Saturday, October 23, 2010

ಕಾಯಕದಲ್ಲಿ ಅಂಚೆಯಣ್ಣ


ಅಂಚೆಯಣ್ಣನ ಜ್ಞಾಪಕಾರ್ಥವಾಗಿ ೧೯೭೭ರಲ್ಲಿ ಬಿಡುಗಡೆಯಾದ ೨೫ ಪೈಸೆ ಮುಖಬೆಲೆಯ ಅಂಚೆಚೀಟಿ.

ಸಣ್ಣ ಊರಾಗಲಿ, ಗ್ರಾಮವಾಗಲಿ ಅಂಚೆಯಣ್ಣನ ವೃತ್ತಿ ಕೇವಲ ಟಪಾಲು ಬಟವಾಡೆಯಲ್ಲ. ಮದುವೆ, ಹೆರಿಗೆ, ಫಲಿತಾಂಶ, ಕೋರ್ಟು ವಾರಂಟು, ಸಾವು, ರೋಗ, ವೃದ್ಧಾಪ್ಯ ವೇತನ ಎಲ್ಲವನ್ನೂ ಮನೆಮನೆಗೆ ಹಂಚುವ ಆತ ಅಂತರಂಗದ ಸದಸ್ಯ. ಕಾಗದಗಳ ಕಟ್ಟು ಸೈಕಲ್ ಕ್ಯಾರಿಯರ್‌ಗೆ ಸಿಕ್ಕಿಸಿಕೊಂಡು ಸೈಕಲ್‌ನಲ್ಲಿ ಹೊರಟು ಕಾಗದಗಳನ್ನು ವಿತರಿಸುವ ಆತ ಒಂದರ್ಥದಲ್ಲಿ ಸಮಾಜದ ಚಲನಶೀಲ ಬಂಧು.


ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರದ ವಾಸಿ ಹೆಚ್.ಕೆ.ರಮೇಶ್ ಹಳ್ಳಿಹಳ್ಳಿ ತಿರುಗಿ ಪತ್ರ ರವಾನಿಸುವುದು.


ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರದ ಹೆಚ್.ಕೆ.ರಮೇಶ್ ಇಂಥ ಚಲನಶೀಲ ಪೋಸ್ಟ್‌ಮನ್‌ಗಳಲ್ಲಿ ಒಬ್ಬರು. ಇವರು ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ಶಾಖಾ ಪೋಸ್ಟ್ ಮಾಸ್ಟರ್. ಆದರೆ ಅವರ ಕಾರ್ಯ ಎಲ್ಲವನ್ನೂ ಒಳಗೊಂಡಿದೆ. ಟಪಾಲು ಸ್ವೀಕಾರ, ಠಸ್ಸೆ ಹೊಡೆಯುವುದು, ರವಾನೆ, ಹಂಚಿಕೆ ಎಲ್ಲವೂ ಅವರೇ ಮಾಡಬೇಕು. ಜೊತೆಯಲ್ಲಿ ಕವರ್, ಕಾರ್ಡ್, ಸ್ಟಾಂಪ್, ಉಳಿತಾಯ ಖಾತೆ, ಮನಿ ಆರ್ಡರ್, ರಿಜಿಸ್ಟರ್ ಪೋಸ್ಟ್ ಸೇರಿದಂತೆ ಎಲ್ಲವನ್ನೂ ನಿಭಾಯಿಸಬೇಕು.

ಇವರ ಕಾರ್ಯವ್ಯಾಪ್ತಿಗೆ ಕುಂದಲಗುರ್ಕಿ, ದೊಡ್ಡದಾಸೇನಹಳ್ಳಿ, ಚಿಕ್ಕದಾಸೇನಹಳ್ಳಿ, ಚಿಕ್ಕಪಾಪನಹಳ್ಳಿ, ಬಸವನಪರ್ತಿ, ಗೊಲ್ಲಹಳ್ಳಿ, ಸಿದ್ದಾಪುರ, ಗಂಗಾಪುರ ಮತ್ತು ರೊಪ್ಪಾರ್ಲಹಳ್ಳಿ ಬರುತ್ತವೆ. ಬೆಳಿಗ್ಗೆ ಶಿಡ್ಲಘಟ್ಟದ ಕಚೇರಿಯಲ್ಲಿ ಟಪಾಲುಗಳನ್ನು ಪಡೆದು ಕುಂದಲಗುರ್ಕಿಗೆ ಹೋಗಿ ಅಲ್ಲಿಂದ ಸೈಕಲ್ ಏರಿ ತಮ್ಮ ೧೦ ಕಿಮೀ ವ್ಯಾಪ್ತಿಯ ಹಳ್ಳಿಗಳಿಗೆ ತೆರಳಿ ಪತ್ರ ರವಾನಿಸಬೇಕು.


ಭಾರತೀಯ ಅಂಚೆಯು ೧೫೦ ವರ್ಷ ಪೂರೈಸಿದ ನೆನಪಿಗಾಗಿ ೨೦೦೪ರಲ್ಲಿ ಬಿಡುಗಡೆಯಾದ ಅಂಚೆ ಲಕೋಟೆ.

"೩೦೦ ರೂಗಳಿಗೆ ಒಪ್ಪಂದದ ಮೇರೆಗೆ ೧೯೮೬ರಲ್ಲಿ ಕೆಲಸಕ್ಕೆ ಸೇರಿದೆ. ಈಗ ೩೦೦೦ ರೂ ಸಂಬಳ ಬರುತ್ತಿದೆ. ಸೌಲಭ್ಯಗಳಿಗೆ ಸಂಬಂಧಿಸಿದಂತೆ ದೇಶದಾದ್ಯಂತ ಹಲವು ಬಾರಿ ಮುಷ್ಕರಗಳು ನಡೆದರೂ ಹೆಚ್ಚು ಪ್ರಯೋಜನವಾಗಲಿಲ್ಲ. ನಾನಂತೂ ನನ್ನ ಕಾಯಕವನ್ನು ಮುಂದುವರೆಸಿದ್ದೇನೆ" ಎಂದು ಎಚ್.ಕೆ.ರಮೇಶ್ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ.

"ಒಮ್ಮೆ ದೊಡ್ಡದಾಸೇನಹಳ್ಳಿಯ ಶಶಿಕಲಾ ಮತ್ತು ಮಂಜುನಾಥ್ ಎಂಬುವವರಿಗೆ ರಿಜಿಸ್ಟರ್ ಪೊಸ್ಟ್ ಬಂದಿತ್ತು. ಮಧ್ಯಾಹ್ನ ಟಪಾಲು ಪಡೆದು ಹೋಗಿ ಅವರಿಗೆ ತಲುಪಿಸುವಷ್ಟರಲ್ಲಿ ಸಂಜೆಯಾಗಿತ್ತು. ಮಾರನೇ ದಿನವೇ ಅವರಿಗೆ ಸಂದರ್ಶನವಿತ್ತು. ಈಗ ಸಾರಿಗೆ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಜನರು ನನ್ನ ಸೇವೆಯಿಂದ ತೃಪ್ತರಾಗಿದ್ದಾರೆ ಎಂದು ನೊಡಿದಾಗ ಸಂತೋಷವಾಗುತ್ತದೆ. ತಡವಾದರೂ ಪರವಾಗಿಲ್ಲ. ಆ ದಿನವೇ ಸಂಬಂಧಪಟ್ಟವರಿಗೆ ಕಾಗದ ನೀಡಲು ಪ್ರಯತ್ನಿಸುತ್ತೇನೆ" ಎನ್ನುತ್ತಾರೆ ರಮೇಶ್.


ಒಂದು ಲಕ್ಷ ಪೋಸ್ಟ್ ಕಚೇರಿಗಳು ಸ್ಥಾಪನೆಯಾದ ಸವಿನೆನಪಿಗೆ ೧೯೬೮ ರಲ್ಲಿ ಬಿಡುಗಡೆಯಾದ ಅಂಚೆ ಲಕೋಟೆ.

"ಹತ್ತಾರು ಕಿಮೀ ಸೈಕಲ್ ತುಳಿದು ಹಳ್ಳಿ ಹಳ್ಳಿಗೂ ಪತ್ರ ರವಾನಿಸಿ ಹಿಂತಿರುಗಿ ಬರುವಷ್ಟರಲ್ಲಿ ಕತ್ತಲಾಗಿರುತ್ತದೆ. ಊರಿಗೆ ಬರುವ ಬಸ್ ತಪ್ಪಿದರೆ ಸರಹೊದ್ದಿನಲ್ಲಿ ಹಳ್ಳಿಯಲ್ಲಿರುವ ಮನೆಗೆ ನಡೆದು ಬರಬೇಕು. ಇವರ ಕಷ್ಟ ನೋಡಿದರೆ ಯಾರಿಗೂ ಈ ವೃತ್ತಿ ಕೈಗೊಳ್ಳಲು ಇಷ್ಟವಾಗದು. ಸರ್ಕಾರ ಅಂಥವರಿಗೆ ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಕೊಡುವ ಸೌಲಭ್ಯಗಳನ್ನು ನೀಡಬೇಕು" ಎನ್ನುತ್ತಾರೆ ಹನುಮಂತಪುರದ ನಾಗಭೂಷಣ್.

8 comments:

sunaath said...

ಮಲ್ಲಿಕಾರ್ಜುನ,
ಕೆಲವು ಅಪರೂಪದ ಅಂಚೆ ಕವರುಗಳನ್ನು ತೋರಿಸಿದ್ದೀರಿ. ಜೊತೆಗೆ ಉತ್ತಮ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು.

ದೀಪಸ್ಮಿತಾ said...

ನನಗೆ ಅಂಚೆ ಚೀಟಿ ಸಂಗ್ರಹಿಸುವ ಹವ್ಯಾಸವಿದೆ.ಅಂಚೆಯವರ ವೃತ್ತಿ ಬಗ್ಗೆ ಇರುವ ಚೀಟಿಗಳ ಬಗ್ಗೆ ಒಳ್ಳೆ ಮಾಹಿತಿ ನೀಡಿದ್ದೀರಿ. ಮೊಬೈಲ್, ಈ-ಮೇಲ್ ಬಂದ ಮೇಲೆ ಅಂಚೆ ಅಂದರೆ ಏನು ಎಂದು ಕೇಳುವ ಸ್ಥಿತಿ ಬಂದಿದೆ. ಈಗಿನ ಪೀಳಿಗೆಯವರು inland letter, postcardಗಳನ್ನು ನೋಡಿರುವುದೂ ಸುಳ್ಳಿರಬಹುದು

balasubramanya said...

ಅಳಿವಿನ ಅಂಚಿನಲ್ಲಿರುವ ಹಲವು ವೃತ್ತಿ ಪರರನ್ನು ಬ್ಲಾಗ್ ಲೋಕಕ್ಕೆ ಕರೆದು ತರುತ್ತಿರುವಿರಿ ಇದನ್ನು ಮುಂದುವರೆಸಿ. ನಿಮ್ಮ ಪ್ರಯತ್ನ ಚೆನ್ನಾಗಿದೆ.ಅಂಚೆಯಣ್ಣನ ಬಗ್ಗೆ ಮಾಹಿತಿ ಉತ್ತಮವಾಗಿದೆ. ಥ್ಯಾಂಕ್ಸ್.

ಸೀತಾರಾಮ. ಕೆ. / SITARAM.K said...

ಅ೦ಚೆಅಣ್ಣನ ಬಗ್ಗೆ ಚೆನ್ನಾಗಿ ಬರೆದು ಜೊತೆಗೆ ಒಬ್ಬರ ಪರಿಚಯವನ್ನು ಮಡಿದ್ದಿರಾ...
ಅ೦ಚೆಅಣ್ಣರಿಗೆ -ನಮ್ಮ ವ೦ದನೆಗಳು. ಅ೦ಚೆಅಣ್ಣರಿಗೆ ಸೂಕ್ತ ವೇತನ ಒದಗಿಸದೇ ತಮ್ಮ ವೇತನ ಹೆಚ್ಚಿಸಿಕೊಳ್ಳುವಲ್ಲಿ ಕಾಯಿದೆಗೆ ಪಕ್ಷಭೇಧ ಮರೆತು ಒಗ್ಗುಡುವ ರಾಜಕಾರಣಿಗಳಿಗೆ ಧಿಕಾರವಿರಲಿ.

PARAANJAPE K.N. said...

ಅಂಚೆಯಣ್ಣನ ಬಗ್ಗೆ ಮಾಹಿತಿ ಉತ್ತಮವಾಗಿದೆ. ಧನ್ಯವಾದಗಳು

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಉತ್ತಮ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು.

ಕ್ಷಣ... ಚಿಂತನೆ... said...

ಮಲ್ಲಿಕಾರ್ಜುನ ಸರ್‍, ಅಂಚೆಯಣ್ಣನ ನಿರಂತರ ಕಾಯಕದ ಮೇಲೆ ಬೆಳಕು ಚೆಲ್ಲಿದ್ದೀರಿ. ಧನ್ಯವಾದಗಳು. ಎಲ್ಲರೂ ನಿದ್ರಿಸುವಾಗ ಇವರುಗಳೂ ಸಹ (ಸಾರ್‍ಟಿಂಗ್‌ ವಿಭಾಗದವರು) ರಾತ್ರಿಯೆಲ್ಲಾ (ರೈಲಿನಲ್ಲಿ ಬರುವ ಮೇಲ್‌ಗಳನ್ನು) ವಿಂಗಡಿಸುತ್ತಾರೆ. ಇವರೂ ಒಂದು ವಿಧದಲ್ಲಿ ಕ್ಷೇಮ ಸಮಾಚಾರ ಸಲ್ಲಿಸುವ ಯೋಧರು.

ಸ್ನೇಹದಿಂದ,

Gubbachchi Sathish said...

ಕಾಯಕವೇ ಕೈಲಾಸ ಎನ್ನುವ ಅಂಚೆಯ ರಮೇಶಣ್ಣನನ್ನು
ನಾವೂ ಕೇಳಿದೆವು ಎಂದು ಹೇಳಿ.