ್ರದ ಜೊತೆ ಅವರ ಹೃದಯಸ್ಪರ್ಶಿ ನೆನಪಿಗೆ ಬರಹದ ರೂಪ ಕೊಟ್ಟವರು ನಾ.ಡಿಸೋಜ.
* * * *
"ಆಟೋಗ್ರಾಫ್-ಫೋಟೋಗ್ರಾಫ್" ಗೆ ಪ್ರೇರಣೆ ನೀಡಿದ ನನ್ನಲ್ಲಿನ ಸಂಗ್ರಹದ ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾ ಈ ಬಾರಿಯ "ಸಹಿ-ಚಿತ್ರ"ಗಳನ್ನು ಪ್ರಸ್ತುತಪಡಿಸುತ್ತಿರುವೆ.

ಭಾರತದ ಅತಿದೊಡ್ಡ ಸಾಹಿತ್ಯ ಪುರಸ್ಕಾರ "ಜ್ಞಾನಪೀಠ ಪ್ರಶಸ್ತಿ" ಪಡೆದ ಏಳು ಮಂದಿ ಕನ್ನಡಿಗರಲ್ಲಿ ಒಬ್ಬರಾದ
ಡಾ.ಯು.ಆರ್.ಅನಂತಮೂರ್ತಿಯವರು ನಮ್ಮ ದೇಶದ ಹಿರಿಯ ಲೇಖಕರಲ್ಲೊಬ್ಬರು. ಇವರ "ಸಂಸ್ಕಾರ"ದಿಂದಲೂ ನಮಗೆಲ್ಲ ಇಷ್ಟವಾಗುತ್ತಾರೆ.

ನಡೆದಾಡುವ "ಜೀವಂತ ಕಥಾಕೋಶ" ಎಂದು ಎಲ್ಲರಿಂದಲೂ ಕರೆಯಿಸಿಕೊಳ್ಳುವ ದೈತ್ಯ ಪ್ರತಿಭೆ - ನಮ್ಮೆಲ್ಲರ ಪ್ರೀತಿಯ
ಕುಂ ವೀರಭದ್ರಪ್ಪನವರು.
'ತರಂಗ'ದ ಸಂಪಾದಕರಾಗಿದ್ದ
ಸಂತೋಷಕುಮಾರ್ ಗುಲ್ವಾಡಿಯವರು ನನಗೆ ಓದುವ ಗೀಳನ್ನು ಹೆಚ್ಚಿಸಿದವರು. ತಮ್ಮ 'ಅಂತರಂಗ'ದ ಮಾತುಗಳನ್ನು 'ಬಹಿರಂಗ'ವಾಗಿ ಬರೆದು ನಮ್ಮ ಜ್ಞಾನ ವೃದ್ಧಿಸಿದವರು.

ನಾಡಿನ ಅಚ್ಚು ಮೆಚ್ಚಿನ ತುಂಟಕವಿ
ಬಿ.ಆರ್.ಲಕ್ಷ್ಮಣರಾವ್. ನಮ್ಮ ಶಿಡ್ಲಘಟ್ಟ ತಾಲೂಕಿನ ಚೀಮಂಗಲದಲ್ಲಿ ಹುಟ್ಟಿದ ಇವರು ನಮ್ಮ ಪಕ್ಕದೂರು ಚಿಂತಾಮಣಿಯಲ್ಲಿದ್ದಾರೆ.
"ಬಿಳಿಗಿರಿಯಷ್ಟು ಪೋಲಿಯೂ ಅಲ್ಲದ ಶಿವರುದ್ರಪ್ಪನವರಂತೆ 'ಸಾದ್ವಿ'ಯೂ ಅಲ್ಲದ 'ನಡು'ಗನ್ನಡದ ಕವಿ ಬಿ.ಆರ್.ಎಲ್" -
ಜೋಗಿ

"ಬುಗುರಿ"ಯಂತೆ
ಮೊಗಳ್ಳಿ ಗಣೇಶ್ ಅವರ ಕಥೆಗಳು ನಮ್ಮನ್ನು ಆಡಿಸುತ್ತ, ಕಾಡಿಸುತ್ತವೆ.

ಕಬ್ಬಿಣದ ಕಡಲೆಯಾದ ವಿಜ್ಞಾನವನ್ನು ಸರಳವಾಗಿ ಕಸ್ತೂರಿ ಕನ್ನಡದಲ್ಲಿ ಸಾದರಪಡಿಸುವ ವಿಜ್ಞಾನಿ
ಹಾಲ್ದೊಡ್ಡೇರಿ ಸುಧೀಂದ್ರ ಅವರು.

ನಾನು ಡಾ.ಕೃಷ್ಣಾನಂದ ಕಾಮತರನ್ನು ನೋಡಲಾಗಲಿಲ್ಲ. ಆದರೆ ಅವರನ್ನು ಮಾತೃಸ್ವರೂಪರಾದ
ಡಾ.ಜ್ಯೋತ್ಸ್ನಾಕಾಮತರಲ್ಲಿ ಕಂಡೆ. ಬೆಂಗಳೂರಿನ ಆಕಾಶವಾಣಿಯ ನಿರ್ದೇಶಕರಾಗಿ ನಿವೃತ್ತರಾಗಿರುವ ಇವರು ಈಗಲೂ ಅಧ್ಯಯನ ಮಾಡುತ್ತಲೇ ತಮ್ಮ ಪತಿ ಡಾ.ಕೃಷ್ಣಾನಂದ ಕಾಮತರ ನೆನಪಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ.

ನಮ್ಮೆಲ್ಲರ ಮೆಚ್ಚಿನ ಕವಯತ್ರಿ
ಪ್ರತಿಭಾ ನಂದಕುಮಾರ್.

ನಮ್ಮ ಕೋಲಾರ ಜಿಲ್ಲೆಯವರಾದ ಕೃಷಿ ವಿಜ್ಞಾನಿ
ಡಾ.ಕೆ.ಎನ್.ಗಣೇಶಯ್ಯ ಕಥೆ ಹೇಳುವುದರಲ್ಲಿ ಸಿದ್ಧಹಸ್ತರು. ಚರಿತ್ರೆಯ ಬಗ್ಗೆ ಆಸಕ್ತಿ ಹುಟ್ಟಿಸುವುದಲ್ಲದೆ ಐತಿಹಾಸಿಕ ಸ್ಥಳಗಳನ್ನು ಹೊಸ ರೀತಿಯಲ್ಲಿ ನೋಡಲು ಪ್ರೇರೇಪಿಸುತ್ತವೆ ಇವರ ಕೃತಿಗಳು.

ಕುವೆಂಪು ನಂತರದ ಮಲೆನಾಡಿನ ಲೇಖಕರಲ್ಲಿ ಪ್ರಮುಖರು
ಬಿಳುಮನೆ ರಾಮದಾಸ್. ಇವರ ಕಾದಂಬರಿಯಲ್ಲಿ ಬರುವ ಪಾತ್ರ ಮತ್ತು ಚಿತ್ರಣ ಮಲೆನಾಡಿನ ಜೀವನದ ಇನ್ನೊಂದು ಮಗ್ಗುಲನ್ನು ಸ್ಪರ್ಶಿಸುತ್ತದೆ.

ನಿವೃತ್ತ ನ್ಯಾಯಾಧೀಶರು, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದವರೂ ಆದ
ಕೋ.ಚನ್ನಬಸಪ್ಪನವರು ಪ್ರಬುದ್ಧ ಸಾಹಿತ್ಯ ಶಕ್ತಿಯೂ ಹೌದು.
ಬರುಗೂರು ರಾಮಚಂದ್ರಪ್ಪ ಬಹುರೂಪಿ. ಬಂಡಾಯಗಾರರು, ಕನ್ನಡ ಹೋರಾಟಗಾರರು, ಸಾಹಿತಿ, ಸಿನಿಮಾ ನಿರ್ದೇಶಕ, ರಾಜಕೀಯ...

ನೀರಿನ ಮಹತ್ವ ಮತ್ತು ಸದುಪಯೋಗ ತಿಳಿಸುತ್ತಾ ಜಲಸಾಕ್ಷರತೆ ಮೂಡಿಸುತ್ತಿರುವವರು
ಶ್ರೀಪಡ್ರೆ.