"ಏನ್ರೋ ಅದು?" ಮೇಸ್ಟ್ರು ಕೇಳಿದರು. "ಹಕ್ಕಿ ಸಾರ್", ಗುಂಪುಗೂಡಿದ್ದ ಹುಡುಗರು ಉತ್ತರಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿಯ ಪ್ರಾಥಮಿಕ ಶಾಲೆ. ಅಲ್ಲಿನ ಉಪಾಧ್ಯಾಯರುಗಳಾದ ನಾಗಭೂಷಣ್ ಮತ್ತು ವೆಂಕಟರೆಡ್ಡಿ ಮಕ್ಕಳ ಕೈಲಿ ಯಾವುದಪ್ಪ ಹೊಸ ಹಕ್ಕಿ ಎಂದು ಕುತೂಹಲಗೊಂಡು ಹೋಗಿ ನೋಡಿದರು. "ಅರೆ! ಮಿಂಚುಳ್ಳಿ. ಎಲ್ಲಿ ಸಿಕ್ತೋ ನಿಮ್ಗೆ?" ಎಂದು ಕೇಳಿದರು. "ದ್ರಾಕ್ಷಿ ತೋಟಕ್ಕೆ ಬಲೆ ಕಟ್ಟಿರ್ತಾರಲ್ಲ ಸಾರ್. ಅದಕ್ಕೆ ಸಿಕ್ಕಾಕ್ಕೊಂಡಿತ್ತು" ಅಂದರು ಮಕ್ಕಳು. ಗಾಬರಿಗೊಂಡೋ ಅಥವಾ ಸುಸ್ತಾಗಿಯೋ ಕದಲದೇ ಕುಸಿದು ಕುಳಿತಿದ್ದ ಆ ಹಕ್ಕಿಯ ಬಾಯಿಗೆ ಮೇಸ್ಟ್ರುಗಳು ನೀರು ಹಾಕಿ ಅಲ್ಲೇ ಇದ್ದ ಗಿಡದ ರೆಂಬೆಯ ಮೇಲೆ ಬಿಟ್ಟಿದ್ದಾರೆ. ಮಕ್ಕಳು ಮನೆಗೆ ತೆಗೆದುಕೊಂಡು ಹೋಗೆ ಸಾಕುತ್ತೇವೆಂದು ಕೇಳಿದ್ದಾರೆ. ಕೋಳಿಯಂತೆ ಇದನ್ನು ಸಾಕಲು ಸಾಧ್ಯವಿಲ್ಲ. ಸ್ವಚ್ಛಂದವಾಗಿ ಹಾರಾಡುತ್ತಾ ಮೀನು, ಕಪ್ಪೆ, ಹುಳುಗಳನ್ನು ತಿಂದು ಬದುಕುವ ಈ ಮಿಂಚುಳ್ಳಿಯ ಜೀವನಕ್ರಮದ ಬಗ್ಗೆ ತಿಳಿಸಿದ್ದಾರೆ.
ಇಷ್ಟೆಲ್ಲಾ ಆದ ಮೇಲೆ ರಂಗಪ್ರವೇಶಿಸಿದ್ದು ನನ್ನ ಕ್ಯಾಮೆರಾ! ನಾಗಭೂಷಣ್ ಫೋನ್ ಮಾಡಿ ಮಿಂಚುಳ್ಳೀಯ ಫೋಟೋ ತೆಗೆಯಲು ಕರೆದರು. ನಾನಲ್ಲಿಗೆ ಹೋದಾಗ ಮೇಸ್ಟ್ರುಗಳಿಂದ ಮಕ್ಕಳಿಗೆ ಮಿಂಚುಳ್ಳಿಯ ಪಾಠ ನಡೆಯುತ್ತಿತ್ತು."ಅದು ಮೊಟ್ಟೆ ಎಲ್ಲಿಡ್ತದೆ?""ಮರಿಗೆ ಏನು ತಿನ್ನಿಸ್ತದೆ?""ಇದು ಗಂಡೋ, ಹೆಣ್ಣೋ?"ಯಕ್ಷಪ್ರಶ್ನೆಗಳು ಮಕ್ಕಳಿಂದ ತೂರಿ ಬರುತ್ತಿದ್ದರೆ, ಸಾವಧಾನದಿಂದ ಉಪಾಧ್ಯಾಯರು ಉತ್ತರಿಸುತ್ತಿದ್ದರು. ಮಿಂಚುಳ್ಳಿಗಳಲ್ಲಿ ಹಲವು ವಿಧಗಳಿವೆ. ಇಂಗ್ಲಿಷ್ ನಲ್ಲಿ ಇದಕ್ಕೆ WhiteBreastedKingfisher ಎನ್ನುತ್ತಾರೆ. ಗಂಡು ಹೆಣ್ಣು ಒಂದೇ ರೀತಿಯಿರುತ್ತವೆ. ನೀರಿರುವೆಡೆ ಮಣ್ಣಿನ ಎತ್ತರದ ಗೋಡೆಯಂತಹುದ್ದನ್ನು ಆಯ್ದುಕೊಂಡು ಅದರಲ್ಲಿ ಎತ್ತರದಲ್ಲಿ ತೂತು ಕೊರೆದು ಗೂಡು ಮಾಡಿ ಮೊಟ್ಟೆಯಿಟ್ಟು ಮರಿಮಾಡುತ್ತವೆ.
ಅಷ್ಟರಲ್ಲಿ ಹಕ್ಕಿ ಚೇತರಿಸಿಕೊಂಡಿತ್ತು. ನಾನು ಫೋಟೋ ತೆಗೆದ ಮೇಲೆ ಮಕ್ಕಳನ್ನು ಶಾಲೆಯ ಒಳಗೆ ಕಳಿಸಿ, ಹಕ್ಕಿಯನ್ನು ಯಾರ ಕೈಗೂ ಸಿಗದಂತೆ ಪೊದೆಗಳ ಹಿಂದೆ ಗಿಡವೊಂದರಲ್ಲಿ ಬಿಟ್ಟು ಬಂದರು.
ಇಂಥಹ ಪಾಠ ಎಷ್ಟು ಮಕ್ಕಳಿಗೆ ಸಿಗುತ್ತಿದೆ?
ಒಗ್ಗರಣೆ ಪತ್ರೊಡೆ
1 day ago
5 comments:
nimma ee yella anubhavaglu adbuthavaagide ,nimminda innondu parisarada kathe nirikhse maadabahude?
ನಿಮ್ಮ ಬ್ಲಾಗ್ ಸುಂದರ ಚಿತ್ರಗಳು ಹಾಗು ಬರಹದೊಂದಿಗೆ ಕೂಡಿದೆ.. ಹೀಗೆ ಅತ್ಯುತ್ತಮ ಚಿತ್ರಗಳನ್ನು ಕೊಡುತ್ತಿರಿ..
ವಾವ್!! ನಾನು ಈ ಪಕ್ಷಿಯನ್ನು ಫೊಟೊ ತೆಗೆಯಲು ಪ್ರಯತ್ನಿಸಿ ಸೋತಿದ್ದೇನೆ.. ಫೊಟೊ.. ಲೇಖನ ಎರಡೂ ತುಂಬಾ ಚೆನ್ನಾಗಿದೆ.. ವಾರಕ್ಕೊಂದು ಫೊಟೊವಾದರೂ ಹಾಕಿ ಬರೆಯಿರಿ...
sakattaagide minchuLLi photo! idu "kiru neeli minchuLLi" alvaa?? athvaa adu bErEnaa?
Post a Comment