ನಂದಿಬೆಟ್ಟದಲ್ಲಿಯೇ ಏಕೆಂದರೆ - ಅದು ಅನೇಕ ಮಹಾವ್ಯಕ್ತಿಗಳನ್ನು ತನ್ನೆಡೆಗೆ ಆಕರ್ಷಿಸಿದೆ. ಇನ್ನು ನಾವು ಹೋಗದಿರುವುದು ತರವೇ?!
ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಬೆಂಗಳೂರಿನಲ್ಲಿ ಸಾರ್ಕ್ ಶೃಂಗ ಸಭೆ ನಡೆದಿತ್ತು. ಆಗ ಸಾರ್ಕ್ ರಾಷ್ಟ್ರಗಳ ಪ್ರಮುಖರೆಲ್ಲರೂ ನಂದಿಬೆಟ್ಟಕ್ಕೆ ಬಂದು ಇಲ್ಲಿನ ಆಹ್ಲಾದಕರ ವಾತಾವರಣಕ್ಕೆ ಮನಸೋತಿದ್ದರು. ಆಗ ರಾಜೀವ್ ಗಾಂಧಿ ಜಿಪ್ಸಿಯನ್ನು ತಾನೇ ಡ್ರೈವ್ ಮಾಡುತ್ತಾ, ಬೆಟ್ಟದ ಹೇರ್ ಪಿನ್ ಕರ್ವ್ ಗಳಲ್ಲಿ ವಾಹನ ನಡೆಸುವ ಮಜ ಅನುಭವಿಸಿದ್ದರು.
ನನ್ನ ತಾಯಿಯ ತವರು ದೇವನಹಳ್ಳಿ ತಾಲ್ಲೂಕಿನ ಆವತಿ. ಅವರು ಶಾಲೆ ಓದುವಾಗ ಅವರನ್ನೆಲ್ಲಾ ನಂದಿಬೆಟ್ಟದ ರಸ್ತೆ ಪಕ್ಕ ನಿಲ್ಲಿಸಿ, ಎಲಿಜಬೆತ್ ರಾಣಿಯನ್ನು ತೋರಿಸಿದ್ದರಂತೆ ಅವರ ಗುರುಗಳು. ಆಗ ಎಲಿಜಬೆತ್ ರಾಣಿ ತನ್ನ ಪತಿಯೊಂದಿಗೆ ನಂದಿಬೆಟ್ಟಕ್ಕೆ ಭೇಟಿ ನೀಡಿದ್ದರು.
ನಂದಿಬೆಟ್ಟದ ಬುಡದಲ್ಲಿರುವ ಮುದ್ದೇನಹಳ್ಳಿಯವರಾದ ಸರ್.ಎಂ.ವಿಶ್ವೇಶ್ವರಯ್ಯನವರು ನಡೆದೇ ಬೆಟ್ಟಕ್ಕೆ ಹೋಗುತ್ತಿದ್ದರಂತೆ.
ಮಹಾತ್ಮಾಗಾಂಧಿ ಎರಡು ಬಾರಿ ಇಲ್ಲಿ ತಂಗಿದ್ದರು. ತಮ್ಮ ಆರೋಗ್ಯ ಸುಧಾರಣೆಗಾಗಿ ಎರಡು ತಿಂಗಳ ಕಾಲ ಇಲ್ಲಿದ್ದರು.
ಇನ್ನು ನೆಹರು, ವಿಜಯಲಕ್ಷ್ಮಿಪಂಡಿತ್, ಇಂದಿರಾಗಾಂಧಿ, ರಾಧಾಕೃಷ್ಣನ್, ವಲ್ಲಭಬಾಯಿಪಟೇಲ್, ಸರ್.ಸಿ.ವಿ.ರಾಮನ್, ರಾಜಗೋಪಾಲಾಚಾರಿ.... ಹೆಸರಿಸುತ್ತಾ ಹೋದರೆ ಗಣ್ಯರ ಪಟ್ಟಿ ನಂದಿಬೆಟ್ಟದೆತ್ತರ(೪೮೫೧ಅಡಿ) ಬೆಳೆಯತೊಡಗುತ್ತದೆ.
ಬೆಟ್ಟ ಹತ್ತುವಾಗ ಸುತ್ತ ಕಾಣುವ ಬೆಟ್ಟಗಳನ್ನು ತೋರಿಸುತ್ತಾ ಶಿವುಗೆ, "ನೋಡಿ ಶಿವು, ಇವು ಪಂಚಗಿರಿಗಳು. ನಾವು ಹತ್ತುತ್ತಿರುವುದು ನಂದಿಗಿರಿ. ಉಳಿದದ್ದು ಸ್ಕಂದಗಿರಿ, ಬ್ರಹ್ಮಗಿರಿ, ಚೆನ್ನಗಿರಿ ಮತ್ತು ದಿವ್ಯಗಿರಿ" ಎಂದು ತೋರಿಸಿದೆ. ತಕ್ಷಣ ಶಿವು, "ಬೆಟ್ಟದಿಂದ ಬೆಟ್ಟಕ್ಕೆ ರೋಪ್ ವೇ ನಿರ್ಮಿಸಿದರೆ ಹೇಗೆ? ಎರಡು ಮೂರು ಬೆಟ್ಟಗಳಿಗೆ ರೋಪ್ ವೇ ಮುಖಾಂತರ ಸಂಪರ್ಕ ಏರ್ಪಡಿಸಿದರೆ ಎಷ್ಟು ಚೆನ್ನಾಗಿರುತ್ತದೆ ಮತ್ತು ಪ್ರವಾಸೋದ್ಯಮ ಕೂಡ ಅಭಿವೃದ್ಧಿ ಹೊಂದುತ್ತದೆ ಅಲ್ವಾ?" ಅಂದರು. ಅದಕ್ಕೆ ಪ್ರಕಾಶ್ ಹೆಗಡೆಯವರು, "ಶಂಕರ್ ನಾಗ್ ಗೆ ಈ ಕನಸಿತ್ತು ಕಣ್ರೀ. ಆತ ಬದುಕಿದ್ದಿದ್ದರೆ ಇಷ್ಟೊತ್ತಿಗೆ ಮಾಡಿಯೇ ಇರುತ್ತಿದ್ದ. ಮಾಲ್ಗುಡಿಡೇಸ್ ಗಾಗಿ ನಂದಿಬೆಟ್ಟದಲ್ಲಿ ಷೂಟಿಂಗ್ ಮಾಡಿದ್ದ" ಎಂದರು.
ಟಿಪ್ಪುಸುಲ್ತಾನ್ ಇಲ್ಲಿ ಬೇಸಿಗೆ ಅರಮನೆ ಕಟ್ಟಿಕೊಂಡಿದ್ದ ಹಾಗೂ ದುರ್ಗಮವಾದ ಕೋಟೆ ಕಟ್ಟಿದ್ದ. ಅವನ ನಂತರ ಬಂದ ಬ್ರಿಟಿಷ್ ಅಧಿಕಾರಿಗಳು ಇಲ್ಲಿ ವಾಸಕ್ಕಾಗಿ ಬಂಗಲೆಗಳನ್ನು ನಿರ್ಮಿಸಿಕೊಂಡಿದ್ದರು. ಅವನ್ನೇ ಈಗ ವಸತಿಗೃಹಗಳನ್ನಾಗಿ ಮಾರ್ಪಡಿಸಿದ್ದಾರೆ. ನಾವುಗಳು ಉಳಿದುಕೊಂಡಿದ್ದದ್ದು ನೆಹರುಭವನದಲ್ಲಿ. ಇದರ ಮುಂಚಿನ ಹೆಸರು ಕಬ್ಬನ್ ಹೌಸ್. ೧೮೩೪ರಲ್ಲಿ ಮೈಸೂರು ರಾಜ್ಯದ ಕಮೀಷನರ್ ಆದ ಮಾರ್ಕ್ ಕಬ್ಬನ್ ೨೭ ವರ್ಷಗಳ ಕಾಲ ಒಂದೇ ಒಂದು ದಿನ ರಜೆ ತೆಗೆದುಕೊಳ್ಳದೆ ಉತ್ತಮ ಆಡಳಿತ ನೀಡಿದ. ಈ ಮಾರ್ಕ್ ಕಬ್ಬನ್ ನ ವೈಶಿಷ್ಟ್ಯವೇನೆಂದರೆ, ಈತ ಆಡಳಿತವೆಲ್ಲವೂ ಕನ್ನಡದಲ್ಲಿಯೇ ನಡೆಯುವಂತೆ ಮಾಡಿದ. ಕಂದಾಯ, ಅರಣ್ಯ, ಕೃಷಿ, ಹಣಕಾಸು, ಲೋಕೋಪಯೋಗಿ, ಶಿಕ್ಷಣ ಮೊದಲಾದ ಆಗಿನ ಕಾಲದ ಹದಿನೆಂಟು ಕಚೇರಿಗಳ(ಅಠಾರ್‍ಅ ಕಚೇರಿ) ಸ್ಥಾಪನೆಗಳೂ ಆತನೇ ಮಾಡಿದ್ದು. ಕಬ್ಬನ್ ನ ಆಡಳಿತ ಕಾಲದಲ್ಲಿ ಮೈಸೂರು ರಾಜ್ಯದ ಹಣಕಾಸಿನ ಸ್ಥಿತಿ ಸುಧಾರಿಸಿ ಅದು ತನ್ನೆಲ್ಲ ಸರಕಾರೀ ಸಾಲಗಳನ್ನು ತೀರಿಸಿತು. ಮೈಸೂರಿನ ಆಡಳಿತದ ಮೇಲೆ, ಜನಜೀವನದ ಮೇಲೆ ಮಾರ್ಕ್ ಕಬ್ಬನ್ ನಂತೆ ತಮ್ಮ ಮಾರ್ಕ್ ಬೀಳಿಸಿ, ಅಂದರೆ ಗುರುತು ಮೂಡಿಸಿ ಹೋದವರು ಹೆಚ್ಚು ಜನರಿಲ್ಲ. ಬೆಂಗಳೂರಿನ ಕಬ್ಬನ್ ಪಾರ್ಕ್ ಅವನ ನೆನಪಿಗೋಸ್ಕರವೇ ರಚಿತವಾಗಿದೆ. ಅಲ್ಲಿ ಅವನ ಅಶ್ವಾರೋಹಿ ಪ್ರತಿಮೆ ಕೂಡ ಇದೆ. ಬೇಸಿಗೆಯಲ್ಲಿ ವಾಸಿಸುವುದಕ್ಕಾಗಿ ಆತ ನಂದಿಬೆಟ್ಟದಲ್ಲಿ ೧೮೪೮ ರಲ್ಲಿ ಕಟ್ಟಿದ್ದ ಕಬ್ಬನ್ ಹೌಸ್ ಅನ್ನು ಹೊಸದೇನೂ ಕಟ್ಟಿಸಲು ಸಾಧ್ಯವಿರದ ಆಡಳಿತವು ಹೆಸರು ಬದಲಿಸಿ ನೆಹರು ಭವನವೆಂದು ಮಾಡಿದೆ.
ಎಲ್ಲರೂ ಯೋಗನಂದೀಶ್ವರ ದೇವಸ್ಥಾನಕ್ಕೆ ಬೇಟಿ ಕೊಟ್ಟೆವು. ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿರುವ ಈ ದೇವಾಲಯದಲ್ಲಿ ಶಿವನು ಯೋಗದೀಕ್ಷೆಯಲ್ಲಿರುವುದರಿಂದ ಉತ್ಸವಗಳು ನಡೆಯುವುದಿಲ್ಲ. ಗರ್ಭಗುಡಿ, ಸುಕನಾಸಿ, ನವರಂಗ ಮತ್ತು ಕಲ್ಯಾಣಮಂಟಪಗಳನ್ನೊಳಗೊಂಡ ಈ ದೇವಾಲಯ ಬಹಳ ಸುಂದರವಾಗಿದೆ. ಸುಕನಾಸಿಯ ಬಾಗಿಲುವಾಡದ ಹಿತ್ತಾಳೆಯ ಚೌಕಟ್ಟಿನಲ್ಲಿ ಅನೇಕ ಚಿತ್ರಗಳನ್ನು ಕೆತ್ತಲಾಗಿದೆ. ದ್ವಾರದ ಎರಡು ಪಕ್ಕಗಳಲ್ಲೂ ಸುಮಾರು ಐದು ಅಡಿ ಎತ್ತರದ ಲೋಹದ ದ್ವಾರಪಾಲಕ ವಿಗ್ರಹಗಳಿವೆ. ಇವು ಶ್ರೀಕೃಷ್ಣದೇವರಾಯನ ಕಾಣಿಕೆ.
ಮಕ್ಕಳ ಮನರಂಜನೆಗಾಗಿ ಇಲ್ಲಿ ಆಟದ ಮೈದಾನವಿದೆ. ಜಾರುಬಂಡೆ, ಉಯ್ಯಾಲೆ, ರಿಂಗ್ ರೋಲ್, ಸೀ ಸಾ ಮುಂತಾದ ಪುಟಾಣಿಗಳನ್ನು ಸೆಳೆಯುವ ಅನೇಕ ಸಾಧನಗಳನ್ನು ಅಳವಡಿಸಿದ್ದಾರೆ. ಇಲ್ಲಿನ ಹವೆಯ ಮಹಿಮೆಯೋ ಏನೋ ಉಲ್ಲಸಿತರಾದ ದೊಡ್ಡವರೆಲ್ಲರೂ ಮಕ್ಕಳಾಗಿಬಿಡುತ್ತಾರೆ. ಹಿರಿಯರು, ಕಿರಿಯರೆಂಬ ಭೇದವಿಲ್ಲದೆ ಮಕ್ಕಳಂತೆ ಆಡುತ್ತಾರೆ, ನಲಿಯುತ್ತಾರೆ. ಇದೇ ಜೀವನದ ಸೊಗಸು.
ದೇವಾಲಯದ ಪಕ್ಕದಲ್ಲಿರುವ ಹೋಟೆಲಿನಲ್ಲಿ ಕಾಫಿ ಕುಡಿಯಲು ಸಂಜೆ ಹೋದೆವು. ಟೋಕನ್ ಪಡೆದು ಪ್ರಕಾಶ್ ಹೆಗಡೆ ಮತ್ತು ನಾನು ಕಾಫಿ, ಟೀ ಕೊಡುವವರ ಬಳಿ ಹೋದೆವು. ಅಷ್ಟರಲ್ಲಿ ಹೋಟೆಲಿನ ಒಡತಿ ಜೋರ್‍ಆಗಿ " ಏ ಪ್ರಕಾಶಾ..." ಎಂದು ಕೂಗಿದರು. ಪ್ರಕಾಶ್ ಹೆಗಡೆಯವರು ಮತ್ತು ನಾನು ಅತ್ತ ನೋಡಿದೆವು. ಆ ಹೆಂಗಸು ಹೋಟೆಲಿನಲ್ಲಿ ಕೆಲಸ ಮಾಡುವವನನ್ನು ಕೂಗಿದ್ದದ್ದು! ಕಾಫಿ ಕುಡಿಯಲು ಕುಳಿತಾಗ ಪ್ರಕಾಶ್ ಹೆಗಡೆಯವರು ತಮ್ಮ ನಾಮಾಮೃತದ ಬಗ್ಗೆ ಸ್ವಾರಸ್ಯವಾಗಿ ಮಾತನಾಡಿದರು. ಅದನ್ನು ಅವರ ಶೈಲಿಯಲ್ಲಿ ಅವರ ಬ್ಲಾಗಲ್ಲಿ ಓದೋಣ.
ನಂದಿಬೆಟ್ಟದಲ್ಲಿ ರಾತ್ರಿ, ಅದರಲ್ಲೂ ಈ ಚಳಿಗಾಲದ ರಾತ್ರಿಗೆ ಒಂದು ಸೊಗಸಿದೆ, ಸೊಬಗಿದೆ. ಅಲ್ಲಲ್ಲಿ ಹಚ್ಚಿರುವ ಎಲೆಕ್ಟಿಕ್ ದೀಪಗಳಡಿ ಇರುವ ಹಸಿರು ಮತ್ತು ಅದರ ಮೇಲಿನ ಮುತ್ತು(ನೀರಹನಿ) ಬಹಳ ಚಂದ. ದೀಪದ ಹಿಂಬದಿಯ ನೆರಳಲ್ಲಿರುವ ಮಬ್ಬು ಮಬ್ಬಾಗಿ ಕಾಣುವ ರೆಂಬೆ, ಕೊಂಬೆ, ಬಳ್ಳಿ ನಿಗೂಢತೆಯ ಅನುಭವ ತರುತ್ತದೆ. ಪ್ರಕಾಶ್ ಹೆಗಡೆಯವರು 'ಚಪಾತಿ'ಯ ವಿಶ್ವರೂಪದರ್ಶನ ಮಾಡಿಸಿದರು. ಒಂಟೆ ಹಾಲಿನ ಬಗ್ಗೆ ತಮ್ಮ ಅನುಭವ ಹೇಳಿ ನಾವೆಲ್ಲಾ ಹೊಟ್ಟೆ ಬಿರಿಯುವಂತೆ ನಗಿಸಿದರು. ನನಗಂತೂ ನಕ್ಕು ನಕ್ಕು ಕಣ್ಣಲ್ಲಿ ನೀರು ಬಂದು ಪಕ್ಕೆಯೆಲ್ಲಾ ನೋವು ಬಂತು. ಅವರ ಈ ಕಥನಗಳೆಲ್ಲಾ ಅವರ ಬ್ಲಾಗಲ್ಲೇ ಓದೋಣ.
ಬೆಳೆಗ್ಗೆ ನೆಹರು ಭವನದ ಮುಂದೆ ಅಡ್ಡಾಡಲು ಹೋದಾಗ ಮಳೆ ಬಂದಂತೆ ಅನುಭವವಾಯ್ತು. ಅದು ಮರ ಗಿಡಗಳ ಮೇಲೆ ಸಂಗ್ರಹವಾಗಿದ್ದ ಇಬ್ಬನಿ ಹನಿಗಳಾಗಿ ಉದುರುತ್ತಿದ್ದುದು. ನಂದಿಬೆಟ್ಟದ ಮೇಲಿನ ಮುಂಜಾವನ್ನು ಪದಗಳಲ್ಲಿ ಕಟ್ಟಿಕೊಡಲು ನನ್ನಿಂದ ಅಸಾಧ್ಯ. ಪ್ರಕಾಶ್ ಅವರ ಮಗ ಆಶಿಷ್ ತನ್ನ ವೀಡಿಯೋ ಕ್ಯಾಮೆರಾದಲ್ಲಿ ಎಲೆಗಳ ಮೇಲಿನ ಇಬ್ಬನಿ, ತರತರಹದ ಪುಷ್ಪಗಳು ಮತ್ತು ಪ್ರಕೃತಿಯನ್ನು ಸೆರೆಹಿಡಿಯುತ್ತಿದ್ದ. ಹಲವಾರು ಹಕ್ಕಿಗಳನ್ನಲ್ಲಿ ನೋಡಿದೆವು. ಇಲ್ಲಿ ಮಂಗಗಳ ಹಾವಳಿ ಜಾಸ್ತಿ. ತಿಂಡಿ ಕೈಲಿದ್ದರೆ ಕಿತ್ತುಕೊಂಡು ಹೋಗುತ್ತವೆ.
ಶಿವು ತಮ್ಮ ಬ್ಲಾಗಿನಲ್ಲಿ ನಮಗೆಲ್ಲಾ ಉಣಬಡಿಸುತ್ತಿರುವ ರಸದೌತಣಕ್ಕಾಗಿ ಹೊಸವಸ್ತುವನ್ನು ಆಯ್ದುಕೊಂಡಿದ್ದಾರೆ. ಅದು "ನಡೆದಾಡುವ ಭೂಪಟ". ಅದಕ್ಕಾಗಿ ಅವರು ತಮ್ಮ ಕ್ಯಾಮೆರಾದೊಂದಿಗೆ ಚುರುಕಾಗಿ ನಂದಿಬೆಟ್ಟವನ್ನು ಸ್ಕ್ಯಾನ್ ಮಾಡುತ್ತಿದ್ದರು.
ಗಾಂಧಿನಿಲಯ ಸುತ್ತ ಸುತ್ತಾಡಿ, ಬೆಟ್ಟದ ಮೇಲಿಂದ ಕಾಣುವ ಮನೋಹರ ದೃಶ್ಯಗಳನ್ನು ನೋಡಿದೆವು. ಕೆರೆಗಳ ಹೊಳೆಯುವ ನೀರು, ಬೈತೆಲೆ ಗೆರೆಯಂತಿರುವ ರಸ್ತೆ, ಪುಟ್ಟದಾಗಿ ಕಾಣುವ ಮನೆಗಳು, ತೋಟಗಳು, ಬೆಟ್ಟ ಗುಡ್ಡಗಳನ್ನೆಲ್ಲಾ ಕಣ್ಣಿಗೆ ತುಂಬಿಕೊಂಡೆವು. ಕ್ಯಾಪ್ಟನ್ ಕನಿಂಗ್ ಹ್ಯಾಂ ಕಟ್ಟಿಸಿದ್ದ ಬಂಗಲೆ "ಓಕ್ ಲ್ಯಾಂಡ್ಸ್" ಅನ್ನು ಹೆಸರು ಬದಲಿಸುವುದರಲ್ಲಿ ನಿಷ್ಣಾತರಾದ ಸರಕಾರದವರು, ೧೯೩೬ರಲ್ಲಿ ಮಹಾತ್ಮಾ ಗಾಂಧಿಯವರು ಕೆಲ ವಾರಗಳ ಕಾಲ ವಿಶ್ರಾಂತಿ ಪಡೆದುದರ ಸವಿನೆನಪಿಗಾಗಿ "ಗಾಂಧಿ ನಿಲಯ" ಎಂದು ನಾಮಕರಣ ಮಾಡಿದ್ದಾರೆ.
ಅಂದಹಾಗೆ, ನಂದಿ ಬೆಟ್ಟದಲ್ಲಿ ಊಟವಾದ ಮೇಲೆ ಹೆಂಗಸರನ್ನು ಬ್ಲಾಗ್ ಕುರಿತಂತೆ ಸಂದರ್ಶನ ಮಾಡುವೆ ಅನ್ನುತ್ತಿದ್ದ ಪ್ರಕಾಶ್ ಹೆಗಡೆಯವರು, ಹೊರಡುವಾಗ, "ಬ್ಲಾಗ್ ಬಗ್ಗೆ ಏನೂ ಮಾತನಾಡಲಿಲ್ಲವಲ್ಲ?" ಅಂದ ಹೆಂಗಳೆಯರಿಗೆ, "ನಿಮ್ಮ ಮನಸ್ಸಿನಲ್ಲಿರುವುದು ನನಗರ್ಥವಾಗಿದೆ. ಹಾಗೂ ನಿಮ್ಮ ಅಭಿಪ್ರಾಯವನ್ನು ನಾನು ಒಪ್ಪುತ್ತೇನೆ" ಎಂದು ಹೇಳಿ ಮಂಗಳ ಹಾಡಿದರು! ಹಾಗಂತ ಬ್ಲಾಗಿಗೆ ಮೋಸವಾಗಿಲ್ಲ. ಮೂವರಿಗೂ ಸಾಕಷ್ಟು ಸರಕುಗಳು ಸಂಚಯವಾಗಿದೆ.
ಮೂರೂ ದಂಪತಿಗಳು(ಧಂ ಕಳೆದುಕೊಂಡ ಪತಿಗಳಲ್ಲ!) ಜೊತೆಯಲ್ಲಿ ಎರಡು ಮರಿಗಳು(ಆಶಿಷ್ ಮತ್ತು ಓಂ), ನಂದಿಬೆಟ್ಟದ ಮೇಲೆ - ಸಂಜೆಯ ಮಂಜು, ಮಬ್ಬುಗತ್ತಲಿನ ಇಬ್ಬನಿ, ಬೆಳಗಿನ ಸೊಬಗನ್ನು, ಸಮಪ್ರಮಾಣದಲ್ಲಿ ಸವಿದೆವು, ಸಂತಸಪಟ್ಟೆವು. ಅನುಭವವನ್ನು ಪದಗಳಲ್ಲಿ ಕಟ್ಟಿಕೊಡುವುದು ಕಷ್ಟ. ಅದರಲ್ಲೂ ಎಲ್ಲರ ಸಂತಸಾನುಭವವನ್ನು ವರ್ಣಿಸುವುದು ಕಷ್ಟ ಕಷ್ಟ. ಆದರೂ ಪ್ರಯತ್ನಿಸಿದ್ದೇನೆ.
ಮೂರೂ ದಂಪತಿಗಳು(ಧಂ ಕಳೆದುಕೊಂಡ ಪತಿಗಳಲ್ಲ!) ಜೊತೆಯಲ್ಲಿ ಎರಡು ಮರಿಗಳು(ಆಶಿಷ್ ಮತ್ತು ಓಂ), ನಂದಿಬೆಟ್ಟದ ಮೇಲೆ - ಸಂಜೆಯ ಮಂಜು, ಮಬ್ಬುಗತ್ತಲಿನ ಇಬ್ಬನಿ, ಬೆಳಗಿನ ಸೊಬಗನ್ನು, ಸಮಪ್ರಮಾಣದಲ್ಲಿ ಸವಿದೆವು, ಸಂತಸಪಟ್ಟೆವು. ಅನುಭವವನ್ನು ಪದಗಳಲ್ಲಿ ಕಟ್ಟಿಕೊಡುವುದು ಕಷ್ಟ. ಅದರಲ್ಲೂ ಎಲ್ಲರ ಸಂತಸಾನುಭವವನ್ನು ವರ್ಣಿಸುವುದು ಕಷ್ಟ ಕಷ್ಟ. ಆದರೂ ಪ್ರಯತ್ನಿಸಿದ್ದೇನೆ.
2 comments:
ಎಂಥಹ ಅದ್ಭುತ ಬರವಣಿಗೆ ನಿಮ್ಮದು! ಸಂಗಡ ಆ ಫೋಟೊಗಳು...! ಹೊಟ್ಟೆಕಿಚ್ಚುತರುವಷ್ಟು ಚೆನ್ನಾಗಿ ಬರೆದಿದ್ದೀರಾ.
ನಿಜವಾಗಿಯೂ ನಂದಿಬೆಟ್ಟದ ಪ್ರವಾಸ ನನ್ನ ಜೀವನದ ಬಹು ಸುಂದರ ಕ್ಷಣಗಳಲ್ಲಿ ಒಂದು.
ಅದಕ್ಕೆ ನಿಮಗೂ, ಶಿವುಗೂ ಅನಂತಾನಂತ ಧನ್ಯವಾದಗಳು...
ದಯವಿಟ್ಟು ಬರೆಯಿರಿ..
ಹೆಗಡೆಯವರೆ, ಅದೃಷ್ಟ ನಮ್ಮದು. ನೀವು ಮತ್ತು ಶಿವು ಉತ್ತಮ ಕಂಪೆನಿ ಕೊಟ್ಟಿದ್ದಕ್ಕೆ. ಅದರಲ್ಲೂ ನಿಮ್ಮ ಮಾತುಗಾರಿಕೆ. ಮರೆಯಲಾಗದ ಟ್ರಿಪ್. ಆಗಾಗ ಈ ರೀತಿ ಹೋಗಿಬರಬೇಕು. ನಿಮ್ಮ ಭಾಷೆಯಲ್ಲಿ ಹೇಳಬೇಕೆಂದರೆ, "ಆಗಾಗ ನೆಟ್ಟು ಬೋಲ್ಟು ಸಡಿಲಿಸಿಕೊಂಡು ಟೆನ್ಷನ್ ದೂರಮಾಡಿಕೊಳ್ಳಬೇಕು".ಅಲ್ವೇ?
Post a Comment