ಗೆಳೆಯ ಸತ್ಯನಾರಾಯಣ್ ಬಂದು "ನಮ್ಮ ಕೋರ್ಟ್ ನಲ್ಲಿ ಹಕ್ಕಿಯೊಂದು ಗೂಡು ಮಾಡಿದೆ ಫೋಟೋ ತೆಗೀತೀರಾ?" ಎಂದು ಕೇಳಿದರು. ನನಗೆ ನಗು ಬಂತು. ಎಲ್ಲಾ ಜಾಗ ಬಿಟ್ಟು ಕೋರ್ಟ್ ನಲ್ಲಿ ಗೂಡು ಮಾಡುವುದಕ್ಕೆ ಹಕ್ಕಿಗೇನು ಬುದ್ಧಿ ಇಲ್ವಾ? ಎಂದು ಅನಿಸಿ ನಗುಬಂದಿತು. ಅವರು, "ನೀವು ನಂಬಲ್ಲ ಅಂತಗೊತ್ತು. ನಾವು ವಕೀಲರು ಸಾಕ್ಷಿಯಿಲ್ಲದೆ ಮಾತನಾಡೋದಿಲ್ಲ. ನೋಡಿ ನನ್ನ ಮೊಬೈಲ್ ನ ಕ್ಯಾಮೆರಾದಲ್ಲಿ ಫೋಟೋ ತೆಗೆದಿದ್ದೀನಿ" ಎಂದು ತೋರಿಸಿದರು. ಅದರಲ್ಲಿ ಚಿತ್ರ ತುಂಬಾ ಅಸ್ಪಷ್ಟವಾಗಿತ್ತು. ಅವರು ಹಠತೊಟ್ಟು ನನ್ನನ್ನು ಕೋರ್ಟಿನ ಬಳಿಗೆ ಕರೆದೊಯ್ದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನ್ಯಾಯಾಲಯದ ಕಟ್ಟಡ ಹಳೆಯದು. ಇದು ೧೯೧೮ರಲ್ಲಿ ಕಟ್ಟಿದ ಕಟ್ಟಡ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ತಾಲೂಕು ಆಡಳಿತ ಕಛೇರಿಯಾಗಿತ್ತು. ಸ್ವಾತಂತ್ರ್ಯಾನಂತರ ಇದೇ ಕಟ್ಟಡದ ಒಂದು ಭಾಗದಲ್ಲಿ ಪೋಲೀಸ್ ಸ್ಟೇಷನ್ ಮತ್ತು ಇನ್ನೊಂದು ಭಾಗದಲ್ಲಿ ತಾಲೂಕು ಕಛೇರಿ ಕಾರ್ಯನಿರ್ವಹಿಸುತ್ತಿತ್ತು. ಹೊಸ ಕಟ್ಟಡಕ್ಕೆ ಪೋಲೀಸ್ ಸ್ಟೇಷನ್ ವರ್ಗಾವಣೆಯಾಯ್ತು. ಮಿನಿವಿಧಾನಸೌಧವಾದ ಮೇಲೆ ಆಡಳಿತ ಕಛೇರಿಯೂ ಅಲ್ಲಿಗೆ ಹೋಯಿತು. ಆಗ ಸ್ವಂತ ಕಟ್ಟಡವಿರದಿದ್ದರಿಂದ ನ್ಯಾಯವಾದಿಗಳ ವಶಕ್ಕೆ ಈ ಕಟ್ಟಡ ಬಂತು. ಈ ಕಟ್ಟಡದ ಮಧ್ಯಭಾಗದ ಖಾಲಿ ಜಾಗದಲ್ಲಿ ಹಳೆಯ ಎರಡು ಅಶೋಕ ಮರಗಳು ಮತ್ತು ಒಣಗಿನಿಂತ ಈಚಲು ಮರದ ಎರಡು ಖಾಂಡಗಳಿದ್ದವು. ವಕೀಲರೆಲ್ಲರ ಆಸಕ್ತಿಯಿಂದಾಗಿ ಈಗ ಅಲ್ಲಿ ಹಸಿರು ಉಸಿರಾಡುತ್ತಿದೆ. ತರತರದ ಹೂಗಿಡಗಳನ್ನು ನೆಟ್ಟಿದ್ದಾರೆ. ರಂಗಿನ ಗುಲಾಬಿಗಳು ನಳನಳಿಸುತ್ತಿವೆ.
ಇಲ್ಲಿ ಒಣಗಿನಿಂತಿರುವ ಈಚಲು ಖಾಂಡದಲ್ಲಿ ಪೊಟರೆ. ಅದರಲ್ಲಿ ಕುಟುರ ಹಕ್ಕಿಯ ಗೂಡು. ಜನದಟ್ಟಣೆಯಿಂದ ಗಿಜಗುಡುವ ನ್ಯಾಯಾಲಯದ ಆವರಣದಲ್ಲಿ ಹಕ್ಕಿ ಗೂಡು ಮಾಡಿದೆಯಲ್ಲ ಎಂಬುದೇ ಅಚ್ಚರಿ. ನಾನಲ್ಲಿ ನೋಡುತ್ತಿರುವಾಗಲೇ ತಾಯಿಹಕ್ಕಿ ಹಾರಿ ಬಂದು ಗುಟುಕು ಕೊಟ್ಟು ಹೋಯಿತು. ಆದರೆ ಇದನ್ನು ಫೋಟೋ ತೆಗೆಯುವುದು ಹೇಗೆ? ನನ್ನ ಕ್ಯಾಮೆರಾ, ಟ್ರೈಪಾಡ್ ಎಲ್ಲ ತಂದು ನಿಲ್ಲಿಸಿದರೆ, ನನ್ನ ಸುತ್ತಲು ಜನ ಮುತ್ತಿ, ಹಕ್ಕಿ ಬರದೇ ನಾನಾ ಪಡಿಪಾಟಲು ಅನುಭವಿಸಬೇಕಾಗುತ್ತೆ. ಈ ಸಮಸ್ಯೆಗೆ ಗೆಳೆಯರೇ ಪರಿಹಾರ ಸೂಚಿಸಿದರು. "ಬೆಳೆಗ್ಗೆ ಬೇಗ ಬನ್ನಿ. ವಾಚ್ ಮನ್ ಗೆ ಹೇಳಿರ್ತೀನಿ. ಯಾರೂ ಇರಲ್ಲ. ನೀವು ಫೋಟೋ ತೆಗೀಬಹುದು" ಅಂದರು.
ಸದಾ ಚಟುವಟಿಕೆಯಿಂದಿರುವ ಸುಂದರ ಸೂರಕ್ಕಿ.
ಮಾರನೇ ದಿನ ಬೆಳಿಗ್ಗೆ ಬೇಗ ಹೋಗಿ ನನ್ನ ಕ್ಯಾಮೆರಾವನ್ನು ಟ್ರೈಪಾಡ್ ಗೆ ಹೊಂದಿಸಿ, ಕೇಬಲ್ ಹಾಕಿ, ಅದರ ತುದಿ ಹಿಡಿದು ದೂರದಲ್ಲಿ ಕೂತು ಗಮನಿಸತೊಡಗಿದೆ. ನನ್ನ ಕಣ್ಮುಂದೆ ಹೂತೋಟವಿತ್ತು. ಚಿಟ್ಟೆಗಳು ಹೂವಿನ ಮಕರಂದ ಹೀರುತ್ತಾ ಹಾರಾಡುತ್ತಿದ್ದವು. ಕೀಚ್ ಕೀಚ್ ಎನ್ನುತ್ತಾ ಸೂರಕ್ಕಿಗಳು ತಮ್ಮ ಚೂಪಾದ ಕೊಕ್ಕಿನಿಂದ ದಾಸವಾಳ ಹೂವಿನ ಮಕರಂದ ಹೀರುತ್ತಿದ್ದವು.
ಅಂಬರಗುಬ್ಬಿಗಳ ಗೂಡು.

ಅತಿ ವೇಗವಾಗಿ ಹಾರಾಡುವ ಅಂಬರಗುಬ್ಬಿಗಳು ಹಾರಾಟ ನಡೆಸಿದ್ದವು. ನೋಡಿದರೆ ಅವೂ ಗೂಡು ಕಟ್ಟಿದ್ದವು. ಇನ್ನು ಗುಬ್ಬಿ, ಪಾರಿವಾಳ, ಅಳಿಲುಗಳೂ ಅಲ್ಲಿದ್ದವು. ಅರೆ! ಇದು ನ್ಯಾಯಾಲಯವೊ ಇಲ್ಲಾ ಕಾನನವೊ ಅನ್ನಿಸಿತು.
ತನ್ನ ಮರಿಗಾಗಿ ಹಣ್ಣು ತಂದಿರುವ ಕುಟುರ.
ಇದರ ಮಧ್ಯೆ ಕುಟುರ ತನ್ನ ಮರಿಗೆ ಹಣ್ಣು, ಕೀಟಗಳನ್ನು ತಂದು ತಿನ್ನಿಸುತ್ತಿತ್ತು. ಮರಿಯಾಗಲೇ ಕೊಂಚ ದೊಡ್ಡದಾಗಿತ್ತು. ತಲೆಯನ್ನು ಗೂಡಿನಿಂದ ಹೊರಕ್ಕೆ ಹಾಕುತ್ತಿತ್ತು.
ನಾನು ಫೋಟೋ ತೆಗೆದು, ಇಷ್ಟೆಲ್ಲಾ ಹಕ್ಕಿ ಚಿಟ್ಟೆ ಕೌತುಕಗಳನ್ನು ನೋಡಿ ಬೆರಗಿನಿಂದ ಹೊರಬರುವಾಗ್ಗೆ ಹದ್ದೊಂದು ನ್ಯಾಯಾಲಯದ ಆವರಣದಲ್ಲಿ ಕುಳಿತಿತ್ತು. ಅದರ ಫೋಟೋವನ್ನೂ ತೆಗೆದೆ. ಅದು ನ್ಯಾಯಾಲಯದ ಬಾಗಿಲು ತೆರೆಯುವುದಕ್ಕಾಗಿ ಕಾದು ಕುಳಿತಿರುವಂತೆ ಅನ್ನಿಸಿತು. ಆಗ ನನಗೆ ಇವು ಹೋದ ಜನ್ಮದಲ್ಲಿ ಹಾಕಿದ್ದ ಕೇಸ್ ಗಳನ್ನು ಶತಾಯಗತಾಯ ಇತ್ಯರ್ಥ ಮಾಡಿಕೊಳ್ಳಬೇಕೆಂಬ ತೀರ್ಮಾನದಲ್ಲಿ ಇಲ್ಲಿಗೆ ಬಂದಿರಬೇಕು ಅನ್ನಿಸಿತು.