“ಶ್! ಶಬ್ಧ ಮಾಡಬೇಡಿ. ಅಲ್ಲಿ ನೋಡಿ ಹುಲಿ ಬರುತ್ತಿದೆ ನೀರು ಕುಡಿಯಲು” ಎಂದು ಕೈ ತೋರಿಸಿದರು.
ನಮಗೆಲ್ಲ ರೋಮಾಂಚನ. ಝೂಮ್ ಲೆನ್ಸ್ನಲ್ಲಿ ಹುಲಿರಾಯನನ್ನು ನೋಡುತ್ತಿದ್ದಂತೆಯೇ ನನಗೆ ಕ್ಲಿಕ್ಕಿಸುವುದೂ ಮರೆತುಹೋಯಿತು.
“ಫೋಟೋ ತೆಗೀರಿ ಸರ್...” ಎಂದು ಜೀವನ್ ತಿವಿದಾಗಲೇ ವಾಸ್ತವಕ್ಕೆ ಮರಳಿದ್ದು. ಅದರದೇ ಮನೆಯಲ್ಲಿ ಅಂದರೆ ಕಾಡಲ್ಲಿ ಹುಲಿಯನ್ನು ನೋಡುವುದಂತೂ ಎಂಥವರಿಗೂ ಮರೆಯಲಾಗದ ಅನುಭವ.
ಜೀವನ್ ಕಬಿನಿ ಜಂಗಲ್ ಲಾಡ್ಜಸ್ನ ನ್ಯಾಚುರಲಿಸ್ಟ್. ತೆರೆದ ಜೀಪಿನಲ್ಲಿ ಪ್ರವಾಸಿಗರನ್ನು ಕಾಡಿನಲ್ಲಿ ಕರೆದೊಯ್ದು ವನ್ಯ ಪ್ರಾಣಿಗಳನ್ನು ತೋರಿಸುತ್ತಾರೆ.
ಕಬಿನಿ ನದಿಯ ಉತ್ತರದಲ್ಲಿ ೬೫೦ ಚದರ ಕಿಮೀ ವ್ಯಾಪ್ತಿಯ ನಾಗರಹೊಳೆ ಅಭಯಾರಣ್ಯವಿದೆ. ಈಶಾನ್ಯದಲ್ಲಿ ೮೭೪ ಚದರ ಕಿಮೀ ವ್ಯಾಪಿಸಿರುವ ಬಂಡೀಪುರ ಮತ್ತು ೩೨೧ ಚದರ ಕಿಮೀ ವ್ಯಾಪ್ತಿಯ ಮದುಮಲೈ ಅಭಯಾರಣ್ಯಗಳು ಹಾಗೂ ನೈರುತ್ಯದಲ್ಲಿ ೩೪೫ ಚದರ ಕಿಮೀ ವ್ಯಾಪ್ತಿಯ ಕೇರಳದ ವೈನಾಡ್ ಅಭಯಾರಣ್ಯಗಳಿವೆ. ಇಷ್ಟು ಸಮೃದ್ಧ ಜೀವಜಾಲ ಕಂಡೊಡನೆ ಬ್ರಿಟಿಷರು ಮತ್ತು ರಾಜಮಹಾರಾಜರು ಬೇಟೆಯಾಡಲಿದು ಉತ್ತಮ ಸ್ಥಳವೆಂದು ನಿರ್ಧರಿಸಿ ಹೆಚ್.ಡಿ.ಕೋಟೆಯ ಅಂತರಸಂತೆ ವಲಯದ ಕಾರಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಅದ್ಭುತವಾದ ಬಂಗಲೆಗಳನ್ನು ನಿರ್ಮಿಸಿದ್ದರು. ಹಾಗೆಯೇ ಅನೇಕ ಹುಲಿಗಳನ್ನು ಬೇಟೆಯೂ ಆಡಿದರು.
ಆದರೆ ಈಗ ಆ ಬಂಗಲೆಗಳು ಸರ್ಕಾರ ನಡೆಸುತ್ತಿರುವ ಕಬಿನಿ ಜಂಗಲ್ ರಿವರ್ ಲಾಡ್ಜಸ್ನ ಭಾಗವಾಗಿದೆ. ಇಲ್ಲಿ ತರಭೇತಿ ಹೊಂದಿದ ಪ್ರಕೃತಿ ವಿಜ್ಞಾನಿಗಳಿದ್ದಾರೆ. ಬೆಳಿಗ್ಗೆ ಎರಡೂವರೆ ಗಂಟೆ ಮತ್ತು ಮಧ್ಯಾಹ್ನ ಎರಡೂವರೆ ಗಂಟೆ ಕಾಡಿನೊಳಗೆ ತೆರೆದ ಜೀಪಿನಲ್ಲಿ ಸುತ್ತಿಸುತ್ತಾರೆ. ಜಿಂಕೆಗಳು, ಲಂಗೂರ್ಗಳು, ದೊಡ್ಡ ಅಳಿಲು, ಕಾಡು ನಾಯಿಗಳು, ಹುಲಿ, ಚಿರತೆ, ಆನೆಗಳು, ಕಾಡು ಹಂದಿಗಳು, ಸಾಂಬಾರ್, ಮೌಸ್ ಡೀರ್, ಬಾರ್ಕಿಂಗ್ ಡೀರ್, ಕಾಟಿ, ವಿವಿಧ ಹಕ್ಕಿಗಳು ಅವುಗಳ ವಾಸಸ್ಥಾನದಲ್ಲೇ ನೋಡುವುದರಿಂದ ವನ್ಯಜೀವಿಗಳ ಮೇಲೆ ಪ್ರೀತಿ, ಗೌರವ ಮತ್ತು ಆದರ ಹುಟ್ಟಿಸುತ್ತದೆ.
ಕೇರಳದ ವೈನಾಡಿನಲ್ಲಿ ಜನಿಸಿ ಕಾವೇರಿ ನದಿಯನ್ನು ಸೇರಿ ಬಂಗಾಳಕೊಲ್ಲಿ ಸೇರುವ ಕಬಿನಿ ನದಿಗೆ ಹೆಚ್.ಡಿ.ಕೋಟೆಯಿಂದ ಹದಿನಾಲ್ಕು ಕಿಮೀ ದೂರದಲ್ಲಿ ಬೀಚಗಾನಹಳ್ಳಿ ಮತ್ತು ಬಿದರಹಳ್ಳಿ ನಡುವೆ ಅಣೆಕಟ್ಟನ್ನು ಕಟ್ಟಲಾಗಿದೆ. ಬೇಸಿಗೆಯಲ್ಲಿ ಬಿಸಿಲು ಏರಿದಂತೆ ಕಬಿನಿ ಅಣೆಕಟ್ಟಿನ ಒಡಲಲ್ಲಿ ನೀರು ನಿಧಾನವಾಗಿ ಖಾಲಿಯಾಗುತ್ತದೆ. ನೀರಿನಡಿಯಲ್ಲಿ ಮುಳುಗಿರುವ ವಿಶಾಲಭೂಮಿ ಹೊರ ಪ್ರಪಂಚಕ್ಕೆ ತೆರೆದುಕೊಂಡು ಅಲ್ಲಿ ಚಿಗುರು ಹಸಿರು ಹೊರಹೊಮ್ಮುತ್ತದೆ. ಆಗ ನಾಗರಹೊಳೆ, ಬಂಡೀಪುರ, ಮದುಮಲೈ, ವೈನಾಡಿನ ಆನೆಗಳು, ಕಾಡುಕೋಣಗಳು ಹಿಂಡುಹಿಂಡಾಗಿ ಹಿನ್ನೀರಿನತ್ತ ವಲಸೆ ಬರುತ್ತವೆ. ಆಗ ಒಮ್ಮಗೇ ೬೦ ರಿಂದ ೭೦ ಆನೆಗಳು ಹಿಂಡು ಹಿಂಡಾಗಿ ಕಾಣಿಸುತ್ತವೆ. ದೋಣಿಯಲ್ಲಿ ಕುಳಿತು ಆನೆಗಳ ಹಿಂಡನ್ನು ಬಿದಿರ ಹಿನ್ನೆಲೆಯಲ್ಲಿ ನೋಡಲು ತುಂಬಾ ಚೆನ್ನಾಗಿರುತ್ತದೆ. ಒಣ ಮರಗಳ ಮೇಲೆ ಕುಳಿತ ಬೆಳ್ಳಕ್ಕಿಗಳು, ನೀರು ಕಾಗೆಗಳು, ಸ್ನೇಕ್ ಬರ್ಡ್, ಮಿಂಚುಳ್ಳಿಗಳು, ಹದ್ದುಗಳು, ಬಾತುಗಳು ಇತ್ಯಾದಿ ಹಕ್ಕಿಗಳನ್ನು ನೋಡುತ್ತಾ ಸಾಗಿದಂತೆ ನಮ್ಮ ಎಣಿಕೆಯೇ ತಪ್ಪುತ್ತದೆ.
ಭಾರತದ ದಕ್ಷಿಣ ತುದಿಯಿಂದ ಪ್ರಾರಂಭವಾಗಿ ಗುಜರಾತ್ವರೆಗೆ ೧,೬೦೦ ಕಿಮೀ ಉದ್ದದ, ೧,೬೦,೦೦೦ ಚದರ ಕಿಮೀ ವ್ಯಾಪ್ತಿಯ ಪಶ್ಚಿಮಘಟ್ಟವನ್ನು ದೇಶದ ಅತಿದೊಡ್ಡ ಜೈವಿಕ ತಾಣವೆಂದು ಪರಿಗಣಿಸಲಾಗಿದೆ. ಇದರ ಪ್ರತಿನಿಧಿಯಾದ ಕಬಿನಿ ಸುತ್ತಮುತ್ತಲ ತಾಣ ಜೀವವೈವಿದ್ಯದ ದರ್ಶನ ಮಾಡಿಸುವಲ್ಲಿ ಹೇಳಿ ಮಾಡಿಸಿದಂತ ತಾಣ.








ಮಲಬಾರ್ ಜೈಂಟ್ ಸ್ಕ್ವಿರ್ಲ್

ಬಾರ್ಕಿಂಗ್ ಡೀರ್



ಆಸ್ಪ್ರೇ ಹಕ್ಕಿ

ಸ್ನೇಕ್ ಬರ್ಡ್

ಆಸ್ಪ್ರೇ ಹಕ್ಕಿ

ನೀರು ಕಾಗೆ