
ಇನ್ನೂರು ವರ್ಷಗಳ ಇತಿಹಾಸ ಹೊಂದಿರುವ ಬೇವಿನ ಮರ ಸಾಮಾನ್ಯವಾದುದ್ದೇನಲ್ಲ. ಜೈವಿಕ ವಿಜ್ಞಾನ ವೈವಿಧ್ಯ ಕಾಯ್ದೆ 2002ರ ಕಲಂ 63 (2) (ಜಿ) ಅನ್ವಯ ಕರ್ನಾಟಕ ಜೀವ ವೈವಿಧ್ಯ ಮಂಡಳಿಯೂ ಪರಂಪರೆ ಮರಗಳು (ಹೆರಿಟೇಜ್ ಟ್ರೀಸ್) ಎಂದು ಆಯ್ದುಕೊಂಡಿರುವ ರಾಜ್ಯದ ಹತ್ತು ಮರಗಳಲ್ಲಿ ಈ ವಿಶಿಷ್ಟ ರೀತಿಯ ಮರವೂ ಒಂದು. ಬಯಲುಸೀಮೆ ಮತ್ತು ಬರಡುಸೀಮೆ ಎಂದು ಕರೆಯಲ್ಪಡುವ ಜಿಲ್ಲೆಯಲ್ಲಿ ಈ ಅಪರೂಪದ ಮರ ಇರುವುದು ವಿಶೇಷ.
ಸುಮಾರು ಇಪ್ಪತ್ತು ಅಡಿ ಸುತ್ತಳತೆ ಹೊಂದಿರುವ ಈ ಮರವು ಎಸ್. ವೆಂಕಟಾಪುರ, ಪೂಸಗಾನದೊಡ್ಡಿ, ನೇರಳೇಮರದಹಳ್ಳಿ ಮತ್ತು ಎಸ್. ಗೊಲ್ಲಹಳ್ಳಿ ಎಂಬ ನಾಲ್ಕು ಗ್ರಾಮಗಳಿಗೆ ಸೇರಿದೆ. ಕೆರೆ ಕಟ್ಟೆಯು ಬೆಟ್ಟಗಳ ನಡುವೆ ನಿರ್ಮಾಣಗೊಂಡಿದೆ.

ಸಾಲು ಮರ ನೋಡುವುದೆ ಸೊಗಸು!
ಎಸ್. ವೆಂಕಟಾಪುರ ಗ್ರಾಮದ ಗದ್ದೆಗಳಿಗೆ ಈ ಕೆರೆಯೇ ನೀರಿನ ಮೂಲ. ಈ ಪರಂಪರೆಯ ವೃಕ್ಷದೊಂದಿಗೆ ಇನ್ನೂ ಹತ್ತು ಬೃಹತ್ ಗಾತ್ರದ ಬೇವಿನ ಮರಗಳಿವೆ. ಸುತ್ತಲೂ ಹೊಂಗೆ ತೋಪಿದೆ. ವೃಕ್ಷದ ಕೆಳಗೆ ಮುನೇಶ್ವರನ ಪುಟ್ಟ ದೇಗುಲವಿದೆ.
ಆದ್ದರಿಂದಲೇ ಈ ಕಟ್ಟೆಗೆ ಮುನಿಯಪ್ಪನ ಕಟ್ಟೆ ಎನ್ನಲಾಗುತ್ತದೆ. ಇಲ್ಲಿ ಗಂಗಮ್ಮ ಮತ್ತು ಅಕ್ಕಯ್ಯಗಾರು ಹೆಸರಿನ ಪುಟ್ಟ ಗುಡಿಗಳೂ ಇವೆ. ದೇಗುಲದ ಮುಂಭಾಗದಲ್ಲಿ ದೇವಕಣಿಗಲೆ ಮರವಿದೆ. ಕಟ್ಟೆ ಬಲಭಾಗದಲ್ಲಿ ಬಿಲ್ಲುಬಾಣ ಹಿಡಿದಿರುವ ಮೂವರು ವೀರರ ವೀರಗಲ್ಲು ಇದೆ. ಎಷ್ಟೇ ಬಿರುಬಿಸಿಲಿದ್ದರೂ; ಈ ಪ್ರದೇಶ ಮಾತ್ರ ಸದಾ ತಂಪಾಗಿರುತ್ತದೆ.

"ಪ್ರತಿ ಮಂಗಳವಾರ ಮತ್ತು ಶುಕ್ರವಾರ ದೇವರ ಪೂಜೆಗಾಗಿ ಇಲ್ಲಿ ಜನ ಸೇರುತ್ತಾರೆ. ಪ್ರತಿ ವರ್ಷ ಏಪ್ರಿಲ್ನಲ್ಲಿ ನಾಲ್ಕು ಗ್ರಾಮಗಳ ಜನರು ಜಾತ್ರೆ ನಡೆಸುತ್ತಾರೆ. ಇಷ್ಟಾರ್ಥ ನೆರವೇರುತ್ತವೆ ಎಂಬ ನಂಬಿಕೆಯಿಂದ ಅನೇಕ ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ಕಟ್ಟೆ ಮೇಲಿರುವ ಮರಗಳ ಕಟ್ಟಿಗೆಗಳನ್ನು ಯಾರೂ ತೆಗೆದುಕೊಂಡು ಹೋಗಬಾರದು. ಕೆಡುಕಾಗುತ್ತದೆ ಎಂಬ ನಂಬಿಕೆ ಹಲವು ಜನರಲ್ಲಿದೆ" ಎಂದು ದೇವಾಲಯದ ಅರ್ಚಕ ಗುರುಮೂರ್ತಿ ತಿಳಿಸಿದರು.

"ಏಳು ಬೆಟ್ಟಗಳನ್ನು ನಲ್ಲಕೊಂಡಲು ಎನ್ನುತ್ತಾರೆ. ಇಲ್ಲಿರುವ ಮೂರು ಕೆರೆಗಳನ್ನು ಮೂವರು ವೇಶ್ಯೆಯರು ಕಟ್ಟಿಸಿದ್ದು. ತಿಪ್ಪಸಾನಿಕೆರೆ, ರಾಜಸಾನಿಕೆರೆ ಮತ್ತು ನಲ್ಲಸಾನಿಕೆರೆ ಎಂದು ಅವರ ಹೆಸರಿನಿಂದಲೇ ಕರೆಯಲ್ಪಡುತ್ತವೆ.ಈ ಬೆಟ್ಟಗಳಲ್ಲಿ ಚಿರತೆ, ಜಿಂಕೆ, ಮೊಲ, ಕರಡಿ, ನರಿ ಮುಂತಾದ ಪ್ರಾಣಿಗಳು ಇದ್ದವು. ತಿಪ್ಪಸಾನಿಕೆರೆ ಅಥವಾ ತಿಪ್ಪರಾಸಕೆರೆಯ ಕಟ್ಟೆ ಮೇಲಿರುವ ಬೇವಿನ ಮರಗಳನ್ನು ನಾನು ಚಿಕ್ಕಂದಿನಿಂದಲೇ ನೋಡಿದ್ದೇನೆ. ಕೆರೆಗಳನ್ನು ಕಟ್ಟಿದ ಮಹಾತಾಯಂದಿರೇ ಇವನ್ನೂ ನೆಟ್ಟಿರಬೇಕು" ಎನ್ನುತ್ತಾರೆ ಗ್ರಾಮದ 94ರ ವಯೋವೃದ್ಧ ನರಸರಾಮಪ್ಪ.

"ಇಲ್ಲಿ ಸುತ್ತ ಇರುವ ಬೆಟ್ಟಗಳೆಲ್ಲ ಚಾರಣಕ್ಕೆ ಯೋಗ್ಯವಾಗಿವೆ. ಒಂದೊಂದರಲ್ಲೂ ಒಂದೊಂದು ವಿಶೇಷವಿದೆ. ಪರಂಪರೆ ವೃಕ್ಷ ಎಂದು ಸರ್ಕಾರ ಹೆಸರಿಸಿರುವುದರಿಂದ ಪ್ರವಾಸೋದ್ಯಮ ಇಲಾಖೆ ಸೂಕ್ತವಾಗಿ ಕೆಲಸ ಮಾಡಿದರೆ ಈ ಪ್ರದೇಶದ ಅಭಿವೃದ್ಧಿ ಮತ್ತು ಸಂರಕ್ಷಣೆಯಾಗುತ್ತದೆ. ಸ್ಥಳೀಯರಿಗೆ ಉದ್ಯೋಗ ದೊರಕುತ್ತದೆ. ತಾಲ್ಲೂಕಿನ ಮೂಲೆಯಲ್ಲಿರುವ ಈ ಪ್ರದೇಶ ಮುಂದುವರೆಯಲು ಸಾಧ್ಯವಾಗುತ್ತದೆ" ಎಂದು ಹಿರಿಯ ಶಿಕ್ಷಕ ಕೆ.ಎನ್. ಲಕ್ಷ್ಮೀನರಸಿಂಹಯ್ಯ ಹೇಳುತ್ತಾರೆ.
ಮರಗಳಿಗೆ ಕೊಡಲಿ?
ಹತ್ತು ಮರಗಳಿಂದ ಕೂಡಿರುವ ಈ ಸುಂದರ ಆವರಣಕ್ಕೆ ಕೆಲವರು ಕೆಡಕು ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮುನೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ನೆಪದಲ್ಲಿ ಐದು ಮರ ಕಡಿಯಲು ಚಿಂತನೆ ನಡೆಸಲಾಗುತ್ತಿದೆ ಎಂಬ ಗುಲ್ಲು ಎಲ್ಲೆಡೆ ಕೇಳಿ ಬರುತ್ತಿದೆ.
ಹತ್ತು ಮರಗಳ ಮೇಲೆ ಅಪಾರ ಭಕ್ತಿ ಮತ್ತು ಪ್ರೀತಿ ಹೊಂದಿರುವ ಇಲ್ಲಿನ ಗ್ರಾಮಸ್ಥರು ಯಾವುದೇ ಮರ ಕಡಿಯಬಾರದು. ಹಲವು ವರ್ಷಗಳಿಂದ ಇರುವ ಈ ಮರಗಳನ್ನು ಸಂರಕ್ಷಿಸಬೇಕು. ಉತ್ತಮ ಪರಿಸರದ ಜೀವಸೆಲೆಯಾಗಿರುವ ಮರಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎನ್ನುತ್ತಾರೆ.
ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಐದು ಮರ ಮಾರಲಾಗಿದೆಯಂತೆ. ಮುಂದಿನ ದಿನಗಳಲ್ಲಿ ಅವುಗಳನ್ನು ಕಡಿಯುತ್ತಾರಂತೆ. ಇದಕ್ಕೆ ನಾವು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.