Monday, December 29, 2008

ಮಲಗಿದ್ದಾನೆ ಕುಂಭಕರ್ಣ!

ನಿದ್ರೆಗೆ ಪರ್ಯಾಯ ಪದವೇ ಕುಂಭಕರ್ಣ. ಜೊತೆಯಲ್ಲಿ ತಿನ್ನುವುದಕ್ಕೂ. ಚೆನ್ನಾಗಿ ತಿಂದು ಮಲಗುವವನಿಗೆ ಕುಂಭಕರ್ಣ ಎಂದೇ ಕರೆಯುವುದು. ಆದರೆ ರಾವಣನ ತಮ್ಮ ಕುಂಭಕರ್ಣ ಮಹಾಪರಾಕ್ರಮಿ. ಅವನಿಗೆ ಬ್ರಹ್ಮನ ಶಾಪವಿತ್ತು. ಒಂದು ಬಾರಿ ಮಲಗಿದರೆ, ಆರು ತಿಂಗಳು ನಿದ್ದೆಯಲ್ಲಿ ತೊಡಗಿರುತ್ತಿದ್ದ. ಮತ್ತೆ ಎದ್ದರೆ ಒಂದು ದಿನ ಮಾತ್ರ ಎಚ್ಚರ. ಪುನಃ ಆರು ತಿಂಗಳು ನಿದ್ದೆ. ಕುಂಭಕರ್ಣ ತನ್ನ ಶಕ್ತಿಗೆ ತಕ್ಕಂತೆ ಬಹು ದೊಡ್ಡ ಹೊಟ್ಟೆಯನ್ನು ಹೊಂದಿದ್ದ. ಒಂದು ಲಕ್ಷ ಜನಕ್ಕೆ ಆಗುವ ಆಹಾರವನ್ನು ಅವನೊಬ್ಬನೆ ಮುಗಿಸುತ್ತಿದ್ದ.
ರಾಮರಾವಣರ ಯುದ್ಧದ ಸಮಯದಲ್ಲಿ ಕುಂಭಕರ್ಣನ ಅವಶ್ಯಕತೆ ಬಂದು, ಅವನನ್ನು ನಿದ್ರೆಯಿಂದ ಎಬ್ಬಿಸಲು ರಾವಣ ತನ್ನ ಮಂತ್ರಿಗಳಿಗೆ ಹೇಳಿದ. ಅವರೆಲ್ಲ ಕುಂಭಕರ್ಣನನ್ನು ಎಬ್ಬಿಸಲು ಮಾಡಿದ ಪ್ರಯತ್ನವೇ ರೋಚಕ ಕಥೆ. ಅನ್ನ ಮತ್ತು ಮಾಂಸದ ರಾಶಿ ಹಾಕಿ, ಚಂಡೆ ಮದ್ದಳೆಗಳನ್ನು ಬಾರಿಸಿ, ಹಗ್ಗ ಹಾಕಿ ಎಳೆದು, ಮೂಗಿಗೆ ಕಟ್ಟಿಗೆ ಹಾಕಿ ತಿರುಚಿ, ಕೂದಲು ಕಿತ್ತರೂ ಅವನು ಜಪ್ಪೆನ್ನಲಿಲ್ಲ. ಆನೆಗಳ ಕೈಲಿ ಎಳೆಸಿ , ತುಳಿಸಿ ಅವನನ್ನು ಎಬ್ಬಿಸುವಷ್ಟರಲ್ಲಿ ಅವರಿಗೆ ಅರ್ಧ ಜೀವವಾಗಿತ್ತು. ಎದ್ದವನ ಮುಂದಿದ್ದ ರಾಶಿ ರಾಶಿ ಆಹಾರವನ್ನು ಸ್ವಲ್ಪ ಹೊತ್ತಿನಲ್ಲೇ ಖಾಲಿ ಮಾಡಿಬಿಟ್ಟ. ಲಂಕೆಗೆ ಸಂಕಷ್ಟ ಬಂದಿದೆ ಎಂದು ಅಸುರರು ಕೈಮುಗಿದಾಗ ತನ್ನ ಅಣ್ಣನ ಬಳಿ ಹೋದನು. ನಡೆದ ವಿಷಯವನ್ನು ತಿಳಿದ ಕುಂಭಕರ್ಣ, "ಅಣ್ಣಾ, ಕೆಟ್ಟ ಕೆಲಸ ಮಾಡುವಾಗ ಇತರರ ಅಭಿಪ್ರಾಯ ಪಡೆಯದೆ, ಕಷ್ಟ ಬಂದಾಗ ಮಾತ್ರ ಬೇರೆಯವರಿಂದ ಸಹಾಯ ಪಡೆಯುವ ನಿನ್ನ ನೀತಿ ಸರಿಯಲ್ಲ" ಎಂದು ರಾವಣನನ್ನು ಖಂಡಿಸಿದ. ಆದರೂ ಲಂಕೆಯ ಮಾನ ಕಾಪಾಡುತ್ತೇನೆಂದು ಹೇಳಿ ರಣರಂಗಕ್ಕೆ ಹೋದನು.ವಾನರ ಹಿಂಡು ಅವನಿಗೆ ಲೆಕ್ಕಕ್ಕೇ ಇಲ್ಲ. ಹಿಡಿದಿಡಿದು ಬಾಯಿಯೊಳಗೆ ತುಂಬಿಕೊಳ್ಳತೊಡಗಿದ. ಅಂಥ ಹನುಮಂತನೇ ಅವನಿಂದ ಪೆಟ್ಟು ತಿಂದುಬಿಟ್ಟ. ಸಾಕ್ಷಾತ್ ಯಮನಂತೆ ರಣರಂಗದಲ್ಲಿ ಅಬ್ಬರಿಸಿದ ಕುಂಭಕರ್ಣ. ಕಡೆಗೆ ಶ್ರೀರಾಮನು ವಾಯುವ್ಯಾಸ್ತ್ರಗಳಿಂದ ಅವನ ತೋಳುಗಳನ್ನು, ಅರ್ಧಚಂದ್ರಾಸ್ತ್ರಗಳಿಂದ ಅವನ ಕಾಲುಗಳನ್ನೂ ಕತ್ತರಿಸಿಹಾಕಿದನು. ನಂತರ ಇಂದ್ರಾಸ್ತ್ರದಿಂದ ಅವನ ತಲೆ ತತ್ತರಿಸಿ ಕೊಂದನು.
ಕರ್ಣಾಟಕದ ಬಾಗೇಪಲ್ಲಿ, ಪೆನುಗೊಂಡ ಮಾರ್ಗವಾಗಿ ಅನಂತಪುರಕ್ಕೆ ಹೋಗುವ ದಾರಿಯಲ್ಲಿ, ಪೆನುಗೊಂಡದಿಂದ ೫ ಕಿ.ಮೀ. ಮುಂದೆ ಎಡಕ್ಕೆ ಕುಂಭಕರ್ಣ ಎಂಬ ಕ್ಷೇತ್ರವಿದೆ. ಅಲ್ಲಿ ಮೇಲಿನ ಚಿತ್ರದಲ್ಲಿರುವ ನಿದ್ರಾಭಂಗಿಯಲ್ಲಿರುವ ಕುಂಭಕರ್ಣನ ವಿಗ್ರಹವಿದೆ. ಎಷ್ಟು ದೊಡ್ಡದಾಗಿದೆಯೆಂದರೆ ಕುಂಭಕರ್ಣನ ಹೊಟ್ಟೆಯೊಳಗೆಲ್ಲಾ ನಾವು ಓಡಾಡಬಹುದು. ಅವನನ್ನು ಎಬ್ಬಿಸುವ ಪ್ರಯತ್ನದಲ್ಲಿರುವ ಅಸುರರು ಅವನ ಮೂಗಿನೊಳಗೆ ಕೋಲು ತೂರಿಸುವುದು, ನಗಾರಿ ಬಾರಿಸುವುದು, ಮಾಂಸದ ಅಡುಗೆಯಿಟ್ಟು ಆಕರ್ಷಿಸುವುದು, ತಿವಿಯುವುದು.... ಇವೆಲ್ಲಾ ನೋಡಲು ಸೊಗಸಾಗಿದೆ.
ಕುಂಭಕರ್ಣನ ಆಭರಣಗಳು, ಚಿಂತಾಕ್ರಾಂತನಾಗಿ ಕುಳಿತ ರಾವಣ, ಕುಂಭಕರ್ಣನನ್ನು ಎಬ್ಬಿಸಲು ಪ್ರಯತ್ನಿಸಿ ಧಣಿದ ರಾಕ್ಷಸರು ಅವನಿಗೆ ಕೊಡಲು ತಂದಿದ್ದ ಮಾಂಸವನ್ನು ಉಣ್ಣುತ್ತಿರುವುದು ಮನಸೆಳೆಯುತ್ತದೆ.
ಇನ್ನೇಕೆ ತಡ, ನೀವೂ ಕುಂಭಕರ್ಣ ನಿದ್ದೆಯಿಂದ ಮೇಲೆದ್ದು ನೋಡಲು ನಡೆಯಿರಿ ಕುಂಭಕರ್ಣನನ್ನು!

6 comments:

shivu K said...

ಕುಂಬಕರ್ಣನ ಫೋಟೋ ಮತ್ತು ಕತೆ ಚೆನ್ನಾಗಿ ವಿವರಿಸಿದ್ದೀರಿ...ಕಾಕತಾಳಿಯವೆಂದರೆ ನಾನು ಎರಡು ದಿನದಿಂದ ಕುಂಭಕರ್ಣನಾಗಿಬಿಟ್ಟಿದ್ದೇನೆ[ನಿದ್ರೆಯಲ್ಲಿ ಮಾತ್ರ ಊಟದಲ್ಲಿ ಅಲ್ಲ].

ಸಿಮೆಂಟು ಮರಳಿನ ಮಧ್ಯೆ said...

ಮಲ್ಲಿಕಾರ್ಜುನ್...
ಇದೆಲ್ಲ ಎಲ್ಲಿಂದ ತರುತ್ತೀರಿ. .ಮಾರಾಯರೆ..?
ನಿಮ್ಮ ಬ್ಲೋಗಿನಲ್ಲಿ ...ಯಾವಗಲೂ ಹೊಸದು ಇರುತ್ತದೆ..
ವೈವಿಧ್ಯಮಯವಿರುತ್ತದೆ..

ಚಂದದ ಬರವಣಿಗೆ..
ನನ್ನ ಮಗ ಒಮ್ಮೆ : ಕುಂಬಕರ್ಣ"ನನ್ನು ನೋಡಿಬರೋಣ ಅಪ್ಪ " ಅನ್ನುತ್ತಿದ್ದಾನೆ,,

ಫೋಟೊಗಳೂ ಚೆನ್ನಾಗಿವೆ..

ನಿಮ್ಮ ಹೊಸತನ್ನು ಯಾವಗಲೂ ನಿರೀಕ್ಷೆಯಲ್ಲಿರುವೆ..

ಮಲ್ಲಿಕಾರ್ಜುನ.ಡಿ.ಜಿ. said...

ಶಿವು, ಅಪರೂಪಕ್ಕೊಮ್ಮೆ ನೀವು ಹಾಗೆ ಮಲಗುವುದು. ಏನೂ ತೊಂದರೆಯಿಲ್ಲ ಬಿಡಿ.
ಪ್ರಕಾಶ್ ಸರ್, ಅನಂತಪುರದ ಕಡೆ ಹೋಗುವಾಗ ನಿಜಕ್ಕೂ ಒಮ್ಮೆ ಭೇಟಿ ಕೊಡಲೇಬೇಕಾದ ಸ್ಥಳ ಇದು.

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

ಅಣ್ಣಾ..ಹೊಸ ವರುಷದ ಶುಭಾಶಯಗಳು.
-ತುಂಬುಪ್ರೀತಿಯಿಂದ,
ಚಿತ್ರಾ

ಭಾರ್ಗವಿ said...

ಕುಂಭಕರ್ಣನ ಚಿತ್ರಗಳು ಚೆನ್ನಾಗಿವೆ.ಮುಂದಿನ ಇಂಡಿಯಾ ಟ್ರಿಪ್ಪಲ್ಲಿ ಹೋಗೋಕಾಗುತ್ತಾ ನೋಡ್ಬೇಕು. ಸ್ಥಳದ ಬಗ್ಗೆ ಮಾಹಿತಿಗೆ ಧನ್ಯವಾದಗಳು.

Dr. B.R. Satynarayana said...

ಕುಂಬಕರ್ಣನ ಚಿತ್ರ-ಕಥೆ ನೋಡಿದೆ. ಕುವೆಂಪು ಅವರ ಶ್ರೀ ರಾಮಾಯಣದರ್ಶನಂ ಮಹಾಕಾವ್ಯದ ಕೊನೆಯ (ನಾಲ್ಕನೆಯ) ಸಂಪುಟದ ಮೊದ ಸಂಚಿಕಯೇ 'ಕೆಂಭಕರ್ಣನನೆಬ್ಬಿಸಿಮ್' ಎಂಬುದು ನೆನಪಿಗೆ ಬಂತು. ಕೈಗೆ ಪುಸ್ತಕವೂ ಸಿಕ್ಕಿದ್ದರಿಂದ ಒಂದೆರಡು ಸಾಲು ಬರೆಯುತ್ತೇನೆ ನೋಡಿ.
ಪಂತಿಗಟ್ಟಿದರಲ್ಲಿ ಮಿಗಗಳಂ, ಕಾಳ್ಪಂದಿ
ಕಾಳ್ಕೋಣ ಕುರಿ ಕೋಳಿ ಗೂಳಿ ಮೊದಲಾಗವಂ
ಸುತ್ತುಂಬರಿಸಿ, ಹರಸಿ. ಚರಿಗೆ ಚರಿಗೆಯಲಿ ಚರು ಬೆಟ್ಟವಿಳ್ದುದು ಬಣ್ಣಗೂಳ್. ಒರಲ್ ಕೂಗುಗಳ್
ಅರಚುಗಳ್ ಹೂಂಕಾರಗಳ್ ಕೇಕೆ ಕೊಕ್ಕೊಕೋಗಳ್,
ಮಾರಿಗುಂ ಕಿವಿಗೆ ಕರಕರೆ ಕರೆಯೆ, ನೆರೆದವು
ನಿಶಾಚರನ ನಿದ್ದೆಬೂತಿಗೆ ಸಿದ್ಧಬಲಿಯಾಗಿ.
ಮೇಣ್, ತಮಶ್ಚರ ತಮೋಜಾಗ್ರತಿಗೆ ಪಾನಕಂ
ಹಂಡೆ ಹಂಡೆಯಲಿ ನೊರೆ ನೊರೆ ಹೆಂಡವಣಿಯಾಯ್ತು! ಊದಿದುವು ಕಹಳೆಪರೆ; ಎದ್ದುದು ಧೂಪ ಧೂಮಂ;
ಅಥರ್ವಣವನೋದಿದರ್ ದುರ್ಮಂತ್ರ ಕೋವಿದರ್;
ಪೂರೈಸಿದವು ಶಂಖಗಳ್; ಜೇಗಟೆಗಳೊಡನೆ ಬೊಬ್ಬೆಯಿಟ್ದವು ಘಂಟೆ; ಕಿವಿ ನಿಮಿರೆ ದಿಗ್ಗಜಕೆ ಜಗಭಯಂಕರವಾಯ್ತು ನಿರಘೋಷ.

ಈ ಇಡೀ ಭಾಗವನ್ನು ಓದಿದಾಗ ಕುಂಭಕರ್ಣನನ್ನು ಎಬ್ಬಿಸಿದ ರುದ್ರ ಭಯಂಕರ ದೃಶ್ಯ, ಕುವೆಂಪು ಅವರೇ ಹೇಳುವಂತೆ "ರಸಮಲ್ತೆ ರುದ್ರದೃಷ್ಟಿಗೆ ರೌದ್ರಮುಂ"