"ನಮ್ಮೆಲ್ಲರ ಅಕ್ಕರೆಯ ಅಂಚೆಯಣ್ಣ ಅಥವಾ ’ಪೋಸ್ಟ್ ಮ್ಯಾನ್’ ಬರೇ ಒಂದು ಟಪಾಲು ಬಟವಾಡೆಯ ವೃತ್ತಿಯವನಾಗಿರುವುದಿಲ್ಲ. ಅವನು ಮನುಷ್ಯರಿಂದ ಮನುಷ್ಯರಿಗೆ ಅದೇನನ್ನೋ ದಾಟಿಸುವ ಮಾರುವೇಷದ ದೇವರಾಗಿರುತ್ತಾನೆ. ಸಣ್ಣ ಊರುಗಳಲ್ಲಂತೂ ಅವನು ಪ್ರತಿ ಮನೆಯ ಅಂತರಂಗದ ಸದಸ್ಯ. ಎಸ್ಸೆಸ್ಸೆಲ್ಸಿ ರಿಸಲ್ಟು, ಹೆರಿಗೆ, ಮದುವೆ, ಕೋರ್ಟು ವಾರಂಟು, ಸಾವು, ರೋಗ, ರುಜಿನ ಎಲ್ಲವನ್ನೂ ’ನಿರಪೇಕ್ಷ ಯೋಗ’ದಲ್ಲಿ ಹಂಚಿಕೊಂಡು ಮನೆಯಿಂದ ಮನೆಗೆ ದಾಟಿಸುತ್ತಲೇ ಇರುವ, ಬೆವರೊರೆಸಿಕೊಂಡು ಓಡುತ್ತಾ ಕಾಗದಗಳ ಕಟ್ಟನ್ನು ಕ್ಯಾರಿಯರಿಗೆ ಅಥವಾ ಹ್ಯಾಂಡಲ್ಲಿಗೆ ಸಿಕ್ಕಿಸಿಕೊಂಡು ಸೈಕಲ್ ಏರುತ್ತಿರುವಾಗಲೇ ಯಾರನ್ನೋ ಕಂಡು ಫಕ್ಕನೆ ನಿಲ್ಲಿಸಿ ಕಾಗದ ಹುಡುಕಿ ಕೊಡುವ ನೆಂಟ. ಸಮಾಜದ ಒಳಬಾಳು ಅಂತ ಕರೀತೇವಲ್ಲ ಅಂಥ ಒಳಬಾಳಿನ ಚಲನಶೀಲ ಸದಸ್ಯ."
-ಜಯಂತ್ ಕಾಯ್ಕಿಣಿ.
ನವದೆಹಲಿಯಲ್ಲಿ ೩೦-೧೨-೧೯೮೨ ರಂದು ನಡೆದ ರಾಷ್ಟ್ರೀಯ ಅಂಚೆ ಚೀಟಿ ಪ್ರದರ್ಶನದಲ್ಲಿ ಬಿಡುಗಡೆಯಾದ ಈ ವಿಶೇಷ ಅಂಚೆಚೀಟಿಯಲ್ಲಿ ಭಾರತದ ಸ್ವತಂತ್ರ ಪೂರ್ವ ಮತ್ತು ಸ್ವತಂತ್ರ ನಂತರದ ಎರಡೂ ಅಂಚೆಚೀಟಿಗಳ ಚಿತ್ರಗಳಿವೆ.
ಅಕ್ಟೋಬರ್ ೯ ವಿಶ್ವ ಅಂಚೆ ದಿನ. ಅಂಚೆ ಚೀಟಿ ನಮ್ಮ ಸಂಸ್ಕೃತಿ, ಇತಿಹಾಸ, ಬೌಗೋಳಿಕ, ಜೀವವೈವಿಧ್ಯ, ವಾಸ್ತುಶಿಲ್ಪ, ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವದ ಪ್ರತಿನಿಧಿ. ನನ್ನ ಸಂಗ್ರಹದಿಂದ ಆಯ್ದು ಕೆಲವು ಅಂಚೆಚೀಟಿಗಳು ಮತ್ತು ಚಿತ್ರಗಳನ್ನು ಜೋಡಿಯಾಗಿ ನೀಡುವ ಪ್ರಯತ್ನ ಮಾಡಿರುವೆ.
ನಮ್ಮ ನಾಡಿನ ಕೀರ್ತಿಯನ್ನು ಉನ್ನತವಾಗಿಟ್ಟಿರುವ ಗೊಮ್ಮಟನ ಮೂರ್ತಿ ಅಂಚೆಚೀಟಿಯಲ್ಲಿ ಕಾಣಿಸಿಕೊಂಡದ್ದು ೯-೨-೧೯೮೧ ರಂದು.
ವನ್ಯಜೀವಿ ಸಂರಕ್ಷಣೆ ಎಂಬ ವಿಷಯವಿಟ್ಟುಕೊಂಡು ೭-೧೦-೧೯೬೩ ರಲ್ಲಿ ಐದು ಅಂಚೆಚೀಟಿಗಳನ್ನು ಬಿಡುಗಡೆಮಾಡಿದರು. ಅವುಗಳಲ್ಲಿ ನಮ್ಮ ಗಜರಾಜನೂ ಒಬ್ಬ.
ಉಳುವಾಯೋಗಿಯಾದ ರೈತನ ಚಿತ್ರ ಅಂಚೆ ಚೀಟಿಯಲ್ಲಿ ಬಂದದ್ದು ೩೦-೧೨-೧೯೫೯ರಂದು.
ಮಂಗೋಲಿಯಾ ದೇಶದ ಈ ಅಂಚೆಚೀಟಿಯಲ್ಲಿ ಅಣಬೆ ಬೆಳೆದಿದೆ.
ಹೈದರಾಬಾದಿನ ಹೊರಭಾಗದಲ್ಲಿರುವ ಗೋಲ್ಕೊಂಡ ಕೋಟೆಯಲ್ಲಿ ಒಂದು ತುದಿಯಲ್ಲಿ ನಿಂತು ಚಪ್ಪಾಳೆ ತಟ್ಟಿದರೆ ಇನ್ನೊಂದು ತುದಿಯಲ್ಲಿ ಕೇಳಿಸುತ್ತದೆ. ಈ ಕೋಟೆಯಲ್ಲಿನ ನೀರು ಸರಬರಾಜು ಮತ್ತು ಗಾಳಿ ಬೆಳಕಿನ ವ್ಯವಸ್ಥೆಯನ್ನು ನೋಡಲಾದರೂ ಒಮ್ಮೆ ಅಲ್ಲಿಗೆ ಹೋಗಿ ಬರಬೇಕು. ಈ ಅಂಚೆಚೀಟಿ ೩೧-೧೨-೨೦೦೨ ರಂದು ಬಿಡುಗಡೆಯಾಗಿದೆ.
ತಿರುಪತಿಯಿಂದ ೧೨ ಕಿಮೀ ದೂರದಲ್ಲಿರುವ ಚಂದ್ರಗಿರಿಕೋಟೆ ಒಂದು ಕಾಲದಲ್ಲಿ ವಿಜಯನಗರದ ಅರಸರ ರಾಜಧಾನಿಯಾಗಿತ್ತು. ಈಗ ಪ್ರತಿದಿನ ಸಂಜೆ ಶಬ್ದ ಮತ್ತು ಬೆಳಕಿನ ವ್ಯವಸ್ಥೆಯನ್ನು ಅಳವಡಿಸಿ ಪ್ರವಾಸಿಗರು ರಾಜರ ದಿನಗಳನ್ನು ಮೆಲುಕು ಹಾಕುವಂತೆ ಮಾಡಿದ್ದಾರೆ. ಇದರ ಅಂಚೆಚೀಟಿ ಬಿಡುಗಡೆಯಾದದ್ದು ೩೧-೧೨-೨೦೦೨ ರಂದು.
ಭಾರತ ಮತ್ತು ಜಪಾನ್ ರಾಜತಾಂತ್ರಿಕ ಸಂಬಂಧದ ೫೦ನೇ ವಾರ್ಷಿಕೋತ್ಸವದ ಸವಿನೆನಪಿಗೆ ೨೬-೪-೨೦೦೨ ರಂದು ಈ ಅಂಚೆಚೀಟಿ ಬಿಡುಗಡೆ ಮಾಡಿದ್ದಾರೆ. ನಮ್ಮ ಕೇರಳದ ಕಥಕ್ಕಳಿ ಮತ್ತು ಜಪಾನಿನ ಪುರಾತನ ನಾಟಕ ಪ್ರಕಾರವಾದ ಕಬುಕಿ ಒಂದೆಡೆ ಸೇರಿಸಿರುವರು. ಭಾಷೆ ಬೇರೆಯಾದರೂ ಭಾವವೊಂದೇ.
ಬೋರಿಬಂದರಿನಿಂದ ಥಾನೆವರೆಗೂ ೩೪ ಕಿಮೀ ದೂರವನ್ನು ಮೊಟ್ಟಮೊದಲ ಭಾರತೀಯ ರೈಲು ಬಿಸಿಹಬೆಯುಗುಳುತ್ತಾ ಪಯಣಿಸಿದ್ದು ೧೬-೪-೧೮೫೩ ರಂದು. ಅಂದು ಶುರುವಾದ ಪಯಣ ಬಲು ದೂರ ಸಾಗಿದೆ. ಈಗ ೭೦೦೦ ಸ್ಟೇಷನ್ಗಳು, ೬೩೦೦೦ ಕಿಮೀ ಉದ್ದದ ಈ ಮಾರ್ಗವು ೧೬ ಲಕ್ಷ ಜನರಿಗೆ ಅನ್ನದಾತ. ಭಾರತೀಯ ರೈಲ್ವೆಯ ೧೫೦ನೇ ವರ್ಷದ ವಾರ್ಷಿಕೋತ್ಸವದ ಸವಿನೆನಪಿಗಾಗಿ ೧೬-೪-೨೦೦೨ ರಂದು ಆ ಹಳೆಯ ದಿನಗಳನ್ನು ನೆನಪಿಸುವ ಈ ಅಂಚೆ ಚೀಟಿ ಬಿಡುಗಡೆಯಾಯಿತು.
ಟಾನಿ ಕ್ಯಾಸ್ಟರ್ ಎಂಬ ಈ ಚಿಟ್ಟೆ ಅಂಚಿಚೀಟಿಯಾದದ್ದು ೩೦-೪-೨೦೦೦ ರಂದು.
ಅಮೆರಿಕ ಅಂಚೆಚೀಟಿಯಲ್ಲಿ ಗೂಬೆ ರಾರಾಜಿಸುತ್ತಿದೆ.
ಹಾರುತ್ತಿರುವ ಬೆಳ್ಳಕ್ಕಿಯ ಚಿತ್ರ ಅಂಚೆಚೀಟಿಯಲ್ಲಿ ಬಂದದ್ದು ೧೫-೭-೧೯೭೯ ರಂದು.
ಶುಭಾಶಯ ಪತ್ರಗಳ ವಿನಿಮಯ ಬಹುಕಾಲದಿಂದ ನಡೆದು ಬಂದಿದೆ. ದೀಪಾವಳಿ, ಹೋಳಿ, ಪೊಂಗಲ್, ವಿಜಯದಶಮಿ, ಈದ್, ಕ್ರಿಸ್ಮಸ್, ಹೊಸವರ್ಷ, ರಕ್ಷಾಬಂಧನ, ಪ್ರೇಮಿಗಳದಿನ... ಶುಭಾಶಯ ಪತ್ರವನ್ನು ನೆನಪಿಸುವ ಹಾರುತ್ತಿರುವ ಚಿಟ್ಟೆಗಳ ಅಂಚೆಚೀಟಿ ಪ್ರಕಟವಾದದ್ದು ೧೮-೧೨-೨೦೦೧ ರಂದು.
ತಿರುಪತಿಯ ತಿರುಮಲ ದೇವಸ್ಥಾನದ ಬಂಗಾರದ ಗೋಪುರವನ್ನು "ಆನಂದ ನಿಲಯಮ್ ವಿಮಾನಂ" ಎನ್ನುವರು. ೭೦೦ ವರ್ಷಗಳಷ್ಟು ಹಳೆಯದಾದ ಇದರ ಸವಿನೆನಪಿಗಾಗಿ ೧೧-೧೦-೨೦೦೨ ರಂದು ಅಂಚೆಚೀಟಿ ಬಿಡುಗಡೆಯಾಗಿದೆ.
೨೦೦೧-೨೦೦೨ ಪುಸ್ತಕಗಳ ವರ್ಷ. "ಎಲ್ಲರಿಗೂ ಪುಸ್ತಕ ಮತ್ತು ಎಲ್ಲವೂ ಪುಸ್ತಕಕ್ಕಾಗಿ". ಇದರ ಸವಿನೆನಪಿಗೆ ೨೮-೧-೨೦೦೨ ರಂದು ಈ ಅಂಚೆಚೀಟಿ ಬಿಡುಗಡೆಯಾಯಿತು.
"ಪಕ್ಷಿ ಪಿತಾಮಹ" ಡಾ.ಸಲೀಂ ಅಲಿ ಅವರ ನೂರನೇ ಜನ್ಮದಿನದ ನೆನಪಿಗೆ ೧೨ ನವೆಂಬರ್ ೧೯೯೬ ರಂದು ಈ ಅಂಚೆ ಚೀಟಿ ಬಿಡುಗಡೆಯಾಯಿತು. ಅವರೊಂದಿಗೆ ಪೇಯಿಂಟೆಡ್ ಸ್ಟಾರ್ಕ್ ಹಕ್ಕಿಗಳೂ ಇವೆ.
೧೯೭೨ನೇ ಇಸವಿಯಲ್ಲಿ ಮ್ಯೂನಿಚ್ನಲ್ಲಿ ನಡೆದ ೨೦ನೇ ಒಲಂಪಿಕ್ ಗೇಮ್ಸ್ ನೆನಪಿಸಲು ಅದೇ ವರ್ಷ ಆಗಸ್ಟ್ ೧೦ರಂದು ಈ ಅಂಚೆಚೀಟಿ ಬಿಡುಗಡೆಯಾಯಿತು.
"ಮೈಸೂರು ಹುಲಿ" ಟಿಪ್ಪುಸುಲ್ತಾನನ ಅಂಚೆಚೀಟಿ ಬಿಡುಗಡೆಯಾದದ್ದು ೧೫-೭-೧೯೭೪ ರಂದು.
ಕಡಲ ತೀರದ ಭಾರ್ಗವ ಡಾ.ಕೋಟ ಶಿವರಾಮ ಕಾರಂತರದ್ದು ಹತ್ತು ನೂರು ಮುಖಗಳು. ಒಂದು ಜನಾಂಗವನ್ನೇ ಪ್ರೇರೇಪಿಸಿದಂತಹ ವ್ಯಕ್ತಿತ್ವ. ಅಂಚೆ ಇಲಾಖೆ ೧೦-೧೦-೨೦೦೩ ರಂದು ಅವರ ಭಾವಚಿತ್ರವಿರುವ ಅಂಚೆಚೀಟಿ ಬಿಡುಗಡೆಮಾಡಿ ಅವರಿಗೆ ಗೌರವ ಸೂಚಿಸಿದೆ. ಈ ಅಕ್ಟೋಬರ್ ೧೦ ಅವರ ಜನ್ಮದಿನ. ನಾವೆಲ್ಲರೂ ಅವರನ್ನು ನೆನೆಯುತ್ತಾ ಗೌರವ ಅರ್ಪಿಸೋಣ.
This is merely a show put on by puppets!
57 minutes ago
22 comments:
ಅಬ್ಬಾ!! ಅದೇನು ಕ್ರಿಯಾಶೀಲತೆ ನಿಮ್ಮಲ್ಲಿ!! ಒಂದು ಅಂಚೆ ಚೀಟಿ ಸ೦ಗ್ರಹಾಲಯಕ್ಕೆ ಭೇಟಿ ಕೊಟ್ಟಂತಾಯಿತು. ಜೊತೆಗೆ ಆ ಜೋಡಿ ಚಿತ್ರಗಳು! ಸಕಾಲಿಕ ಹಾಗು ಸು೦ದರ ಸಚಿತ್ರ ಮಾಹಿತಿಭರಿತ ಲೇಖನ. ಕಾರ೦ತಜ್ಜನ ಅ೦ಚೆ ಚೀಟಿ ಇರುವುದು ಗೊತ್ತೇ ಇರಲಿಲ್ಲ. ಈ ಮೂಲಕ ಅವರ ಜನುಮದಿನದ೦ದು ಅವರನ್ನು ಮತ್ತೆ ನೆನೆಯುವ ಅವಕಾಶ ಕಲ್ಪಿಸಿಕೊಟ್ಟಿದ್ದೀರಿ. ನಿಮ್ಮೊ೦ದಿಗೆ ನಮ್ಮ ನಮನವೂ ಅವರಿಗೆ.
ಅಪರೂಪದ ಅ೦ಚೆ ಚೀಟಿ ಗಳನ್ನೂ ಚೊಕ್ಕಟವಾಗಿ ಜೋಡಿಸಿ, ಅವುಗಳ ಬಿಡುಗಡೆ ದಿನಾ೦ಕ ಸಹಿತ ವಿಶಿಷ್ಟ ಮಾಹಿತಿಯನ್ನು ಒದಗಿಸಿದ್ದೀರಿ. ನಿಜ ಅ೦ಚೆಯಣ್ಣ ನಮ್ಮ ಬದುಕಿನ ಅ೦ತರ೦ಗದ ನೆ೦ಟ. ಇಂದಿನ ಯಾ೦ತ್ರೀಕೃತ ಬದುಕಿನ ದಿನಗಳಲ್ಲಿ ಅ೦ಚೆಯಣ್ಣನ ಚಿತ್ರ ಮಸುಕಾಗುತ್ತಿರಬಹುದು. ಆದರೆ ಸ್ವಲ್ಪ flashback ಗೆ ಜಾರಿದರೆ, ನಮ್ಮ ಬಾಲ್ಯಕಾಲದಲ್ಲಿ ಅ೦ಚೆಯಣ್ಣ, ಹಳ್ಳಿ ಪರಿಸರದಲ್ಲಿ ಹೇಗೆ ಮನೆಯ ಸದಸ್ಯನ೦ತಿರುತ್ತಿದ್ದ ಎ೦ಬುದು ಅರಿವಾಗುತ್ತದೆ.
ಅಂಚೆ ಚೀಟಿ ಸ೦ಗ್ರಹಾಲಯಕ್ಕೆ ಹೋಗಿ ಬಂದೆ....
ನಿಮ್ಮ ಸಂಗ್ರಹ ಬಹಳ ಚೆನ್ನಾಗಿದೆ...
ಈಗಷ್ಟೇ ರಾಜ್ ಕುಮಾರ್ ಅಂಚೆಚೀಟಿ ಬಿಡುಗಡೆ ಮಾಡುತ್ತಿರುವ ವಿಷಯವನ್ನು ಪತ್ರಿಕೆಗಳಲ್ಲಿ ಓದಿದೆ. ಇಲ್ಲಿ ನಿಮ್ಮ ಬ್ಲಾಗಲ್ಲಿ ಅದೇ ವಿಷಯ ನೋಡಿ ಆಸ್ಚರ್ಯವೂ ಸಂತೋಷವೂ ಆಯಿತು. ಅದಕ್ಕಿಂತ ಹೆಚ್ಚಾಗಿ ನೀವು ಅವುಗಳನ್ನು ಪ್ರೆಸೆಂಟ್ ಮಾಡಿರುವ ರೀತಿ ಬಹಳ ಇಷ್ಟವಾಯಿತು. ನಿಮ್ಮ ಶ್ರಮ ಪ್ರತಿಭೆ ಎರಡೂ ಮೇಳೈಸಿವೆ. ಧನ್ಯವಾದಗಳು.
ಇತ್ತೀಚಿಗೆ ತುಂಬಾ ಅಪರೂಪವಾಯಿತು ಎನ್ನಿಸುತ್ತಿದೆ.
ಮಲ್ಲಿಕಾರ್ಜುನ್
ತುಂಬ ತಾಳ್ಮೆ ಹಾಗು ಕ್ರಿಯಾಶೀಲ ವ್ಯಕ್ತಿ ನೀವು, ಒಂದು ಅಂಚೆ ಚೀಟಿಯ ಥರ ಅದಕ್ಕೆ ಹೊಂದಿಕೊಳ್ಳುವಂಥ ಚಿತ್ರವನ್ನು ಸೇರಿಸಿ,, ಹಾಗೆ ಅವುಗಳ ಬಿಡುಗಡೆ ದಿನಾಂಕವನ್ನು ತಿಳಿಸಿ, ಅಚ್ಚುಕಟ್ಟಾಗಿ ಹೇಳಿದ್ದಿರ....
ತುಂಬ ಇಷ್ಟ ಆಯಿತು ನಿಮ್ಮ ಹವ್ಯಾಸ....ಹೀಗೆ ಮುಂದುವರಿಸಿರಿ...
ಗುರು
ಮಲ್ಲಿಯವರೇ,
ಎಂದಿನಂತೆ , ಚಂದದ ಫೋಟೋಗಳೊಂದಿಗೆ ಮಾಹಿತಿಪೂರ್ಣ ಲೇಖನ ! ಬಹಳ ದಿನಗಳ ನಂತರ ಕೆಲವು ಅಪರೂಪದ ಅಂಚೆ ಚೀಟಿಗಳ ದರ್ಶನವಾಗಿ ಖುಷಿಯಾಯಿತು . ನಮ್ಮ ತಂದೆಯವರೂ ಅಂಚೆ ಚೀಟಿ ಸಂಗ್ರಾಹಕರು ! ಭಾರತದ್ದಷ್ಟೇ ಅಲ್ಲದೆ, ಪ್ರಪಂಚದ ವಿವಿಧ ದೇಶಗಳ , ಅಪರೂಪದ ಅಂಚೆ ಚೀಟಿಗಳ ದೊಡ್ಡ ಭಂಡಾರವೇ ನಮ್ಮ ಮನೆಯಲ್ಲಿದೆ . ಚಿಕ್ಕಂದಿನಲ್ಲಿ ಆ ಬಗ್ಗೆ ಕೆಲಕಾಲ ಆಸಕ್ತಿ ಮೂಡಿದರೂ ಅದನ್ನು ಮುಂದುವರೆಸಲಾಗದ ಬೇಸರ ನನಗೆ!
ವಿಶಿಷ್ಟ ಲೇಖನ. ಅ೦ಚೆ-ಚೀಟಿಗಳೊ೦ದಿಗೆ ತಮ್ಮ ಎ೦ದಿನ ಸು೦ದರ ಛಾಯಚಿತ್ರಗಳು ಲೇಖನಕ್ಕೆ ಮೆರುಗು ಕೊಟ್ಟಿವೆ. ಅ೦ಚೆ ಸ೦ಗ್ರಹಣೆ ಒ೦ದು ಹುಚ್ಚು. ನನ್ನ ಬಾಲ್ಯದ ಈ ಹುಚ್ಚಿನ ಬಗ್ಗೆ ಬರೆಯಲು ಸ್ಫೂರ್ತಿ ಲೇಖನ ನೀಡಿದೆ. ಧನ್ಯವಾದಗಳು ಮಲ್ಲಿ- ಯವರೇ.
ಮಲ್ಲಿಕಾರ್ಜುನ ಸರ್,
ಜಯಂತ ಕಾಯ್ಕಿಣಿಯವರ ಆ ನುಡಿಗಳಿಂದ ಆರಂಭಿಸಿ, ಅಂಚೆ ಚೀಟಿಗಳು, ಅದರ ಮಾಹಿತಿ, ಜೊತೆಯಲ್ಲಿ ಅಂಚೆ ಚೀಟಿಗೆ ಹೊಂದುವ ವಿಶೇಷ ಚಿತ್ರಗಳು ಈ ಎಲ್ಲ ಮಾಹಿತಿಯೊಂದಿಗೆ ಈ ಲೇಖನ ಖುಷಿಕೊಟ್ಟಿತು ಮತ್ತು ನಮಗೆ ತಿಳಿಯಬೇಕಾದ ಬಹಳಷ್ಟು ವಿಷಯ ತಿಳಿಯಿತು.
ನಿಮ್ಮ ಸೃಜನಶೀಲತೆ ಮತ್ತು ಮಾಹಿತಿ ಕಲೆಹಾಕುವಿಕೆ ಇಷ್ಟವಾಗಿದೆ.
ಧನ್ಯವಾದಗಳು.
ಸ್ನೇಹದಿಂದ,
ಚಂದ್ರಶೇಖರ ಬಿ.ಎಚ್.
ಅತ್ಯುತ್ತಮ,ಮಾಹಿತಿಪೂರ್ಣ ಚಿತ್ರಲೇಖನ ಸರ್.ಅಪರೂಪದ ಅಂಚೆಚೀಟಿಗಳ ದರ್ಶನ ಮಾಡಿಸಿದ್ದೀರಿ.ಧನ್ಯವಾದಗಳು.
ಸರ್,
ಎಲ್ಲಿ ಹುಡುಕಿದ್ರಿ ಇದನ್ನೆಲ್ಲಾ,
ಎಷ್ಟೋ ಅಂಚೆ ನಾನು ನೋಡೇ ಇರಲಿಲ್ಲ
ತುಂಬಾ ತುಂಬಾ ಸುಂದರ ಫೋಟೋಗಳು
ಒಳ್ಳೆಯ ಬರಹ ಕೂಡಾ
ಕಲಾಕೃತಿಗಳೂ ಆದಂತಹ ಕೆಲವು ಸುಂದರ ಅಂಚೆಚೀಟಿಗಳನ್ನು ನಿಮ್ಮ ಲೇಖನದ ಮೂಲಕ ನೋಡಿ, ವಿಸ್ಮಯಗೊಂಡೆ. ಮನಸ್ಸಿಗೆ ಸಂತೋಷ ನೀಡಿದ ಈ ಅಂಚೆಚೀಟಿಗಳ ದರ್ಶನ ಮಾಡಿಸಿದ್ದಕ್ಕಾಗಿ ನಿಮಗೆ ಅನೇಕ ಧನ್ಯವಾದಗಳು.
ಏನು ಬರೆಯೋದು ಇದರ ಬಗ್ಗೆ ಗೊತ್ತಾಗ್ತಿಲ್ಲ. ತುಂಬಾ...................... ಚೆನ್ನಾಗಿದೆ ಸಂಗ್ರಹ, ಛಾಯಾ ಚಿತ್ರಗಳಂತೂ ಮನ ಮೋಹಕ.
ಮಲ್ಲಿಕಾರ್ಜುನ್,
ನಿಜಕ್ಕೂ ಇದು ಅತ್ಯುತ್ತಮ ಸೃಜನಶೀಲತೆ. ವಿಶ್ವ ಅಂಚೆ ದಿನದಂದು ಎಷ್ಟೊಂದು ಅಂಚೆ ಚೀಟಿಗಳನ್ನು ಆದಕ್ಕೆ ತಕ್ಕಂತೆ ಜೊತೆಗಾರನಾಗಿ ಫೋಟೊಗಳನ್ನು ಹೊಂದಿಸಿದ್ದೀರಿ...ಅಂಚೆ ಚೀಟಿಯ ಬಿಡುಗಡೆ ದಿನಾಂಕ, ಸ್ಥಳ, ಅದರ ಮಹತ್ವ ಇತ್ಯಾದಿಗಳನ್ನು ಮಾಹಿತಿ ಸಹಿತ ತಿಳಿಸಿದ್ದೀರಿ. ಮತ್ತೆ ನಾಳೆ ಶಿವರಾಮ ಕಾರಂತರ ಹುಟ್ಟಿದ ದಿನಕ್ಕಾಗಿ ಅವರದು ಭಾವಚಿತ್ರದ ಅಂಚೆ ಚೀಟಿಯನ್ನು ಹಾಕಿ ಗೌರವಿಸಿದ್ದೀರಿ..ಮತ್ತು ನಮಗೆಲ್ಲಾ ನೆನಪಿಸಿದ್ದೀರಿ...
ಧನ್ಯವಾದಗಳು.
ಸಾರ್,
ಸಖತ್ ಸಂಗ್ರಹ
ಅಂಚೆಚೀಟಿಗಳಿಗೆ ನಿಮ್ಮ ಫೊಟೊಗಳೇ ಸಾಟಿ. ಸೊಗಸಾದ ಜೋಡಿ ಹುಡುಕಿ ಹಾಕಿದ್ದೀರಿ. ಅಷ್ಟೇ ಅಲ್ಲ, ನೋಡಿರದ ಎಷ್ಟೋ ಅಂಚೆಚೀಟಿಗಳನ್ನು ಸ್ಪಷ್ಟವಾಗಿ ಹಾಕಿದ್ದು ಸೂಪರ್. ನಿಮ್ಮ ಅಭಿರುಚಿಗೆ ಮೆಚ್ಚಬೇಕು.
ಕಮೆಂಟ್ ಗಳ ಸುರಿಮಳೆಯಾಗಿದೆ,ನಾನು ಮತ್ತೆ ಅದನ್ನೆ ಹೊಸದಾಗಿ ಹೇಳಲು ಹೋಗುವುದಿಲ್ಲ, ನಂದು ಡಿಟ್ಟೋ... :-)ಸೂಪರ್ ಅಂಚೆ ಚೀಟಿ ಮತ್ತು ಫೋಟೋ ಸಂಗ್ರಹ.
ಒಳ್ಳೆ ಮಾಹಿತಿ ನೀಡಿದ್ರಿ. ಪೋಸ್ಟನವನು ಬರದ ಹಳ್ಳಿಯಲ್ಲಿರುವ ನನಗೆ ಮಗಳಿಗೆ ಅಂಚೆ ,ಅಂಚೆ ಚೀಟಿ ಬಗ್ಗೆ ತಿಳಿಸಿಕೊಡಲು ನೆರವಾಯಿತು.ಧನ್ಯವಾದಗಳು.
ಕುಸುಮಾ ಸಾಯಿಮನೆ
ಸೂಪರ್ ಆಗಿತ್ತು ಈ ಬರಹ ಮಲ್ಲಿಕಾರ್ಜುನ್ ಅವರೇ.... ಆ ದಿನಗಳನ್ನು ಮೆಲುಕು ಹಾಕುತ್ತಾ ಗತಕಾಲಕ್ಕೆ ಒಯ್ದಿತು ಈ ಬರಹ.... ಇನ್ನು ಏನೇನು ಬತ್ತಳಿಕೆಗಳಿವೆ ನಿಮ್ಮ ಬಳಿಯಲ್ಲಿ? :)
ಹುಡುಕಾಟದವರೆ...
ಫೆಂಟಾಸ್ಟಿಕ್..
ಸೂಪರ್...
ನಿಮ್ಮ ಹುಡುಕಾಟಕ್ಕೆ...
ನಿಮ್ಮ ತಾಳ್ಮೆ ಶ್ರದ್ಧೆಗೆ...
ನನ್ನ ನಮನಗಳು...
ಕಾರಂತಜ್ಜನ ನೆನಪಿಸಿದ್ದಕ್ಕೆ ಧನ್ಯವಾದಗಳು..
malliyanna.. adbutha...
ಮಲ್ಲಿಕಾರ್ಜುನ್ ಅವರೆ,
ನಿಮಗೆ ಅಂಚೆಚೀಟೆ ಸಂಗ್ರಹಿಸುವ ಹವ್ಯಾಸವೂ ಇದ್ಯಾ?
ಇಲ್ಲಿರುವ ಬಹುತೇಕ ಎಲ್ಲಾ ಅಂಚೆಚೀಟೆಗಳನ್ನು ನೋಡಿರುವೆನಾದರೂ ನಿಮ್ಮ ಈ ಜೋಡಿ ಚಿತ್ರಗಳು, ಸೂಪರ್! ಸು೦ದರ ಹಾಗು ಮಾಹಿತಿಭರಿತ ಲೇಖನ. ಕಾರ೦ತಜ್ಜನ ಜನ್ಮದಿನ ನೆನಪಿಸಿದಕ್ಕೆ ಥ್ಯಾಂಕ್ಸ್...
ಹೇಮಂತ್ ಅವರಿಗೆ ಈ ಲೇಖನ ತೋರಿಸಲೇಬೇಕು:)
Post a Comment