Saturday, October 9, 2010

ಅವಸಾನದ ಅಂಚಿನಲ್ಲಿ ಲಾಳ ಹಾಕುವ ವೃತ್ತಿ

ಜಾನಪದ ಕಲೆಗಳಂತೆ ಗ್ರಾಮೀಣ ಪ್ರದೇಶದ ಹಲವು ಕಸುಬುಗಳು ಹಾಗೂ ಉಪಕಸುಬುಗಳು ನಿರೀಕ್ಷಿತ ಎಂಬಂತೆ ಬದಲಾಗುತ್ತಿವೆ. ಕೆಲವು ಅವಸಾನದ ಅಂಚಿನಲ್ಲಿದ್ದರೆ, ಇನ್ನೂ ಕೆಲವು ಈಗಾಗಲೇ ಅಸ್ತಿತ್ವ ಕಳೆದುಕೊಂಡಿವೆ. ಅಂಥವುಗಳಲ್ಲಿ ಎತ್ತುಗಳಿಗೆ ಲಾಳ ಹಾಕುವ ವೃತ್ತಿಯೂ ಒಂದು. ಅತ್ಯಾಧುನಿಕ ಸ್ವರೂದಲ್ಲಿ ಹಲವು ಬದಲಾವಣೆಗಳಾದರೂ ಮತ್ತು ಹಲವು ಅಡತಡೆಗಳು ಎದುರಾದರೂ ಈ ವೃತ್ತಿ ಮಾತ್ರ ಇನ್ನೂ ಜೀವಂತವಾಗಿದೆ.


ಶಿಡ್ಲಘಟ್ಟದಲ್ಲಿ ಹಳೇ ರೈಲ್ವೆ ನಿಲ್ದಾಣದ ಬಳಿ ಎತ್ತಿನ ಕಾಲುಗಳಿಗೆ ಹೊಡೆಯುವ ಲಾಳಗಳನ್ನ ಸಿದ್ಧಪಡಿಸುತ್ತಿರುವ ಸಯ್ಯದ್ ರಝಾಕ್.

ಜನರಿಗೆ ಓಡಾಡಲು ಚಪ್ಪಲಿಗಳಿದ್ದಂತೆ ಎತ್ತುಗಳಿಗೆ ಲಾಳಗಳು. ೨೦-೩೦ ದಿನಗಳಿಗೊಮ್ಮೆ ಹೊಸ ಲಾಳ ಹಾಕಿಸಬೇಕು. ಲಾಳಗಳನ್ನು ಸಮರ್ಪಕವಾಗಿ ಹಾಕಲು ಪರಿಣಿತರಿಂದ ಮಾತ್ರ ಸಾಧ್ಯ. ಆ ಪರಿಣತಿ ಸಾಧಿಸಿರುವ ಸೂಲಿಬೆಲೆಯ ಸೈಯದ್ ರಜಾಕ್ ಅವರಿಗಾಗಿ ಎತ್ತಿನ ಒಡೆಯರು ಕಾಯುತ್ತಾರೆ. ಪಟ್ಟಣದ ಹಳೆಯ ರೈಲು ನಿಲ್ದಾಣದ ಬಳಿ ಕಾಯುವ ಜನರು ತಮ್ಮ ಎತ್ತುಗಳಿಗೆ ಹಾಕಿಸಿದ ನಂತರವೇ ಮುಂದಿನ ಕೃಷಿ ಚಟುವಟಿಕೆ ಮತ್ತು ಇತರ ಕಾರ್ಯಗಳತ್ತ ಗಮನಹರಿಸುತ್ತಾರೆ.

ಎತ್ತುಗಳಿಗೆ ಲಾಳ ಹಾಕುವುದು ಸಾಮಾನ್ಯ ಸಂಗತಿಯೇನಲ್ಲ. ಮೊದಲು ಎತ್ತನ್ನು ಒಂದು ಕಡೆ ಮಲಗಿಸಲಾಗುತ್ತದೆ. ಅದರ ಕಾಲಿಗೆ ಹಗ್ಗ ಬಿಗಿದು, ಮೂರು ಜನ ಹಿಡಿದು ಒಂದು ಕಡೆಯಿಂದ ಚಕ್ಕನೆ ಎಳೆಯುವುದರ ಮೂಲಕ ಮಗುವಿನಂತೆ ಮಲಗಿಸಬಲ್ಲ ಚಾಕಚಕ್ಯತೆ ಎಂಥವರನ್ನೂ ಅಚ್ಚರಿಗೊಳಿಸುತ್ತದೆ. ನಂತರ ಸವೆದಿರುವ ಲಾಳಗಳನ್ನು ಮತ್ತು ಅದರ ಮೊಳೆಗಳನ್ನು ಕಿತ್ತು ಬಿಡಿಸುತ್ತಾರೆ. ಒರಟಾದ ಪಾದಗಳನ್ನು ಉಜ್ಜಿ ಹೊಸ ಲಾಳವನ್ನಿಟ್ಟು ಮೊಳೆ ಹೊಡೆಯುತ್ತಾರೆ. ಮೊಳೆ ಹೊಡೆಯುವಾಗ ಕೊಂಚ ಎಚ್ಚರ ತಪ್ಪಿದರೂ ಎತ್ತಿಗೆ ಗಾಯವಾಗುತ್ತದೆ.


ಎತ್ತನ್ನು ಮಲಗಿಸಿ ಕಾಲಿಗೆ ಲಾಳ ಹೊಡೆಯುತ್ತಿರುವುದು.

"ಮೊದಲೆಲ್ಲಾ ಎತ್ತುಗಳನ್ನು ತುಂಬ ಸಾಕುತಿದ್ದರು. ಈಗ ಬಹಳ ಕಡಿಮೆ. ಕೆಲ ದಿನಗಳು ಬೋಣಿಯೇ ಆಗುವುದಿಲ್ಲ. ಒಂದು ಎತ್ತಿನ ನಾಲ್ಕು ಕಾಲುಗಳಿಗೆ ಲಾಳ ಹೊಡೆಯಲು ೨೦೦ ರೂ ಪಡೆಯುತ್ತೇನೆ. ಅದರಲ್ಲಿ ಲಾಳದ ಸಾಮಾನಿನ ಖರ್ಚು ೧೨೦ ರೂಪಾಯಿ ಬರುತ್ತದೆ. ೪೦ ವರ್ಷಗಳಿಂದ ಇದೇ ವೃತ್ತಿಯನ್ನು ಮಾಡುತ್ತಿದ್ದೇನೆ. ಪಟ್ಟಣದಲ್ಲಿ ರೇಷ್ಮೆಗಾಗಿ ನೀರಿನ ಗಾಡಿಗಳು ಇರುವುದರಿಂದ ನಮಗೆ ಕೆಲಸ ಸಿಗುತ್ತಿದೆ. ಸಂಪಾದನೆ ಕಡಿಮೆಯಾದರೂ ಕಲಿತ ವೃತ್ತಿಯನ್ನು ಬಿಡಲಾಗದು" ಎನ್ನುತ್ತಾರೆ ಸೈಯದ್ ರಝಾಕ್.


ಲಾಳ ಹೊಡೆಯಲು ಬಳಸುವ ಉಪಕರಣಗಳು.


"ಈಗ ಎತ್ತುಗಳನ್ನು ಸಾಕುವುದು ಕಷ್ಟ. ಹಳ್ಳಿಗಳಲ್ಲಿ ಕೆಲಸಗಾರರ ಅಭಾವದಿಂದ ಟಿಲ್ಲರ್ ಮತ್ತು ಟ್ರಾಕ್ಟರ್‌ಗಳ ಬಳಕೆ ಹೆಚ್ಚಾಗಿದೆ. ಮೊದಲು ನಮ್ಮ ಗ್ರಾಮದಲ್ಲಿ ೭೫ ಜೊತೆ ಎತ್ತುಗಳಿದ್ದವು. ಆದರೆ ಈಗ ಕೇವಲ ೧೦ ಜೊತೆಯಿವೆ. ಒಟ್ಟು ಕುಟುಂಬದಲ್ಲಿ ಎತ್ತುಗಳನ್ನು ಸಾಕುವವರೇ ಒಬ್ಬರು ಇರುತ್ತಿದ್ದರು. ಅವರನ್ನು ಎತ್ತುಗಳಪ್ಪ ಎಂದು ಕರೆಯುತ್ತಿದ್ದರು. ಆದರೆ ಈಗ ಒಟ್ಟು ಕುಟುಂಬವೂ ಇಲ್ಲ. ಪರಿಸರಕ್ಕೆ ಅನುಕೂಲವಾಗುವಾಗಿರುವ ಎತ್ತುಗಳ ಸಾಕಣಿಕೆಯೂ ಕಡಿಮೆ" ಎಂದು ಚೌಡಸಂದ್ರದ ರೈತ ನಂಜುಡಪ್ಪ ತಿಳಿಸಿದರು.

12 comments:

Dr.D.T.Krishna Murthy. said...

ಅವಸಾನ ಹೊಂದುತ್ತಿರುವ ಎಷ್ಟೋ ಕಸುಬುಗಳಲ್ಲಿ ಒಂದಾದ ಲಾಳ ಹಾಕುವ ಕಸುಬನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.ಇದೆ ರೀತಿ ಅವಸಾನ ಹೊಂದಿರುವ ಇನ್ನೊಂದು ಕಸುಬು ಹಿತ್ತಾಳೆ ಪಾತ್ರೆಗಳಿಗೆ ಕಲಾಯಿ ಹಾಕುವ ಕಸುಬು.ನಮಸ್ಕಾರ.

ಚಿನ್ಮಯ ಭಟ್ said...

ಎತ್ತುಗಳೇ ಕಾಣೆ ಆಗುತ್ತಿರುವಾಗ ಅದರ ಲಾಳದ ಬಗ್ಗೆ ಕೇಳಿ ಒಂದು ಸಲ ಕಣ್ಣರಳಿತು.
ಒಂದು ತಲೆಮಾರಿನ ಮೂಲಾಧಾರವಾದ ಉದ್ಯೋಗವೇ ಅವಸಾನದ ಅಂಚಿನಲ್ಲಿರುವಾಗ,ಅದನ್ನೇ ಆಶ್ರಯಿಸಿದ ಉದ್ಯೋಗಗಳು ಅಳಿಸಿದುವದರಲ್ಲಿ ಸಂಶಯವಿಲ್ಲ .ಇದೊಂದೇ ಅಲ್ಲ ,ಸೆಗಣಿ ಬೆರಣಿ ತಟ್ಟುವುವರು,ಕೋಡುಗಳನ್ನು ಕಟ್ಟುವವರು ಹೀಗೆ ಕೆಲವೊಂದು ಬೆಳಕಿಗೆ ಬಾರದ ಉದ್ಯೋಗಗಳು ಕಣ್ಮರೆಯಾಗುತ್ತಿವೆ.ಕಾರಣ ?
ಸುಲಭ ಉತ್ತರ ಆಧುನೀಕರಣ ,ಜಾಗತೀಕರಣ ಅನ್ನುತ್ತೀರಾ ?
ಅದರದೂ ತಪ್ಪಲ್ಲ .ನಾವು ಮೊದಲು ಮಾಡಿದ ತಪ್ಪನ್ನೆ ಮಾಡುತ್ತಿದ್ದೇವೆ .ಏನಾದರೂ ಹೊಸದನ್ನು ನಮಗೆ ಪರಿಚಿಯಿಸಿದರೆ ಅದನ್ನೇ ಅನುಸರಿಸುತ್ತೇವೆ ,ನಮ್ಮತನವನ್ನು ಮಣ್ಣಿಗೆ ಹಾಕಿ .ಹೌದೆ ?
ಜಾಗತೀಕರಣದ ಮೂಲಕ ನಮಗೆ ಗೊತ್ತಾದ ತಂತ್ರಗಳನ್ನು ನಮ್ಮ ಕೆಲಸಕ್ಕೆ ಅನ್ವಯಿಸುವುದನ್ನು ಬಿಟ್ಟು ,ಅದನ್ನೇ ಅನುಸರಿಸಲು ಹೋದರೆ ಇನ್ನೇನಾದೀತು ಹೇಳಿ ?
ಮತ್ತದೇ ಕೈಗಾರಿಕಾ ಕ್ರಾಂತಿಯ ಪರಿಣಾಮ ಮರುಕಳಿಸುವುದಷ್ಟೇ!!!!!

sunaath said...

ಲಾಳ ಹಾಕುವ ಚಿತ್ರಗಳಿಗಾಗಿ ಹಾಗು ಲೇಖನಕ್ಕಾಗಿ ಧನ್ಯವಾದಗಳು. ಕುದುರೆಟಾಂಗಾಗಳ ಬದಲು ಈಗೀಗ ಆಟೋರಿಕ್ಷಾಗಳೇ ಎಲ್ಲೆಡೆ ತುಂಬಿರುವದರಿಂದ ಕುದುರೆಗೆ ಲಾಳ ಹಾಕುತ್ತಿರುವವರೂ ಸಹ ಇತ್ತಿಚೆಗೆ ಮಾಯವಾಗಿದ್ದಾರೆ.

ಸವಿಗನಸು said...

ಎತ್ತುಗಳನ್ನು ಸಾಕುವುದು ಈಗ ತುಂಬಾ ಕಡಿಮೆ ಆಗಿದೆ...
ಲಾಳ ಹಾಕುವುದು ಪಟ್ಟಣದ ಜನರಿಗೆ ತಿಳಿದಿರುವುದಿಲ್ಲ.....
ಪರಿಚಯಿಸಿದ್ದಕ್ಕೆ ಧನ್ಯವಾದಗಳು

ಪಾಚು-ಪ್ರಪಂಚ said...

ಮಲ್ಲಿಕಾರ್ಜುನ್ ಅವರೇ,

ನಿಮ್ಮ ಬರಹ ಓದಿದ ನನಗೆ ನನ್ನ ಬಾಲ್ಯದ ನೆನಪು ಬಂತು, ನನ್ನ ಊರಿನಲ್ಲಿಯೂ ಪ್ರತೀ ಶನಿವಾರ ಎತ್ತಿಗೆ ಲಾಳ ಹಾಕುವ ಸಾಬರೊಬ್ಬರು ಬರುತ್ತಿದ್ದರು, ನಾನು ಸ್ಕೂಲ್ ಮುಗಿಸಿ ಬಂದು ಅವರ ಬದಿಯಲ್ಲಿ ಕುಳಿತು ನೋಡುತ್ತಿದ್ದೆ..ಗಂಟೆಗಳ ತನಕ. ಆಗ ಎತ್ತನ್ನು ಮಲಗಿಸುವ ಪರಿ ನಿಜಕ್ಕೂ ಸೋಜಿಗ ಅನ್ನಿಸುತಿತ್ತು.
ಈಗ ಎತ್ತೂ ಇಲ್ಲ, ಸಾಹೇಬರೂ ಇಲ್ಲ..!
ನೆನಪಿಸಿದ್ದಕ್ಕೆ ಧನ್ಯವಾದಗಳು.

balasubramanya said...

ನಾನೂ ಸಹ ಬಾಲ್ಯದಲ್ಲಿ ಇವುಗಳನ್ನು ನೋಡುತ್ತಾ ಬೆಳೆದವನೇ.ಎತ್ತುಗಳನ್ನು ಹಕ್ಕಾದ ಕುಣಿಕೆಯಲ್ಲಿ ಕಟ್ಟಿ ಹಾಕಿ ನೆಲಕ್ಕೆ ಕೆಡಗುವಾಗ ಆಗುವ ಸಮಯದಲ್ಲಿ ದೊಪ್ ಎಂದು ಬಿದ್ದ ಎತ್ತುಗಳು ನೋವಿನಿಂದ ಆಕ್ರಂದನ ಮಾಡಿ ಶರಣಾಗುವ ಚಿತ್ರಣ ನನ್ನ ಕಣ್ಮುಂದಿದೆ.ಕಾಲಿನ ಗೊರಸಿಗೆ ಲಾಳ ಕಟ್ಟುವಾಗ ಉಜ್ಜುವ ರೀತಿ, ಕಬ್ಬಿಣದ ಲಾಳ ಕಟ್ಟಲು ಬಳಸುವ ಚೂಪಾದ ಮೊಳೆಗಳು ಅದನ್ನು ಕಟ್ಟಲು ಚಾಕಚಕ್ಯತೆಯಿಂದ ಹೆಣಗಾಡುವ ಲಾಳ ಕಟ್ಟುವ ಜನ , ಕಟ್ಟಿದ ಮೇಲೆ ಹಗ್ಗ ಬಿಚ್ಚಿದಾಗ ಎದ್ದೇಳಲು ಒದ್ದಾಡುವ ಎತ್ತುಗಳು. ಇದು ಮರೆಯಲಾರದ ದೃಶ್ಯ ಗಳು. ಆದರೆ ಅನಿವಾರ್ಯ ವಾಗಿ ವ್ಯವಸಾಯಕ್ಕೆ ಪೂರಕವಾಗಿದ್ದದ್ದು ವಿಶೇಷ.ಲೇಖನ ಚೆನ್ನಾಗಿದೆ.

ಜಲನಯನ said...

ಮಲ್ಲಿ, ಹೇಗಿದ್ದೀರಿ...ನಿಮ್ಮೊಡನೆ ಮಾತನಾಡಲು ಆಗಲೇ ಇಲ್ಲ...ಮತ್ತೆ ನೀವು ಸಿಗಲೂ ಇಲ್ಲ...
ಲಾಳದ ಕಥೆ ಹಳ್ಳಿಯಲ್ಲಿ ನಮಗೆ ಪರಿಚಿತ...ಇದು ಬಹುಶಃ ರೋಡಿನ ಮೇಲೆ ನಡೆದಾಡುವ ಎತ್ತು, ಕುದುರೆ ಕಾಲಿಗೆ ಪೆಟ್ಟಾಗದಿರಲಿ ಎಂದು ಮಾಡಿದ್ದಿರಬೇಕು,,,ಅದಕ್ಕೇ ಹಾರ್ಸ್ ಶೂ ಎಂದೇ ಕರೆಯುವುದು...ಹೌದು ಮತ್ತೆ ನೆನಪನ್ನು ಕೆದಕಿದಂತಾಯ್ತು...

ವನಿತಾ / Vanitha said...

ಲಾಳದ ಬಗ್ಗೆ ಕೇಳಿದ್ದೆ..ನಿಮ್ಮಿಂದ ಹೆಚ್ಚು ತಿಳಿಯುವಂತೆ ಆಯಿತು.

Gubbachchi Sathish said...

ಮನಕಲಕುವ ಚಿತ್ರಗಳೊಂದಿಗೆ ಮಾಹಿತಿ.
ಮತ್ತೆ ಬಾಲ್ಯವನ್ನು ನೆನೆಸಿದವು.

ಧನ್ಯವಾದಗಳು.

ದೀಪಸ್ಮಿತಾ said...

ನಿಜ ಸರ್, ಇಂಥ ಅನೇಕ ವೃತ್ತಿಗಳು ನಿಧಾನವಾಗಿ ಮರೆಯಾಗುತ್ತಿವೆ. ಈಗೀಗ ಹಳ್ಳಿಗಳಲ್ಲೂ ಅಪರೂಪ

ಸುಧೇಶ್ ಶೆಟ್ಟಿ said...

thumba ishtavaayithu e lekhana... laaLa haakuvudhara bagge keLiddashte gottu... nimma lekhana odhi aadhara bagge arivu moodithu...

ಸೀತಾರಾಮ. ಕೆ. / SITARAM.K said...

ಬಾಲ್ಯದಲ್ಲಿ ಲಾಳ ಹಾಕುವದನ್ನು ನೋಡುತ್ತಾ ನಿಲ್ಲುತ್ತಿದ್ದದ್ದು ನೆನಪಿಗೆ ಬ೦ತು.
ನಮ್ಮ ಭಾರತೀಯ ಮುಲದ ಕಸುಗಳನ್ನು, ಅಸುಬುದಾರರನ್ನು ಮತ್ತು ಕಸುಬಿನ ಆಗುಹೋಗು ಸ೦ಕಷ್ಟಗಳನ್ನ್ನ ನೀಡುತ್ತಿರುವ ತಮಗೆ ವ೦ದನೆಗಳು.