Wednesday, May 15, 2013

ಶಿಡ್ಲಘಟ್ಟದಲ್ಲಿ ೪೦೦ ವರ್ಷದ ಶಿಲಾಶಾಸನ




ಶಿಡ್ಲಘಟ್ಟ ತ್ಲಾಲೂಕಿನ ಬೂದಾಳದ ಮಲೆ ಮ್ಲಲೇಶ್ವರ ದೇವಾಲಯದ ಬಳಿಯಿರುವ ನಾನ್ನೂರು ವರ್ಷಗಳ ಹಿಂದಿನ ಶಿಲಾಶಾಸನ.

 “ಸ್ವಸ್ತಶ್ರೀ ಜಯಶಾಲಿವಾಹನಶಕ ವರುಷಂಗಳು ೫೭೩ ಸಂವತ್ಸರದ...” ಎಂದು ಹಳಗನ್ನಡದ್ಲಲಿ ಬರೆಯಲಾಗಿದೆ. ಮೇಲೆ ಸೂರ್ಯ ಮತ್ತು ಚಂದ್ರರ ಚಿತ್ರವಿದ್ದರೆ ಮಧ್ಯದಲ್ಲಿ ಲಿಂಗುವಿನ ಆಕಾರ ಎದ್ದು ಕಾಣುತ್ತದೆ. ನೋಡಲು ಕಾಂಪೋಂಡಿಗೆ ಹಾಕಲು ಬಳಸುವ ಉದನೆಯ ಚಪ್ಪಡಿ ಕಲ್ಲಿನಂತೆ ಕಂಡುಬಂದರೂ ಇದೊಂದು ಇತಿಹಾಸವನ್ನು ತಿಳಿಸುವ ವಿಶೇಷವಾದ ಶಿಲಾಶಾಸನವಾಗಿದೆ.
 ಸುಮಾರು ೪೦೦ ವರ್ಷಗಳಷ್ಟು ಹಳೆಯದಾದ ಈ ಶಿಲಾ ಶಾಸನವು ಶಿಡ್ಲಘಟ್ಟ ತಾಲ್ಲೂಕಿನ ಬೂದಾಳ ಗ್ರಾಮದಲ್ಲಿ ಮಲೆಮಲ್ಲೇಶ್ವರ ದೇವಾಲಯದ ಬಳಿಯಿದೆ. ಈ ಶಿಲೆಯ ಎರಡೂ ಬದಿಯಲ್ಲಿ ಹಳಗನ್ನಡದ ಲಿಪಿಯಲ್ಲಿ ಕೆತ್ತಲಾಗಿದ್ದು ಚಂದ್ರ, ಸೂರ್ಯ, ಶಿವಲಿಂಗ ಸೇರಿದಂತೆ ವಿವಿಧ ಆಕಾರಗಳನ್ನೂ ಜೊತೆಯಲ್ಲಿ ಚಿತ್ರಿಸಲ್ಪಟ್ಟಿದೆ.
 ಆರು ಅಡಿ ಎತ್ತರ ಮತ್ತು ಒಂದು ಅಡಿ ಎಂಟು ಇಂಚಿನಷ್ಟು ಅಗಲವಿರುವ ಕ್ರಿ.ಶ.೧೬೪೦ರ ಈ ಶಿಲಾಶಾಸನದಲ್ಲಿ, ‘ಮಂಡಲೇಶ್ವರ ರಾಜಾಧಿರಾಜ ಪರಮೇಶ್ವರ ವೀರ ಪ್ರತಾಪ ವೆಂಕಟಪತಿದೇವ ಈ ಪ್ರದೇಶವನ್ನು ಆಳುತ್ತಿದ್ದರು. ಅವರ ಅಧೀನದಲ್ಲಿದ್ದ ಆವತಿ ನಾಡಪ್ರಭು ಬೈರೇಗೌಡರ ಮಗ ಇಮ್ಮಡಿ ಬೈರೇಗೌಡ ಅವರು ವಡಿಗೇನಹಳ್ಳಿಗೆ ಸೇರಿರುವ ಬೂದಿಹಾಳ ಗ್ರಾಮವನ್ನು ಶಿವಾಚಾರಗುರು ಲಿಂಗಚಕ್ರಿ ಎಂಬುವವರಿಗೆ ದಾನವಾಗಿ ನೀಡಲಾಗಿದೆ’ ಎಂದು ಕೆತ್ತಲಾಗಿದೆ.
 ‘ಬ್ರಿಟಿಷ್ ಅಧಿಕಾರಿ ಬಿ.ಎಲ್.ರೈಸ್ ಸಿದ್ಧಪಡಿಸಿರುವ ಎಪಿಗ್ರಾಫಿಕಾ ಕರ್ನಾಟಕಾದಲ್ಲಿ ಈ ಶಿಲಾಶಾಸನದ ಬಗ್ಗೆ ಮಾಹಿತಿ ಸಿಗುತ್ತದೆ. ಹಲವಾರು ವರ್ಷಗಳ ಮಳೆ, ಬಿಸಿಲು, ಗಾಳಿಯ ಹೊಡೆತಕ್ಕೆ ಇದರಲ್ಲಿನ ಕೆಲವಾರು ಅಕ್ಷರಗಳು ಓದಲು ಕಷ್ಟವಾಗುತ್ತದೆ. ರಾಜಾಜ್ಞೆಗಳನ್ನು ಮುಂದಿನ ತಲೆಮಾರುಗಳು ತಿಳಿಯಲು ಅನುಕೂಲವಾಗುವಂತೆ ಹಿಂದೆ ಕಲ್ಲಿನ ಮೇಲೆ ಕೊರೆದು ಸಾರ್ವಜನಿಕ ದಾಖಲೆಯಾಗಿರುವಂತೆ ನಿರ್ಮಿಸುತ್ತಿದ್ದರು. ಭಾಷೆಯ ಮತ್ತು ಪ್ರಾದೇಶಿಕ ಇತಿಹಾಸ, ಹಳೆಯ ಪರಂಪರೆ, ಆಗಿನ ಕಾಲದ ಆಡಳಿತ ಪದ್ಧತಿ, ಸಂಸ್ಕೃತಿ, ಧರ್ಮ ಹಾಗೂ ಏಳು ಬೀಳುಗಳನ್ನು ಇಂಥಹವುಗಳಿಂದ ಅರಿಯಲು ಸಾಧ್ಯವಿದೆ’ ಎನ್ನುತ್ತಾರೆ ಜನಪದ ತಜ್ಞ ಡಾ.ಜಿ.ಶ್ರೀನಿವಾಸಯ್ಯ.
 ‘ಸಾಮಾನ್ಯವಾಗಿ ಶಾಸನವನ್ನು ಯಾವ ವ್ಯಕ್ತಿ ಹಾಕಿಸಿರುತ್ತಾನೆಯೋ ಅಥವಾ ಯಾವ ದೇವಾಲಯಕ್ಕೆ ದತ್ತಿ ಬಿಡುತ್ತಾನೆಯೋ ಆ ವ್ಯಕ್ತಿಯ ಅಥವಾ ದೇವಾಲಯದ ಕುರಿತ ಚಿತ್ರ ಇಲ್ಲವೇ ಶ್ಲೋಕವಿರುತ್ತದೆ. ಈ ಶಾಸನದಲ್ಲಿ ಶಿವಲಿಂಗದ ಚಿತ್ರವಿದ್ದು ಹತ್ತಿರದಲ್ಲೇ ಮಲೆಮಲ್ಲೇಶ್ವರನ ದೇವಾಲಯವಿರುವುದು ಇದಕ್ಕೆ ಪೂರಕವಾಗಿದೆ. ನಾಲ್ಕು ನೂರು ವರ್ಷಗಳಷ್ಟು ಹಳೆಯದಾದ ಈ ಶಿಲಾಶಾಸನವು ನಮ್ಮ ತಾಲ್ಲೂಕಿನ ಒಂದು ಹೆಮ್ಮೆಯ ಇತಿಹಾಸದ ತುಣುಕು. ಇವುಗಳನ್ನು ಸ್ಮಾರಕಗಳ ರೀತಿಯಲ್ಲಿ ಸಂರಕ್ಷಿಸಬೇಕು. ಇವುಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಫಲಕವೊಂದನ್ನು ಶಾಸನದ ಬಳಿ ತಾಲ್ಲೂಕು ಆಡಳಿತ ಹಾಕಿಸಬೇಕು’ ಎಂದು ಅವರು ಕಾಳಜಿ ವ್ಯಕ್ತಪಡಿಸಿದರು.


2 comments:

sunaath said...

ವೈವಿಧ್ಯಮಯವಾದ ಮಾಹಿತಿ ನೀಡುತ್ತಿರುವ ನಿಮಗೆ ಅನೇಕ ಧನ್ಯವಾದಗಳು.

Badarinath Palavalli said...

ಪ್ರತಾಪ ವೆಂಕಟಪತಿದೇವನು ಬಹುಶಃ ರಾಯರ ಕಾಲದ ಪಾಳೇಗಾರನೋ ಆಥವಾ ಸಾಮಂತನೋ ಇದ್ದಿರಬಹುದಲ್ಲವೇ?