ನಿದ್ರೆಗೆ ಪರ್ಯಾಯ ಪದವೇ ಕುಂಭಕರ್ಣ. ಜೊತೆಯಲ್ಲಿ ತಿನ್ನುವುದಕ್ಕೂ. ಚೆನ್ನಾಗಿ ತಿಂದು ಮಲಗುವವನಿಗೆ ಕುಂಭಕರ್ಣ ಎಂದೇ ಕರೆಯುವುದು. ಆದರೆ ರಾವಣನ ತಮ್ಮ ಕುಂಭಕರ್ಣ ಮಹಾಪರಾಕ್ರಮಿ. ಅವನಿಗೆ ಬ್ರಹ್ಮನ ಶಾಪವಿತ್ತು. ಒಂದು ಬಾರಿ ಮಲಗಿದರೆ, ಆರು ತಿಂಗಳು ನಿದ್ದೆಯಲ್ಲಿ ತೊಡಗಿರುತ್ತಿದ್ದ. ಮತ್ತೆ ಎದ್ದರೆ ಒಂದು ದಿನ ಮಾತ್ರ ಎಚ್ಚರ. ಪುನಃ ಆರು ತಿಂಗಳು ನಿದ್ದೆ. ಕುಂಭಕರ್ಣ ತನ್ನ ಶಕ್ತಿಗೆ ತಕ್ಕಂತೆ ಬಹು ದೊಡ್ಡ ಹೊಟ್ಟೆಯನ್ನು ಹೊಂದಿದ್ದ. ಒಂದು ಲಕ್ಷ ಜನಕ್ಕೆ ಆಗುವ ಆಹಾರವನ್ನು ಅವನೊಬ್ಬನೆ ಮುಗಿಸುತ್ತಿದ್ದ.

ರಾಮರಾವಣರ ಯುದ್ಧದ ಸಮಯದಲ್ಲಿ ಕುಂಭಕರ್ಣನ ಅವಶ್ಯಕತೆ ಬಂದು, ಅವನನ್ನು ನಿದ್ರೆಯಿಂದ ಎಬ್ಬಿಸಲು ರಾವಣ ತನ್ನ ಮಂತ್ರಿಗಳಿಗೆ ಹೇಳಿದ. ಅವರೆಲ್ಲ ಕುಂಭಕರ್ಣನನ್ನು ಎಬ್ಬಿಸಲು ಮಾಡಿದ ಪ್ರಯತ್ನವೇ ರೋಚಕ ಕಥೆ. ಅನ್ನ ಮತ್ತು ಮಾಂಸದ ರಾಶಿ ಹಾಕಿ, ಚಂಡೆ ಮದ್ದಳೆಗಳನ್ನು ಬಾರಿಸಿ, ಹಗ್ಗ ಹಾಕಿ ಎಳೆದು, ಮೂಗಿಗೆ ಕಟ್ಟಿಗೆ ಹಾಕಿ ತಿರುಚಿ, ಕೂದಲು ಕಿತ್ತರೂ ಅವನು ಜಪ್ಪೆನ್ನಲಿಲ್ಲ. ಆನೆಗಳ ಕೈಲಿ ಎಳೆಸಿ , ತುಳಿಸಿ ಅವನನ್ನು ಎಬ್ಬಿಸುವಷ್ಟರಲ್ಲಿ ಅವರಿಗೆ ಅರ್ಧ ಜೀವವಾಗಿತ್ತು. ಎದ್ದವನ ಮುಂದಿದ್ದ ರಾಶಿ ರಾಶಿ ಆಹಾರವನ್ನು ಸ್ವಲ್ಪ ಹೊತ್ತಿನಲ್ಲೇ ಖಾಲಿ ಮಾಡಿಬಿಟ್ಟ. ಲಂಕೆಗೆ ಸಂಕಷ್ಟ ಬಂದಿದೆ ಎಂದು ಅಸುರರು ಕೈಮುಗಿದಾಗ ತನ್ನ ಅಣ್ಣನ ಬಳಿ ಹೋದನು. ನಡೆದ ವಿಷಯವನ್ನು ತಿಳಿದ ಕುಂಭಕರ್ಣ, "ಅಣ್ಣಾ, ಕೆಟ್ಟ ಕೆಲಸ ಮಾಡುವಾಗ ಇತರರ ಅಭಿಪ್ರಾಯ ಪಡೆಯದೆ, ಕಷ್ಟ ಬಂದಾಗ ಮಾತ್ರ ಬೇರೆಯವರಿಂದ ಸಹಾಯ ಪಡೆಯುವ ನಿನ್ನ ನೀತಿ ಸರಿಯಲ್ಲ" ಎಂದು ರಾವಣನನ್ನು ಖಂಡಿಸಿದ. ಆದರೂ ಲಂಕೆಯ ಮಾನ ಕಾಪಾಡುತ್ತೇನೆಂದು ಹೇಳಿ ರಣರಂಗಕ್ಕೆ ಹೋದನು.ವಾನರ ಹಿಂಡು ಅವನಿಗೆ ಲೆಕ್ಕಕ್ಕೇ ಇಲ್ಲ. ಹಿಡಿದಿಡಿದು ಬಾಯಿಯೊಳಗೆ ತುಂಬಿಕೊಳ್ಳತೊಡಗಿದ. ಅಂಥ ಹನುಮಂತನೇ ಅವನಿಂದ ಪೆಟ್ಟು ತಿಂದುಬಿಟ್ಟ. ಸಾಕ್ಷಾತ್ ಯಮನಂತೆ ರಣರಂಗದಲ್ಲಿ ಅಬ್ಬರಿಸಿದ ಕುಂಭಕರ್ಣ. ಕಡೆಗೆ ಶ್ರೀರಾಮನು ವಾಯುವ್ಯಾಸ್ತ್ರಗಳಿಂದ ಅವನ ತೋಳುಗಳನ್ನು, ಅರ್ಧಚಂದ್ರಾಸ್ತ್ರಗಳಿಂದ ಅವನ ಕಾಲುಗಳನ್ನೂ ಕತ್ತರಿಸಿಹಾಕಿದನು. ನಂತರ ಇಂದ್ರಾಸ್ತ್ರದಿಂದ ಅವನ ತಲೆ ತತ್ತರಿಸಿ ಕೊಂದನು.

ಕರ್ಣಾಟಕದ ಬಾಗೇಪಲ್ಲಿ, ಪೆನುಗೊಂಡ ಮಾರ್ಗವಾಗಿ ಅನಂತಪುರಕ್ಕೆ ಹೋಗುವ ದಾರಿಯಲ್ಲಿ, ಪೆನುಗೊಂಡದಿಂದ ೫ ಕಿ.ಮೀ. ಮುಂದೆ ಎಡಕ್ಕೆ ಕುಂಭಕರ್ಣ ಎಂಬ ಕ್ಷೇತ್ರವಿದೆ. ಅಲ್ಲಿ ಮೇಲಿನ ಚಿತ್ರದಲ್ಲಿರುವ ನಿದ್ರಾಭಂಗಿಯಲ್ಲಿರುವ ಕುಂಭಕರ್ಣನ ವಿಗ್ರಹವಿದೆ. ಎಷ್ಟು ದೊಡ್ಡದಾಗಿದೆಯೆಂದರೆ ಕುಂಭಕರ್ಣನ ಹೊಟ್ಟೆಯೊಳಗೆಲ್ಲಾ ನಾವು ಓಡಾಡಬಹುದು. ಅವನನ್ನು ಎಬ್ಬಿಸುವ ಪ್ರಯತ್ನದಲ್ಲಿರುವ ಅಸುರರು ಅವನ ಮೂಗಿನೊಳಗೆ ಕೋಲು ತೂರಿಸುವುದು, ನಗಾರಿ ಬಾರಿಸುವುದು, ಮಾಂಸದ ಅಡುಗೆಯಿಟ್ಟು ಆಕರ್ಷಿಸುವುದು, ತಿವಿಯುವುದು.... ಇವೆಲ್ಲಾ ನೋಡಲು ಸೊಗಸಾಗಿದೆ.

ಕುಂಭಕರ್ಣನ ಆಭರಣಗಳು, ಚಿಂತಾಕ್ರಾಂತನಾಗಿ ಕುಳಿತ ರಾವಣ, ಕುಂಭಕರ್ಣನನ್ನು ಎಬ್ಬಿಸಲು ಪ್ರಯತ್ನಿಸಿ ಧಣಿದ ರಾಕ್ಷಸರು ಅವನಿಗೆ ಕೊಡಲು ತಂದಿದ್ದ ಮಾಂಸವನ್ನು ಉಣ್ಣುತ್ತಿರುವುದು ಮನಸೆಳೆಯುತ್ತದೆ.

ಇನ್ನೇಕೆ ತಡ, ನೀವೂ ಕುಂಭಕರ್ಣ ನಿದ್ದೆಯಿಂದ ಮೇಲೆದ್ದು ನೋಡಲು ನಡೆಯಿರಿ ಕುಂಭಕರ್ಣನನ್ನು!