"ಚೂಡಾಲನಿ ಉಂದಿ" ತೆಲುಗು ಫಿಲಂ ನೋಡುತ್ತಿದ್ದೆವು. ಅದರಲ್ಲಿ ಅಮಾಯಕಳಾದ ಸೌಂದರ್ಯಳನ್ನು ಯಾರೋ ಒಬ್ಬ ಮದುವೆಯಾಗುತ್ತೇನೆಂದು ಹೇಳಿ ಅವಳ ಒಡವೆಗಳನ್ನು ಲಪಟಾಯಿಸಿ ಓಡಿಹೋಗಿರುತ್ತಾನೆ. ಅವಳು ಚಿರಂಜೀವಿಗೆ ಅವನು ಬರೆದಿದ್ದ ಪ್ರೇಮಪತ್ರಗಳನ್ನು ತೋರಿಸುತ್ತಾಳೆ. ಚಿತ್ರದಲ್ಲಿ ಅವಳ ಹೆಸರು ಪದ್ಮಾವತಿ. ಪತ್ರದಲ್ಲೊಂದು ಕವನ -
"ಪದ್ಮಾವತಿ ಪದ್ಮಾವತಿ
ನೀ ಎರ್ರಗಾನಿ ಮೂತಿ
ಸೂಡಗಾನೆ
ಪೋಯಿಂದಿ ನಾ ಮತಿ!"
("ಪದ್ಮಾವತಿ ಪದ್ಮಾವತಿ
ನಿನ್ನ ಕೆಂಪನೆಯ ಮೂತಿ
ನೋಡಿದೊಡನೆ
ಹೋಯ್ತು ನನ್ನ ಮತಿ!")
ತಕ್ಷಣ ಚಿರಂಜೀವಿ, "ದಾಂತೋ ನೀ ಪನಿ ಅಯ್ಯಿಂದಿ ಅಧೋಗತಿ!" (ಅದರಿಂದಾಗಿ ನಿನ್ನ ಕಥೆ ಅಧೋಗತಿ!) ಅನ್ನುತ್ತಾನೆ.
* * * *
"ನನ್ನದೂ ಒಂದು ಪದ್ಮಾವತಿ ಕಥೆ ಇದೆ" ಅಂದ ವೆಂಕಟರಮಣ. ಡಿವಿಡಿ ಸ್ಟಾಪ್ ಮಾಡಿ, "ನಿನ್ನ ಪದ್ಮಾವತಿ ಕಥೆ ಹೇಳು ಮಾರಾಯ" ಎಂದು ಗಂಟು ಬಿದ್ದೆ.
ವೆಂಕಟರಮಣ ತನ್ನ ಮಧುರ ನೆನಪಿಗೆ ಜಾರಿದ.
"ಪ್ರೇಮಿಂಚಿ ಪೆಳ್ಳಾಡು"(ಪ್ರೇಮಿಸಿ ಮದುವೆಯಾಗು) ಚಲನಚಿತ್ರ. ಸಿಕ್ಕಾಪಟ್ಟೆ ರಶ್ಶಿತ್ತು. ಗಂಡಸರ ಕ್ಯೂನಲ್ಲಿ ನೊಣ ನುಗ್ಗುವುದಕ್ಕೂ ಜಾಗವಿರಲಿಲ್ಲ. ಅಕಸ್ಮಾತ್ ನುಗ್ಗಿದರೂ ಅಪ್ಪಚ್ಚಿಯಾಗುವುದು ಗ್ಯಾರಂಟಿ! ಹೆಂಗಸರ ಕ್ಯೂ ಬಳಿ ಹೋದೆ. "ಟಿಕೇಟ್ ತಗೊಳ್ಳಲು ಯಾರನ್ನು ಕೇಳೋದು?" ಯೋಚಿಸುತ್ತಿರುವಾಗ ಕಿಲಕಿಲನೆ ನಗುವೊಂದು ಅಲೆಅಲೆಯಾಗಿ ತೇಲಿಬಂತು. ಉದ್ದನೆ ಜಡೆಯ ಹಾಫ್ಸ್ಯಾರಿ(ಲಂಗದಾವಣಿ) ಉಟ್ಟಿದ್ದ ಹುಡುಗಿ ತನ್ನ ಗೆಳತಿಯೊಂದಿಗೆ ಮಾತನಾಡುತ್ತಾ ನಗುತ್ತಿದ್ದಾಳೆ. ಅವರ ಹತ್ತಿರ ಹೋಗಿ ನನಗೊಂದು ಟಿಕೇಟ್ ಎಂದು ತೆಲುಗಲ್ಲಿ ಕೇಳಿದೆ. ಹುಡುಗಿ ನನ್ನೆಡೆಗೆ ನೋಡಿದಳು. ಆ ನೋಟಕ್ಕೆ ಮಾರುಹೋಗಿದ್ದೆ. ಲಕ್ಷಣವಾಗಿದ್ದಳು. ನನ್ನ ಮನಸ್ಸಿನ ಕನ್ಯಾಪರೀಕ್ಷೆಯಲ್ಲಿ ಇವಳಿಗೆ ನೂರಕ್ಕೆ ನೂರು ಅಂಕಗಳನ್ನು ಕೊಟ್ಟುಬಿಟ್ಟೆ. ಅವಳು ಆಗಲ್ಲ ಅಂದಳು. ಕರ್ನಾಟಕದಿಂದ ಬಂದಿರುವುದಾಗಿ ಹೇಳಿದೆ. ಕೊಡಿ ಎಂದು ಹಣ ಪಡೆದಳು.
ಹಿಂದಿಯ ಡಿಡಿಎಲ್ಜೆ(ದಿಲ್ವಾಲೆ ದುಲ್ಹನಿಯಾ ಲೇಜಾಯೇಂಗೆ) ತೆಲುಗಿನಲ್ಲಿ ವಾಯ್ಸ್ ಡಬ್ ಮಾಡಿ "ಪ್ರೇಮಿಂಚಿ ಪೆಳ್ಳಾಡು" ಅಂತ ಹೆಸರಿಟ್ಟಿದ್ದರು. ಈ ಚಿತ್ರಕ್ಕೆ ಬಂದಾಗಲೇ ಈ ಹುಡುಗಿ ಸಿಗುವುದೆಂದರೇನು? ನನ್ನ ಜೀವನದಲ್ಲೂ ಮ್ಯಾಜಿಕ್ಕುಗಳು ಘಟಿಸುತ್ತವಾ? ಆ ವಯಸ್ಸೇ ಅಂತಹುದು. ಯಾವ ಹುಡುಗಿಯನ್ನು ನೋಡಿದರೂ ಪಕ್ಕದಲ್ಲಿ ನಿಂತಂತೆ ಕಲ್ಪಿಸಿಕೊಂಡು ಜೋಡಿ ಹೇಗಿರುತ್ತೆ ಎಂದು ಕನಸು ಕಾಣುವುದು. ಈ ಹುಡುಗಿ ಆ ಲೆಕ್ಕಾಚಾರವನ್ನು ಮೀರಿಸಿದ್ದಳು.
ಟಿಕೇಟ್ ಸೀರಿಯಲ್ ನಂಬರಿನಂತೆ ಕೊಟ್ಟಿದ್ದರಿಂದ ಇಬ್ಬರದೂ ಅಕ್ಕಪಕ್ಕ ಸೀಟ್. ಏನೇ ಹೇಳಿ... ಆ ವಯಸ್ಸಿನಲ್ಲಿ... ಹುಡುಗಿಯೊಡನೆ... ಥಿಯೇಟರಿನಲ್ಲಿ... ಅದೂ ಇಂಥ ಚಿತ್ರ ನೋಡುವ ಗಮ್ಮತ್ತೇ ಬೇರೆ!
ಇಂಟರ್ವಲ್ನಲ್ಲಿ ಚಿಪ್ಸ್ ತಂದುಕೊಟ್ಟೆ. ಮೊದಲು ಬೇಡವೆಂದರೂ ತಗೊಂಡರು. ಏನೆಂದು ಮಾತಾಡುವುದು?!
"ಏನು ಓದುತ್ತಿರುವುದು?" ಎಂದು ಕೇಳಿದೆ.
"ಟಿಸಿಹೆಚ್ ಟ್ರೈನಿಂಗ್" ಅಂದಳು.
"ನೀವು?" ಎಂದು ನನ್ನನ್ನು ಪ್ರಶ್ನಿಸಿದಳು."ನನ್ನದು ಹೋಟೆಲ್ ಇದೆ" ಅಂದೆ.
"ಇಲ್ಲಿ ಮದನಪಲ್ಲಿಯಲ್ಲಿ? ನೆಂಟರಿದ್ದಾರಾ?" ಕೇಳಿದಳು.
"ಪುಂಗನೂರು ರೋಡಿನಲ್ಲಿ ’ಪೋತಬೋಲು’ ಅಂತ ಹಳ್ಳಿಯಿದೆಯಲ್ಲ ಅಲ್ಲಿ ನಮ್ಮಣ್ಣನ ತೋಟ ಇದೆ. ಹಾಗಾಗಿ ಬರುತ್ತಿರುತ್ತೇನೆ" ಅಂದೆ.
* * * * *
ಬಸ್ಸಲ್ಲಿ ಹೋಗುವಾಗ ಎಲ್ಲಿಂದಲೋ ಬಂದ ಘಮ ಮೂಗನ್ನು ಸೋಕಿ ಮನವನ್ನರಳಿಸಿ, "ಇದು ಎಲ್ಲಿಂದ?" ಅಂತ ನೋಡುವಷ್ಟರಲ್ಲಿ ಮಾಯವಾಗುವಂತಹ ಘಟನೆಯಿದು. ಆ ಘಮಲನ್ನು ಹೊರಸೂಸಿದ ಹೂವನ್ನು ಮತ್ತೆ ನೋಡುವಂತಾದರೆ..?
* * * * *
ಸ್ವಲ್ಪ ದಿನಗಳಾಗಿತ್ತು. ಮದನಪಲ್ಲಿಯಲ್ಲಿ ಸಂಜೆ ೫.೩೦ರ ಚಿಂತಾಮಣಿಯ ಬಸ್ಸಿಗೆ ಕಾಯುತ್ತಿದ್ದೆ. ೫.೧೫ರ ಸುಮಾರಿಗೆ ಅಲ್ಲಿ ಶಾಲೆಯ ಹುಡುಗರು ಹೋಗುತ್ತಾರೆ. ಆ ದಿನ ಈ ಹುಡುಗಿ ಕಾಣಿಸಿದಳು. ಅವಳೇನಾ? ಅಲ್ಲವಾ? ಅನುಮಾನ...! ಕನಸಿನಂತಿತ್ತು. ಸುಮ್ಮನಾದೆ.
ಶನಿವಾರ ನಮ್ಮ ಹೋಟೆಲ್ ರಜ. ಮದನಪಲ್ಲಿಗೆ ಹೋದೆ. ಸಂಜೆ ಹುಡುಗಿ ಕಾಣಿಸಿದಳು. ವಾರ ಪೂರ್ತಿ ಧೈರ್ಯ ಕೂಡಿಸಿಕೊಂಡಿದ್ದೆ. ಹತ್ತಿರ ಹೋಗಿ "ಗುರುತುಂಡಾನಾ?"(ನೆನಪಿದ್ದೀನ?) ಎಂದು ಕೇಳಿದೆ. ಗಲಿಬಿಲಿಗೊಂಡ ಹುಡುಗಿಗೆ ಆ ದಿನ ಥಿಯೇಟರ್ನಲ್ಲಿ ಟಿಕೇಟ್ ತೆಗೆದುಕೊಟ್ಟಿದ್ದೆಲ್ಲ ನೆನಪಿಸಿದೆ. ನಕ್ಕು ಮಾತನಾಡಿಸಿ ಹೋದಳು. ವಾರದ ದಿನವೆಲ್ಲ ಶನಿವಾರವೇ ಇರಬಾರದೇ ಎಂದನಿಸಿತ್ತು! ಶನಿವಾರ ಬರುವುದಕ್ಕೆ ಕಾಯುತ್ತಿರುತ್ತಿದ್ದೆ. ಮುಂದಿನ ಶನಿವಾರ ಹೆಸರು ಕೇಳಿದೆ.
"ಪದ್ಮಾವತಿ" ಅಂದಳು. ನಾನು ವೆಂಕಟರಮಣ, ಅವಳು ಪದ್ಮಾವತಿ. ತಿರುಪತಿ ಬೆಟ್ಟವೇರಿ ವೈಕುಂಠ ನೋಡುತ್ತಿದ್ದೆ! ಹಗಲೂ ರಾತ್ರಿ ಕನಸೋ ಕನಸು! ವಾರವಾರ ತಪ್ಪದೆ ಶನಿವಾರ ಹೋಗಿ ಕಾದಿದ್ದು ಮಾತನಾಡಿಸುತ್ತಿದ್ದೆ.
ಅವಳ ಮನೆಯಿರುವುದು ಪ್ರಶಾಂತನಗರದಲ್ಲಂತೆ. ಆಗೆಲ್ಲಾ ಲ್ಯಾಂಡ್ ಲೈನ್. ಫೋನ್ ನಂಬರ್ ಕೇಳಿದೆ. ನಮ್ಮ ತಂದೆ ತುಂಬಾ ಸ್ಟ್ರಿಕ್ಟ್... ಬೇಡವೆಂದಳು.
ಹೀಗಿದ್ದಾಗ ಮೂರುವಾರ ಹೋಗಲಾಗಲಿಲ್ಲ. ನಾಲ್ಕನೇ ವಾರ ಹೋದೆ. ಪದ್ಮಾವತಿ ಬರಲಿಲ್ಲ. ಕಾದಿದ್ದು ಕಾದಿದ್ದು ಬಸ್ ತಪ್ಪಿಹೋಯ್ತು. ೬ ಗಂಟೆಗೆ ಫಿಲಂಗೆ ಹೋಗಿ ಬಂದು ೯ ಗಂಟೆಯ ಹುಬ್ಬಳ್ಳಿ ಬಸ್ನಲ್ಲಿ ಬಂದೆ. ಮುಂದಿನ ವಾರವೂ ಅದೇ ಕಥೆ. ಅದರ ಮುಂದಿನ ವಾರವೂ... ಊಹೂಂ... ಪದ್ಮಾವತಿಯ ಸುಳಿವೇ ಇಲ್ಲ...
* * * *
"ಛೆ! ಅದೇನೋ ಪ್ರಶಾಂತನಗರ ಅಂತ ಹೇಳಿದ್ದಳಲ್ಲ. ಹೋಗಿ ನೋಡಬೇಕಿತ್ತು..." ಕಥೆ ಕೇಳುತ್ತಿದ್ದ ನಾನು ಮಧ್ಯೆ ಮೂಗು ತೂರಿಸಿದೆ.
"ಹೇಗೆ ಹುಡುಕೋದು? ಏನಂತ ಹುಡುಕೋದು? ಆದರೂ ಪ್ರಶಾಂತನಗರಕ್ಕೆ ಹೋಗಬೇಕಾಯ್ತು. ಅದೂ ಹೇಳ್ತೀನಿ ಕೇಳಿ..." ಎಂದು ಶುರುಮಾಡಿದ ವೆಂಕಟರಮಣ.
ಪುಂಗನೂರಿನಿಂದ ತಿರುಪತಿಗೆ ಹೋಗುವ ದಾರಿಯಲ್ಲಿ "ಸೋಮಲ" ಅಂತ ಹಳ್ಳಿಯಿದೆ. ಅಲ್ಲಿಗೆ ನಮ್ಮಕ್ಕನನ್ನು ಕೊಟ್ಟಿದ್ದೆವು. ನನ್ನಕ್ಕನ ಮಾವನಿಗೆ ಅದೇ ಹಳ್ಳಿಯ ಮೇಸ್ಟ್ರು ನರಸಿಂಹಲು ಸ್ನೇಹಿತರು. ಆ ಮೇಸ್ಟ್ರು ತಮ್ಮ ಮಗಳಿಗೆ ಕರ್ನಾಟಕದ ಕಡೆ ಗಂಡು ನೋಡಲು ಅವರಿಗೆ ಹೇಳಿದ್ದಾರೆ. ನನ್ನಕ್ಕನ ಮಾವ ನಮ್ಮಪ್ಪನಿಗೆ ಕಾಗದ ಬರೆದಿದ್ದರು. ಅದು ತೆಲುಗಿನಲ್ಲಿತ್ತು. ತೆಲುಗು ಫಿಲಂ ಹುಚ್ಚಿನಿಂದ ನಾನು ತೆಲುಗು ಫಿಲಂ ಮ್ಯಾಗಜೀನ್ಗಳನ್ನು ಓದುತ್ತಿದ್ದೆ. ನನಗೆ ಓದಲು ಕೊಟ್ಟರು. ವಿಷಯ ತಿಳಿಸಿದೆ. ಆ ಪತ್ರದಲ್ಲಿ ಅವರ ವಿಳಾಸವೂ ಇತ್ತು. ಪತ್ರವನ್ನು ಗಣೇಶನ ಫೋಟೋ ಹಿಂದಿಟ್ಟೆ. ನಮ್ಮಪ್ಪ ಒಂದೆರಡು ಗಂಡುಗಳ ಬಗ್ಗೆ ಅವರಿಗೆ ತಿಳಿಸಿದ್ದರು.
ನಮ್ಮಪ್ಪ ಸೋಮಲಕ್ಕೆ ಹೋಗಿದ್ದಾಗ ನನ್ನಕ್ಕನ ಮಾವ , "ಹುಡುಗ ಕೆಲಸದಲ್ಲಿರಲಿ. ಹುಡುಗಿ ಚೆನ್ನಾಗಿದ್ದಾಳೆ. ನಿಮ್ಮ ವೆಂಕಟರಮಣನ ಥರ ಇದ್ದರೆ ನೋಡಿ" ಅಂದಿದ್ದಾರೆ. ಯಲಹಂಕದಲ್ಲಿ ನಮ್ಮ ಸಂಬಂಧಿಕರಲ್ಲಿ ಚಂದ್ರ ಎಂಬ ಹುಡುಗನಿದ್ದ. ಯಾವುದೋ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಒಳ್ಳೆ ಸಂಬಳವಿತ್ತು. ಆದರೆ ಎಡಗೈ ಬೆರಳುಗಳು ಫ್ಯಾಕ್ಟರಿಯಲ್ಲಿ ಮೆಷಿನಿಗೆ ಸಿಕ್ಕಿ ಕತ್ತರಿಸಿಹೋಗಿತ್ತು. ಮೇಸ್ಟ್ರಿಗೆ ಚಂದ್ರನ ಬಗ್ಗೆ ತಿಳಿಸಲು ಮನೆಯಲ್ಲಿ ನನಗೆ ಹೇಳಿದರು. ನಾನು ಸ್ವಲ್ಪ ಉದಾಸೀನ ಮಾಡಿದೆ. "ಮದನಪಲ್ಲಿಗೆ ವಾರವಾರ ಹೋಗ್ತೀಯ. ಹಾಗೇ ಆ ಮೇಸ್ಟ್ರ ಮನೆಗೆ ಹೋಗೋಕಾಗಲ್ವಾ?" ಅಂತ ಮನೇಲಿ ಬೈದಾಗ ವಿಳಾಸ ಗುರುತು ಹಾಕಿಕೊಂಡು ಹೊರಟೆ.
ಅಷ್ಟೊತ್ತಿಗೆ ಮೂರ್ನಾಕು ವಾರದಿಂದ ಪದ್ಮಾವತಿ ಕಾಣಿಸುತ್ತಿರಲಿಲ್ಲ. ಮೇಸ್ಟ್ರ ವಿಳಾಸ ಪ್ರಶಾಂತನಗರ.
"ಪದ್ಮಾವತಿಯದೂ ಅದೇ ಏರಿಯಾ ಅಲ್ವಾ?" ಅಂದುಕೊಂಡು ಅವಳೇನಾದರೂ ಕಾಣಿಸಿದರೆ ಎಂಬ ಆಸೆಯಿಂದ ಅಲ್ಲೆಲ್ಲಾ ಸುಮ್ಮನೆ ಸುತ್ತಾಡಿದೆ. ನರಸಿಂಹಲು ಮೇಸ್ಟ್ರ ಮನೆ ಸಿಕ್ಕರೂ ಒಳಗೆ ಹೋಗದೇ ಪದ್ಮಾವತಿಗಾಗಿ ಓಡಾಡಿದೆ. ಸಂಜೆಯಾಗುತ್ತಿತ್ತು. ಮೇಸ್ಟ್ರ ಮನೆಗೆ ಹೋದೆ. ಅವರ ಹೆಂಡತಿ ಮತ್ತು ಮಗ ಇದ್ದರು. ಶಿಡ್ಲಘಟ್ಟದಿಂದ ಬಂದಿರುವುದಾಗಿ ಹೇಳಿದೆ. ಕರೆದು ಒಳಗೆ ಕೂರಿಸಿದರು. ಸೋಮಲದ ನನ್ನಕ್ಕನ ಮಾವನ ಹೆಸರು ಹೇಳಿ ನಂತರ ಚಂದ್ರನ ಬಗ್ಗೆ ಹೇಳಿದೆ.
"ನಮ್ಮ ಹುಡುಗಿಗೆ ಕಳೆದವಾರವಷ್ಟೇ ಮದುವೆಯಾಯ್ತು" ಎನ್ನುತ್ತಾ ಆಕೆ ಗೋಡೆಯಮೇಲಿದ್ದ ದೊಡ್ಡದಾಗಿ ಲ್ಯಾಮಿನೇಷನ್ ಮಾಡಿಸಿದ್ದ ಗಂಡುಹೆಣ್ಣಿನ ಫೋಟೋ ತೋರಿಸಿದರು. ಫೋಟೋ ನೋಡಿದ ತಕ್ಷಣ ಎದೆ ಧಸಕ್ಕಂತು.
ಗಂಡನ ಪಕ್ಕದಲ್ಲಿ ಹೂವಿನ ಹಾರ ಹಾಕಿಕೊಂಡು ನಗುತ್ತಿದ್ದಾಳೆ ಪದ್ಮಾವತಿ! ಮುಂದೆ ನಡೆದಿದ್ದೆಲ್ಲಾ ಮಂಪರು ಮಂಪರು. ನೆನಪಿಲ್ಲ..."
"ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು
ಇನ್ನಿಲ್ಲವಾಯಿತೆ ಆ ಹಕ್ಕಿ ಹಾಡು..."
ಒಗ್ಗರಣೆ ಪತ್ರೊಡೆ
1 day ago
21 comments:
ಮಲ್ಲಿ ನನ್ನ ಪರಿಚಿತ ಜಾಗಗಳನ್ನು ನಿಮ್ಮ ಮನಮೋಹಕ ಪದ್ದು ಕಥೆಯಲ್ಲಿ ಹೆಣೆದು..ನಾನು ಸ್ಕ್ಯಾನ್ ಮಾಡಿಓದುವ ಗುಣಕ್ಕೆ ಸ್ವಲ್ಪ ಬ್ರೇಕ್ ಹಾಕಿಬಿಟ್ರಿ...ಬೆಂಗಳೂರಿನಿಂದ ಹೆಚ್ ಕ್ರಾಸ್ ಮೂಲಕ. ಚಿಂತಾಮಣಿಯಿಂದ ಹಾದು ಮದನಪಲ್ಲಿಗೆ ಹೋಗುವುದು...ನನ್ನ ಕಡೆಯ ತಮ್ಮ ಮತ್ತು ನಮ್ಮಮ್ಮ ಅಪ್ಪ ಇರೋದು ಅಲ್ಲೇ..!!! ಪುಂಗನೂರಿನಲ್ಲಿ ನನ್ನ ದೊಡ್ಡಪ್ಪ ಇದ್ದಾರೆ..
ನನಗೆ ನೀವು ಮೊಅದಲೇ ತಿಳಿಸಿದ್ದರೆ ಪದ್ಮಾವತಿಗೂ ವೆಂಕಿಗೂ ಏನಾದ್ರೂ ಮಾಡಿ ಗಂಟುಹಾಕಬಹುದಿತ್ತು...ಆದ್ರೆ..ಇದು ಇತ್ತೀಚಿನ ೪-೫ ವರ್ಷದ ಗಟನೆ ಆದ್ರೆ ಸಾರಿ...ನಾನು ಕುವೈತಿನಲ್ಲಿದ್ದೇನೆ...
ಚನ್ನಾಗಿದೆ ನಿಮ್ಮ ಕಥೆ....ಯಾಕೋ ನಿಮಗೂ ಶಿವುಗೂ ಪೈಪೋಟಿ ಮತ್ತೆ ನಿಮ್ಮಿಬ್ಬರ ಕ್ಯಾಮರಾಗೂ ಲೇಖನಿಗೂ ತಿಕ್ಕಾಟ ಅಗ್ತಿದೆ ಅನ್ಸುತ್ತೆ....ನೋಡೋಣಾ ಯಾವುದರ ಕೈ ಮೇಲಾಗುತ್ತೋ
ಮಲ್ಲಿ ಸರ್..
ಅದ್ಭುತ ಕಥೆ.. ತುಂಬಾ ಭಾವನಾತ್ಮಕವಾಗಿ ಕಥೆಯನ್ನ ನಿರೂಪಿಸಿದ್ದೀರಿ... ಪಾಪ ವೆಂಕಟರಮಣ...
ಜಲನಯನ ಸರ್,
ಈ ಕಥೆ ಅಥವಾ ಘಟನೆ ನಡೆದು ೧೪ ವರ್ಷಗಳಾದವು!
ನಿಮ್ಮ ಅನೇಕ ನೆನಪುಗಳು ಮರುಕಳಿಸುವಂತಾಯ್ತೆಂದು ತಿಳಿದು ಸಂತಸವಾಯಿತು.
ಶಿವು ಮತ್ತು ನನ್ನ ಮಧ್ಯೆ ಪೈಪೋಟಿಯಿಲ್ಲ, ಸ್ನೇಹವಿದೆ. ಒಬ್ಬರನ್ನೊಬ್ಬರು ನೋಡಿ ಕಲಿಯುತ್ತಿರುವೆವು(ಸದಾ ಚರ್ಚಿಸಿಕೊಳ್ಳುತ್ತಿರುತ್ತೇವೆ). ಶಿವು ಅವರಂತೆ ನನಗೆ ಹೆಚ್ಚು ಬರೆಯಲಾಗಿಲ್ಲ. ಪ್ರಯತ್ನ ಜಾರಿಯಲ್ಲಿದೆ!
nice story
ಮಲ್ಲಿಕಾರ್ಜುನ,
ನಿಮ್ಮ ಈ ಮೊದಲಿನ ಲೇಖನಗಳನ್ನು ಓದಿದಾಗ, ನಿಮ್ಮ ಶೈಲಿಯನ್ನು ಮೆಚ್ಚಿಕೊಂಡಿದ್ದೆ. ಈಗ ಈ ಘಟನೆ(ಕತೆ)ಯನ್ನು ನೀವು ಬರೆದ ರೀತಿ ನೋಡಿದರೆ, ತುಂಬಾ ಖುಶಿಯಾಗುತ್ತೆ. ಕೊನೆಯಲ್ಲಿ ಬರುವ ತಿರುವಂತೂ superb ಆಗಿದೆ. ನಿಮ್ಮಿಂದ
ಸುಂದರವಾದ ಚಿತ್ರಗಳನ್ನೂ, ಲೇಖನಗಳನ್ನೂ ಕಾಯುತ್ತೇನೆ.
ನಿರೂಪಣೆ ಚೆನ್ನಾಗಿತ್ತು....
ಇನ್ನಷ್ಟು ಸ್ಟೋರಿಗಳು ಬರಲಿ.....
ಪದ್ಮಾವತಿ ಕಥೆ ಚೆನ್ನಾಗಿದೆ. ಕಥೆಯನ್ನು ನೀವು ಹೆಣೆದ ಬಗೆ, ನಿರೂಪಣಾ ಶೈಲಿ ಎಲ್ಲವೂ ಚೆನ್ನಾಗಿದೆ, ನಿಮ್ಮ ಬರಹಗಳ ಪುಸ್ತಕ ರಚನೆ-ಬಿಡುಗಡೆ ಸ೦ಭ್ರಮಕ್ಕೆ ಕಾದಿದ್ದೇನೆ,.
ತು೦ಬಾ ದಿನಗಳ ನ೦ತರ ಬ್ಲಾಗ್ ಲೋಕಕ್ಕೆ ಬರುತ್ತಿದ್ದೇನೆ ಮಲ್ಲಿಕಾರ್ಜುನ್ ಸರ್...ನಿಮ್ಮೆಲ್ಲ ಬರಹಗಳನ್ನು ಒ೦ದೇ ಗುಟುಕಿಗೆ ಓದಿಬಿಟ್ಟೆ...
ಇದು ತು೦ಬಾ ಸ್ವಾರಸ್ಯಕರವಾಗಿದೆ..... ಅ೦ಗೈಯಲ್ಲೇ ತುಪ್ಪ ಇಟ್ಟುಕೊ೦ಡು ಬೀದಿ ಅಲೆದರು ಅನ್ನುವ೦ತಾಯಿತಲ್ಲ:)
ಇದು ನಿಜ ಕಥೆನೋ... ಅಥವಾ ನಿಮ್ಮ ಹೆಣೆದಿದ್ದೋ?
ತುಂಬಾ ಚೆನ್ನಾಗಿದೆ ಸರ್. ಖುಷಿಯಿಂದ ಓದಿಸಿಕೊಂಡು ಹೋಯಿತು ಈ ಲೇಖನ :)
ಛೇ, ಪಾಪ ಅನ್ಸುತ್ತೆ ಕಣ್ರೀ... :)
ಚೆನ್ನಾಗಿತ್ತು ಕಥೆ.
ಮಲ್ಲಿಕಾರ್ಜುನ್ ಸಾರ್..
ಕಥೆ ತುಂಬಾ ಚೆನ್ನಾಗಿದೆ. ಆದರೆ ಪಾಪ ವೆಂಕಟರಮಣ... ನಿಮ್ಮ ನಿರೂಪಣಾ ಶೈಲಿ ಚೆನ್ನಾಗಿದೆ. ಚಿತ್ರಕಲೆ, ಬರವಣಿಗೆ ಎರಡೂ ಸಿದ್ಧಿಸಿದೆ ನಿಮಗೆ... ಅಭಿನಂದನೆಗಳು.
ಶ್ಯಾಮಲ
ಛೆ! ಎನ್ಸಾರ್ ಇದು? ಸ್ವಲ್ಪ ಮೊದ್ಲೇ ಸಿಕ್ಕಿದ್ರೆ...
ಹುಡುಕಾಟದವರೆ....
ವೆಂಕಟರಮಣನ ಕಥೆ ಓದಿ ನನ್ನ ಹಳೆಯ ಘಟನೆ ನೆನಪಾಯಿತು..
ಬಹಳ ಸುಂದರವಾಗಿದೆ ನಿಮ್ಮ ಬರವಣಿಗೆಯ ಶೈಲಿ...
ಇನ್ನಷ್ಟು ಬರೆಯಿರಿ...
ವೆಂಕಟರಮಣರಿಗೆ ನನ್ನ ಸಹಾನುಭೂತಿಗಳು...
ಸ್ವಲ್ಪ ದಿನ ಫೋಟೊ ಲೇಖನಗಳಿಗೆ ಬ್ರೇಕ್ ಕೊಟ್ಟು...
ಕೆಲವು ಲೇಖನಗಳ ನಿರೀಕ್ಷೆಯಲ್ಲಿದ್ದೇವೆ...
ಸರ್,
ತುಂಬಾ ಚೆನ್ನಾಗಿದೆ ಲೇಖನ,
ಕ್ಷಣ ಕ್ಷಣಕ್ಕೂ ಕುತೂಹಲ ಮುಂದೇನಾಗುವುದೋ ಎಂದು
ಕೊನೆಯಲ್ಲಿ ಬಹಳ ನಗು ಬಂತು ಸ್ಥಿತಿ ನೆನದು
ಛೆ... ಹೀಗಾಗಬಾರದಿತ್ತು....!!!
ಒಳ್ಳೆ ನಿರೂಪಣೆ....
ಮಲ್ಲಿಕಾರ್ಜುನ್,
ತುಂಬ ಚೆನ್ನಾಗಿ ಬರೆದಿದ್ದೀರ, ಒಳ್ಳೆಯ ನಿರೂಪಣೆ, ಪ್ರಕಾಶ್ ಹಾಗು ಶಿವೂ,, ನಿಮಗೂ, ಕತೆ ಬರೆಯುವ ಹುಚ್ಚು ಹಿಡಿಸಿದ್ದರೋ...?
ತುಂಬಾ ಚೆನ್ನಾಗಿದೆ ಕಥಾ ನಿರೂಪಣಾ ಶೈಲಿ. ಇಂತಹ ಉತ್ತಮ ಕಥೆ/ಲೇಖನಗಳು ಮತ್ತಷ್ಟು ಬರಲಿ.
ಮಲ್ಲಿಕಾರ್ಜುನ ಸರ್,
ಸರಳವಾದ ಬರಹ ಓದಿಸಿಕೊಂಡು ಹೋಗುತ್ತಾ ಕುತೂಹಲವನ್ನೂ ತುಂಬಿತು. ಇನ್ನಷ್ಟು ಬರಹಗಳು ನಿಮ್ಮಿಂದ ಬರಲಿ.
ಧನ್ಯವಾದಗಳು.
ಸ್ನೇಹದಿಂದ
ಚಂದ್ರು
ಸೊಗಸಾದ ಕಥೆ ಮಲ್ಲಿಕಾರ್ಜುನ್ ಅವರೇ. ಹೇಳಿರುವ ಪರಿ ಚೆನ್ನಾಗಿದೆ. ಆದರಿದು ನಿಜ ಘಟನೆ ಎನ್ನುವುದೇ ವಿಷಾದನೀಯ.
ಸೊಗಸಾಗಿ ಬರೆದಿದ್ದೀರಿ. ನಿಮ್ಮ ಫೋಟೋಗಳನ್ನು (ಅಂದ್ರೆ, ನೀವು ತೆಗೆದ ಫೋಟೋಗಳು ಅಂತ!) ನೋಡಿದಷ್ಟೇ ಖುಶಿಯಾಯ್ತು!
ಕೊನೆಗೆ ನೀವು ಕತೆಯನ್ನು ಬರೆಯಲು ಪ್ರಾರಂಭಿಸಿರುವುದು ಖುಷಿಯ ವಿಚಾರ. ಶೈಲಿಯಲ್ಲಿ ಇನ್ನಷ್ಟು ವೇಗವನ್ನು ರೂಢಿಸಿಕೊಳ್ಳಿ. ಪದ್ಮಾವತಿ ಕತೆ ತುಂಬಾ ಚೆನ್ನಾಗಿದೆ. ವೆಂಕಟರಮಣನ ಬದುಕಿನಲ್ಲಿ ಇನ್ನು ಅನೇಕ ಕತೆಗಳಿರಬಹುದು. ಅದನ್ನು ಹೊರಗೆಡಹಿ ನಿಮ್ಮದೇ ಶೈಲಿಯಲ್ಲಿ ಬ್ಲಾಗಿಗೆ ತನ್ನಿ.
Post a Comment