
ಕಾಯಿ, ಹಣ್ಣು ಕಿತ್ತುಕೊಳ್ಳುವ ಕೋತಿಗಳು ಗೊತ್ತು. ಆದರೆ ಪರ್ಸ್ ಎಗರಿಸುವ ಈ ಆಧುನಿಕ ಕೋತಿ ನೋಡುತ್ತಿರುವುದು ಇದೇ ಮೊದಲು. ಹಣ್ಣು ಕಾಯಿಯಿರುವ ಬುಟ್ಟಿಯನ್ನು ಬಿಟ್ಟು ಪರ್ಸನ್ನೇ ಏಕೆ ಕಸಿಯಿತೋ? ಅಷ್ಟರಲ್ಲಿ ಈ ಘಟನೆ ಗಮನಿಸಿದ ಹಳ್ಳಿಗರಿಬ್ಬರು ನನ್ನಂತೆ ಹತ್ತಿರ ಹೋಗುವಷ್ಟರಲ್ಲಿ ಹುಷಾರಾದ ಕೋತಿ ಅಲ್ಲೇ ವಿಶಾಲವಾಗಿ ಬೆಳೆದಿರುವ ಆಲದ ಮರ ಏರತೊಡಗಿತು. 'ಏನಾಯ್ತು...' ಎನ್ನುತ್ತಾ ಇನ್ನೊಂದಿಬ್ಬರು ಸೇರಿದರು. 'ಕೋತಿ ಪರ್ಸ್ ಎತ್ತಿಕೊಂಡು ಹೋಗಿದೆ' ಎಂದು ಸೌಮ್ಯ ಕೋತಿಯೆಡೆ ತೋರಿಸುತ್ತಿದ್ದರೆ, ಅಲ್ಲಿ ಮರದ ಮೇಲೆ ಕುಳಿತು ಕೋತಿ ತಪಾಸಣೆ ಶುರುಮಾಡಿತ್ತು.
ಪರ್ಸಿಗೆ ಜಿಪ್ ಇಲ್ಲ. ಎರಡು ಲೋಹದ ಕಡ್ಡಿಗಳನ್ನು 's' ಆಕೃತಿಯಲ್ಲಿ ಬಾಗಿಸಿ ತುದಿಯಲ್ಲಿ ದಪ್ಪದಾಗಿದ್ದು, ಜೋರಾಗಿ ಒತ್ತಿದಾಗ ಒಂದಕ್ಕೊಂದು ಬೆಸೆದು ಲಾಕ್ ಆಗುತ್ತದೆ. ಈ ತರಹದ ಪರ್ಸ್ ಎಗರಿಸುತ್ತಿರುವುದು ಇದೇ ಮೊದಲಿರಬೇಕು. ಕೋತಿ ಹರಸಾಹಸ ಮಾಡುತ್ತಿದೆ. ತೆರೆಯಲಾಗುತ್ತಿಲ್ಲ. ತಿರುಗಿಸಿ ಕಚ್ಚುತ್ತಿದೆ. ಊಹೂಂ... ಪರ್ಸ್ ಎಗರಿಸುವುದಲ್ಲ ಅದನ್ನು ತೆರೆಯುವುದೂ ಒಂದು ಕಲೆಯೇ ಎಂಬುದು ಈ ಕಳ್ಳ ಕೋತಿಗೆಲ್ಲಿ ತಿಳಿಯಬೇಕು.
ಅಷ್ಟರಲ್ಲಿ ಸೌಮ್ಯಳ ಒಂದು ಮಾತು ಅಲ್ಲಿದ್ದ ನಾಲ್ಕೈದು ಜನರಲ್ಲಿ ಹೊಸ ಚೈತನ್ಯವನ್ನು ಮೂಡಿಸಿಬಿಟ್ಟಿತ್. ಅಲ್ಲಿದ್ದವರಲ್ಲೊಬ್ಬ 'ಪರ್ಸ್ ನಲ್ಲೇನಿದೆ?' ಎಂದು ಸಹಜ ಕುತೂಹಲವೆಂಬಂತೆ ಕೇಳಿದ. 'ನನ್ನ ಮೊಬೈಲಿದೆ' ಎಂದು ದುಗುಡಗೊಂಡ ಸೌಮ್ಯ ಉತ್ತರಿಸಿದಳು. ತಕ್ಷಣ ಚುರುಕಾದರು ಅಲ್ಲಿದ್ದವರು. ಒಬ್ಬ 'ಕ್ಯಾಟರ್ ಬಿಲ್ ತಾರೋ' ಎಂದು ಹುಡುಗನೊಬ್ಬನನ್ನು ಓಡಿಸಿದ. ಮತ್ತೊಬ್ಬರು ಸಣ್ಣ ಕಲ್ಲುಗಳನ್ನು ಆಯ್ದುಕೊಂಡರೆ, ಇನ್ನೊಬ್ಬರು 'ಅಂಗಡಿಯಿಂದ ಬಾಳೆಹಣ್ಣು ತನ್ನಿ' ಅಂದರು. ಬಾಳೆಹಣ್ಣು ತಂದುಕೊಟ್ಟೆ. ಅಷ್ಟರಲ್ಲಿ ಕ್ಯಾಟರ್ ಬಿಲ್ ಬಂತು.'Y' ಆಕಾರದ ಮರಕ್ಕೆ ರಬ್ಬರ್ ಕಟ್ಟಿರುತ್ತಾರೆ. ಅದರಲ್ಲಿ ಕಲ್ಲಿಟ್ಟು ಎಳೆದು ಗುರಿಯಿಟ್ಟು ಹೊಡೆಯುತ್ತಾರೆ. ಇದೊಂದು ಅದ್ಭುತ ಕಲೆಯೇ ಸರಿ. ಒಬ್ಬ ಕಲ್ಲನ್ನು ಗುರಿಯಿಟ್ಟು ಎಸೆಯುತ್ತಾನೆ. ಮುಂದಿದ್ದ ತಾರು ರಸ್ತೆಯಲ್ಲಿ ವಾಹನಗಳು ಬಂದು ಹೋಗುತ್ತಿದ್ದವು. ವಾಹನಗಳಿಗೆ ಬೀಳದಂತೆ ಅವು ಹೋದ ಮೇಲೆ ಕಲ್ಲನ್ನು ಎಸೆಯುತ್ತಿದ್ದರು.
ಅದೋ ಮಹಾನ್ ಚತುರ ಕೋತಿ. ಒಂದೊಂದೇ ರೆಂಬೆ ನೆಗೆಯುತ್ತಾ ಮೇಲೆ ಮೇಲೆ ಹತ್ತುತ್ತಿದೆ. ಅಲ್ಲಲ್ಲೇ ಕೂತು ಪರ್ಸ್ ತೆರೆಯಲು ಶತಪ್ರಯತ್ನ ಮಾಡುತ್ತಿದೆ. ಆ ಚಾಲಾಕು ಕೋತಿಗೆ ಈ ಚುರುಕು ಜನರೇ ಸಾಟಿ ಎಂಬಂತಿತ್ತು. ನಮಗಂತೂ ಕೋತಿ ಕಾಣಿಸದಾಯ್ತು. ಸುಮಾರು ಐವತ್ತು ಅಡಿಗೂ ಎತ್ತರದಲ್ಲಿ ರೆಂಬೆಯಿಂದ ರೆಂಬೆಗೆ ಹಾರುತ್ತಿದ್ದ, ಬಚ್ಚಿಟ್ಟುಕೊಳ್ಳುತ್ತಿದ್ದ ಆ ಕೋತಿಯನ್ನು ಗಮನಿಸಲು ನಮ್ಮ ಕಣ್ಣು ಸೋಲುತ್ತಿತ್ತು.

ಆಗ ಅಲ್ಲಿದ್ದವರೊಬ್ಬರು 'ಮೊಬೈಲ್ ಗೆ ರಿಂಗ್ ಕೊಡ್ರಿ' ಎಂದು ವಿಚಿತ್ರವಾದ ಐಡಿಯಾ ಕೊಟ್ಟರು. ನಾನು ನನ್ನ ಫೋನ್ ನಿಂದ ಕೋತಿಯ ಕೈಲಿರುವ ಪರ್ಸ್ ನಲ್ಲಿರುವ ಫೋನ್ ಗೆ ರಿಂಗಿಸತೊಡಗಿದೆ. ಆಗ ಏಕಕಾಲದಲ್ಲಿ ಕೆಲವು ಘಟನೆಗಳು ಜರುಗಿದವು. ಆ ಕೋತಿ ಅದೇನು ಮಂತ್ರ ಪಟಿಸಿತೋ ಪರ್ಸ್ ತೆಗೆದುಕೊಂಡಿತು. ನಾನು ಫೋನ್ ಮಾಡುತ್ತಿದುದರಿಂದ ರಿಂಗಣದ ಶಬ್ದ ಆಗಿಯೇ ಇರುತ್ತದೆ. ಕ್ಯಾಟರ್ ಬಿಲ್ ನಿಂದ ಬಾಣದಂತೆ ಹೊರಟ ಕಲ್ಲೊಂದು ಪಟಾರ್ ಎಂದು ಕೋತಿಗೆ ಬಡಿಯಿತು. ತಕ್ಷಣ ಗಾಬರಿಗೊಂಡ ಅದು ಪರ್ಸ್ ತಿರುಗಾ ಮುರುಗಾ ಮಾಡಿಬಿಟ್ಟಿತು. ಅಷ್ಟು ಎತ್ತರದಿಂದ ಮೊಬೈಲ್ ಸುಯ್ ಎಂದು ಬಂದುಬಿಟ್ಟಿತು. ಕಪಿಲ್ ದೇವ್ ರಿಚರ್ಡ್ ನ ಕ್ಯಾಚ್ ಹಿಡಿದದ್ದು ಹೆಚ್ಚಲ್ಲ. ಅಲ್ಲಿದ್ದವನೊಬ್ಬ ಅಷ್ಟೊಂದು ಚಾಕಚಕ್ಯತೆಯಿಂದ ಅದನ್ನು ಹಿಡಿದನೆಂದರೆ ಕಪಿಲ್ ಕೂಡ ತಲೆದೂಗಬೇಕು. ಹಿಂದೆಯೇ ಪರ್ಸ್ ನಿಂದ ಜಾರಿದ ಮನೆ ಬೀಗದ ಕೈ ಕೂಡ ಹಿಡಿದು ತಂದುಕೊಟ್ಟ. ಕೋತಿ ಪರ್ಸನ್ನು ಜಾಲಾಡತೊಡಗಿತ್ತು. ಇದ್ದ ಒಂದೆರಡು ಚಿಲ್ಲರೆ ಕಾಸು, ಕುಂಕುಮದ ಪೊಟ್ಟಣವನ್ನೂ ಎತ್ತಿ ಎಸೆಯಿತು. ಕೊನೆಗೆ ಪರ್ಸನ್ನೂ ಎಸೆಯಿತು. ಎಲ್ಲವನ್ನೂ ಆರಿಸಿಕೊಂಡು ಕ್ಯಾಚ್ ಹಿಡಿದವನಿಗೆ ಧನ್ಯವಾದ ಹೇಳಹೋದರೆ ಆತ ಬೀಡಿ ಹಚ್ಚುತ್ತಾ ರಿಲ್ಯಾಕ್ಸ್ ಆಗುತ್ತಿದ್ದ. ಧನ್ಯವಾದ ಹೇಳಿದರೆ, ಏನೂ ಆಗಿಯೇ ಇಲ್ಲವೆಂಬಂತೆ ಮುಗುಳ್ನಕ್ಕ. ಸಹಾಯ ಮಾಡುವುದು ಸಹಜ ಧರ್ಮವೇ ಹೊರತು ವಿಶೇಷವಾದುದ್ದೇನೂ ಇಲ್ಲ ಎಂಬ ನೆಲದತತ್ವದ ಪ್ರತಿರೂಪದಂತಿದ್ದ.
ಬಾಳೆಹಣ್ಣಿನ ಹಣ ಕೊಡಲು ಹೋದರೆ, 'ಪರ್ವಾಗಿಲ್ಲ ಬಿಡಿ' ಎಂದು ಅಂಗಡಿಯ ಹೆಂಗಸು ಅಂದರೂ ಹಣ ಕೊಟ್ಟು ಬಂದಳು ಸೌಮ್ಯ. ಪೂಜೆ ಮಾಡಿಸಿ ಹೊರಬಂದಾಗ ಅಲ್ಲಿ ಯಾರೂ ಇರಲೇ ಇಲ್ಲ. 'ಪರ್ಸ್ ನಲ್ಲಿದ್ದುದು ಅಷ್ಟೇನಾ?' ಎಂದು ಪ್ರಶ್ನಿಸಿದೆ. 'ನಾನೊಂದು ಲಕ್ಷ್ಮಿ ಫೋಟೋ ಇಟ್ಟುಕೊಂಡಿದ್ದೆ. ಅದು ಸಿಗಲೇಇಲ್ಲ' ಎಂದು ಮುಖ ಚಿಕ್ಕದು ಮಾಡಿಕೊಂಡಳು. ಅದುವರೆಗೂ ಮೌನ ಪ್ರೇಕ್ಷಕನಂತೆ ನೋಡುತ್ತಿದ್ದ ಮಗ ಓಂ, 'ಅಮ್ಮ ಅದು ಅಮ್ಮಕೋತಿನೋ, ಅಪ್ಪಕೋತಿನೋ?' ಎಂದು ಪ್ರಶ್ನೆ ಎಸೆದು ನಮ್ಮನ್ನು ತಬ್ಬಿಬ್ಬುಗೊಳಿಸಿಬಿಟ್ಟ.