Tuesday, July 6, 2010

ಕಮ್ ಸೆಪ್ಟೆಂಬರ್



ಸುಮಾರು ಮೂವತ್ತು ವರ್ಷಗಳ ಹಿಂದೆ ನನ್ನ ತಂದೆ ಮನೆಗೆ ಒಂದು ಗ್ರಾಮಾಫೋನ್ ತಂದಿದ್ದರು. ಗ್ರಂಡಿಕ್ ಎನ್ನುವ ಜರ್ಮನ್ ಕಂಪನಿಯದ್ದು. ಆಗ ಅದಕ್ಕೆ ಒಂದೂವರೆ ಸಾವಿರ ಕೊಟ್ಟಿದ್ದರಂತೆ. ಸಿಕ್ಕಾಪಟ್ಟೆ ದೊಡ್ಡದಿತ್ತು. ಅದರ ಒಂದು ಭಾಗದಲ್ಲಿ ರೇಡಿಯೋ ಇದ್ದರೆ ಇನ್ನೊಂದು ಭಾಗದಲ್ಲಿ ಗ್ರಾಮಾಫೋನ್ ಇತ್ತು. ಒಮ್ಮೆಗೇ ಆರು ಪ್ಲೇಟ್ ಹಾಕಬಹುದಾಗಿತ್ತು. ಒಂದಾದ ನಂತರ ಒಂದು ಪ್ಲೇ ಆಗುತ್ತಿತ್ತು. ಬೆಳಿಗ್ಗೆ ಐದೂವರೆಗೆಲ್ಲಾ ನನ್ನಜ್ಜಿ ದೇವರ ಹಾಡುಗಳನ್ನು ಹಾಕುತ್ತಿದ್ದರು. ನಂತರ ನನ್ನಮ್ಮ ಆಗಿನ ಕಾಲದ ಕನ್ನಡ, ತೆಲುಗು ಹಾಗೂ ಹಿಂದಿ ಚಿತ್ರಗೀತೆಗಳನ್ನು ಹಾಕುತ್ತಿದ್ದರು. ಈಗಲೂ ಗ್ರಾಮಾಫೋನ್‌ನಲ್ಲಿ ಕೇಳಿದ ಹಾಡುಗಳನ್ನು ಕೇಳಿದಾಗ ಅಂದಿನ ದಿನಗಳು ನೆನಪಾಗುತ್ತವೆ.



ಆ ಗ್ರಾಮಾಫೋನ್ ಪ್ಲೇಟುಗಳಲ್ಲಿ ಪುಟ್ಟ ಅಪರಿಚಿತ ಪ್ಲೇಟೊಂದಿತ್ತು. ಅದರಲ್ಲಿ ಕೇವಲ ಮ್ಯೂಜಿಕ್ ಮಾತ್ರ ಬರುತ್ತಿತ್ತು. ನನ್ನಮ್ಮನಿಗೆ ಇಷ್ಟವಾದ ಪ್ಲೇಟ್‌ಗಳಲ್ಲಿ ಅದೂ ಒಂದು. ಅದರ ಸಂಗೀತ ಎಲ್ಲರಿಗೂ ಇಷ್ಟವಾಗುತ್ತಿತ್ತು. ಅಮ್ಮ ಅದನ್ನು "ಕಮ್ ಸೆಪ್ಟೆಂಬರ್" ಎಂದು ಕರೆಯುತ್ತಿದ್ದರು. ನನಗೆ ಸರಿಕಾಣುತ್ತಿರಲಿಲ್ಲ. ನಮ್ಮ ಮಗುವಿಗೆ ಫಾರಿನ್ ಹೆಸರಿಟ್ಟಂತೆ ಭಾಸವಾಗುತ್ತಿತ್ತು.



ಮುಂದೆ ಟೇಪ್‌ರೆಕಾರ್ಡರ್ ಬಂದು ಗ್ರಾಮಾಫೋನ್ ಮೇಲೆ ಕುಳಿತುಕೊಂಡಿತು. ಗ್ರಾಮಾಫೋನ್ ಬಳಕೆಯೇ ನಿಂತುಹೋಯಿತು. ಟೀವಿ ಕೂಡ ಜೀವನದ ಭಾಗವಾಯಿತು. ಅದರೊಂದಿಗೆ ವಿಸಿಆರ್ ಕೂಡ ಆಗಮಿಸಿತು. ಕಾಲಾಯ ತಸ್ಮೈ ನಮಃ.


ಮಾಧುರಿ ದೀಕ್ಷಿತ್ ಮತ್ತು ಸಂಜಯ್ ಕಪೂರ್ ನಟಿಸಿರುವ "ರಾಜ" ಎನ್ನುವ ಚಿತ್ರ ೧೯೯೫ ರಲ್ಲಿ ಬಿಡುಗಡೆಯಾಯಿತು. ಆ ಸಮಯದಲ್ಲಿ ಟೀವಿಯಲ್ಲಿ ಆ ಚಿತ್ರದ ಹಾಡೊಂದು ಬಂತು. "ನಜ್‌ರೇ ಮಿಲೀ... ದಿಲ್ ದಡ್‌ಕಾ... ಮೇರೆ ದಡ್‌ಕನ್ ನೇ ಕಹಾ... ಲವ್ ಯೂ ರಾಜಾ..." ಎಂಬ ಹಾಡು ಬರುತ್ತಿದ್ದಂತೆಯೇ ನನ್ನಜ್ಜಿ, "ಅರೇ.. ಕಮ್ ಸೆಪ್ಟೆಂಬರ್" ಅಂದರು. ಅಡುಗೆ ಮನೆಯಿಂದ ಹಾಡು ಕೇಳಿಸಿಕೊಂಡು ನನ್ನಮ್ಮನೂ ಹೊರಗೆ ಬಂದು, "ಕಮ್ ಸೆಪ್ಟೆಂಬರ್ ಮ್ಯೂಜಿಕ್ಕಲ್ವಾ?" ಅಂದರು. ಕಮ್ ಸೆಪ್ಟೆಂಬರ್‌ನ ಟ್ಯೂನ್ ಬಳಸಿದ್ದರಿಂದಾಗಿ ಹಿಂದಿ ಬರದಿದ್ದರೂ ಎಂಬತ್ತನಾಲ್ಕು ವರ್ಷದ ನನ್ನಜ್ಜಿಗೆ ಈಗಲೂ ಈ ಹಿಂದಿ ಹಾಡೆಂದರೆ ಬಹಳ ಇಷ್ಟ!
ನನಗೆ ಹೆಣ್ಣು ಕೊಟ್ಟ ಮಾವ ಫಿಲಂ ಪ್ರೇಮಿ. ಬೆಂಗಳೂರಿನ ಮೊಟ್ಟಮೊದಲ ಥಿಯೇಟರ್ ಪ್ಲಾಜಾ(ಈಗಿಲ್ಲ ಬಿಡಿ!) ದಲ್ಲಿ ಮೊಟ್ಟಮೊದಲ ಚಿತ್ರದಿಂದ ಎಲ್ಲಾ ಚಿತ್ರಗಳನ್ನೂ ನೋಡಿದಂತಹ ಭೂಪರು. ಅವರ ಬಳಿ ಮಾತಾಡುವಾಗ ಈ ’ಕಮ್ ಸೆಪ್ಟೆಂಬರ್’ ವಿಚಾರ ಬಂತು. ಆಗವರು, "ಅದೊಂದು ಅದ್ಭುತವಾದ ಚಿತ್ರ. ಸಿಡಿ ಸಿಕ್ಕರೆ ನೋಡಿ. ನನಗೂ ತಂದುಕೊಡಿ" ಅಂದರು. ಅದೊಂದು ಆಲ್ಬಮ್ ಅಥವಾ ಹಾಡಿನ ಸಾಲಿರಬಹುದೆಂದು ಭಾವಿಸಿದ್ದ ನನಗೆ ಚಿತ್ರವೆಂದು ತಿಳಿದು ಖುಷಿ ಮತ್ತು ಕುತೂಹಲ ಎರಡೂ ಉಂಟಾಯಿತು.
ಅಂತೂ "ಕಮ್ ಸೆಪ್ಟೆಂಬರ್" ಚಿತ್ರದ ಡಿವಿಡಿ ಕೊಳ್ಳುವಲ್ಲಿ ಯಶಸ್ವಿಯಾದೆ. ವಿಚಿತ್ರವೆಂದರೆ ಇಷ್ಟೆಲ್ಲಾ ಆಗುವಷ್ಟರಲ್ಲಿ ಅಷ್ಟೊಂದು ಅದರ ಸಂಗೀತವನ್ನು ಇಷ್ಟಪಡುತ್ತಿದ್ದ ನನ್ನ ತಾಯಿಯೇ ಇಲ್ಲ ಈ ಚಿತ್ರವನ್ನು ನೋಡಲು. ವಯಸ್ಸಾದ ನನ್ನಜ್ಜಿಗೆ ಅರ್ಥವಾಗದ ಇಂಗ್ಲೀಷ್ ಚಿತ್ರಕ್ಕಿಂತ ಯಾವಾಗಲಾದರೊಮ್ಮೆ ಈ ಸಂಗೀತದ ಸೊಲ್ಲು ಕೇಳಿಸಿದರೆ ಸಾಕು, ದಿಲ್ ಖುಷ್!!

* * * * *



"ಹೆಣ್ಣು ಗಂಡಿನಿಂದ ಗೌರವವನ್ನು ಬಯಸುತ್ತಾಳೆ.
ಹೆಣ್ಣು ಸುಲಭವಾಗಿ ಗಂಡಿಗೆ ದೊರಕಿದರೆ ಆಕೆಯನ್ನು ಆತ ಗಂಭೀರವಾಗಿ ಪರಿಗಣಿಸುವುದಿಲ್ಲ... ನಿಶ್ಚಿತಾರ್ಥ, ಮದುವೆ, ಮನೆ ಮತ್ತು ಮಕ್ಕಳು ಎಂಬುದೆಲ್ಲ ಬೇಕೆನ್ನುವುದಿದ್ದರೆ ಹೆಣ್ಣು ತನ್ನ ಆದರ್ಶಗಳನ್ನು ಉಚ್ಛಸ್ಥಾಯಿಯಲ್ಲಿಟ್ಟುಕೊಳ್ಳಬೇಕು...
ಶಯನಗೃಹವೆಂಬುದು ಮದುವೆಯ ದಿರಿಸಿನಂತೆ. ಗಂಡು ಮದುವೆಗೆ ಮುಂಚೆ ಆ ದಿರಿಸಿನಲ್ಲಿ ಹೆಣ್ಣನ್ನು ನೋಡಬಾರದು..."

ಇಂಥಹ ಸಾರ್ವಕಾಲಿಕವಾದ ಮಾತುಗಳನ್ನು ಆಡುವುದು ೧೯೬೧ರಲ್ಲಿ ಬಿಡುಗಡೆಯಾದ "ಕಮ್ ಸೆಪ್ಟೆಂಬರ್" ಚಿತ್ರದ ನಾಯಕ ರಾಬರ್ಟ್. ಹಾಗಂತ ಇದೇನೂ ನೀತಿ ಬೋಧನೆಯ ಚಿತ್ರವಲ್ಲ. ಪ್ರೇಮ, ಪ್ರೀತಿಯ ಅಪ್ಪಟ ಹಾಸ್ಯಮಯ ಚಿತ್ರ.



ಚಿತ್ರದ ನಾಯಕ ರಾಬರ್ಟ್ ಟಾಲ್ಬೋಟ್ ಒಬ್ಬ ಲಕ್ಷಾಧೀಶ್ವರ ಅಮೇರಿಕನ್. ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳು ಇಟಲಿಯ ನದಿ ದಂಡೆಯಲ್ಲಿರುವ ತನ್ನ ಬಂಗಲೆಯಲ್ಲಿ ತನ್ನ ರೋಮನ್ ಗೆಳತಿ ಲೀಸಾಳೊಂದಿಗೆ ಕಳೆಯುವುದು ರೂಢಿ. ಎಲ್ಲ ಎಡವಟ್ಟುಗಳ ಪ್ರಾರಂಭವಾಗುವುದು ಆತ ಇದ್ದಕ್ಕಿಂದ್ದಂತೆ ಜುಲೈ ತಿಂಗಳಿನಲ್ಲಿ ಆಗಮಿಸಿದಾಗ!




ವರ್ಷದ ಕೇವಲ ಒಂದು ತಿಂಗಳಿನ ಅವಧಿಯ ಸಂಬಂಧದ ಅನಿಶ್ಚಿತತೆಯನ್ನು ಮನಗಂಡು ಲೀಸಾ ಒಬ್ಬ ಇಂಗ್ಲೀಷಿನವನನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದಾಗ ರಾಬರ್ಟ್‌ನ ಫೋನ್ ಬರುತ್ತದೆ. ಅವನ ಜೇನಿನಂತೆ ಮಧುರವಾದ ಪ್ರೀತಿಬೆರೆತ ದನಿಗೆ ಕರಗಿ ಮದುವೆ ದಿರಿಸನ್ನು ಕಿತ್ತೊಗೆದು ಓಡುತ್ತಾಳೆ. ಇತ್ತ ಅವನ ಬಂಗಲೆಯನ್ನು ನೋಡಿಕೊಳ್ಳುವ ಮೋರಿಸ್ ಒಡೆಯನಿರದ ಬಂಗಲೆಯನ್ನು ವಸತಿಗೃಹವನ್ನಾಗಿಸಿರುತ್ತಾನೆ! ಸೆಪ್ಟೆಂಬರಿನಲ್ಲಿ ಬರುವ ರಾಬರ್ಟ್ ಜುಲೈನಲ್ಲಿ ಬಂದಾಗ ಅವನ ಪಜೀತಿ ಹೇಳತೀರದು. ವಸತಿಗೃಹವೆಂದು ತಿಳಿದು ಉಳಿದಿರುವ ಆರು ಹದಿಹರೆಯದ ಹುಡುಗಿಯರು ಜೊತೆಗೊಬ್ಬ ವಾರ್ಡನ್‌ರನ್ನು ಸಂಭಾಳಿಸಲು ಅವರ ಬಳಿಯೊಂದು ಸುಳ್ಳು ಯಜಮಾನನ ಬಳಿಯೊಂದು ಸುಳ್ಳು... ಹೀಗೆ ಸುಳ್ಳಿನ ಸರಮಾಲೆ ಬೆಳೆದು ಸಿಕ್ಕಿಬೀಳುತ್ತಾನೆ. ಅಷ್ಟರಲ್ಲಿ ಲೀಸಾಳ ಆಗಮನವಾಗುತ್ತದೆ. ತನ್ನ ಮತ್ತು ಲೀಸಾಳ ನಡುವೆ ಶಿವಪೂಜೆಯಲ್ಲಿ ಆಗಮಿಸಿದ ಕರಡಿಗಳಂತಿರುವ ಹುಡುಗಿಯರನ್ನು ಆಚೆ ಕಳಿಸಲು ಮೋರಿಸ್‌ಗೆ ಆಜ್ಞಾಪಿಸುತ್ತಾನೆ. ವಸತಿಗೃಹವೆಂದು ತಿಳಿದು ಉಳಿದಿರುವ ಹುಡುಗಿಯರನ್ನು ಹೊರಕಳಿಸಬೇಕೆಂದಿರುವಾಗ, "ಪ್ರಣಯ ಪಕ್ಷಿ"ಗಳಂತೆ ನಾವಿನ್ನು ಹಾರಾಡಬಹುದು ಎಂದು ಕನಸುಕಾಣುತ್ತಾ ರಾಬರ್ಟ್ ಬಿಚ್ಚಿದ ಶಾಂಪೇನ್ ಬಾಟಲ್‌ನ ಬಿರಡೆ ತುಳಿದು ಅವರ ವಾರ್ಡನ್ ಬಿದ್ದು ಲೆಕ್ಕಾಚಾರವೆಲ್ಲಾ ಉಲ್ಟಾ ಹೊಡೆಯುತ್ತದೆ. ನಾಲ್ವರು ಮೆಡಿಕಲ್ ಕಾಲೇಜಿನ ಹುಡುಗರ ಆಗಮನದೊಂದಿಗೆ ಪರಿಸ್ಥಿತಿ ಬಿಗಡಾಯಿಸುತ್ತದೆ.



ಮೆಡಿಕಲ್ ವಿದ್ಯಾರ್ಥಿ ಟೋನಿ ಮತ್ತು ರಾಬರ್ಟ್‌ನ ಮನೆಯಲ್ಲಿ ಉಳಿದಿರುವ ಸ್ಯಾಂಡಿ ಎಂಬ ಹುಡುಗಿಯ ನಡುವೆ ಪ್ರೇಮಾಂಕುರ, ರಾಬರ್ಟ್ ಮತ್ತು ಲೀಸಾಳ ನಡುವೆ ಪ್ರೇಮ ನಿವೇದನೆ ಇವುಗಳ ನಡುವೆ ಸೂತ್ರದಾರನಂತೆ ಕೆಲಸ ಮಾಡುವ ಮೋರಿಸ್ ನಮ್ಮನ್ನು ತುದಿಗಾಲಿನಲ್ಲಿ ನಿಂತು ಆನಂದಿಸುವಂತೆ ಮಾಡುತ್ತಾರೆ.



ಚಿತ್ರವನ್ನು ನೋಡುವ ನಮಗೇ ಇಷ್ಟು ಆನಂದವಾಗುವುದಾದರೆ ಚಿತ್ರ ತಂಡಕ್ಕೆ ಹೇಗಿರಬೇಕೆಂದು ನೋಡಿದರೆ, ಚಿತ್ರದ ಶೂಟಿಂಗ್ ಮುಗಿದು ೧೦ ದಿನಕ್ಕೆಲ್ಲಾ ಇದರಲ್ಲಿ ಯುವ ಪ್ರೇಮಿಗಳಾಗಿ ನಟಿಸಿದ್ದ ಬಾಬ್ಬಿ ಡ್ಯಾರಿನ್ ಮತ್ತು ಸ್ಯಾಂಡ್ರಾ ವಿವಾಹವಾದರಂತೆ!
ಚಿತ್ರದುರ್ಗಕ್ಕೆ ಹೋದಾಗ ಈಗಲೂ ನಾವು ನಾಗರಹಾವು ಚಿತ್ರದಲ್ಲಿ ಆರತಿ ಇಲ್ಲಿ ಕುಣಿದದ್ದು, ವಿಷ್ಣುವರ್ಧನ್ ಇಲ್ಲಿ ನಿಂತಿದ್ದು ಎಂದೆಲ್ಲಾ ಮಾತನಾಡುವಂತೆ "ಕಮ್ ಸೆಪ್ಟೆಂಬರ್" ಚಿತ್ರದ ಇಟಲಿಯ ಪೋರ್ಟೋಫಿನೋ ಬಳಿಯಿರುವ ಬಂಗಲೆಯು ಶೂಟಿಂಗ್ ಮಾಡಿದ್ದರಿಂದಾಗಿ ಪ್ರಸಿದ್ದಿ ಪಡೆದು ಪ್ರವಾಸಿ ಸ್ಥಳವಾಗಿದೆ.
ಇಂಥ ಚಂದದ ಚಿತ್ರವನ್ನು ನಮ್ಮ ಬಾಲಿವುಡ್‌ನವರು ರೀಮೇಕ್ ಮಾಡಿದ್ದಾರೆ. ೧೯೮೦ರಲ್ಲಿ "ಏಕ್ ಬಾರ್ ಕಹೋ" ಎಂಬ ಈ ಚಿತ್ರದಲ್ಲಿ ಬಿಸ್ವಜಿತ್ ಮತ್ತು ಶಬಾನಾ ಅಜ್ಮಿ ನಟಿಸಿದ್ದರು.

23 comments:

Guruprasad said...

ವೆರಿ ಇಂಟರೆಸ್ಟಿಂಗ್.... ತುಂಬಾ ಚೆನ್ನಾಗಿ ಇದೆ.. ನನಗೂ ಸಿಕ್ಕರೆ ನೋಡುತ್ತೇನೆ,, "come september "
ಗ್ರಾಮ ಫೋನ್ ಬಗ್ಗೆ ಹೇಳಿರುವುದು ಇಷ್ಟ ಆಯಿತು....

ಕ್ಷಣ... ಚಿಂತನೆ... said...

ಮಲ್ಲಿಕಾರ್ಜುನ ಅವರೆ, ಒಂದು ಗ್ರಾಮಾಫೋನ್‌. ಅದರ ಚರಿತ್ರೆ ಹಳೆಯ ನೆನಪುಗಳು, ಒಂದು ಹಾಡಿನ ಟ್ಯೂನ್‌ನಿಂದ ಒಂದು ಸಿನೆಮಾದ ಕಥೆ.. ಎಲ್ಲ ಸೊಗಸಾಗಿದೆ.
ವಿಷಯ ವಿನಮಯ ಮಾಡಿಕೊಂಡಿದ್ದಕ್ಕಾಗಿ ಧನ್ಯವಾದಗಳು.

ಸ್ನೇಹದಿಂದ,

shridhar said...

nice one .. liked it ...

Ittigecement said...

ಮಲ್ಲಿಕಾರ್ಜುನ್..


ಫೋಟೊಗಳು...
ನಿಮ್ಮ ವಿವರಣೆಗಳು.. ಬಹಳ ಸೊಗಸಾಗಿದೆ..

ಸೀನೇಮಾ ನೋಡಲೇ ಬೇಕು ಎನ್ನುವ ಕಿಚ್ಚು ಹೊತ್ತಿಸುವಲ್ಲಿ ಸಫಲವಾಗಿದೆ..

ನಾನಂತೂ ಈ ಸಿನೇಮಾ ನೋಡಲೇ ಬೇಕು...

ಮನದಾಳದಿಂದ............ said...

nice information......
and nice pics.

UMESH VASHIST H K. said...

ಮಲ್ಲಿ ಅವ್ರಿಗೆ ನಮಸ್ಕಾರ, ಬರಹ ಚೆನ್ನಾಗಿದೆ, ಒಂದು ಪ್ರಣಯ ಕಥೆ ಯನ್ನು ಓದಿ ಖುಷಿ ಆಯ್ತು, ವಂದನೆಗಳು

Sumitraa lakshmipura said...

ಬರಹ ಚೆನ್ನಾಗಿದೆ.ಬಾಲ್ಯದ ನೆನಪು ಯಾವಾಗಲೂ ಸುಂದರ. ಸಿನೆಮಾ ನನಗು ನೋಡೋಣ ಅನ್ನಿಸಿದೆ.
ಸುಮಿತ್ರಾ.

ಸವಿಗನಸು said...

ಒಳ್ಳೆ ಮಾಹಿತಿ...
ಸೊಗಸಾದ ಚಿತ್ರಗಳು...

Jayalaxmi said...

ನಿಮ್ಮ ಮನೆಯಲ್ಲಿ ಗ್ರಾಮಾಫೋನ್ ಇರುವುದನ್ನು ಕೇಳಿ ಖುಷಿ ಆಯ್ತು. ನಿಜ ಹೇಳಬೇಕೆಂದರೆ ನನಗೆ ಅದ್ಯಾಕೊ ಗೊತ್ತಿಲ್ಲ, ಗ್ರಾಮಾಫೋನಿನೆಡೆಗೆಗೊಂದು ವಿಚಿತ್ರ ಆಕರ್ಷಣೆ ಇದೆ. ’ಕಮ್ ಸೆಪ್ಟೆಂಬರ್’ ಕಥೆ ಸ್ವಾರಸ್ಯೆವೆನಿಸಿದರೂ ಅದಕ್ಕೊ ಮಿಗಿಲಾಗಿ ನಿಮ್ಮ ತಾಯಿಯವರ ಮತ್ತು ಅಜ್ಜಿಯ ಹಾಡಿನ ಆಸಕ್ತಿ ಮತ್ತು ’ಕಮ್ ಸೆಪ್ಟೆಂಬರ್’ ಬಗೆಗಿನ ಒಲವು ಹೆಚ್ಚಿನ ಮುದ ನೀಡಿತು.:)

ಬಾಲು said...

nice information, even i would like to watch that movie. :)

ಸೀತಾರಾಮ. ಕೆ. / SITARAM.K said...

ಚೆ೦ದದ ಚಿತ್ರವೊ೦ದರ ಪರಿಚಯವನ್ನೂ ಚೆನ್ನಾಗಿ ಗ್ರಾಮಫೋನೆ ಮುಖಾ೦ತರ ಪ್ರಾರ೦ಬಿಸಿ ಮಾಡಿ ಕೊಟ್ಟಿದ್ದಿರಾ... ಧನ್ಯವಾದಗಳು.

sunaath said...

Come Septemberದ ಟ್ಯೂನ್ ತುಂಬ ಆಕರ್ಷಕ. ಹಿಂದಿ ಸಿನೆಮಾದಲ್ಲಿ ಆ ಟ್ಯೂನ್ ಬಳಸಿಕೊಂಡಾಗ ಆ ಹಾಡೂ ಸಹ ಆಕರ್ಷಕವಾಯಿತು. ನಿಮ್ಮ narration ಸಹ ಆ ಟ್ಯೂನಿನಷ್ಟೇ
delightful ಆಗಿದೆ.

PARAANJAPE K.N. said...

ಮಾಹಿತಿಯುಕ್ತವಾಗಿದೆ. ನಾನು ಕೂಡ ಚಿಕ್ಕವನಿದ್ದಾಗ ಗ್ರಾಮೋಫೋನ್ ನೋಡುತ್ತಾ, ಕೇಳುತ್ತ ಬೆಳೆದವನು. ಕಂ ಸೆಪ್ಟೆ೦ಬರ್ ನೋಡಬೇಕೆನಿಸಿದೆ, ನಿಮ್ಮ ಬರಹ ಓದಿ. ಚೆನ್ನಾಗಿದೆ.

ಸಾಗರದಾಚೆಯ ಇಂಚರ said...

ತುಂಬಾ ಉಪಯುಕ್ತ ಮಾಹಿತಿ
ಖಂಡಿತ ನೋಡುತ್ತೇನೆ

ವನಿತಾ / Vanitha said...

Very Interesting:)ಗ್ರಾಮ ಫೋನ್ ಮೂಲಕ ಆರಂಭ ಮಾಡಿ, ಒಳ್ಳೆಯ ಸಿನಿಮಾದ ಬಗ್ಗೆ ತಿಳಿಸಿದ್ದೀರಿ,
ನೋಡುವಂತೆ ಕುತೂಹಲ ಹುಟ್ಟಿಸಿದ್ದೀರಿ..ಸಿಕ್ಕರೆ ಕಂಡಿತ ನೋಡುತ್ತೇನೆ..ಅಂದ ಹಾಗೆ ನಾನು ಗ್ರಾಮ ಫೋನ್ನ್ನು
ನೋಡೇ ಇಲ್ಲಾ!!

ಎಚ್. ಆನಂದರಾಮ ಶಾಸ್ತ್ರೀ said...

ದಶಕಗಳ ಕೆಳಗೆ, ಸಿನಿಮಾ ಎಂಬುದು ನನಗೆ ಗಗನಕುಸುಮವಾಗಿದ್ದ ದಿನಗಳಲ್ಲಿ, ಆ ಚಿತ್ರದ ಎರಡು ಪ್ರಸಿದ್ಧ ಜಿಂಗಲ್‌ಗಳಿಗಾಗಿಯೇ ನಾನು ಆ ಚಿತ್ರ ನೋಡಿದೆ. ಇವತ್ತಿಗೂ ನಿತ್ಯ ಒಮ್ಮೆಯಾದರೂ ನಾನು ಆ ಎರಡು ಸಂಗೀತಧ್ವನಿಗಳನ್ನು ಗುನುಗದಿರುವುದಿಲ್ಲ. ಆ ಚಿತ್ರ ಪ್ರದರ್ಶಿತವಾದ ದಾವಣಗೆರೆಯ ಶಾಂತಿ ಟಾಕೀಸಿನಲ್ಲಿ, ಆ ದಿನಗಳಲ್ಲಿ, ಯಾವುದೇ ಸಿನೆಮಾ ಆರಂಭವಾಗುವ ಮೊದಲು ’ಕಮ್ ಸೆಪ್ಟೆಂಬರ್‌’ನ ಒಂದು ಜಿಂಗಲ್ ಹಾಗೂ ಸಿನೆಮಾದ ಮಧ್ಯಾಂತರದಲ್ಲಿ/ಮುಕ್ತಾಯದ ನಂತರ ಇನ್ನೊಂದು ಜಿಂಗಲ್ ಹಾಕುವುದು ಪದ್ಧತಿಯಾಗಿತ್ತು.
ಮಧುರಸ್ಮೃತಿಗೆ ಕಾರಣರಾದಿರಿ ಡಿಜಿಎಂ, ಧನ್ಯವಾದ.

ದೀಪಸ್ಮಿತಾ said...

ಒಳ್ಳೆ ಸಿನೆಮಾದ ಪರಿಚಯ ಕೊಟ್ಟಿದ್ದೀರಿ.

ಅಂದ ಹಾಗೆ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಪ್ರದರ್ಶನದಲ್ಲಿ ನಿಮ ಫೋಟೋಗಳನ್ನು ನೋಡಿದೆ. ಚೆನ್ನಾಗಿವೆ

V.R.BHAT said...

Nice effort!

ಬಾಲು ಸಾಯಿಮನೆ said...

ಗ್ರಾಮೋಪೋನ್ ನಿಂದ ಪ್ರಾರಂಭವಾಗಿ, ಹೇಳಿದ ಸಿಎಮಾ ಕಥೆ ಚನ್ನಾಗಿದೆ. ಈ ವಾರ ಇಟಲಿಗೆ ಹೋಗುವ ತಯಾರಿಯಲ್ಲದ್ದಾಗಲೇ ಸಿಕ್ಕ ಮಾಹಿತಿ, ಆ ಪ್ರದೇಶವನ್ನೂ ಪ್ರವಾಸ ಪಟ್ಟಿಯಲ್ಲಿ ಸೇರಿಸುವಂತೆ ಮಾಡಿತು.ಅವಕಾಶವಾದರೆ ನೋಡಿ ಬರುತ್ತೇನೆ.

AntharangadaMaathugalu said...

ತುಂಬಾ ಕುತೂಹಲಕರವಾಗಿತ್ತು. ನೀವು ಗ್ರಾಮಫೋನ್ ಬಗ್ಗೆ ಹೇಳಿದ್ದು, ನನಗೆ ನನ್ನ ಸೋದರತ್ತೆ ಮನೆಯಲ್ಲಿ ನೋಡಿದ್ದ ಗ್ರಾಮಫೋನ್ ನೆನಪಾಯಿತು. ನಿಜ ನಂಗೀ ವಿಷಯ ಮರೆತೇ ಹೋಗಿತ್ತು. ಜೊತೆಗೆ come september ಕಥೆ, ಸೊಗಸಾಗಿದೆ ನಿಮ್ಮ ಲೇಖನ. ಧನ್ಯವಾದಗಳು ಸಾರ್....

ಶ್ಯಾಮಲ

ashwath said...

tumbaa olle mahit,
nanu germanyalli hoguva andadiyondaralli haleya gramaphonegalu, dickgalu ive.
kusuma sayimane

V.R.BHAT said...

Informative on Come September cinema !

ವಿ ಡಿ ಭಟ್ ಸುಗಾವಿ said...

ವಿವರಣೆಯೊಂದಿಗೆ ಚಿತ್ರಗಳೂ ಚನ್ನಾಗಿ ಮೂಡಿವೆ