Tuesday, June 1, 2010

ಎರಡು ಕನಸು!




ಮಗನನ್ನು ಶಾಲೆಯ ಬಸ್ಸಿಗೆ ಹತ್ತಿಸಿ ಹಾಗೇ ವೆಂಕಟರಮಣನ ಹೋಟೆಲ್ ಮುಂದೆ ಬಂದೆ. ಹೊರಗೆ ನಿಂತಿದ್ದ ಅವನನ್ನು ಕಂಡು ಹಿಂದಿನ ದಿನ ಧರ್ಮಸ್ಥಳಕ್ಕೆ ಹೋಗುತ್ತೇನೆಂದು ಹೇಳಿದ್ದುದು ನೆನಪಿಗೆ ಬಂತು.
ಬೈಕ್ ನಿಲ್ಲಿಸಿ, “ಏನ್ ಸಮಾಚಾರ ಧರ್ಮಸ್ಥಳಕ್ಕೆ ಹೋಗ್ತೀನಂತ ಹೇಳಿ ಪ್ಯಾಂಟು ಷರ್ಟು ಹಾಕಿರುವ ಗೊಮ್ಮಟೇಶ್ವರನ ಥರಾ ನಿಂತಿದ್ದೀಯ?” ಎಂದು ಕಿಚಾಯಿಸಿದೆ.
ಮುಖ ಒಂಥರಾ ಅರಳೆಣ್ಣೆ ಕುಡಿದವನಂತೆ ಮಾಡಿಕೊಂಡು, “ಅಷ್ಟು ದೂರ ಬಿಸಿಲಲ್ಲಿ ಇವನ್ಯಾಕೆ ಬರ್ಬೇಕು ಅಂತ ದೇವರೇ ನನ್ಮುಂದೆ ಪ್ರತ್ಯಕ್ಷ ಆಗ್ಬಿಟ್ಟಿದ್ದಾನೆ” ಅಂದ.
ಚಿಕ್ಕ ವಯಸ್ಸಿಗೇ ಬಹಳ ಕಷ್ಟ ನಷ್ಟಗಳನ್ನು ಅನುಭವಿಸಿ ಜೀವನಾನುಭವ ಪಡೆದಿರುವ ಇವನು ಅರ್ಧ ತೋಳಿನ ಅಂಗಿ ಧರಿಸಿ ನಿಂತಿದ್ದರೆ, ಚಿಕ್ಕ ವಯಸ್ಸಿನವನಂತೆ, ಏನೂ ತಿಳಿಯದವನಂತೆ ಕಾಣುತ್ತಾನೆ. ಇವನಿಂದ ದೇವರ ಮಾತು ಹೊರಗೆ ಬರಲು ಹೊಟ್ಟೆಯೊಳಕ್ಕೆ ಕಾಫಿ ಕಳಿಸಬೇಕು!
ಇಬ್ಬರೂ ಭುಜಂಗನ ಹೋಟೆಲಿಗೆ ಹೋದೆವು. “ಪ್ರಕಾಶ ಎರ್ಡು ಪಾರ್ಟ್ ಕಾಫಿ” ಎಂದು ಹೇಳಿ ವೆಂಕಟರಮಣನಿಗೆ, “ದೇವರ ವಿಷ್ಯ ಏನು?” ಎಂದು ಕೇಳಿದೆ.
“ಭಾನುವಾರ ರಶ್ಶಿರುತ್ತೆ ನಾಳೆ ಗುರುವಾರ ಧರ್ಮಸ್ಥಳಕ್ಕೆ ಹೊರಡೋಣ ಅಂದಿದ್ದ ವೆಂಕಟರೆಡ್ಡಿ. ಬೆಳಿಗ್ಗೆ ಎಲೆಕ್ಟ್ರಿಕ್ ಕಂಬದಲ್ಲಿ ಶಾರ್ಟ್ ಆಗಿದೆ. ಮಸಾಲೆ ಅರೆಯಲು ಗ್ರೈಂಡರ್ ಆನ್ ಮಾಡ್ತಿದ್ದಂತೆ ಮೋಟರ್ ಸುಟ್ಟು ಹೋಯಿತು. ಮೂರು ಸಿಎಫ್ಎಲ್ ಬಲ್ಪುಗಳು ಬರ್ನ್ ಆದವು. ಯುಜಿಡಿ ಬ್ಲಾಕ್ ಆಗಿ ಹೋಟೆಲ್ನಿಂದ ಪಾತ್ರೆ ತೊಳೆದ ನೀರು ಹೊರಕ್ಕೆ ಹೋಗ್ತಾಯಿಲ್ಲ. ಲೈನ್ ಮನ್‌ನ ಕರೆದುಕೊಂಡು ಬಂದಿದ್ದೆ. ವೈರುಗಳು ಮೆಲ್ಟಾಗಿದೆ, ಸುಟ್ಟು ಹೋಗಿದೆ. ಬದಲಾಯಿಸೆಂದ. ಮೇಲೆ ನೀರಿನ ಟ್ಯಾಂಕಲ್ಲಿ ನೀರು ಖಾಲಿಯಾಗಿದೆ. ಸಂಪಲ್ಲಿರುವ ನೀರನ್ನು ಪಂಪ್ ಮಾಡಲು ಆಗಲ್ಲ...” ಎಂದು ನಿರ್ವಿಕಾರವಾಗಿ ಹೇಳತೊಡಗಿದ.
ಕೇಳುತ್ತಿದ್ದ ನನಗೇ ಸಮಸ್ಯೆಗಳ ನಂದಿಬೆಟ್ಟವೇ ಮೇಲೆ ಬಿದ್ದಂತಾಗಿ ಹೌಹಾರಿದೆ.
ಶಕುನಗಳು, ಕನಸಿನ ಪ್ರಭಾವ ಮುಂತಾದವುಗಳನ್ನು ವೆಂಕಟರಮಣ ನಂಬುತ್ತಾನೆ. ಎಲ್ಲ ದಿವ್ಯಾಸ್ತ್ರಗಳೂ ಒಟ್ಟಿಗೇ ಪ್ರಯೋಗ ಆಗಿರುವಾಗ ಇದರ ಮುನ್ಸೂಚನೆ ಕೂಡ ಸಿಕ್ಕಿರಬೇಕಲ್ಲ ಎಂಬ ವಿಚಿತ್ರ ತರ್ಕದಿಂದ, “ಹೀಗೆಲ್ಲಾ ಆಗುತ್ತೆ ಅಂತ ಏನಾದರೂ ಕನಸು ಬಿದ್ದಿತ್ತಾ?” ಅಂತ ಕೇಳಿದೆ.
“ಅಯ್ಯೋ ಕನಸುಗಳಿಗೇನು ಬರ. ಮೊನ್ನೆ ಒಂದು ವಿಚಿತ್ರವಾದ ಕನಸು ಬಿದ್ದಿತ್ತು. ನಿಮಗೆ ಹೇಳ್ಬೇಕೂಂತ ಇದ್ದೆ” ಅಂದ. ತಕ್ಷಣ, “ಪ್ರಕಾಶ ಇನ್ನೊಂದು ಪಾರ್ಟ್ ಕಾಫಿ” ಎಂದು ಹೇಳಿ ಕೇಳಲು ಕುಳಿತೆ.
“ನಮ್ಮ ಅಡುಗೆ ಭಟ್ಟ ಮುರುಗ ಗೊತ್ತಲ್ಲ. ಅವನಿಲ್ಲದಿದ್ದರೆ ನನ್ನ ಕೈ ಕತ್ತರಿಸಿದಂತೆ ಆಗುತ್ತೆ. ಮೊನ್ನೆ ಕನಸಲ್ಲಿ ಅವನು ಸತ್ತುಹೋಗಿದ್ದ! ಕೆರೆ ಪಕ್ಕ ಹೆಣ ಹೂಳಲು ಜಾಗ ನೋಡಿಕೊಂಡು ಬರಲು ನನ್ನ ತಮ್ಮ ಗೋಪಾಲನನ್ನು ಕಳಿಸಿದೆ. ಹೊರಗೆ ವಿಪರೀತ ಮಳೆ ಬರುತ್ತಿತ್ತು. ಗೋಪಾಲ ಬಂದವನು ನೀರೆಲ್ಲ ತುಂಬಿದೆ ಹೆಣ ಹೂಳಲು ಜಾಗಾನೇ ಇಲ್ಲ ಅಂದ.
ಏನು ಮಾಡುವುದು ಅಂದುಕೊಂಡು ಹೊರಗೆ ಬಂದೆ. ಮುನಿಸಿಪಾಲಿಟಿಯವರು ಆಟೋಗೆ ಮೈಕಿಟ್ಟು ಹೆಣಗಳನ್ನು ಜ್ಯೂನಿಯರ್ ಕಾಲೇಜಿನ ಮೈದಾನಕ್ಕೆ ಸಾಗಿಸಿ ಸುಡಿ ಎಂದು ಜೋರಾಗಿ ಅನೌನ್ಸ್ ಮಾಡುತ್ತಿದ್ದಾರೆ. ಹೆಣ, ಸೌದೆ ಎಲ್ಲ ಮೈದಾನಕ್ಕೆ ಸಾಗಿಸಿದೆವು. ಅಲ್ಲಿ ಆಗಲೇ ಸಾಕಷ್ಟು ಜನ ಸೌದೆ ಇಟ್ಟು ಹೆಣಗಳನ್ನು ಮಲಗಿಸಿದ್ದರು. ನಾವೂ ಜಾಗ ಮಾಡಿಕೊಂಡು ಸೌದೆ ಜೋಡಿಸಿ ಮುರುಗನನ್ನು ಮಲಗಿಸಿದೆವು. ಗೋಪಾಲ ಮನೆಯಲ್ಲಿ ಕೆಲಸವಿದೆಯೆಂದು ಹೊರಟುಬಿಟ್ಟ. ಮಳೆಗೆ ನೆನೆದ ಸೌದೆ ಉರಿಯದು. ಸೀಮೆ ಎಣ್ಣೆ ಮರೆತು ಬಂದಿದ್ದೆ. ಬೇರೆಯವರದ್ದೂ ಅದೇ ಕಥೆ. ಒಬ್ಬೊಬ್ಬರೇ ಸೀಮೆ ಎಣ್ಣೆ ತರ್ತೀನಿ ನನ್ನ ಹೆಣ ನೋಡಿಕೋ ಅಂತ ಹೇಳಿ ಹೊರಟರು. ನನಗೂ ಸೀಮೆ ಎಣ್ಣೆ ಬೇಕು ಅಂದೆ. ನಾವೆಲ್ಲ ಸ್ವಲ್ಪ ಜಾಸ್ತಿ ತಂದರೆ ನಿನಗಾಗುತ್ತೆ ಇಲ್ಲೇ ಇರು ಎಂದು ಹೇಳಿ ಎಲ್ಲರೂ ಜಾಗ ಖಾಲಿ ಮಾಡಿದರು. ಅಲ್ಲುಳಿದದ್ದು ಹೆಣಗಳು ಮತ್ತು ನಾನು ಮಾತ್ರ.
ನೋಡುತ್ತಿದ್ದಂತೆಯೇ ಒಂದೊಂದೇ ಹೆಣಗಳು ಎದ್ದು ಓಡಾಡತೊಡಗಿದವು. ಅರೆ! ಅದರ ಯಜಮಾನ ಬಂದರೆ ಏನು ಹೇಳುವುದು? ಹೋಗಿ ಒಬ್ಬೊಬ್ಬರನ್ನೇ ಮಲಗಿಸತೊಡಗಿದೆ. ಒಂದನ್ನು ಮಲಗಿಸುವಷ್ಟರಲ್ಲಿ ಇನ್ನೆರಡು ಓಡಾಡುತ್ತಿದ್ದವು. ಎಷ್ಟು ಹೊತ್ತಾದರೂ ಯಾರೂ ಬರಲಿಲ್ಲ. ನನಗೆ ಮಾತ್ರ ಬಿಡುವಿರದ ಕೆಲಸ! ಅಷ್ಟರಲ್ಲಿ ಮುರುಗ ಎದ್ದು ಮೈಮುರಿದು “ಹೋಗಣ್ಣೋ ಎಷ್ಟು ಹೊತ್ತು ಮಲಗೋದು. ನನಗೆ ಬೇಜಾರು” ಅಂತ ಹೇಳಿದವನು ನನ್ನ ಮಾತಿಗೂ ಕಾಯದೆ ಸೀದಾ ಮನೆಕಡೆ ಹೊರಟುಬಿಟ್ಟ...”
“ಏನ್ಸಾರ್ ಇನ್ನೊಂದೊಂದು ಪಾರ್ಟ್ ಕಾಫಿ ಕೊಡ್ಲಾ?” ಎಂದು ಕೇಳಿ ಹೋಟೆಲಿನ ಪ್ರಕಾಶ ವೆಂಕಟರಮಣನ ಕಥೆಗೆ ಬ್ರೇಕ್ ಹಾಕಿದ.
“ಅಯ್ಯೋ ಲೇಟಾಗುತ್ತೆ, ರೆಡಿಯಾಗಿ ಹೊರಡಬೇಕು, ನಮ್ಮಜ್ಜಿ ತಿಥಿಯಿದೆ. ಮಧ್ಯಾಹ್ನದೊಳಗೆ ಬಂದುಬಿಡ್ತೀನಿ” ಎಂದು ಹೇಳುತ್ತಾ ಎದ್ದ ವೆಂಕಟರಮಣ.
“ಎಲ್ಲಿಗೆ ಹೋಗ್ತಿರೋದು?” ಎಂದು ಕೇಳಿದೆ.
“ವಿಜಯಪುರ ಆಚೆ ಇರೋ ನಾರಾಯಣಪುರದಲ್ಲಿ ಅವರ ಮಣ್ಣು ಮಾಡಿರೋದು. ಅಲ್ಲಿಗೆ ಹೋಗಿ ಬರಬೇಕು. ಇಲ್ಲೇ ಮಣ್ಣ ಮಾಡೋಣ ಅಂದ್ರೆ ಕೇಳಬೇಕಲ್ಲ. ನಮ್ಮಜ್ಜಿ ಕನಸಲ್ಲೆಲ್ಲಾ ಬಂದು ಕಾಟ ಕೊಡ್ತಿದ್ರು” ಅಂದ.
“ಅಂದ್ರೆ, ಸಾಯೋದಕ್ಕೆ ಮುಂಚೆ ಏನಾದ್ರೂ ಒಪ್ಪಂದ ಆಗಿತ್ತಾ?”ಎಂದು ಕೇಳಿದೆ.
“ನಮ್ಮ ತಾತನನ್ನು ಆ ಕಾಲದಲ್ಲಿ ನಾರಾಯಣಪುರದ ನಮ್ಮ ಕಡೆಯವರ ಜಮೀನಿನಲ್ಲಿ ಹೂತಿದ್ದರಂತೆ. ನಮ್ಮಜ್ಜಿ ಯಾವಾಗ್ಲೂ ನನ್ನನ್ನು ಸತ್ತ ಮೇಲೆ ನಿಮ್ಮ ತಾತನ ಪಕ್ಕದಲ್ಲೇ ಹೂಣಬೇಕು ಅನ್ನುತ್ತಿದ್ದರು. ಅವರು ಹಾಗಂದಾಗಲೆಲ್ಲ ನಿಂಗೇನು ಗೊತ್ತಾಗುತ್ತಾ ನಾವು ಎಲ್ಲಿ ಹೂಳ್ತೀವಿ ಅಂತ ರೇಗಿಸ್ತಿದ್ದೆ. ಪ್ರತಿವರ್ಷ ನಮ್ಮ ತಾತನ ತಿಥಿಗೆ ಪೂಜೆಗೆ ಹೋದಾಗಲೆಲ್ಲಾ ನಮಗೆ ಸಾಕು ಸಾಕಾಗುತ್ತಿತ್ತು. ಸಮಾಧಿ ಸುತ್ತಮುತ್ತ ಮುಳ್ಳು ಕಂಪೆಗಳು ಬೆಳೆದು ಅಲ್ಲಿಗೆ ಹೋಗೋದಕ್ಕೇ ಆಗೋದಿಲ್ಲ. ಆಗೆಲ್ಲಾ ನಮ್ಮಜ್ಜಿದು ಊರ ಹತ್ತಿರವೇ ಮಾಡಬೇಕು ಅಂದುಕೊಳ್ಳುತ್ತಿದ್ದೆ. ಆದರೆ ಪದೇ ಪದೇ ಒಂದು ಕನಸು ಬೀಳಲು ಶುರುವಾಗಿ ನನ್ನ ನಿರ್ಧಾರ ಬದಲಿಸಬೇಕಾಯ್ತು.
ಕನಸಿನಲ್ಲಿ ನಮ್ಮಜ್ಜಿ ತೀರಿಕೊಂಡಿದ್ದರು. ಆ ಮುಳ್ಳುಕಂಪೆ ತರಿದು ಗುಣಿ ಒಡೆಯಲು ಯಾರೂ ಮುಂದೆ ಬರದೆ ಕೊನೆಗೆ ನಮ್ಮಪ್ಪ ಬೇಜಾರಾಗಿ ಅಲ್ಲೇ ಕುಂಟೆ ಪಕ್ಕದ ಕಟ್ಟೆ ಮೇಲೆ ಸುಟ್ಟು ಬಿಡೋಣ ಅಂದ್ರು. ಅಜ್ಜಿ ಯಾವಾಗ್ಲೂ ತಾತನ ಪಕ್ಕ ಮಣ್ಣು ಮಾಡು ಅಂತಿದ್ಲಲ್ಲ ಅಂದೆ. ಈ ಮುಳ್ಳುಗಳನ್ನು ತೆಗೆಯಲು ಆಗಲ್ಲ, ಪರವಾಗಿಲ್ಲ ಬಿಡೋ ಅಂದ್ರು ಅಪ್ಪ. ಅಲ್ಲೇ ಸೌದೆ ತರಿಸಿ, ಹೆಣಕ್ಕೆ ಬೆಂಕಿ ಇಟ್ಟು ವಾಪಸಾಗುತ್ತಿದ್ದೆವು. ಹಿಂದೇನೇ ಸತ್ತಿದ್ದ ನಮ್ಮಜ್ಜಿ ಎದ್ದು ಬಂದುಬಿಟ್ಲು. ನಮ್ಮನ್ನು ಚೆನ್ನಾಗಿ ಬಯ್ಯಲು ಶುರುಮಾಡಿದಳು. ನಾನೇಳಿದ್ದೇನು? ನೀವು ಮಾಡ್ತಿರೋದೇನು? ನಿಮಗೆ ಜ್ಞಾನ ಇಲ್ವಾ?.... ಸಹಸ್ರನಾಮ ಪ್ರಾರಂಭಿಸಿದಳು... ಎರಡು ಮೂರು ಬಾರಿ ನಮ್ಮಜ್ಜಿ ಬದುಕಿರುವಾಗಲೇ ಈ ಕನಸು ಬಿದ್ದಿತ್ತು. ಹಾಗಾಗಿ ಅವರು ಸತ್ತ ಮೇಲೆ ಅಲ್ಲೇ ತಾತನ ಪಕ್ಕದಲ್ಲೇ ಮಣ್ಣು ಮಾಡಿದ್ವಿ. ಸರಿ, ಮಧ್ಯಾಹ್ನ ಸಿಗ್ತೀನಿ” ಎನ್ನುತ್ತಾ ಹೊರಟ ವೆಂಕಟರಮಣ.

14 comments:

PARAANJAPE K.N. said...

ಕನಸಿನ ಕಥೆ, ಹೆಣಗಳು ಎದ್ದು ನಡೆದಾಡಿದ್ದು, ವಿಚಿತ್ರವೆನಿಸಿದರೂ ಚೆನ್ನಾಗಿದೆ.

ಮನಸು said...

super sir hahaha kanasu chennage ide...

ಮನದಾಳದಿಂದ............ said...

ಪಾಪ.....
ವೆಂಕಟರಮಣನಿಗೆ ಸಂಕಟ, ನಿಮಗೆ ಚೆಲ್ಲಾಟ!!!!!
ಕತೆ ಚನ್ನಾಗಿದೆ.

ಸವಿಗನಸು said...

super kathe...chennagide sir...

Ranjita said...

ಸರ್ ಕತೆ ಸೂಪರ್ ....
ವೆಂಕಟರಮಣನಿಗೆ ಕನಸು ಬೀಳದೆ ಇರೋ ತರ ಏನಾದ್ರು ಔಷಧ ಕೊಡಿಸಬೇಕು ಏನಂತೀರಿ ! :D

ಶರಶ್ಚಂದ್ರ ಕಲ್ಮನೆ said...

ಕನಸುಗಳೇ ವಿಚಿತ್ರ ಅಲ್ವ ? ವೆಂಕಟರಮಣನ ಕನಸು ತಮಾಷೆಯಾಗಿತ್ತು

Guruprasad said...

ಹಾ ಹಾ ಕನಸಿನ ಕತೆ ಚೆನ್ನಾಗಿ ಇದೆ ...

ಸೀತಾರಾಮ. ಕೆ. / SITARAM.K said...

kanasina kathe chennaagide.

Ittigecement said...

ಮಲ್ಲಿಕಾರ್ಜುನ್...

ಮೊದಲು ನಿಮ್ಮ ಫೋಟೊಗಳ..
ಈಗ ನಿಮ್ಮ ಬರಹಗಳ ಫ್ಯಾನ್ ಆಗಿದ್ದೇನೆ...
ಲವಲವಿಕೆಯಿಂದ ಕೂಡಿದೆ ನಿಮ್ಮ ಬರವಣಿಗೆ...

ನಿಮ್ಮ ವೆಂಕಟರಮಣ ಬಹಳ ಇಷ್ಟವಾದ...
ಅವನ ಕನಸೂ ಕೂಡ...

sunaath said...

ವಿಭಿನ್ನವಾದ, ಭಯಾನಕವಾದ ಆದರೆ ಸೊಗಸಾದ ಕಥೆ!

shivu.k said...

ಮಲ್ಲಿಕಾರ್ಜುನ್,

ಕನಸಿನ ಕತೆಯಾದರೂ ಕಟ್ಟಿಕೊಟ್ಟಿರುವ ರೀತಿ ತುಂಬಾ ಚೆನ್ನಾಗಿದೆ. ಬೇಸರವಾಗದೇ ಒಂದೇ ಉಸುರಿಗೆ ಓದಿಸಿಕೊಂಡು ಹೋಗುವ ಈ ಕತೆಯಲ್ಲಿನ ನಮ್ಮ ಗೆಳೆಯ ವೆಂಕಟರಮಣನ ಪಾತ್ರ ಮತ್ತು ಹೆಣಗಳು ವೈವಿದ್ಯತೆಯಿಂದ ಕೂಡಿದೆ ಅನ್ನಿಸಿತು.

ಸಾಗರದಾಚೆಯ ಇಂಚರ said...

ಸುಂದರ ಭಯಾನಕ ಕಥೆ ಸರ್

ಜಲನಯನ said...

ಮಲ್ಲಿ ಸೊಗಸಾಗಿ ಸಾಗಿದೆ ನಿಮ್ಮ ಕಥೆ...ಹಹಹ...ನಿಮ್ಮ ಕಥೆಯ ಹೆಣ ಓಡಾಡಿದ್ದು ....ಕಲ್ಪನೆಗಳಿಗೆ ಒಂದು ರೆಕ್ಕೆ ಕೊಟ್ತಂತೆ...ಅಂದಹಾಗೆ...ಎಲೆಕ್ಟ್ರಿಕಲ್ ಕ್ರಿಮೆಟೋರಿಯಂ (ವಿಧ್ಯುತ್ ಚಿತಾಗಾರ) ಬಗ್ಗೆ ನಮ್ಮ ಹಳ್ಳೀಲಿ ಹೇಳಿದಾಗ...ಪೆದ್ದಎಂಕ್ಟಪ್ಪ ಅಂತ ಒಬ್ರು ಇದ್ರು..ಅವ್ರು ಹೇಳಿದ್ದು...ಈಡು ಬೆಂಗ್ಳೂರ್ಕಿ ಸದ್ವೇಕಿ ಪೋಯಿಂದಿ ದೀನ್ಕೇನ್ರಾ...ಕಂಬಿ ಲ್ಯಾಕುಂಡಾ ರೈಲ್ ಬಲೆ ಇಡುಸ್ತಾಡು....(ಇವನು ಬೆಂಗ್ಳೂರ್ಗೆ ಓದೋಕ್ಕೆ ಹೋಗಿದ್ದು ಇದಕ್ಕೆನ್ರೋ..ಭಲೆ ಬಿಡ್ತಾನೆ ಕಂಬಿ ಇಲ್ಲದೇ ರೈಲು)....

ಚಿತ್ರಾ ಸಂತೋಷ್ said...

ಹಹಹ ಸೂಪರ್ ಕನಸು