Friday, October 24, 2008

ನಿಶಾಚರ ಜೀವಿಯ ನಿಗೂಢ ಬದುಕು

"ನಂದಿಬಟ್ಟಲ ಗಿಡದ ಕೆಳಗೆಲ್ಲಾ ಹಿಕ್ಕೆಗಳು ಬಿದ್ದಿವೆ. ತುಂಬಾ ಹುಳಗಳಿರಬೇಕು. ಮೊದಲು ಅವನ್ನೆಲ್ಲಾ ಬಿಸಾಡಬೇಕು. ಇಲ್ಲದಿದ್ದರೆ ಗಿಡಾನೆಲ್ಲಾ ಹಾಳುಮಾಡ್ತವೆ" ಎಂದು ಅಜ್ಜಿ ಮೊಮ್ಮಗಳು ಮಾತನಾಡುತ್ತಿದ್ದುದು ಕೇಳಿ ನನ್ನ ಕಿವಿಗಳು ನೆಟ್ಟಗಾದವು. ಹೂತೋಟದ ಉಸ್ತುವಾರಿ ವಹಿಸಿಕೊಂಡಿರುವ ಇವರಿಗೆ ತೊಂದರೆ ಕೊಡುತ್ತಿರುವ ಹುಳ ಯಾವುದು ಎಂದು ಮಧ್ಯೆ ಪ್ರವೇಶಿಸಿದೆ.
ಎಲೆಗಳ ಬಣ್ಣವನ್ನೇ ಪಡೆದು ಒಂದೇ ಸಮನೆ ಎಲೆಗಳನ್ನು ಸ್ವಾಹಾ ಮಾಡುವ ಈ ಹುಳಗಳನ್ನು ಕಂಡುಹಿಡಿಯುವುದು ಸುಲಭವಲ್ಲ. ಆದರೆ ಶಿಡ್ಲಘಟ್ಟದ ರೇಷ್ಮೆ ಬೆಳೆಗಾರರಿಗೆ ಇಂಥ ಸೂಕ್ಷ್ಮಗಳೆಲ್ಲ ಬಾಲ್ಯದಲ್ಲೇ ಗೊತ್ತಾಗುತ್ತವೆ. ನೆಲದಲ್ಲಿ ಅವುಗಳ ಹಸಿ ಹಿಕ್ಕೆ ಬಿದ್ದಲ್ಲಿ ಸರಿಯಾಗಿ ನಿಂತು ತಲೆಯ ಮೇಲ್ಗಡೆ ಇರುವ ಎಲೆಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಬೇಕು. ತಲೆಯ ಮೇಲೂ ಒಂದೆರಡು ಹಿಕ್ಕೆ ಬಿದ್ದರೆ ನಿಮ್ಮ ಅದೃಷ್ಟ. ಹುಳು ಸಿಕ್ಕೇ ಸಿಗುತ್ತದೆ. ನನಗೂ ಸಿಕ್ಕಿತು. ಅದರ ಮೈಮೇಲೊಂದು ಬಿಳಿಯ ಗೆರೆಯೂ, ಅಲ್ಲಲ್ಲಿ ಬಿಳಿ ಚುಕ್ಕೆಗಳೂ, ಹಳದಿಯ ಪುಟ್ಟ ಬಾಲವೂ ಇರುತ್ತದೆ. ಇತರೇ ಜೀವಿಗಳನ್ನು ಹೆದರಿಸಲೋ ಏನೋ ದೊಡ್ಡ ಕಣ್ಣುಗಳಿರುವಂತೆ ಕಾಣುವ ನೀಲಿ ಬಣ್ಣದ ಮಚ್ಚೆಗಳಿವೆ.
ಹುಡುಕಿದಾಗ ಇನ್ನೂ ನಾಲ್ಕು ಹುಳುಗಳು ಸಿಕ್ಕವು. ನನಗೇನೋ ಈ ಕಂಬಳಿ ಹುಳು ಮುಂದೆ ಚಿಟ್ಟೆಯಾದೀತು ಎಂಬ ಅನುಮಾನ. ನಮ್ಮಜ್ಜಿಗೆ ಹೇಳಿದಾಗ ಅವರು, "ಅಯ್ಯೋ, ಇವು ಬರೀ ಎಲೆ ತಿನ್ನುವ ಹುಳಗಳು. ನಾನೆಷ್ಟೋ ವರ್ಷಗಳಿಂದ ಇವನ್ನು ನೋಡಿದ್ದೀನಿ. ಮೊದಲು ಬಿಸಾಕು" ಅಂದರು. ಆದರೂ ಒಂದು ರಟ್ಟಿನ ಡಬ್ಬ ತಂದು ಅದರಲ್ಲಿ ಒಂದಷ್ಟು ನಂದಿಬಟ್ಟಲ ಎಲೆಗಳನ್ನು ಹಾಕಿ ಈ ಹುಳಗಳನ್ನು ಅದರಲ್ಲಿ ಬಿಟ್ಟೆ.
ರಾತ್ರಿ ನನ್ನ ತಮ್ಮ, "ಆ ಹುಳಗಳಲ್ಲಿ ಒಂದು ಸತ್ತಿತ್ತು, ಬಿಸಾಡಿದೆ. ಇನ್ನೊಂದು ಸಾಯುವ ಸ್ಥಿತಿಯಲ್ಲಿದೆ ನೋಡು" ಅಂದ. ಒಂದು ಹುಳವಂತೂ ಕಂದು ಬಣ್ಣವಾಗಿಬಿಟ್ಟಿತ್ತು. ಉಳಿದೆರಡೂ ನಿಸ್ತೇಜವಾಗಿದ್ದವು.
ಬೆಳೆಗ್ಗೆನೇ ಯಾರಿಗೂ ಹೇಳದೇ ಇವನ್ನು ಗಿಡದಲ್ಲಿ ಬಿಟ್ಟೆ. ಕಂದು ಬಣ್ಣದ್ದಂತೂ ಗಿಡದಲ್ಲಿ ಬಿಟ್ಟ ತಕ್ಷಣ ಸರಸರನೆ ರೆಂಬೆಯ ಮೇಲೆ ನಡೆಯತೊಡಗಿತು. ಮಿಕ್ಕೆರಡನ್ನೂ ಗಿಡದಲ್ಲಿ ಬಿಟ್ಟು ಬಂದೆ.
ಮೂರ್ನಾಕು ದಿನಗಳ ನಂತರ ನನ್ನ ತಂಗಿ, "ಒಂದು ಹೊಸ ಹುಳ ನೋಡಿದೆ, ಫೋಟೋ ತೆಗೀತೀಯಾ?" ಅಂದಳು. ದಾಸವಾಳದ ಗಿಡದ ಕೆಳಗೆ ಕೊಳೆತ ಎಲೆಗಳ ನಡುವೆ ಒಂದು ಕಾಯಂತಿತ್ತು. ಅವಳು ಗಿಡಕ್ಕೆ ನೀರು ಹಾಕುವಾಗ ಅದು ಕದಲಿತಂತೆ. ಅದರಿಂದಾಗಿ ಅದೊಂದು ಹುಳವಿರಬೇಕೆಂದು ಅಂದುಕೊಂಡಿದ್ದಳು.
ನಾನು ಹತ್ತಿರದಿಂದ ಅದನ್ನು ನೋಡಿದೆ. ನಂದಿಬಟ್ಟಲ ಗಿಡದ ಹುಳಕ್ಕೂ ಇದಕ್ಕೂ ಸಾಮ್ಯತೆ ಇರುವಂತೆ ಅನಿಸಿ ಅನುಮಾನ ಹುಟ್ಟಿತು. ಅಲ್ಲೇ ಸುತ್ತಮುತ್ತ ಹುಡುಕಿದಾಗ ಇನ್ನೆರಡು ಅದೇ ತರಹದ್ದು ಸಿಕ್ಕವು. ನೋಡಲು ಒಂದು ಕಾಯಿಯಂತಿದ್ದರೂ ಬೆರಳಿನಲ್ಲಿ ಮುಟ್ಟಿದರೆ ಥಟ್ಟನೆ ಕದಲುತ್ತಿತ್ತು. ಒಂದು ಪುಟ್ಟ ರಟ್ಟಿನ ಡಬ್ಬಿಯಲ್ಲಿಟ್ಟು ಮನೆಯೊಳಗೆ ತಂದೆ. ಪತಂಗ ಇದ್ದೀತೆ? ಪುಸ್ತಕವನ್ನೆಲ್ಲಾ ತಿರುವಿ ಹಾಕಿದೆ.
ಚಿಟ್ಟೆಗಳು ಮತ್ತು ಪತಂಗಗಳು ಒಂದೇ ಜಾತಿಯವು. ಆದರೆ ಕೆಲವು ವ್ಯತ್ಯಾಸಗಳಿವೆ. ಚಿಟ್ಟೆಗಳು ಹಗಲು ಜೀವಿಗಳಾದರೆ, ಪತಂಗಗಳು ನಿಶಾಚರಿಗಳು. ಚಿಟ್ಟೆಗಳು ರೆಕ್ಕೆಗಳನ್ನು ಮೇಲಕ್ಕೆ ಮಡಿಚುತ್ತವೆ. ಆದರೆ ಪತಂಗಗಳು ವಿಮಾನದ ರೆಕ್ಕೆಗಳಂತೆ ಅಡ್ಡಡ್ಡ ಅಗಲಿಸಿರುತ್ತವೆ. ಚಿಟ್ಟೆಗಳ ಮೈ ಬಡಕಲು, ಮೀಸೆ ಅನ್ನೋದು ಬೆಂಕಿಕಡ್ಡಿ ಥರಾ. ಪತಂಗಗಳದ್ದು ಠೊಣಪರ ಮೈ. ಹಂಚಿಕಡ್ಡಿ ಮೀಸೆ. ನಿಶಾಚರ ಜೀವಿಗಳಾದ ಈ ಪತಂಗಗಳನ್ನು ನಾವು ನೋಡುವುದೇ ತೀರಾ ಕಡಿಮೆ. ಕಂಬಳಿ ಹುಳುಗಳು ಚೆನ್ನಾಗಿ ಎಲೆತಿಂದು ಬೆಳೆದ ಮೇಲೆ ಪ್ಯೂಪಾ ಆಗುವಾಗ ಮಣ್ಣಲ್ಲಿ ನೆಲದಲ್ಲಿ ಎಲೆಗಳ ಮರೆ ಸೇರಿಬಿಡುತ್ತವೆ.
ನಾನು ಅದನ್ನು ಮನೆಯೊಳಗೆ ತಂದ ಏಳನೇ ದಿನ ಪ್ಯೂಪಾ ಪೂರ್ತಿ ಕಪ್ಪುಬಣ್ಣಕ್ಕೆ ತಿರುಗಿತ್ತು. ಬೆಳೆಗ್ಗೆನೇ ಎದ್ದು ನೋಡಿದೆ. ಪ್ಯೂಪಾ ಒಡೆದಿದೆ. ಕೆಂಪು ಬಣ್ಣದ ದ್ರವವಿದೆ. ಆದರೆ ಪತಂಗವೇ ಇಲ್ಲ. ಸುತ್ತ ನೋಡಿದೆ. ನನ್ನ ಪುಣ್ಯ. ಕಿಟಕಿಯ ಗ್ರಿಲ್ ಚಿಕ್ಕದಾಗಿದ್ದು ಅದು ಹೊರ ಹೋಗಲಾಗದೇ ಅದರ ಮೇಲೆ ಕುಳಿತಿತ್ತು. ದಪ್ಪ ಹೊಟ್ಟೆ, ದೊಡ್ಡ ಕಣ್ಣುಗಳು, ಅಗಲವಾದ ರೆಕ್ಕೆ. ಪಾಚಿ ಬಣ್ಣದಲ್ಲಿ ಹಾಗೂ ರೆಕ್ಕೆಯ ಮೇಲೆ ಬಿಳಿ ಬಣ್ಣದಲ್ಲಿ ಕಣ್ಣುಗಳು ಮತ್ತು ವೀರಪ್ಪನ್ ಮೀಸೆ ಬರೆದಂತಿತ್ತು. ಬೆಳಕಾಗಿದ್ದರಿಂದ ಅದು ಕದಲದೇ ಹಾಗೆಯೇ ಕುಳಿತಿತ್ತು. ಅದನ್ನು ನಮ್ಮಜ್ಜಿಗೆ ತೋರಿಸಿದೆ. "ಎಷ್ಟು ಚೆನ್ನಾಗಿದೆ. ನೋಡಿದ್ಯಾ ನಂಗೊತ್ತೇ ಇರಲಿಲ್ಲ" ಎಂದು ಸಂತೋಷಿಸಿದರು. ಇದರ ಫೋಟೋ ತೆಗೆದು ಪುಸ್ತಕದಲ್ಲಿ ಹುಡುಕಿದೆ. ಇದರ ಹೆಸರು ಓಲಿಯಾಂಡರ್ ಹಾಕ್ ಮಾತ್ .
ಕತ್ತಲಾದ ಮೇಲೆ ಹೊರಗೆ ತೆಗೆದುಕೊಂಡು ಹೋದೆ. ಮನೆಯಿಂದ ಹೊರಗೆ ಬರುವಷ್ಟರಲ್ಲೇ ರೆಕ್ಕೆ ಪಟಪಟಿಸಿದ ಅದು ಆಚೆ ಬರುತ್ತಿದ್ದಂತೆಯೇ ಹಾರಿಹೋಯಿತು.
ಮುದ್ದೆ ಮುದ್ದೆಯಂತಿರುವ, ಸದಾ ತಿನ್ನುವ ಠೊಣಪನಂತಿರುವ ಈ ಕಂಬಳಿ ಹುಳುಗಳು ಸುಂದರ ರೆಕ್ಕೆಗಳಿರುವ ಪತಂಗಗಳಾಗಿ ಮಾರ್ಪಾಡಾಗುವ ಸೋಜಿಗ ನೋಡುವಾಗ ನಾನಾ ಪ್ರಶ್ನೆಗಳು ಮನದಲ್ಲಿ ಮೂಡುತ್ತವೆ. ಮಣ್ಣಿನ ಬಣ್ಣದ ಕವಚ ಕಟ್ಟಿಕೊಂಡು ಮಣ್ಣಿನಲ್ಲಿ ಸೇರುವಂತೆ ಇವಕ್ಕೆ ಹೇಳಿಕೊಟ್ಟವರ್ಯಾರು? ಬೆರಳ ಗಾತ್ರದ ಹುಳಕ್ಕೆ ಕವಚದೊಳಗೆ ರೆಕ್ಕೆಯು ಮೂಡುವುದೆಂತು? ಪತಂಗಕ್ಕೆ ಇಂತಹದೇ ಹೂವಿನ ಮಕರಂದ ಹೀರೆಂದು, ಇದೇ ಗಿಡದಲ್ಲಿ ಮೊಟ್ಟೆ ಇಡೆಂದು ಹೇಳಿಕೊಟ್ಟವರ್ಯಾರು?
ಇದೊಂದು ಕೊನೆಯಿರದ, ಸಂತಸಪಡುವ, ತಾಳ್ಮೆಯಿಂದ ಅಭ್ಯಸಿಸುವ, ಗಮನಿಸುವ ಕೌತುಕಲೋಕ.

3 comments:

Unknown said...

enTha muddO, enTha sogasO!!
nishAcharigaLa baduku nigooDha.

Nimma camerakke IR lens aLavaDisi rathri vELe chitragaLannu tegeyalu sAdhyaVe?

Ittigecement said...

ಅಸಹ್ಯವಾಗಿರುವ ಹುಳುಗಳಲ್ಲಿ ಸೌಂದರ್ಯ ತೋರಿಸಿದ್ದೀರಲ್ಲ.. ಲೇಖನ ಕೂಡ ಚೆನ್ನಾಗಿದೆ... ಅಸಹ್ಯದಲ್ಲೂ ಸೌಂದರ್ಯ ಅಂತ ಹೆಸರು ಇಟ್ಟಿಬಿಡಿ..ಫೊಟೊ .ಲೇಖನ ಎರಡೂ ಚೆನ್ನಾಗಿದೆ...

ದೀಪಸ್ಮಿತಾ said...

ವಾವ್! ಎಲ್ಲಿ ಸಿಗ್ತು ಈ ಎಲ್ಲಾ ಚಿತ್ರಗಳು. ಪ್ರಾಣಿ ಪಕ್ಷಿ ಹುಳಗಳಾಗಲಿ, ನಿಸರ್ಗ ದೃಶ್ಯಗಳಾಗಲಿ ದೃಶ್ಯಕಾವ್ಯಗಳೇ