Wednesday, August 20, 2008

ಆಕ್ ತೇಲ್ ನ ಫೇರಿಟೇಲ್


ಸಿಕ್ಕ ಸಿಕ್ಕ ಹುಳ ಹುಪ್ಪಟೆಗಳನ್ನು ಮನೆಗೆ ತರುವ ಅಭ್ಯಾಸ ಕೆಲ ಬಾರಿ ನನಗೆ ತೊಂದರೆಗಳನ್ನು ತಂದಿದೆ. ಒಮ್ಮೆ ತೋಟದಲ್ಲಿ ಅಡ್ಡಾಡುತ್ತಿದ್ದಾಗ ಮಾವಿನ ಗಿಡವೊಂದರಲ್ಲಿ ಎಲೆ ಕೆಳಗೆ ವಿಚಿತ್ರವಾದ ಹುಳಗಳು ಕಾಣಿಸಿದವು. ಎಲೆ ಹಸಿರು ಬಣ್ಣವಿದ್ದ ಅವು ಎಲೆಯನ್ನು ತಿನ್ನುತ್ತಿದ್ದುದು ನೋಡಿದೊಡನೆಯೆ ಇವು ಕಂಬಳಿ ಹುಳುಗಳು, ಮುಂದೆ ಚಿಟ್ಟೆಯಾಗಿ ರೂಪಾಂತರ ಹೊಂದುತ್ತವೆ ಎಂದು ತೀರ್ಮಾನಿಸಿಬಿಟ್ಟೆ. ನಾಲ್ಕೈದು ಹುಳುಗಳನ್ನು ಕೆಲವು ಮಾವಿನ ಎಲೆಗಳೊಂದಿಗೆ ಒಂದು ರಟ್ಟಿನ ಡಬ್ಬಿಯಲ್ಲಿ ಹಾಕಿ ಮನೆಗೆ ತಂದೆ. ಮನೆಗೆ ತರುವಾಗ ಒಂದು ಹುಳ ನನ್ನ ಕೈ ಮೇಲೆ ಬಿತ್ತು. ತಕ್ಷಣವೇ ನನ್ನ ಕೈಯೆಲ್ಲಾ ಉರಿ, ಕಡಿತ, ನೋವು ತಡೆಯಲಾಗದೆ ಎಣ್ಣೆ, ವಿಕ್ಸ್ ಏನೆಲ್ಲಾ ಹಚ್ಚಿದರೂ ಬಹಳ ಹೊತ್ತು ನರಳಿದೆ. ಇನ್ನು ಮನೆಯಲ್ಲಿ ಎಲ್ಲರೂ ಒಂದು ಸುತ್ತು ಉರಿಯ ಸುಖ ಅನುಭವಿಸಿ ನನ್ನನ್ನು ಶಪಿಸಿದರು. ಈ ಹುಳದ ರಕ್ಷಣಾ ತಂತ್ರವಿದು.ಮಾರನೆ ದಿನ ನಮ್ಮ ಪಕ್ಕದ ತೋಟದ ನರಸಿಂಹಯ್ಯನಿಗೆ ಈ ಹುಳ ತೋರಿಸಿ ಇದರ ಹೆಸರು ಕೇಳಿದೆ. "ಇದು ಆಕ್ ತೇಲ್ ಸಾಮಿ. ಮೊದ್ಲು ಔಷ್ದ ಹೊಡ್ಸಿ. ಇದು ಗಿಡ್ದಾಗಿದ್ರೆ ಮಾವಿನ ಕಾಯಿ ಕೀಳಾಕೆ ಯಾರೂ ಬರಲ್ಲ" ಅಂದ. ಆಕ್ ತೇಲ್ ತೆಲುಗು ಪದ. ಅದನ್ನು ಕನ್ನಡೀಕರಿಸಿದರೆ "ಎಲೆ ಚೇಳು" ಎಂದಾಗುತ್ತೆ. ನಿಜವೇ. ಇದು ಎಲೆಯ ಮೇಲಿನ ಚೇಳೇ! ಕೈಗೆ ತಗುಲಿದರೆ ಥೇಟ್ ಚೇಳು ಕಡಿದಂತೆಯೇ. ಬಲ್ಲವನೇ ಬಲ್ಲ ಉರಿಯ ಸವಿಯ!ಮನೆಯಲ್ಲಿ ಎಲೆ ತಿಂದು ಬೆಳೆದ ಹುಳ ಡಬ್ಬದಲ್ಲೇ ರೆಷ್ಮೆ ಹುಳದಂತೆ ಗೂಡು ನೇಯತೊಡಗಿತು. ಆಗ ಇದು ಚಿಟ್ಟೆಯಲ್ಲ ಪತಂಗ ಎಂದು ನನಗೆ ಮನವರಿಕೆಯಾಯಿತು. ಮೇಲೆ ಬಲೆ ನೇಯ್ದು ಕಂದು ಬಣ್ಣದ ಕಾಯಿಯಂತಾಗಿ ಡಬ್ಬಕ್ಕೆ ಅಂಟಿಕೊಂಡಿತ್ತು.
ಪತಂಗ ಚಿಟ್ಟೆಯ ಹತ್ತಿರ ಸಂಬಂಧಿ. ಎರಡೂ "ಲೆಪಿಡಾಪ್ಟೆರಾ" ವರ್ಗಕ್ಕೆ ಸೇರಿದವು. ಪತಂಗಗಳು ನಿಶಾಚರ ಜೀವಿಗಳು. ಆದರೆ ಕೆಲವು ಮುಸ್ಸಂಜೆ ಬೆಳಕಲ್ಲಿ ತಮ್ಮ ಚಟುವಟಿಕೆ ನಡೆಸಿದರೆ, ಕೆಲವು ಹಗಲು ವಾಸಿಗಳು.
ಕೆಲ ದಿನಗಳಾದ ಮೇಲೆ ಹೊರ ಬಂದಿದ್ದ ಪತಂಗದ ಫೋಟೊ ತೆಗೆದು ಕತ್ತಲಲ್ಲಿ ಹೊರಗೆ ಬಿಟ್ಟೆ. ಪತಂಗ ಹಸಿರು ಬಣ್ಣವಿದ್ದು ರೆಕ್ಕೆಯ ತುದಿ ಕಂದು ಬಣ್ಣವಿತ್ತು. ಇಂಟರ್ನೆಟ್ ನಲ್ಲಿ ಇದರ ಬಗ್ಗೆ ಹುಡುಕಿದಾಗ ಇದರ ಹೆಸರು "ಸ್ಮಾಲರ್ ಪರಾಸ". ಇದರ ವೈಜ್ಞಾನಿಕ ಹೆಸರು parasa chloris. ಕೆಲ ಪತಂಗಗಳ ಕಂಬಳಿ ಹುಳುಗಳು ಕೃಷಿಗೆ ಹಾನಿ ಮಾಡಿದರೆ, ರೇಷ್ಮೆಯಂತಹವು ಅತ್ಯಂತ ಲಾಭದಾಯಕ. ಚಿಟ್ಟೆಯಂತೆ ಬಣ್ಣ, ಬಳುಕು, ಲಾವಣ್ಯವಿಲ್ಲದಿದ್ದರೂ ಪತಂಗಗಳೂ ಸೌಂದರ್ಯದ ಖನಿಗಳೇ. ನಿಶಾಚರಿಗಳಾದ ಇವನ್ನು ನಾವು ನೋಡುವುದಿಲ್ಲವಷ್ಟೇ. ಉರಿಯೊಂದಿಗೆ ಇವುಗಳ ಸೌಂದರ್ಯವನ್ನೂ ಆಸ್ವಾದಿಸೋಣ!

3 comments:

Purushothama Rao said...

As usual photos are excellent. Since you have wonderful wildlife photos you could use them to this type of narrations related with experiences. Let each of them be small stories of each creature. More prominance be given to their special behavioural patterns. Relate them with human activities and applications which could create interest. Explore more details. As for as other photos are concerned short and sweet quotations be added and avoid lengthy poems.Let them be photo features only. Your attempt is appreciaated. H. A. Purushothama Rao. Kolar.

ಸುಧನ್ವಾ said...

ಪ್ರಿಯ ಮಲ್ಲಿ, ಈ ಚಿತ್ರ ಬರೆಹ ಮಜಬೂತಾಗಿದೆ. ಕೆಳಗಿವ ಚಳಿ ಫೋಟೊ ಇನ್ನಷ್ಟು ದೊಡ್ಡದಾಗಿ ಹಾಕಿ. ಹಾಗೆಯೇ ಬರುವ ಎಲ್ಲ ಫೋಟೊಗಳನ್ನೂ.

K.N.Gore said...

ಅತ್ಯಮೂಲ್ಯ ಮಾಹಿತಿಗಾಗಿ ಕೃತಜ್ಞತೆಗಳು