ಗ್ರಾಮೀಣ ಪ್ರದೇಶದಲ್ಲಿ ಜೀವನದ ಅವಿಭಾಜ್ಯ ಅಂಗವಾಗಿ ಹಲವಾರು ಸಂಗತಿಗಳಿರುತ್ತವೆ. ಅವುಗಳಲ್ಲಿ ಎಲೆ ಅಡಿಕೆಯೂ ಸೇರಿದೆ. ಬಾಯಿ ಕೆಂಪಾಗಿಸಿ, ಹಲ್ಲನ್ನು ಬಣ್ಣವಾಗಿಸ್ದಿದರೂ ಎಲೆ ಅಡಿಕೆಯ ಮೋಹವನ್ನು ಬಿಡುವುದಿಲ್ಲ. ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮೀಣ ಪರಿಸರದಲ್ಲಿ ಮೊದಲು ಎಲ್ಲರ ಬಳಿಯೂ ಇರುತ್ತಿದ್ದ ಎಲೆ ಅಡಿಕೆ ಚೀಲ ನಿಡಾನವಾಗಿ ಕಣ್ಮರೆಯಾಗುತ್ತಿದೆ. ಎಲೆ ಅಡಿಕೆ ವಿವಿಧ ರೂಪಗಳಲ್ಲಿ ನಾಡಿನಾದ್ಯಂತ ವ್ಯಾಪಿಸಿದೆ. ಬಾಯಿಯಲ್ಲಿ ಹಾಕಿಕೊಂಡು ಮೆಲ್ಲುವುದರ ಜೊತೆಗೆ ಹುಟ್ಟು-ಸಾವಿನ ನಡುವಿನ ಜೀವನದ ಮಹತ್ವದ ಘಟ್ಟಗಳಲ್ಲಿ ಇದರ ಪ್ರಮುಖ ಪಾತ್ರವಿದೆ. ಪಾನ್ಬೀಡಾ, ಪಾನ್ಪರಾಗ್ ಮತ್ತಿತರ ಥಳಕು-ಬಳುಕಿಗೆ ಈಗಿನ ಜನರು ಮೊರೆ ಹೋದರೂ ವಿಶೇಷ ಸಂದರ್ಭಗಳಲ್ಲಿ ಎಲೆ ಅಡಿಕೆ ಹಾಕದಿರುವವರು ಕಡಿಮೆ. ಮದುವೆ ಮುಂತಾದ ಮಂಗಳ ಕಾರ್ಯಗಳಲ್ಲಿ ಭೋಜನಾ ನಂತರ ಎಲೆ ಅಡಿಕೆ ಪ್ರತ್ಯಕ್ಷವಾಗುತ್ತದೆ. ಮಂಗಳ ಕಾರ್ಯಗಳಲ್ಲಿ ತಾಂಬೂಲ ಕೊಟ್ಟು ತಾಂಬೂಲ ಹಾಕಿಕೊಂಡು ಹೋಗಿ ಎನ್ನುವುದು ರೂಢಿ. ನವಾಬರು ಇದನ್ನು ಬೀಡಾ ಎಂದೇ ಪ್ರಸಿದ್ಧಿಗೆ ತಂದರು. ಮೈಸೂರು ಎಲೆ, ಬನಾರಸ್, ಮದ್ರಾಸ್, ಕಲ್ಕತ್ತ, ನಾಟಿ ಎಲೆಗಳು ಜನಪ್ರಿಯವಾಗಿವೆ. ಎಲೆ ಅಡಿಕೆಗಳ ಅಭ್ಯಾಸವಿರುವ ಗ್ರಾಮೀಣರು ಮೊಬೈಲ್ ಫೋನ್ಗಳಂತೆ ತಮ್ಮೊಟ್ಟಿಗೇ ಇಟ್ಟುಕೊಳ್ಳಲು ಪರಿಕರವೊಂದನ್ನು ಸೃಷ್ಟಿಸಿಕೊಂಡಿದ್ದರು. ಅದುವೇ ಎಲೆ ಅಡಿಕೆ ಚೀಲ. ಸುಲಭವಾಗಿ ಬಳಸುವಂತೆ, ಎಲ್ಲೆ ಹೋಗಲಿ ಜೊತೆಯಲ್ಲಿ ಇಟ್ಟುಕೊಳ್ಳುವಂತೆ ಇದನ್ನು ರೂಪಿಸಿರುತ್ತಿದ್ದರು. ಇದಕ್ಕೆ ತಿತ್ತಿ, ಸಂಚಿ ಎಂದೆಲ್ಲಾ ಕರೆಯುತ್ತಾರೆ.
ಹಲ್ಲಿಲ್ಲದ್ದರಿಂದ ಕುಟ್ಟಾಣಿಯಲ್ಲಿ ಎಲೆ ಅಡಿಕೆ ಸುಣ್ಣ ಬೆರೆಸಿ ಕುಟ್ಟಿಕೊಳ್ಳುತ್ತಿರುವ ರಾಗಿಮಾಕಲಹಳ್ಳಿಯ ರಾಮಕ್ಕ.
ಕನ್ನಡದ ಕವಿಯತ್ರಿ ಹೊನ್ನಮ್ಮ ಈ ಎಲೆ ಅಡಿಕೆ ಚೀಲದಿಂದಾಗಿ ಸಂಚಿ ಹೊನ್ನಮ್ಮ ಎಂದೇ ಕರೆಸಿಕೊಂಡಿದ್ದಾರೆ. ಈ ಸಂಚಿ ಅಥವಾ ತಿತ್ತಿಯಲ್ಲಿ ಬಹುಪಯೋಗಿ ವಿಭಾಗಗಳಿವೆ. ಸುಣ್ಣದ ಡಬ್ಬಿಗೊಂದು ಜಾಗ, ಹಲ್ಲುಕಡ್ಡಿಗೊಂದು ಜಾಗ, ಪಕ್ಕದಲ್ಲಿ ಎಲೆ ಇಡುವ ಅರೆ, ಅಡಿಕೆ ಇಡಲು ಒಂದು ಪದರವಿರುತ್ತದೆ. ಒಂದು ಅಡಿ ಪದರ ಉದವಿದ್ದು ಸೊಂಟಕ್ಕೆ ಸಿಕ್ಕಿಸಿಕೊಳ್ಳಲು ಅನುಕೂಲಕರವಾಗಿರುತ್ತದೆ. ಇದರಲ್ಲಿ ಕಡ್ಡಿಪುಡಿ(ತಂಬಾಕು ಪುಡಿ) ಇಡಲೂ ಸ್ಥಳವುಂಟು. ಹಲ್ಲಿಲ್ಲದವರು ಕುಟ್ಟಾಣಿಯನ್ನೂ ಇದರಲ್ಲಿಟ್ಟುಕೊಳ್ಳುತ್ತಾರೆ. ಕೆಲವು ತಿತ್ತಿಗಳಿಗೆ ಉದ್ದನೆಯ ಪದರದ ತುದಿಗೆ ಪೊರಕೆ ಕಡ್ಡಿ ಗಾತ್ರದ ದಾರ ಹಾಕಿರುತ್ತಾರೆ. ತಿತ್ತಿಯನ್ನು ಗುಂಡಗೆ ಸುತ್ತಿ ಆ ದಾರದಿಂದ ಸುತ್ತಿ ಅದನ್ನು ಮಹಿಳೆಯರು ಸೊಂಟದ ಬಳಿ ಬಟ್ಟೆಗೆ ಸಿಕ್ಕಿಸಿ ಇಟ್ಟುಕೊಳ್ಳುತ್ತಿದ್ದರು. ಇದು ಅನಕ್ಷರಸ್ಥರ ಹಣದ ಚೀಲವೂ ಹೌದು. ಸೂಜಿ ದಾರ ಸೇರಿದಂತೆ ಅನೇಕ ಸಣ್ಣ ಪುಟ್ಟ ಪರಿಕರಗಳನ್ನೂ ಇದರಲ್ಲಿ ಇಟ್ಟಿರುತ್ತಾರೆ. ಇನ್ನೂ ಹಳ್ಳಿಗಳಲ್ಲಿ ಅಲ್ಲಲ್ಲಿ ಈ ತಿತ್ತಿಗಳು ಕಂಡು ಬರುತ್ತಿವೆ. ಇನ್ನೂ ಸಂಪೂರ್ಣವಾಗಿ ಕಣ್ಮರೆಯಾಗಿಲ್ಲ. ಸಂತೆಗಳಲ್ಲಿ, ವೃದ್ಧರ ಬಳಿ ಕಾಣಸಿಗುತ್ತದೆ. ಒಂದು ತಿತ್ತಿಯಲ್ಲಿನ ಎಲೆ ಅಡಿಕೆ ತನ್ನ ಆಯುಷ್ಯದಲ್ಲಿ ನೂರಾರು ಬಾಯಿಗಳನ್ನು ಸೇರುತ್ತದೆ. ಹೆಂಗಸರು ಮೊದಲು ಒಂದೆಡೆ ಸೇರಿದಾಗ ಈ ತಿತ್ತಿಯು ಅವರ ಸ್ನೇಹದ ದ್ಯೋತಕವಾಗಿರುತ್ತಿತ್ತು. ಎಲೆ ಅಡಿಕೆ ಹಂಚಿಕೊಂಡು ನಂತರ ಮಾತಿಗೆ ತೊಡಗುತ್ತಿದ್ದರು. ‘ನನಗೆ ಮೊದಲಿನಿಂದಲೂ ಎಲೆ ಅಡಿಕೆಯ ಅಭ್ಯಾಸವಾಗಿಬಿಟ್ಟಿದೆ. ಅದಿಲ್ಲದೆ ಇರಲಾರೆ. ಹೊಗೆ ಸೊಪ್ಪಿನ ದಂಟನ್ನು ತಂದು ಕುಟ್ಟಿ ಪುಡಿ ಮಾಡಿಟ್ಟುಕೊಂಡು ಬಳಸುತ್ತೇನೆ. ವಯಸ್ಸಾಗಿರುವುದರಿಂದ ಹಲ್ಲಿಲ್ಲ. ಅದಕ್ಕಾಗಿ ಕುಟ್ಟಾಣಿಯಲ್ಲಿ ಎಲೆ ಅಡಿಕೆ ಸುಣ್ಣ ಎಲ್ಲ ಬೆರೆಸಿ ಕುಟ್ಟಿ ನಂತರ ತಿನ್ನುತ್ತೇನೆ’ ಎನ್ನುತ್ತಾರೆ ರಾಗಿಮಾಕಲಹಳ್ಳಿಯ ರಾಮಕ್ಕ.
2 comments:
ಕಣ್ಮರೆಯಾಗುತ್ತಿರುವ ಗ್ರಾಮೀಣ ಸೊಬಗನ್ನು ಹಿಡಿದಿಡಲು ನೀವು ಮಾಡುತ್ತಿರುವ ಕಾರ್ಯ ಶ್ಲಾಘನೀಯ, ಮಲ್ಲಿಕಾರ್ಜನ್ ಅವರೆ. ಶುಭದಿನ.
ಧಾರವಾಡ ಭಾಗದಲ್ಲಿ ಈ ಚೀಲಕ್ಕೆ ‘ಚಂಚಿ’ ಎಂದು ಕರೆಯುತ್ತಾರೆ. (‘ಸಂಚಿಯ ಹೊನ್ನಮ್ಮ’ನನ್ನು ನೆನಪಿಸಿಕೊಳ್ಳಿ). ಎಂದಿನಂತೆ ನಿಮ್ಮದು ಮೂಲ್ಯಪೂರ್ಣ ಲೇಖನ.
Post a Comment