

ಇನ್ನೂರ ಇಪ್ಪತ್ತು ಮಿಲಿಯನ್ ವರ್ಷಗಳ ಹಿಂದೆ ಕಾರ್ಬೋನಿಫೆರಸ್ ಮತ್ತು ಪರ್ಮಿಯನ್ ಕಾಲಗಳ ಮಧ್ಯೆ ಜೀವಿಸಿದ್ದ ಮೂವತ್ತು ಇಂಚುಗಳಷ್ಟು ಅಗಲದ ಬೃಹತ್ ಗಾತ್ರದ ಏರೋಪ್ಲೇನ್ ಚಿಟ್ಟೆಯ ಪಳೆಯುಳಿಕೆ ದೊರಕಿದೆಯಂತೆ. ಇಷ್ಟು ಪುರಾತನ ಮೂಲ ಹೊಂದಿರುವ ಈ ಚಿಟ್ಟೆಗಳು, ಐದೂವರೆ ಸಾವಿರಕ್ಕೂ ಹೆಚ್ಚು ವಿಧಗಳಲ್ಲಿ ಪ್ರಪಂಚದಾದ್ಯಂತ ಇವೆ. ಅವುಗಳಲ್ಲಿ ಐದುನೂರಕ್ಕೂ ಹೆಚ್ಚು ರೀತಿಯವು ಭಾರತದಲ್ಲಿವೆ.
ಮುಂಗಾರು ಮುಗಿಯುತ್ತಿದ್ದಂತೆ ಹೆಚ್ಚಾಗಿ ಕಂಡುಬರುವ ಇವನ್ನು ಹತ್ತಿರದಿಂದ ಗಮನಿಸಿದರೆ, ಇವುಗಳ ಆಹಾರ ಮತ್ತು ಸಂತಾನಾಭಿವೃದ್ಧಿ ಕ್ರಿಯೆಗಳಲ್ಲಿ ಕುತೂಹಲವನ್ನುಂಟು ಮಾಡುವ ನಡವಳಿಕೆಗಳನ್ನು ಕಾಣಬಹುದು. ಇವುಗಳಿಗಿರುವ ಆರು ಕಾಲುಗಳುದ್ದಕ್ಕೂ ಮುಳ್ಳುಗಳಂತಿರುವ ರೋಮಗಳಿವೆ. ಇದರಿಂದಾಗಿ ಇವು ಆಕಾಶದಲ್ಲಿ ಹಾರಾಡುವಾಗಲೇ ಹಾರಾಡುವ ಕೀಟಗಳನ್ನು ಬಿಗಿಯಾಗಿ ಹಿಡಿದು ತಿನ್ನುತ್ತವೆ.
ಗಂಡು ಏರೋಪ್ಲೇನ್ ಚಿಟ್ಟೆಗಳು ತಮ್ಮ ವಾಸಪ್ರದೇಶವನ್ನು ಗುರುತಿಸಿಕೊಂಡಿರುತ್ತವೆ. ಅಲ್ಲಿ ಸುಳಿದಾಡುವ ಇತರೇ ಗಂಡು ಚಿಟ್ಟೆಗಳನ್ನು ಓಡಿಸುತ್ತವೆ. ತನ್ನ ವಾಸಪ್ರದೇಶವನ್ನು ಪ್ರವೇಶಿಸುವ ಹೆಣ್ಣನ್ನು ಗಂಡು ಒಲಿಸಿಕೊಳ್ಳುತ್ತದೆ. ಕೂಡುವುದಕ್ಕೆ ಮೊದಲು ಗಂಡು ಹೆಣ್ಣಿನ ಕುತ್ತಿಗೆಯ ಭಾಗವನ್ನು ತನ್ನ ಬಾಲದ ತುದಿಯಲ್ಲಿರುವ ಕೊಕ್ಕೆಯಂತಹ ಅಂಗದಿಂದ ಹಿಡಿಯುತ್ತದೆ. ಹೆಣ್ಣು ತನ್ನ ಮೈಯನ್ನು ಬಗ್ಗಿಸಿ ವೀರ್ಯಾಣುಗಳನ್ನು ತನ್ನ ಅಂಡಕೋಶಕ್ಕೆ ವರ್ಗಾಯಿಸುತ್ತದೆ. ಹೆಣ್ಣು ಚಿಟ್ಟೆ, ಮೊಟ್ಟೆಗಳನ್ನು ನೀರಿನ ಮೇಲೆ ಹಾರುತ್ತಾ ಹಾಕುತ್ತಾ ಹೋಗುತ್ತದೆ. ಮೊಟ್ಟೆಯಿಂದ ಹೊರಬರುವ ಲಾರ್ವಾಗಳು ನೀರಿನಲ್ಲಿಯೇ ಜೀವಿಸುತ್ತವೆ. ಏರೋಪ್ಲೇನ್ ಚಿಟ್ಟೆಗಳ ಮರಿಗಳಿಗೆ ನಯಾಡ್ಸ್ ಎಂದು ಹೆಸರು.
ಏರೋಪ್ಲೇನ್ ಚಿಟ್ಟೆಗಳ ತಲೆಯ ಹೆಚ್ಚು ಭಾಗವನ್ನು ಎರಡು ದೊಡ್ಡ ಕಣ್ಣುಗಳು ಆಕ್ರಮಿಸಿವೆ. ಇವನ್ನು ಸಂಯುಕ್ತ ಕಣ್ಣು(ಕಾಂಪೌಂಡ್ ಐಸ್)ಗಳೆನ್ನುತ್ತಾರೆ. ಒಮ್ಮಟೀಡಿಯಾ ಎಂಬ ಸೂಕ್ಷ್ಮ ವಸ್ತುಗಳು ಸೇರಿ ಈ ಸಂಯುಕ್ತ ಕಣ್ಣುಗಳಾಗುತ್ತವೆ. ಈ ಎಲ್ಲಾ ಒಮ್ಮಟೀಡಿಯಾಗಳು ಸೇರಿ ಒಟ್ಟಾರೆ ಚಿತ್ರವನ್ನು ಮಿದುಳಿಗೆ ವರ್ಗಾಯಿಸುತ್ತವೆ. ಇರುವೆಗಳಿಗೆ ಕೇವಲ ಹನ್ನೆರಡು ಒಮ್ಮಟೀಡಿಯಾಗಳಿದ್ದರೆ ಏರೋಪ್ಲೇನ್ ಚಿಟ್ಟೆಗಳಿಗೆ ಇಪ್ಪತ್ತು ಸಾವಿರಕ್ಕೂ ಅಧಿಕ ಒಮ್ಮಟೀಡಿಯಾಗಳಿರುತ್ತವೆ. ಅದರಿಂದಾಗಿಯೇ ಅವು ಆಕಾಶದಲ್ಲಿ ಹಾರುತ್ತಲೇ ಅಲ್ಲಿರುವ ಕೀಟಗಳನ್ನು ಹಿಡಿಯುವುದು ಸಾಧ್ಯವಾಗುತ್ತದೆ.
ಏರೋಪ್ಲೇನ್ ಚಿಟ್ಟೆಗಳ ಗುಂಪು ಭತ್ತದ ಗದ್ದೆಗಳ ಬಳಿಯೇನಾದರೂ ಕಂಡು ಬಂದರೆ ಮಳೆ ಬರುತ್ತದೆ ಎಂಬ ನಂಬಿಕೆಯಿದೆ. ಮನುಷ್ಯ ಸತ್ತ ನಂತರ ಅವನ ಆತ್ಮ ಈ ಚಿಟ್ಟೆಯ ರೂಪ ತಾಳುವುದೆಂಬ ಕಾಲ್ಪನಿಕ ಕಥೆಯೂ ಇದೆ. ಮಲೆಯಾಳಂ ಸಾಹಿತಿ ಮುಕುಂದನ್ ಅವರು ಈ ಕಥೆಯನ್ನು ತಮ್ಮ ಕಾದಂಬರಿಯಲ್ಲಿ ಬಳಸಿಕೊಂಡಿರುವರು.