Sunday, April 21, 2013

ಸರ್ಕಸ್ ಜನರ ಬದುಕೇ ಸರ್ಕಸ್

 ಟೆಂಟ್ ಒಳಗೇ ನಾಯಿಗಳು, ಹಾಸಿಗೆ, ಟೀವಿ ಮತ್ತು ಇಡೀ ಸಂಸಾರ.

 ‘ಇದೇ ನಮ್ಮ ಶಾಲೆ. ನಮ್ಮ ಬದುಕು. ನಮ್ಮ ಅನ್ನ ಎಲ್ಲ ಇಲ್ಲಿಯೇ. ನಾನು ಹುಟ್ಟಿದ್ದು ಹೀಗೇ ಇರುವ ಒಂದು ಟೆಂಟ್‌ನಲ್ಲಿ. ಇನ್ನು ಜೀವನವೆಲ್ಲ ಇಲ್ಲಿಯೇ ಕಳೆಯುತ್ತೇನೆ’ ಎಂದು ಸರ್ಕಸ್‌ನ ಹರಿದ ಟೆಂಟ್‌ನ ಅಡಿಯಲ್ಲಿ ಕುಳಿತು ಹೇಳುತ್ತಾರೆ ಪಶ್ಚಿಮ ಬಂಗಾಲದ ಮಹಮ್ಮದ್ ಫಾರೂಕ್.
 ಶಿಡ್ಲಘಟ್ಟಕ್ಕೆ ಆಗಮಿಸಿದ್ದ ಕಮಲ್ ಸರ್ಕಸ್‌ನಲ್ಲಿ ಇಡೀ ಭಾರತವೇ ಒಂದೆಡೆ ಕಲೆತಂತೆ ವಿವಿಧ ರಾಜ್ಯಗಳ ಕಲಾವಿದರು ಇದ್ದರು. ಕೊಲ್ಕತ್ತ, ಮಧ್ಯಪ್ರದೇಶ, ಬಿಹಾರ, ಗುಜರಾತ್, ಪಶ್ಚಿಮ ಬಂಗಾಲ, ಆಂಧ್ರಪ್ರದೇಶ, ಅಸ್ಸಾಂ, ಉತ್ತರಪ್ರದೇಶದ ಕಲಾಕಾರರು ಕಲೆತಿದ್ದಾರೆ.
 ಮೈಯನ್ನು ರಬ್ಬರಿನಂತೆ ಬಗ್ಗಿಸುವ ಸುಮನ್ ತಾಮಂಗ್ ಮತ್ತು ಸುರಬಿ ಸಾಮಂತ್ ಸೋದರಿಯರು ಅಸ್ಸಾಮಿನವರಾದರೆ, ಮೇಲೆ ಹಗ್ಗದಿಂದ ಜೀಕುವ ಮಹಮ್ಮದ್ ಫಾರೂಕ್ ಪಶ್ಚಿಮ ಬಂಗಾಳದವರು. ಬೈಕನ್ನು ಹಾರಿಸುವ ರಮ್‌ಜಾನ್ ಗುಜರಾತಿನವರಾದರೆ, ಗುಂಡನೆಯ ಬಿದಿರಿನ ಬಾಕ್ಸ್ ಒಳಗೆ ಬೈಕ್ ಸುತ್ತಿಸುವ ಆಶಿಕ್ ಪಶ್ಚಿಮ ಗೋದಾವರಿಯ ತಾಡೆಪಲ್ಲಿಗುಡಂನವರು. ಇಷ್ಟೆಲ್ಲಾ ವಿವಿಧ ರಾಜ್ಯಗಳ ಕಲಾವಿದರನ್ನು ಸೂತ್ರದಾರನಂತೆ ನೋಡಿಕೊಳ್ಳುವ ಸರ್ಕಸ್ ಯಜಮಾನ ಕೋಲಾರ ಜಿಲ್ಲೆಯ ಮುಳಬಾಗಲಿನ ರಮಣಪ್ಪ.


ಕಷ್ಟದ ಜೀವನ ನಡೆಸುವ ಸರ್ಕಸ್ ಕಲಾವಿದರ ಊಟ ಮಾಡುವ ಸ್ಥಳ ಹೀಗಿದೆ.

  ಅಲೆಮಾರಿಗಳಂತೆ ಒಂದೊಂದು ತಿಂಗಳು ಒಂದೊಂದು ಊರಿನಲ್ಲಿ ತಂಗುವ ಇವರು ಉಳಿದುಕೊಳ್ಳುವುದು ಸರ್ಕಸ್‌ನ ಮುಖ್ಯ ಡೇರಾ ಹಿಂಬದಿಯ ಟೆಂಟ್‌ಗಳಲ್ಲಿ. ಒಂದೊಂದು ಕುಟುಂಬಕ್ಕೆ ಒಂದೊಂದು ಟೆಂಟ್‌ಗಳು. ಇದರಲ್ಲೇ ಇವರು ತಮ್ಮ ಅಡುಗೆ, ದೇವರು, ಮಲಗಲು ವ್ಯವಸ್ಥೆ, ನೀರಿನ ಶೇಖರಣೆ, ಟೀವಿ ಮುಂತಾದವುಗಳನ್ನು ಹೊಂದಿಸಿಕೊಂಡಿರುತ್ತಾರೆ. ಸರ್ಕಸ್‌ನಲ್ಲಿ ರಂಜಿಸುವ ನಾಯಿಗಳು, ಕುದುರೆ, ಒಂಟೆ ಮತ್ತು ಆಡು ಕೂಡ ಇವರೊಂದಿಗೇ ಸಹಬಾಳ್ವೆ ನಡೆಸುತ್ತವೆ.

 ಬೈಕನ್ನು ಹಾರಿಸುವ ಗುಜರಾತ್‌ನ ರಮ್‌ಜಾನ್‌ರ ಪುಟ್ಟ ಸಂಸಾರ ಡೇರೆಯ ಒಳಗೆ.


ಬೈಕನ್ನು ಹಾರಿಸುವ ಕಲಾವಿದನನ್ನು ಜನರು ಬೆಕ್ಕಸಬೆರಗಾಗಿ ನೋಡುತ್ತಿರುವುದು.  

 ಸರ್ಕಸ್ ಟೆಂಟ್‌ನ ಒಳಗೆ ಕಳೆದ ತಿಂಗಳಷ್ಟೇ ಜನಿಸಿದ ಪಶ್ಚಿಮ ಬಂಗಾಲದ ಮಹಮ್ಮದ್ ಫಾರೂಕ್‌ನ ಗಂಡು ಮಗು, ಮದುವೆಯಾಗಿ ಮೂರು ತಿಂಗಳುಗಳಾಗಿರುವ ಕುಬ್ಜ ಇಂದ್ರಜಿತ್‌ಕುಮಾರ್, ತಂದೆ ಕಳೆದುಕೊಂಡು ಸರ್ಕಸ್‌ನ ಆಸರೆಯಲ್ಲಿರುವ ಅಸ್ಸಾಮಿನ ಸೋದರಿಯರು, ಮನುಷ್ಯರಿಗಿಂತ ಪ್ರಾಣಿಗಳೇ ಮೇಲು ಎನ್ನುವ ಒಂಟೆ ತರಬೇತುದಾರ ಕೊಲ್ಕತ್ತಾದ ರವಿ, ಎಲ್ಲರೂ ತಮ್ಮ ಕಷ್ಟಕರ ಜೀವನದಲ್ಲೂ ಮಾನವೀಯ ಸಂಬಂಧಗಳ ಬಗ್ಗೆ ಹೊಸ ಅರ್ಥ ಕಲ್ಪಿಸುತ್ತಾರೆ.
 ‘ನಮಗೆ ಇಲ್ಲಿ ಊಟ, ಕಾಫಿ, ತಿಂಡಿ, ಆಸ್ಪತ್ರೆ ಖರ್ಚು ಎಲ್ಲವನ್ನೂ ಮಾಲೀಕರೇ ನೋಡಿಕೊಳ್ಳುತ್ತಾರೆ. ನಮ್ಮ ಕುಟುಂಬವನ್ನು ಸಲಹಿಕೊಂಡು ನಮ್ಮ ಊರುಗಳಲ್ಲಿರುವ ತಂದೆ ತಾಯಿಯರಿಗೆ ಹಣವನ್ನು ಕಳಿಸುತ್ತೇವೆ. ನನ್ನ ಹೆಂಡತಿ ಕಳೆದ ತಿಂಗಳಷ್ಟೇ ಗಂಡು ಮಗುವಿಗೆ ಜನ್ಮವಿತ್ತಿದ್ದಾಳೆ. ನನ್ನ ಇಬ್ಬರು ಹೆಣ್ಣುಮಕ್ಕಳೂ ಸರ್ಕಸ್‌ನಲ್ಲಿ ಚಮತ್ಕಾರ ಪ್ರದರ್ಶಿಸುತ್ತಾರೆ. ನಾವು ಅಲೆಮಾರಿಗಳಾಗಿರುವುದರಿಂದ  ಉಳಿದವರಂತೆ ಮಕ್ಕಳನ್ನು ಶಾಲೆಗೆ ಕಳಿಸಲು ಆಗದು. ಮನೆ ಕಟ್ಟಲು ಆಗದು. ಸರ್ಕಸ್ ಬಿಟ್ಟರೆ ನಮಗೆ ಬೇರೇನೂ ತಿಳಿಯದು’ ಎನ್ನುತ್ತಾರೆ ಫಾರೂಕ್.

 ಟೆಂಟ್ ಒಳಗೇ ದೇವರು, ನೀರಿನ ಶೇಖರಣೆ, ಬಟ್ಟೆ, ಕ್ಯಾಲೆಂಡರ್ ಮುಂತಾದ ವಸ್ತುಗಳು. 

 ‘ಸುಮಾರು ೫೦ ಜನರ ಒಟ್ಟು ಕುಟುಂಬ ನಮ್ಮದು. ಹಲವಾರು ರಾಜ್ಯಗಳಿಂದ ಇವರೆಲ್ಲ ಬಂದಿದ್ದರೂ ಒಂದೇ ಕುಟುಂಬದ ಸದಸ್ಯರಂತೆ ನಾವಿದ್ದೇವೆ. ಮೊದಲಾದರೆ ಹಲವಾರು ಪ್ರಾಣಿಗಳಿದ್ದವು. ಈಗ ಅವುಗಳನ್ನು ಸಾಕಲು ಕಷ್ಟವಾಗುತ್ತದೆ. ಅಷ್ಟೂ ಜನರ ಊಟ, ವಸತಿ, ಆರೋಗ್ಯ, ಸೌಕರ್ಯ ಮುಂತಾದವುಗಳನ್ನು ನೋಡಿಕೊಳ್ಳುವುದು ಬಹಳ ಕಷ್ಟ. ಜನರು ನೀಡುವ ಹಣದಿಂದಲೇ ನಮ್ಮ ಜೀವನ ಸಾಗಬೇಕು. ನಿಜ ಅರ್ಥದಲ್ಲಿ ನಮ್ಮ ಜೀವನವೂ ಒಂದು ಸರ್ಕಸ್ಸೇ. ನಮಗಿದನ್ನು ಬಿಟ್ಟು ಬೇರೇನೂ ತಿಳಿಯದು’ ಎಂದು ಕಮಲ್ ಸರ್ಕಸ್ ಮಾಲೀಕ ರಮಣಪ್ಪ  ತಿಳಿಸಿದರು.



ಶಿಡ್ಲಘಟ್ಟಕ್ಕೆ ಆಗಮಿಸಿದ್ದ ಕಮಲ್ ಸರ್ಕಸ್‌ನ ಹಾಸ್ಯ ಕಲಾವಿದರ ಹಾಸ್ಯಪ್ರಸಂಗಗಳು.

4 comments:

Badarinath Palavalli said...
This comment has been removed by the author.
Badarinath Palavalli said...

ಕಮಲ್ ಸರ್ಕಸ್ಸಿನ ಸಚಿತ್ರ ಲೇಖನ ತುಂಬಾ ಮನಮುಟ್ಟುವಂತಿದ್ದಿತು.
http://badari-poems.blogspot.in

ಚಿನ್ಮಯ ಭಟ್ said...

ಧನ್ಯವಾದಗಳು ಸರ್....ಸರ್ಕಸ್ಸಿನ ಬಗ್ಗೆ ಬೆಳಕು ಚೆಲ್ಲಿದ್ದಕ್ಕೆ...ಅಭ್ಭಾ ಅವರ ಜೀವನದ ಬಗ್ಗೆ ಗೊತ್ತಿರಲಿಲ್ಲ...ಚಲನಚಿತ್ರದಲ್ಲಿ ನೋಡಿದ್ದಷ್ಟೇ...
ವಂದನೆಗಳು...

ಶಿವಪ್ರಕಾಶ್ said...

ivaradu tumba kastada jeevana alwa anna... :(