Sunday, November 3, 2013

ಮೇಲೂರಿನ ಅಪ್ಪಟ ಕನ್ನಡ ಪ್ರೇಮ

ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿನ  ಹೊಯ್ಸಳ ಬಡಾವಣೆಯ ಹೊಯ್ಸಳ ನಾಗರಿಕರ ವೇದಿಕೆಯ ನಾಮಫಲಕ


’ಸ್ವಾಮಿ, ನೀವು ತುಂಬ ಒಳ್ಳೆಯ ಕಲಾವಿದರು. ನಿಮ್ಮ ಬಗ್ಗೆ ಗೌರವವಿದೆ. ಆದರೆ ತಾಯಿ ಭುವನೇಶ್ವರಿಗೆ ಅಸಡ್ಡೆ ಮಾಡಿದರೆ, ನಾವು ಸುಮ್ಮನಿರುವವರಲ್ಲ. ನಿಮ್ಮನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ಗ್ರಾಮದ ಗಡಿ ದಾಟಲು ಬಿಡುವುದಿಲ್ಲ...’ ಈ ರೀತಿ ಕನ್ನಡ ಮತ್ತು ಕನ್ನಡತಾಯಿಯ ಅಭಿಮಾನದಿಂದ ಇತ್ತೀಚೆಗೆ ಹೀಗೆ ಎಚ್ಚರಿಕೆ ನೀಡಿದವರು ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮಸ್ಥರು. ಗ್ರಾಮಸ್ಥರ ಕನ್ನಡಾಭಿಮಾನ ಕಂಡು ಬೆರಗಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ’ಮುಖ್ಯಮಂತ್ರಿ’ ಚಂದ್ರು ಅವರು ಗ್ರಾಮಸ್ಠರು ಮತ್ತು ಕನ್ನಡಾಭಿಮಾನಿಗಳೊಂದಿಗೆ ರಸ್ತೆಯ ಮೇಲೆ ದೀರ್ಘಕಾಲದವರೆಗೆ ಕೂತು ನಂತರ ಕ್ಷಮೆಯಾಚಿಸಬೇಕಾಯಿತು.
 ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮಸ್ಥರ ಕನ್ನಡಾಭಿಮಾನಕ್ಕೆ ವಿಶಿಷ್ಟವಾದ ಇತಿಹಾಸವಿದೆ.  ಗೋಕಾಕ್‌ ಚಳುವಳಿಗೂ ಮುನ್ನವೇ 1966 ರಲ್ಲೇ ಮೇಲೂರಿನಲ್ಲಿ ಕನ್ನಡ ಸಂಘವಿತ್ತು. ’ಬಹುಶಃ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ವಿವಿಧ ಜಿಲ್ಲೆಗಳಲ್ಲಿ ಇನ್ನೂ ಕನ್ನಡ ಸಂಘಗಳೇ ಅಸ್ತಿತ್ವಕ್ಕೆ ಬಾರದೇ ಇರುವ ಕಾಲದಲ್ಲಿಯೇ ಮೇಲೂರಿನಲ್ಲಿ ಕನ್ನಡ ಸಂಘ ಸ್ಥಾಪಿಸಿದ್ದೆವು. ಕನ್ನಡ ನಾಡು ನುಡಿಗೆ ಸಂಬಂಧಿಸಿದಂತೆ ಹಲವಾರು ಚಟುವಟಿಕೆ ಹಮ್ಮಿಕೊಳ್ಳುತ್ತಿದ್ದೆವು’ ಎಂದು ಗ್ರಾಮಸ್ಥರು ಹೇಳುತ್ತಾರೆ.
  ’ಪ್ರತಿವರ್ಷ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುವುದು ಇಲ್ಲಿನ ವಾಡಿಕೆ. ಕನ್ನಡ ನಾಟಕಗಳನ್ನು ಆಡಿಸುವುದು ಪರಿಪಾಠವಾಗಿತ್ತು. ಬಿ.ಎಂ.ಶ್ರೀಕಂಠಯ್ಯ, ಸಿದ್ಧವನಹಳ್ಳಿ ಕೃಷ್ಣಶರ್ಮ ರಂಥಹ ಸಾಹಿತಿಗಳನ್ನು ಆ ಕಾಲದಲ್ಲೇ ಕರೆಸಿ ಗೌರವಿಸಿದ್ದೆವು. ಚಿತ್ರನಟರಾದ ದಿನೇಶ್‌, ರಾಜೇಶ್‌ ಬಂದಿದ್ದರು. ನಟಿಯರಾದ ಗಿರಿಜಾ ಲೋಕೇಶ್‌, ಶಶಿಕಲಾ, ಜಯಲಕ್ಷ್ಮಿ ಮುಂತಾದವರು ನಮ್ಮ ನಾಟಕದಲ್ಲಿ ಅಭಿನಯಿಸಿದ್ದರು. ಹೋರಾಟಗಾರ ವಾಟಾಳ್‌ ನಾಗರಾಜ್‌ ಸಹ ಬಂದಿದ್ದರು. ಗೋಕಾಕ್‌ ಚಳುವಳಿಯ ಸಂದರ್ಭದಲ್ಲಿ ವರನಟ ಡಾ.ರಾಜ್‌ಕುಮಾರ್‌, ಅಂಬರೀಷ್‌, ವಿಷ್ಣುವರ್ಧನ್‌, ಶಂಕರ್‌ನಾಗ್‌ ಪಾಲ್ಗೊಂಡಿದ್ದರು. ನಮ್ಮೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು’ ಎಂದು ಹಿರಿಯ ಕೀರ್ತನಾ ಕಲಾವಿದ ಮಾ.ಮು.ಸ್ವಾಮಿ ತಿಳಿಸಿದರು.
 ಇದಲ್ಲದೇ ಮೇಲೂರು ಗ್ರಾಮದಲ್ಲಿ ಇನ್ನೂ ಕೆಲವಾರು ವಿಶೇಷತೆಗಳಿವೆ. ಗಡಿಭಾಗದಲ್ಲಿದ್ದರೂ ಇಲ್ಲಿ ಒಮ್ಮೆಯೂ ತೆಲುಗು ನಾಟಕ ಪ್ರದರ್ಶಿಸಲು ಅವಕಾಶ ನೀಡಲಾಗಿಲ್ಲ. ಅಲ್ಲಿನ ಕೆಲ ರಸ್ತೆ ಮತ್ತು ವೃತ್ತಗಳಿಗೆ ಸಾಹಿತಿಗಳು ಮತ್ತು ಮಹನೀಯರ ಹೆಸರುಗಳನ್ನು ಇಡಲಾಗಿದೆ. ಇಲ್ಲಿನ ಪ್ರಮುಖ ವೃತ್ತಕ್ಕೆ ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೋಲಾರ ಜಿಲ್ಲೆಯ ಕೆ.ಚಂಗಲರಾಯರೆಡ್ಡಿ ಹೆಸರಿಡಲಾಗಿದೆ. ಅಪ್ಪಟ ಕನ್ನಡ ಹೆಸರಿನ ಕರ್ನಾಟಕದ ಸಾಧಕರ ಹೆಸರಿನ ಬಡಾವಣೆಗಳಿವೆ. ರಾಷ್ಟ್ರಕವಿ ಕುವೆಂಪು ಬಡಾವಣೆ, ಹೊಯ್ಸಳ ಬಡಾವಣೆ, ಬಸವೇಶ್ವರ ಬಡಾವಣೆ, ಅಮೋಘವರ್ಷ ನೃಪತುಂಗ ರಸ್ತೆ ಇವರ ಕನ್ನಡ ಪ್ರೇಮವನ್ನು ಪ್ರತಿನಿಧಿಸಿದರೆ, ವಿಜಯನಗರ ಹೆಬ್ಬಾಗಿಲು ಎಂಬ ಹೆಸರಿನಲ್ಲಿ ಬೃಹತ್‌ ದ್ವಾರಬಾಗಿಲು ಕನ್ನಡದ ಪರಂಪರೆಗೆ ಗ್ರಾಮದ ಕೊಡುಗೆಯಂತಿದೆ.
 ’ಮೇಲೂರಿನಲ್ಲಿ ಡಾ.ರಾಜ್‌ ಅಭಿಮಾನಿಗಳ ಸಂಘ, ಕುವೆಂಪು ಯುವಕರ ಸಂಘ, ಹೊಯ್ಸಳ ನಾಗರೀಕ ವೇದಿಕೆ, ನೇತಾಜಿ ಕನ್ನಡ ಯುವಕ ಸಂಘಗಳಿವೆ. ವಿವಿಧ ಪಕ್ಷಗಳ ಬೆಂಬಲಿಗರಿದ್ದರೂ ಕನ್ನಡದ ಕಾರ್ಯಕ್ರಮವೆಂದರೆ ಗ್ರಾಮಸ್ಥರೆಲ್ಲರೂ ಒಂದಾಗುತ್ತಾರೆ. ಪ್ರತಿವರ್ಷವೂ ರಾಜ್ಯೋತ್ಸವವನ್ನು ವಿಶೇಷವಾಗಿ ಗ್ರಾಮದ ಹಬ್ಬವೆಂಬಂತೆ ಆಚರಿಸುತ್ತೇವೆ. ಈಗಿನ ಯುವಕರಲ್ಲಿ ಕನ್ನಡ ಪ್ರೇಮ ಹೆಚ್ಚಾಗಿದೆ. ಚಂಗಲರಾಯರೆಡ್ಡಿ ವೃತ್ತದ ಬಳಿಯಿರುವ ಶ್ರೀನಿವಾಸ್‌(ಪುಲಿ) ಅವರ ಟೈರುಗಳ ಪಂಚರ್‌ ಅಂಗಡಿ ಬಯಲು ಗ್ರಂಥಾಲಯದಂತಿದೆ. ಎಲ್ಲಾ ಕನ್ನಡ ದಿನಪತ್ರಿಕೆಗಳೂ ಅಲ್ಲಿ ಓದಲು ಸಿಗುತ್ತದೆ. ಬಹುಮುಖ್ಯ ಲೇಖನವಿದ್ದರೆ ಅದನ್ನವರು ಗೋಡೆಯ ಮೇಲೆ ಅಂಟಿಸಿ ಪ್ರದರ್ಶಿಸುತ್ತಾರೆ. ಅಲ್ಲಿ ವಿವಿಧ ಪತ್ರಿಕೆಗಳನ್ನು ಓದಿ ಚರ್ಚಿಸುವುದು ಹಲವರ ದಿನಚರಿಯ ಭಾಗವಾಗಿದೆ’ ಎಂದು ಡಾ.ರಾಜ್‌ಕುಮಾರ್ ಅಭಿಮಾನಿಗಳ ಬಳಗದ ಸುದರ್ಶನ್ ತಿಳಿಸಿದರು.

3 comments:

sunaath said...

ಕರ್ನಾಟಕದ ಎಲ್ಲ ಹಳ್ಳಿ, ಪಟ್ಟಣಗಳು ಇಂತಹ ಕನ್ನಡಪ್ರೇಮವನ್ನು ತೋರಿಸಿದರೆ...!

ಚಿನ್ಮಯ ಭಟ್ said...

ಅಹ್..ಎಲ್ಲವೂ ಹಿಂಗೇ ಇದ್ದಿದ್ರೆ...
ಇರ್ಲಿ :) ಒಂದಿಷ್ಟು ಸ್ಪೂರ್ತಿಕೊಟ್ಟಿದ್ದಂತೂ ನಿಜ..
ವಂದನೆಗಳು ಸರ್

jacksoncooper said...

Unable to find an accurate solution to fix the Kindle won’t connect to wifi error? Get connected with our skilled team. Our team will guide you and offer you the best solution. We are available 24/7 to help you. To know more visit our website Ebook Helpline.