Thursday, October 22, 2009

ಹುಳುಮಾನವನ ಕೀಟಕೋಟಲೆಗಳು


ಈ ಬಾರಿಯ ಕೇರಳ ಪ್ರವಾಸ ತುಂಬ ಸುಸ್ತು ಮಾಡಿತ್ತು. ಕರ್ರಗೆ ಸೀದ ಬಾಳೆಕಾಯಿ ತರಹ ಆಗಿದ್ದೆ.
ಅಂಗಡಿಗೆ ಬಂದು ಉಸ್ಸಪ್ಪಾ... ಅನ್ನುವಷ್ಟರಲ್ಲಿ ವೆಂಕಟರಮಣನ ಫೋನ್..
"ಕೇರಳ ಬಿಡ್ತಾ?"
"ಅಂಗಡಿಗೆ ಬಂದಿದ್ದೀನಪ್ಪ"
"ಸ್ವಲ್ಪ ಅರ್ಜೆಂಟ್... ನಮ್ಮನೇಗೆ ಬರ್ತೀರಾ?"
ಅವರ ಮನೆ ಅಂಗಡಿಗೆ ತುಂಬಾ ಹತ್ತಿರ. ನಾಲ್ಕು ಹೆಜ್ಜೆಯಷ್ಟೇ.
"ಸುಸ್ತಾಗಿದ್ದೀನಿ. ನೀನೇ ಬಾ" ಅಂದೆ.
"ಇಲ್ಲ. ಅರ್ಜೆಂಟ್ ಬನ್ನಿ" ಅನ್ನುತ್ತಾ ಫೋನಿಟ್ಟ.
ಹೋದೆ.
"ನೋಡಿ ನಮ್ಮ ಸೋನು ಈ ಡಬ್ಬದಲ್ಲಿ ಹುಳುಗಳನ್ನು ಹಿಡಿದಿಟ್ಟಿದ್ದಾಳೆ" ಎನ್ನುತ್ತಾ ಡಬ್ಬವನ್ನು ಮುಂದಿಟ್ಟ.
ಅವನ ಮಗಳು ಸೋನು ಒಂದು ರಟ್ಟಿನ ಡಬ್ಬಿಯಲ್ಲಿ ಹುಳಗಳನ್ನಿಟ್ಟಿದ್ದಳು. ಅದರಲ್ಲಿ ಕೆಲವಾಗಲೇ ಗೊಟಕ್ ಅಂದಿದ್ದವು!
"ನೋಡಿ ಮಲ್ಲಿ ಅಂಕಲ್‌ಗೆ ಕೊಡ್ಬೇಕು ಅಂತ ತಂದಿಟ್ಟಿದ್ದಾಳೆ" ಎಂದು ವೆಂಕಟರಮಣ ಅಂದಾಗ ನಂಗೇ ಒಂಥರಾ ಆಯ್ತು.
"ಸೋನು ಹಾಗಿಲ್ಲಾ ಎಲ್ಲಾ ಹುಳ ಮನೆಗೆ ತರ‍್ಬೇಡ. ಅವು ಊಟ ಇಲ್ದೆ ಸಾಯ್ತವೆ. ಅದೆಲ್ಲಿದೆ ಅಂತ ನನಗೆ ಹೇಳು ಸಾಕು" ಎಂದು ಆ ಪುಟ್ಟ ಪೊರಿಗೆ ಹೇಳಿದೆ.
ಸೋನು ಒಬ್ಬಳೇ ಅಲ್ಲ, ಅವಳಣ್ಣ ಹರೀಶ, ಅವರಕ್ಕಪಕ್ಕದ ಮನೆಯ ಹುಡುಗರು ಸ್ಟ್ಯಾನ್ಲಿ, ವ್ರೆಸ್ಲಿ ಎಲ್ಲ ಸಿಕ್ಕಸಿಕ್ಕ ಹುಳುಗಳನ್ನು ನನ್ನ ಅಂಗಡಿಗೇ ತಂದುಬಿಡುತ್ತಾರೆ.
"ಸಹವಾಸದಿಂದ ಸನ್ಯಾಸಿ ಕೆಟ್ಟ" ಎಂಬ ಗಾದೆಮಾತು ಏನೇನು ಅರ್ಥ ಕೊಡುತ್ತದೋ ಗೊತ್ತಿಲ್ಲ. ಆದರೆ, ನನ್ನ ಸಂಪರ್ಕಕ್ಕೆ ಬಂದವರು ಮಾತ್ರ ಸ್ವಲ್ಪ ಸ್ವಲ್ಪ ಹಾಳಾಗಿದ್ದಾರೆ!
ಇದಕ್ಕೆಲ್ಲ ಕಾರಣ ಆ ದಿನ ನಡೆದ ಘಟನೆ...
* * * * *
ಆ ದಿನ ಯಾವುದೋ ಹಬ್ಬವಿತ್ತು.
ಅಂಗಡಿಯಲ್ಲಿದ್ದ ನನಗೆ ಫೋನ್ ಮಾಡಿ, "ಯಾವುದೋ ಹೊಸ ತರಹದ ಹುಳ ನಮ್ಮ ಮನೆ ಗೋಡೆ ಮೇಲಿದೆ ಬನ್ನಿ" ಎಂದು ಸ್ನೇಹಿತ ವೆಂಕಟರಮಣ ಕರೆದ.
ಇವರಿಗೆ ಹುಳು ನೋಡಿದ ತಕ್ಷಣ ನಾನೇ ಏಕೆ ನೆನಪಾಗುತ್ತೀನೋ?!
ಶಾಲೆಗೆ ರಜೆಯಿದ್ದುದರಿಂದ ಅವರ ಮನೆ ಬಳಿ ಮಕ್ಕಳ ಗುಂಪು ಸೇರಿತ್ತು. ವೆಂಕಟರಮಣನ ಮಕ್ಕಳು ಮತ್ತು ಅಕ್ಕಪಕ್ಕದ ಮನೆಯವರ ಮಕ್ಕಳು ಎಲ್ಲ ನನ್ನನ್ನು ಅನಕೊಂಡ ಹಾವು ಹಿಡಿಯಲು ಬಂದಿರುವನಂತೆ ಕುತೂಹಲದಿಂದ ನೋಡುತ್ತಿದ್ದರು. ಆ ಸಂದರ್ಭಕ್ಕೆ ತಕ್ಕಂತೆ ನಾನೂ ಸಹ ಒಂದು ಪ್ಲಾಸ್ಟಿಕ್ ಡಬ್ಬವನ್ನು ಹಿಡಿದುಕೊಂಡು ಹೋಗಿದ್ದೆ.


ಬಿಳಿ ಬಣ್ಣದ ಗೋಡೆ ಮೇಲೆ ಹಸಿರು ಹುಳು. ಕಬಂಧ ಬಾಹುಗಳಂತೆ ಅದಕ್ಕೆ ಹತ್ತಾರು ಕೈಗಳು ಮತ್ತು ಅದರ ಮೇಲೆಲ್ಲಾ ರೋಮಗಳು. ನೋಡಿದೊಡನೆಯೇ ನನ್ನ ರೋಮಗಳೂ ನಿಮಿರಿ ನಿಂತಿತು.
ಪ್ರತಿ ಕಂಬಳಿ ಹುಳಕ್ಕೂ ತನ್ನದೇ ಆದ ಆಹಾರ ಸಸ್ಯವಿರುತ್ತೆ. ಏಕಪತ್ನಿ ವ್ರತಸ್ಥರಂತೆ ಇವು ಏಕ ಸಸ್ಯ ವ್ರತಸ್ಥರು. ಈಗ ಇದರ ಆಹಾರ ಸಸ್ಯ ಯಾವುದು? ಅಲ್ಲೇ ಹತ್ತಿರದಲ್ಲಿ ಅಂದರೆ ಅವರ ಮನೆ ಬಾಗಿಲ ಪಕ್ಕದಲ್ಲಿ ಮನಿಪ್ಲಾಂಟ್ ಮತ್ತು ಪನ್ನೀರೆಲೆಯ ಗಿಡಗಳನ್ನು ಬೆಳೆಸಿದ್ದರು. ಆದರೆ ಆ ಗಿಡಗಳಲ್ಲಿ ಯಾವುದೇ ಹುಳಗಳಿರಲಿಲ್ಲ. ಆದರೂ ಪುಸ್ತಕದಲ್ಲಿ ಹುಡುಕಿದರಾಯ್ತು ಅಂದುಕೊಂಡು ಪ್ಲಾಸ್ಟಿಕ್ ಡಬ್ಬದಲ್ಲಿ ಈ ಎರಡೂ ಗಿಡಗಳ ಎರಡೆರಡು ಎಲೆಗಳನ್ನು ಹಾಕಿದೆ. ಒಂದು ಎಲೆ ಮೇಲೆ ಮೆಲ್ಲನೆ ಹುಳುವನ್ನು ಹತ್ತಿಸಿಕೊಂಡು ಮಕ್ಕಳಿಗೆಲ್ಲಾ ತೋರಿಸಿದೆ.
"ಇದನ್ನೇನ್ಮಾಡ್ತೀರ ಅಂಕಲ್?"
"ಫೋಟೋ ತೆಗೀತೀರಾ?"
ಅದು ಕಚ್ಚುತ್ತಾ?"...
ಟುಂಯ್.. ಟುಂಯ್.. ಎಂದು ಬಾಣ ಬಂದಂತೆ ಪ್ರಶ್ನೆಗಳು ತೂರಿ ಬಂದವು.
"ಈ ಹುಳು ಎಲೆ ತಿನ್ನುತ್ತೆ. ಆಮೇಲೆ ಗೂಡು ಕಟ್ಟಿಕೊಳ್ಳುತ್ತೆ. ಅದಕ್ಕೆ ಪ್ಯೂಪ ಅನ್ನುತ್ತಾರೆ. ಅದರಿಂದ ಚಿಟ್ಟೆ ಆಚೆ ಬರುತ್ತೆ. ಅದು ಆಚೆ ಬಂದಮೇಲೆ ನಿಮಗೆ ತೋರಿಸ್ತೀನಿ" ಎಂದು ಹೇಳಿ ಬಂದೆ.



ಮನೆಗೆ ಹೋಗಿ ಚಿಟ್ಟೆಗಳ ಪುಸ್ತಕದಲ್ಲಿ ಹುಡುಕಿದೆ. ಸಿಕ್ಕಿತು. ಈ ಹುಳು Common Baron ಚಿಟ್ಟೆಯ ಕಂಬಳಿಹುಳು. ಇದರ ಆಹಾರ ಸಸ್ಯ ಮಾವು! ನನಗೆ ಅಚ್ಚರಿಯಾಯ್ತು. ಏಕೆಂದರೆ ಆ ಹುಳು ಸಿಕ್ಕ ಸ್ಥಳದ ಬಳಿ ಮಾವಿನ ಗಿಡವಿರಲಿಲ್ಲ.
ವೆಂಕಟರಮಣನಿಗೆ ಫೋನ್ ಮಾಡಿದೆ.
"ನಿಮ್ಮನೆ ಹತ್ರ ಮಾವಿನ ಗಿಡ ಇದ್ಯಾ?" ಎಂದು ಕೇಳಿದೆ.
"ನಮ್ಮನೆ ಮುಂದೆ ಕಾಲುದಾರಿ ಇದ್ಯಲ್ಲ. ಅದರಾಚೆ ಗಿಡಗಳು ಬೆಳ್ಸಿದ್ದೀವಲ್ಲ. ಅದ್ರಲ್ಲಿ ಮಾವಿನ ಗಿಡವೂ ಇದೆ. ಸ್ವಲ್ಪ ದೊಡ್ಡದಾಗಿದೆ" ಅಂದ.
ಆ ಗಿಡದಿಂದ ಇಳಿದು ಕಾಲುದಾರಿಯನ್ನು ದಾಟಿ, ಅದ್ರಲ್ಲೂ ಎಷ್ಟೊಂದು ಚಕ್ರಗಳು(ವಾಹನಗಳು) ಶೂ ಚಪ್ಪಲಿಗಳನ್ನು ತಪ್ಪಿಸಿಕೊಂಡು ಬಂದು ಮನೆಗೋಡೆ ಹತ್ತುವುದು ಈ ಹುಳು ಕೈಲಿ ಆಗುತ್ತಾ? ಸಾಧ್ಯವಾ?

"ಮಿಸ್ಸಿಂಗ್ ಲಿಂಕ್" ಹುಡುಕಲೇಬೇಕು ಎಂದು ಮತ್ತೆ ಅವರ ಮನೆ ಬಳಿ ಹೋದೆ. ಅಲ್ಲಿ ಸಿಕ್ಕಿತು ಈ ತಪ್ಪಿಹೋಗಿದ್ದ ಸಂಗತಿ!
ಹಬ್ಬ ಅಲ್ವಾ, ಅವರ ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟಿದ್ದರು. ಅದರಿಂದ ಬಂದ ಹುಳು ಗೋಡೆ ಹತ್ತಿರಬೇಕು.
"ಈ ಮಾವಿನ ಎಲೆ ಯಾವ ಗಿಡದ್ದು" ಎಂದು ವಿಚಾರಿಸಿದೆ.
"ಅಲ್ಲೇ ಇದೆಯಲ್ಲ ಆ ಗಿಡದ್ದು" ಅಂದರು.
ಆ ಗಿಡದ ಬಳಿ ಹೋಗಿ ಹುಡುಕಿದೆ. ಅಷ್ಟರಲ್ಲಿ ಹುಡುಗರೂ ನನಗೆ ಜೊತೆಯಾದರು. ಆ ಗಿಡದಲ್ಲಿ ಏಳೆಂಟು ಹುಳುಗಳಿದ್ದವು. ನಾನು ಎರಡನ್ನು ಮಾತ್ರ ಕೆಲಮಾವಿನ ಎಲೆಗಳೊಂದಿಗೆ ಡಬ್ಬದಲ್ಲಿ ಹಾಕಿ ತಂದೆ.
ಪ್ರತಿದಿನ ಅವಕ್ಕೆ ಫ್ರೆಶ್ ಮಾವಿನೆಲೆಯ ಮೃಷ್ಟಾನ್ನ ಭೋಜನ!
"ಅಂಕಲ್ ಚಿಟ್ಟೆ ಬಂತಾ?" ಎನ್ನುತ್ತಾ ಒಬ್ಬರಾದ ಮೇಲೊಬ್ಬರು ಹುಡುಗರು ಧಾಳಿಮಾಡತೊಡಗಿದರು.
"ಬಂದ ಮೇಲೆ ನಾನೇ ನಿಮ್ಮನ್ನು ಕರೀತೀನ್ರೋ. ಅದುವರೆಗೂ ಕಾಟ ಕೊಡ್ಬೇಡಿ" ಎಂದು ಹೇಳಿ ಸಾಗಹಾಕಿದೆ.


ಹುಳ ಪ್ಯೂಪ ಆಯ್ತು. ಒಂದು ವಾರಕ್ಕೆ ಚಿಟ್ಟೆ ಹೊರಕ್ಕೆ ಬಂತು. ಅದನ್ನು ಫೋಟೋ ತೆಗೆದೆ. ಡಬ್ಬದಲ್ಲಿಟ್ಟುಕೊಂಡು ತಂದು ಹುಡುಗರಿಗೆ ತೋರಿಸಿ ಹಾರಲು ಬಿಟ್ಟೆ. ಎಲ್ಲರೂ ತಮಗೇ ಹಾರಲು ಬಂದಂತೆ ಕುಣಿದಾಡಿದರು.
ಈಗ ಈ ಹುಡುಗರಲ್ಲೇ ಸ್ಪರ್ಧೆ ಏರ್ಪಟ್ಟಿದೆ! ಯಾವ ಆಕಾರದ ಎಂಥಹ ಹುಳು ಸಿಕ್ಕರೂ ತಂದು ನನ್ನ ಮುಂದಿಡುತ್ತಿದ್ದಾರೆ!
"ಹಾಗೆಲ್ಲ ತರಬೇಡ್ರೋ. ಅದೆಲ್ಲಿದೆ ಅಂತ ನನಗೆ ಬಂದು ಹೇಳಿ ಸಾಕು" ಎಂದು ಹೇಳಿ ಹೇಳಿ ಸಾಕಾಗಿದೆ.
ವೆಂಕಟರಮಣನ ಫೋನ್... "ನಮ್ಮ ಪಕ್ಕದ್ಮನೆಯವ್ರು ಹೇಳ್ತಿದ್ರು, ಈ ಎಲ್ಲ ಹುಳು, ಮಕ್ಕಳು, ಪಿಳ್ಳೆಗಳನ್ನೆಲ್ಲ ಅವರ ಅಂಗಡಿಗೆ ಕಳಿಸಿಬಿಡೋಣ ಅಂತ. ಹೆಂಗೆ...?"
ಹುಳುಗಳ ಶಾಪ... ಈ ಮಕ್ಕಳ ಅಮ್ಮಂದಿರ ಶಾಪ...
ಈಗ ನನ್ನ ಈ ಪಾಡನ್ನು ಪಡಿಪಾಟಲನ್ನು ಯಾರಿಗೆ ಹೇಳುವುದು...
ಓ my God see my ಪಾಡ್..!

16 comments:

ಕ್ಷಣ... ಚಿಂತನೆ... said...

ಮಲ್ಲಿಕಾರ್ಜುನ ಸರ್‍,
ಬರಹ ಮತ್ತು ಚಿತ್ರಗಳು ಇಷ್ಟವಾಯಿತು. ಜೊತೆಗೆ ಮಕ್ಕಳಿಗೆ ನಿಮ್ಮಂದ ಪ್ರಕೃತಿಯ ಪಾಠ ಮತ್ತು ಪಥ ಎರಡೂ ಚೆನ್ನಾಗಿ ಮಾಡುತ್ತಿದ್ದೀರಿ.

ಲೇಖನವನ್ನು ಓದುತ್ತಾ ಹೋದಂತೆ ಹಿಂದೆ ಎಲ್ಲೋ ಓದಿದ್ದೆ ಅನಿಸಿತು. ಇತ್ತೀಚೆಗಿನ ಕನ್ನಡ ಪ್ರಭದಲ್ಲಿ ಓದಿದ್ದೀನಿ ಅಂತ ತಿಳಿದಿರುವೆ.

ಧನ್ಯವಾದಗಳು.

shivu.k said...

ಮಲ್ಲಿಕಾರ್ಜುನ್,

ಪ್ರತಿ ಕಂಬಳಿ ಹುಳಕ್ಕೂ ತನ್ನದೇ ಆದ ಆಹಾರ ಸಸ್ಯವಿರುತ್ತೆ. ಏಕಪತ್ನಿ ವ್ರತಸ್ಥರಂತೆ ಇವು ಏಕ ಸಸ್ಯ ವ್ರತಸ್ಥರು.
ಈ ಮಾತು ನಮ್ಮಂಥ ಸ್ವಾರ್ಥ ಮನುಷ್ಯರಿಗೆ ಎಲ್ಲಿ ಗೊತ್ತಾಗುತ್ತೆ. ಈ ಚಿಟ್ಟೆಗಳಿಂದಲೂ ಎಂಥ ಸೊಗಸಾದ ಪಾಠ ಅಲ್ವಾ.ನಿಮ್ಮೂರ ಮಕ್ಕಳ ಕುತೂಹಲದ ಗಾತ್ರ ದೊಡ್ಡದು ಮಾಡುವಲ್ಲಿ ನಿಮ್ಮ ಪಾತ್ರ ದೊಡ್ಡದು. ಮೊದಲು ಮಕ್ಕಳು, ನಂತರ ಹಿರಿಯರು.ಚಿತ್ರಗಳ ಜೊತೆಗೆ ಲೇಖನ ತುಂಬಾ ಚೆನ್ನಾಗಿದೆ.



ಧನ್ಯವಾದಗಳು.

Unknown said...

ನಿಮ್ಮ ಚಿತ್ರಲೇಖನದ ಬಗ್ಗೆ ನಾನು ಕಾಮೆಂಟ್ ಮಾಡುವುದಿಲ್ಲ. ಆದರೆ ನಿಮ್ಮ ಪರಿಸರದಲ್ಲಿ ನೀವು ಮಕ್ಕಳಲ್ಲಿ ಹುಟ್ಟಿಸಿರುವ ಕ್ರೇಜ್ ಇದೆಯಲ್ಲಾ ಅದು ವಂಡರ್ ಫುಲ್!!! ಇದೆಲ್ಲವನ್ನೂ ಇದೆಲ್ಲದರ ಸಾಧ್ಯತೆಯನ್ನು ಕುರಿತು ಯೋಚಿಸುವಾಗ ನನಗೆ ನೆಪಾಗುವುದು ತೇಜಸ್ವಿಯವರ ಒಂದು ಮಾತು 'ಮನುಷ್ಯ ಇರಬೇಕಾಗಿರುವುದೇ ಈಗಲ್ಲವೆ?'

sunaath said...

‘ಹುಲು ಮಾನವನ ಕೋಟಲೆ’ಗಳನ್ನು ನೀವು ‘ಹುಳು ಮಾನವನ
ಕೀಟ ಕೋಟಲೆಗಳು’ ಎಂದು ಪರಿವರ್ತಿಸಿ pun ಮಾಡಿದಾಗಲೇ,
ನನಗೆ ಆಕರ್ಷಣೆ ಹುಟ್ಟಿತು. ಮುಗ್ಧ ಹುಡುಗರ ಆಟಗಳನ್ನು, ಅವರಿಗೆ ನೀವು ಕೊಟ್ಟ ಶಿಕ್ಷಣವನ್ನು ಎಷ್ಟು simple ಆಗಿ, ಎಷ್ಟು ಸುಂದರವಾಗಿ ಚಿತ್ರಿಸಿದ್ದೀರಲ್ಲ. ಅದರ ಜೊತೆಗೇ ನಮಗೂ ಸಹ ಶಿಕ್ಷಣ ನೀಡಿದ್ದೀರಿ.
ಫೋಟೋಗಳಂತೂ as usual ಆಕರ್ಷಕವಾಗಿವೆ.

Guruprasad said...

ಚಿತ್ರಗಳ ಹಾಗು ನಿಮ್ಮ ಬರಹದ ಬಗ್ಗೆ ಏನು ಕಾಮೆಂಟ್ ಮಾಡೋಕೆ ಉಳಿದಿಲ್ಲ... ಪರಿಸರ ಕಾಳಜಿ, ಚಿಟ್ಟೆ, ಹುಳ , ಇವುಗಳ ಬಗ್ಗೆ ಚಿಕ್ಕಮಕ್ಕಳಲ್ಲಿ ಹುಟ್ಟಿಸಿರುವ ಆಸಕ್ತಿ.. ತುಂಬ ಇಷ್ಟ ಆಯಿತು.. ನೀವು ತಿಳಿದು,, ಪ್ರಾಕ್ಟಿಕಲ್ ಆಗಿ ಚಿಕ್ಕ ಮಕ್ಕಳಿಗೂ ಹೇಳ್ತಾ ಇದ್ದೀರಾ.. ಗುಡ್ ವರ್ಕ್ ಮಲ್ಲಿ ಸರ್...

Ittigecement said...

ಹುಡುಕಾಟದವರೆ...

ನಿಮ್ಮ ಈ ಚಿತ್ರ ಲೇಖನಗಳು ಒಂದು ಪುಸ್ತಕವಾಗಿ ಬಂದರೆ...
ಆಸಕ್ತರಿಗೆ, ಮಕ್ಕಳಿಗೆ
ವಿದ್ಯಾರ್ಥಿಗಳಿಗೆ ಬಹಳ ಉಪಯೋಗವಾಗುತ್ತದೆ....

ನಿಮ ಹುಡುಕಾಟ, ಪ್ರಯೋಗಶೀಲತೆ , ಕ್ರಿಯೇಟಿವಿಟಿ..ಖುಷಿಯಾಗುತ್ತದೆ...

ನಿಮ್ಮ ಪರಿಶ್ರಮ, ಕಲೆಗೆ ನನ್ನ ನಮನಗಳು...

AntharangadaMaathugalu said...

ಮಲ್ಲಿಕಾರ್ಜುನ್ ಸಾರ್
ಲೇಖನ ಚೆನ್ನಾಗಿದೆ. ಅಂತೂ ಮಕ್ಕಳಲ್ಲಿ ನೀವು ಹುಟ್ಟು ಹಾಕುತ್ತಿರುವ ಪರಿಸರ ಪ್ರೇಮ ಮೆಚ್ಚುವಂತದ್ದು... ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಅಭಿನಂದನೆಗಳು.......

ಶ್ಯಾಮಲ

ದೀಪಸ್ಮಿತಾ said...

ಮಲ್ಲಿಕಾರ್ಜುನ್ ಸರ್, ಲೇಖನ, ಚಿತ್ರಗಳು ಚೆನ್ನಾಗಿವೆ. ಪ್ರಕೃತಿ ಪಾಠ ಮಕ್ಕಳಿಗೆ ಮಾತ್ರವಲ್ಲ, ದೊಡ್ಡವರಿಗೂ

SSK said...

ಮಲ್ಲಿಕಾರ್ಜುನ ಅವರೇ,
ಲೇಖನ ಹಾಗು ವಿವರಣೆಗಳು ಮಸ್ತ್ ಮಜವಾಗಿವೆ ಹಾಗು ಜ್ಞಾನದಾಯಕವಾಗಿವೆ!
ಧನ್ಯವಾದಗಳು ನಿಮಗೆ.

ವನಿತಾ / Vanitha said...

wonderful narration; hats off to lil kids..& you too!!!

Keshav.Kulkarni said...

ಮಲ್ಲಿ,
ಸೂಪರ್.
- ಕೇಶವ

Jayalaxmi said...

ಮಲ್ಲಿಕಾರ್ಜುನ್, ನೀವು ಮಕ್ಕಳಲ್ಲಿ ಕೀಟ ಲೋಕದ ಕುರಿತು ಆಸಕ್ತಿ ಉಂಟು ಮಾಡಿದ್ದು ಕಂಡು ನನ್ನ ಮಕ್ಕಳೂ ಆ ಮಕ್ಕಳ ಗುಂಪಿನಲ್ಲಿರಬೇಕಿತ್ತು ಅನಿಸಿತು. ಚಿಟ್ಟೆ ಕಂಡು ಖುಷಿ ಆಯ್ತು. ಮಾವಿನೆಲೆ ತಿನ್ನುವ ಹುಳುಗಳೆಲ್ಲ ಇಂಥದೇ ಬಣ್ಣದ ಚಿಟ್ಟೆಗಳಾಗುತ್ತಾವಾ?(ಚಿಟ್ಟೆಗಳ ಬಣ್ಣದ ಕುರಿತು ಆಸಕ್ತಿ ಮೂಡುತ್ತಿದೆ... ಯಾವ ಬಣ್ಣದ ಭಿಟ್ಟೆ,ಯಾವ ಗಿಡದ ಎಲೆ ತಿಂದು ಮೈತಾಳಿರಬಹುದು!!! ಅನ್ನುವ ಕುರಿತು).

ರೂpaश्री said...

as always wonderful photos!!

hoovina sahavaasadiMda naaru muDi Eritu annuvaMte ... nimma sahavaasadiMdaagi naavoo bahaLaShTu tiLidukoLLuvaMtaagide:)

ತೇಜಸ್ವಿನಿ ಹೆಗಡೆ said...

ಮಲ್ಲಿಕಾರ್ಜುನ ಅವರೆ,

ಸುಂದರ ಚಿಟ್ಟೆ ಚಿತ್ರ ಹಾಗೂ ಅಷ್ಟೇ ಮಾಹಿತಿಪೂರ್ಣ ಲೇಖನ. ನಿಮ್ಮ ಉತ್ತಮ ಹವ್ಯಾಸ ಇದೇ ರೀತಿ ಮುಂದುವರಿಯಲಿ. ಹಾಂ.. ಆದಿತ್ಯವಾರದ ಕನ್ನಡಪ್ರಭ ಸಾಪ್ತಾಹಿಕದಲ್ಲಿ ಬಂದ ನೀವು ತೆಗೆದ ಫೋಟೋ ಕೂಡ ತುಂಬಾ ಚೆನ್ನಾಗಿತ್ತು. ಅಭಿನಂದನೆಗಳು.

ಸೀತಾರಾಮ. ಕೆ. / SITARAM.K said...

ಅದ್ಭುತ ಲೇಖನ ಮಲ್ಲಿಕಾರ್ಜುನರವರೇ. ನಮ್ಮ ಮನೆಯ ಪಕ್ಕದ ಮಾಚಿನ ಮರದಲ್ಲಿ ಈ ತರಹದ ಹುಳು ನೋಡಿದ್ದೆನೆ. ಹಾಗೂ ನಮ್ಮ ಮನೆ ಕರಿಬೇವು ಗಿಡದಲ್ಲಿ ಎಲೆಯಡಿ ಹುಳುವೊ೦ದು ಎಲೆಬಣ್ಣ ಹಾಗೂ ಆಕಾರ ಹೊ೦ದಿದ್ದು ಬೆರಗು೦ಟು ಮಾಡಿತ್ತು. ಅದೇ ತರಹದ ಚಿತ್ರ ತಮ್ಮ ಅಲ್ಬಮ್ನಲ್ಲಿದೆ. ಚಿತ್ರ ಖುಶಿ ಕೊಟ್ಟಿತು. ನವಿರು ಹಾಸ್ಯದ ನಿರೂಪಣೆ ಚೆನ್ನಾಗಿದೆ. ಮಕ್ಕಳು ತಮ್ಮನ್ನು ಹುಳು ಹೀರೋ ಮಾಡಿದ್ದು ಸಾಕು.

ಸುಧೇಶ್ ಶೆಟ್ಟಿ said...

ಮಲ್ಲಿಕಾರ್ಜನ್ ಸರ್...

ಹಾಸ್ಯಮಯವಾಗಿಯೂ ಇದೆ ಈ ಲೇಖನ.... ಓದುತ್ತಾ ಓದುತ್ತಾ ಅದರಲ್ಲಿ ಮುಳುಗಿಬಿಟ್ಟೆ.... ಚಿಟ್ಟೆ ತು೦ಬಾ ಸು೦ದರವಾಗಿದೆ... ಆದರೆ ಕ೦ಬಳಿ ಹುಳದ ಚಿತ್ರ ನೋಡಿದಾಗ ನನ್ನ ಮೈ ರೋಮ ನಿಮಿರಿ ನಿ೦ತಿದ್ದು ಸುಳ್ಳಲ್ಲ....