Friday, October 29, 2010

ಗೆಣಸಿಗೂ ಬರುತ್ತಿದೆ ಬೇಡಿಕೆ!!

ಬಗೆಬಗೆಯ ತರಕಾರಿಗಳು ಜನರಿಗೆ ಬೇರೆ ಬೇರೆ ಕಾರಣಕ್ಕೆ ಇಷ್ಟವಾಗುತ್ತವೆ. ಬ್ರಿಟೀಷರ ಬಳುವಳಿಯಾಗಿ ಭಾರತಕ್ಕೆ ಬಂದಿರುವ ತರಕಾರಿಯೊಂದು ಶಿಡ್ಲಘಟ್ಟದಲ್ಲಿ ಈಗ ಜನಪ್ರಿಯತೆ ಪಡೆಯುತ್ತಿದೆ. ಜನತೆ ಸ್ವಇಚ್ಛೆಯಿಂದ ಹಿತ್ತಲಿನಲ್ಲಿ, ಹೂತೋಟಗಳಲ್ಲಿ ಮತ್ತು ಮನೆಯ ಮುಂದೆ ರಸ್ತೆ ಬದಿಯಲ್ಲಿ ಬೆಳೆಸುತ್ತಿರುವ ತರಕಾರಿ ಮರಗೆಣಸು. ಇದಕ್ಕೆಲ್ಲ ಅತ್ಯುತ್ತಮ ಉದಾಹರಣೆಯಾಗಿ ರೇಷ್ಮೆ ಗೂಡು ಮಾರುಕಟ್ಟೆ ಸಮೀಪ ಮರಗೆಣಸಿನ ಗಿಡವೊಂದು ಹುಲುಸಾಗಿ ಬೆಳೆದಿದೆ.


ಶಿಡ್ಲಘಟ್ಟದ ರೇಷ್ಮೆ ಗೂಡು ಮಾರುಕಟ್ಟೆಯ ಬಳಿಯ ರಮ್ಯದರ್ಶನ್ ಹೋಟೆಲ್ ಮಾಲೀಕ ಕೃಷ್ಣ ಬೆಳೆದಿರುವ ಮರಗೆಣಸಿನ ಗಿಡ.


ಭಾರತೀಯ ಭಾಷೆಗಳಲ್ಲಿ ಈ ಗಿಡವನ್ನು ತಾಪಿಯೋಕ, ಟಾಪಿಯೋಕ ಎನ್ನುವರು. ಗಿಡವು ಸಣ್ಣ ಮರದಂತಿದ್ದು ಉಬ್ಬಿದ ಬೇರುಗಳು ಸಿಹಿಗೆಣಸನ್ನು ಹೋಲುವುದರಿಂದ ಮರಗೆಣಸು ಎನ್ನುವರು. ತಮಿಳಿನಲ್ಲಿ ಮರವಳ್ಳಿ ಕಿಳಂಗು, ಮಲಯಾಳಂನಲ್ಲಿ ಮರಚೀನಿ ಎನ್ನುತ್ತಾರೆ. ದಕ್ಷಿಣ ಅಮೆರಿಕ ಮೂಲದ ಮರಗೆಣಸು ಭಾರತದಲ್ಲಿ ಅಸ್ಸಾಂ, ಬಂಗಾಳ, ತಮಿಳುನಾಡು, ಕೇರಳ ಮತ್ತು ಕರ್ನಾಟಕ ಹೊರತುಪಡಿಸಿದರೆ ಬೇರೆಲ್ಲೂ ಬಳಕೆಯಲ್ಲಿಲ್ಲ.
ಕೇರಳವನ್ನು ಮರಗೆಣಸಿನ ಕಣಜವೆನ್ನುತ್ತಾರೆ. ಅವರು ಇದರಿಂದ ಅನೇಕ ರೀತಿಯ ಖಾದ್ಯಗಳನ್ನು ತಯಾರಿಸುತ್ತಾರೆ ಹಾಗೂ ಉತ್ತಮ ರೀತಿಯಲ್ಲಿ ಸದ್ಭಳಕೆ ಮಾಡುತ್ತಾರೆ. ತುಂಡು ಮಾಡಿ, ಹಿಟ್ಟಿನ ರೂಪ ನೀಡಿ ತಿಂಗಳುಗಟ್ಟಲೇ ದಾಸ್ತಾನು ಮಾಡುತ್ತಾರೆ. ರೊಟ್ಟಿ, ಪುಟ್ಟು, ಆಪ್ಪಂ, ಪಲ್ಯ, ಕೂಟು, ಬಜ್ಜಿ, ಬೋಂಡ, ಹಪ್ಪಳ, ವಡೆ, ಚಿಪ್ಸ್ ಇತ್ಯಾದಿ ಅನೇಕ ವ್ಯಂಜನಗಳನ್ನು ತಯಾರಿಸುವುದಅಲ್ಲಿ ಅವರು ನಿಸ್ಸೀಮರು.


ಮರಗೆಣಸು ಮತ್ತು ಅದರಿಂದ ತಯಾರಿಸಿರುವ ಚಿಪ್ಸ್.

"ನಾನಿದನ್ನು ಹತ್ತು ವರ್ಷಗಳ ಹಿಂದೆ ಕೇರಳದಿಂದ ತಂದು ನೆಟ್ಟಿದ್ದೆ. ಇಂದು ಇದು ಹುಲುಸಾಗಿ ಬೆಳೆಯುತ್ತಿದೆ. ಆರು ತಿಂಗಳಿಗೊಮ್ಮೆ ಗೆಣಸುಗಡ್ಡೆ ಕೀಳುತ್ತೇವೆ. ಮನೆಯಲ್ಲಿ ಬಳಸುವುದರ ಜೊತೆಗೆ ಹೋಟೆಲಿನಲ್ಲೂ ಬಳಸುತ್ತೇವೆ. ಇದರ ರುಚಿ ನೋಡಿ ಅನೇಕರು ತೆಗೆದುಕೊಂಡು ಹೋಗಿದ್ದಾರೆ. ಇದರ ಕಾಂಡದ ತುಂಡು ನೆಟ್ಟರೆ ಸಾಕು ಬೆಳೆಯುತ್ತದೆ" ಎಂದು ರಮ್ಯ ದರ್ಶನ್ ಹೋಟೆಲ್ ಮಾಲೀಕ ಕೃಷ್ಣ ವಿವರಿಸಿದರು.
"ಮೊದಲು ಇದನ್ನು ತೋಟಗಳ ಬದುಗಳಲ್ಲಿ ಮಣ್ಣಿನ ಸವೆತ ತಡೆಯಲು ಬೆಳೆಯುತ್ತಿದ್ದರು. ನೆರೆಯ ರಾಜ್ಯಗಳಂತೆ ಇದನ್ನು ಆಹಾರ ಮತ್ತು ವಾಣಿಜ್ಯ ಬೆಳೆಯಾಗಿ ಪರಿಗಣಿಸಿ ನಮ್ಮ ರೈತರೂ ಆರ್ಥಿಕ ಲಾಭ ಮಾಡಿಕೊಳ್ಳಬಹುದು. ಇದಕ್ಕೆ ಹೆಚ್ಚು ನೀರು ಬೇಕಾಗುವುದಿಲ್ಲ. ಸಾರವಿರುವ ಜಮೀನಿನಲ್ಲಿ ಒಂದು ಗಿಡ ೧೦ ರಿಂದ ೧೫ ಕೆಜಿ ಇಳುವರಿ ನೀಡುತ್ತದೆ. ಬಟ್ಟೆಗೆ ಹಾಕುವ ಗಂಜಿ ಹಾಗೂ ಸಬ್ಬಕ್ಕಿ ತಯಾರಿಸಲೂ ಇದನ್ನು ಬಳಸಲಾಗುತ್ತದೆ. ಇದರ ಸೊಪ್ಪು ದನ ಮೇಕೆಗಳಿಗೆ ಆಹಾರ ಕೂಡ. ಹಂದಿ ಸಾಕಣೆ ಮಾಡುವವರಿಗೂ ಇದು ಉಪಯುಕ್ತ’ ಎನ್ನುತ್ತಾರೆ ಪ್ರಗತಿಪರ ರೈತ ಹಿತ್ತಲಹಳ್ಳಿಯ ಗೋಪಾಲಗೌಡ.

10 comments:

Gubbachchi Sathish said...

ಒಳ್ಳೆಯ ಮಾಹಿತಿ, ಬೇಯಿಸಿದ ಗೆಣಸು ಬಲು ರುಚಿ,
ತಿನ್ನುವ ಆಸೆ ಆಗ್ತಿದೆ.

ಸವಿಗನಸು said...

ಒಳ್ಳೆ ಮಾಹಿತಿ....

balasubramanya said...

.ಮರಗೆಣಸು ಬಗ್ಗೆ ಒಳ್ಳೆಯ ಮಾಹಿತಿ . ನಿಮಗೆ ರಾಜ್ಯೋತ್ಸವದ ಶುಭಾಶಗಳು.

sunaath said...

ಮರಗೆಣಸಿನಿಂದ ಸಾಬೂದಾಣಿ (ಸಬ್ಬಕ್ಕಿ)ಯನ್ನು ತಯಾರಿಸುತ್ತಾರೆ. ಇದನ್ನು ನಾಷ್ಟಾದಲ್ಲಿ ಬಳಸುತ್ತಾರೆ. ಈ ಮರಗೆಣಸನ್ನು ಕೆಲವೊಂದು ಹಾಲಿನ ಕಂಪನಿಗಳು ಹಾಲಿನಲ್ಲಿ ಕೂಡಿಸುತ್ತಾರೆ ಎಂದು ಕೇಳಿದ್ದೇನೆ.

Dr.D.T.Krishna Murthy. said...

ಮಲ್ಲಿಕಾರ್ಜುನ್ ಸರ್;ಮರಗೆಣಸಿನ ಬಗ್ಗೆ ಉತ್ತಮ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.ನನ್ನ ಬ್ಲಾಗ್ ಶತಕ ಪೂರೈಸಿದೆ.ಬ್ಲಾಗಿಗೆ ಭೇಟಿ ಕೊಡಿ.ನಮಸ್ಕಾರ.

PARAANJAPE K.N. said...

ಗೆಣಸಿನ ಬಗ್ಗೆ ಮಾಹಿತಿ ಚೆನ್ನಾಗಿದೆ.

ಮನಮುಕ್ತಾ said...

ಒಳ್ಳೆಯ ಮಾಹಿತಿ.. ಧನ್ಯವಾದಗಳು.

Nisha said...

ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಜಲನಯನ said...

ಮಲ್ಲಿ ಮರಗೆಣಸು (ಟಾಪಿಯೋಕಾ) ಒಂದು ಉತ್ತಮ ಪಿಷ್ಠ ಮೂಲ. ಇದರ ಸ್ಟಾರ್ಚ್ (ಪಿಷ್ಠವನ್ನು) ಆಹಾರ ಪದಾರ್ಥಗಳ ತಯಾರಿಕೆಯಲ್ಲಿ, ಪ್ರಾಣಿ ಆಹಾರದಲ್ಲಿ ಮತ್ತು ಹಲವು ರೀತಿಯ ಸಂಶೋಧನಾ ಸಾಮಗ್ರಿಗಳಲ್ಲಿ ಬಳಸಲಾಗುತ್ತದೆ...ಒಳ್ಳೆಯ ಮಾಹಿತಿ...(ಇದನ್ನು ಗಮನಿಸಿ) ಮಾಹಿತಿಯೊಂದಿಗೆ ನಿಮ್ಮ ಛಾಪಿನ ಚಿತ್ರಗಳ ಮೂಲಕ ಲೇಖನ ಹಾಕಿರುವುದು ..ಅಭಿನಂದನೀಯ..

ಸೀತಾರಾಮ. ಕೆ. / SITARAM.K said...

ಉಪಯುಕ್ತ ಮಾಹಿತಿ. ಊರಿಗೆ ಹೋದಾಗ ನಾನು ತರುವ ಖಾದ್ಯ ಮರಗೆಣಸಿನ ಚಿಪ್ಸ್.