Friday, December 5, 2008

ಸಾಟಿಯಿಲ್ಲದ ಕೋಣಕ್ಕೆ ಚಾಟಿ ಏಟು!

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಸ್ಥರ ವಿನೋದಗಳಲ್ಲಿ ಕೋಣಗಳ ಓಟದ ಸ್ಪರ್ಧೆ ಅಥವಾ ಕಂಬಳ ಪ್ರಮುಖವಾದದ್ದು. ಉತ್ತಮ ತಳಿಯ ಕೋಣಗಳನ್ನು ಕಂಬಳಕ್ಕೆಂದೇ ಸಾಕುತ್ತಾರೆ. ಚೆನ್ನಾಗಿ ಉತ್ತು ನೀರು ನಿಲ್ಲಿಸಿದ ಗದ್ದೆಯಲ್ಲಿ ಕಂಬಳ ನಡೆಯುತ್ತದೆ. ಕಂಬಳಕ್ಕಾಗಿ ಏರ್ಪಡಿಸಿದ ಗದ್ದೆಯಲ್ಲಿ ಕೋಣಗಳು ಓಡಿ ಗುರಿಮುಟ್ಟುವ ಸ್ಥಳಕ್ಕೆ "ಮಂಜೊಟ್ಟಿ" ಎಂದು ಹೆಸರು. ಆದ್ದರಿಂದಲೇ ಕಂಬಳದ ಕೋಣಗಳನ್ನು ಮಂಜೊಟ್ಟಿ ಕೋಣಗಳೆಂದು ಕರೆಯುವರು. ಕೋಣಗಳ ಹಿಂಭಾಗದಲ್ಲಿ ತಳದಲ್ಲಿ ಒಂದು ಹಲಗೆಯನ್ನು ಕಟ್ಟುತ್ತಾರೆ. ಇದನ್ನು 'ಗೋರುಹಲಗೆ' ಎನ್ನುತ್ತಾರೆ. ಕೋಣಗಳನ್ನು ಓಡಿಸುವಾತ ಇದರ ಮೇಲೆ ನಿಲ್ಲುತ್ತಾನೆ. ಆತ ಎಡಗೈಯಿಂದ ಬಿಗಿಯಾಗಿ ಕೋಣದ ಬಾಲವನ್ನು ಹಿಡಿದುಕೊಂಡು ಬಲಗೈಯ ಚಾವಟಿಯಿಂದ ಅದರ ಬೆನ್ನಿನ ಮೇಲೆ ಹೊಡೆದು ಅವುಗಳು ವೇಗವಾಗಿ ಓಡುವಂತೆ ಪ್ರಚೋದಿಸುತ್ತಾನೆ. ಕೋಣಗಳು ಓಡುವ ರಭಸಕ್ಕೆ ಗೋರುಹಲಗೆಯಿಂದ ನೀರು ಮೇಲಕ್ಕೆ ಚಿಮ್ಮಿ ನಿಶಾನೆಯನ್ನು ಮುಟ್ಟುತ್ತದೆ. ನಿಶಾನೆ ಎಷ್ಟು ಎತ್ತರಕ್ಕೆ ಒದ್ದೆಯಾಯಿತು ಎಂಬ ಆಧಾರದಿಂದ ಜಯವನ್ನು ನಿರ್ಧರಿಸುತ್ತಾರೆ. ವೇಗವಾಗಿ ಓಡಿದ ಕೋಣಗಳು ಯಾವುವು ಎಂಬುದರಿಂದಲೂ ಗೆಲುವನ್ನು ನಿರ್ಧರಿಸುತ್ತಾರೆ. ಹಲಗೆ ಮಾತ್ರವಲ್ಲದೆ ಹಗ್ಗ, ನೇಗಿಲುಗಳನ್ನು ಹಿಡಿದೂ ಕೋಣಗಳ ಓಟದ ಸ್ಪರ್ಧೆ ನಡೆಸುತ್ತಾರೆ. ಅಂದ ಹಾಗೆ ಮೇಲಿರುವ ಚಿತ್ರವನ್ನು ತೆಗೆದದ್ದು ಉಡುಪಿ ಬಳಿಯ ಕಟ್ಪಾಡಿ ಕಂಬಳದಲ್ಲಿ.

2 comments:

Ittigecement said...

ಮಲ್ಲಿಕಾರ್ಜುನ್...

ನಿಮಗೆ ಬಹುಮಾನ ಗೆದ್ದಿದ್ದಕ್ಕೆ ಹ್ರತ್ಪೂರ್ವಕ ಅಭಿನಂದನೆಗಳು....

ಇನ್ನಷ್ಟು ಪ್ರಶಸ್ತಿಗಳು ಬರಲಿ.....ಶುಭ ಹಾರೈಸುತ್ತೇನೆ....

ನಾನು ಸಣ್ಣವನಿದ್ದಾಗ ನೋಡಿದ್ದೆ .. ತುಂಬಾ ರೋಮಾಂಚಕವಾಗಿರುತ್ತದೆ...
ಫೋಟೊ ನೀವೆ ತೆಗೆದದ್ದಾ? ಫೋಟೊ ತುಂಬಾ ಚೆನ್ನಾಗಿದೆ...

ಧನ್ಯವಾದಗಳು....

ಮಲ್ಲಿಕಾರ್ಜುನ.ಡಿ.ಜಿ. said...

ಹೌದು ಪ್ರಕಾಶ್ ಅವರೆ, ಅದು ನಾನೇ ತೆಗೆದ್ ಫೋಟೋ. ಎರಡು ವರ್ಷಗಳ ಹಿಂದೆ ನಾನು ಮತ್ತು ಶಿವು ಕುಟುಂಬದೊಂದಿಗೆ ಧರ್ಮಸ್ಥಳ, ಉಡುಪಿ,ಆನೆಗುಡ್ಡ,ಬೇಕಲ್ ಕೋಟೆ... ಎಲ್ಲಾ ಸುತ್ತಿ ಬಂದಿದ್ದೆವು. ಮಧ್ಯದಲ್ಲಿ ಕಂಬಳವನ್ನೂ ನೋಡಿ,ಫೋಟೋ ತೆಗೆದಿದ್ದೆವು. ಧನ್ಯವಾದಗಳು ಸಾರ್.