ವಿಜ್ಞಾನಿ, ಸಾಹಿತಿ, ಫೋಟೋಗ್ರಾಫರ್, ಪರಿಸರಪ್ರೇಮಿ, ಚಿತ್ರಕಾರರು... ಹೀಗೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದ ಡಾ.ಕೃಷ್ಣಾನಂದ ಕಾಮತರು ನನಗೆ ಸದಾ ಸ್ಫೂರ್ತಿ.
ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದ ಡಾ.ಕೃಷ್ಣಾನಂದ ಕಾಮತರು ಮತ್ತು ಇತಿಹಾಸದ ಸಂಶೋಧಕರು ಹಾಗು ನಿವೃತ್ತ ಆಕಾಶವಾಣಿ ನಿರ್ದೇಶಕರಾದ ಡಾ.ಜ್ಯೋತ್ಸ್ನಾಕಾಮತ್.
ನಲವತ್ತೈದು ವರ್ಷಗಳ ಹಿಂದೆಯೇ ಅವರು ತಮ್ಮ ಮನೆಯಲ್ಲಿ "Guest Book" ಇಟ್ಟಿದ್ದರು. ಅವರ ಮನೆಗೆ ಬರುವ ಅತಿಥಿಗಳ ಕೈಲಿ ಹೆಸರು, ದಿನಾಂಕ ಮತ್ತು ವಿಳಾಸ ಬರೆಸಿಡುತ್ತಿದ್ದರು.
ವಿಕಾಸರು ಅದನ್ನು ತೋರಿಸಿದಾಗ ಅಮೂಲ್ಯ ಹಸ್ತಾಕ್ಷರಗಳ ಅದ್ಭುತ ಸಂಗ್ರಹವನ್ನೇ ನೋಡುವಂತಾಯಿತು. ಡಾ.ಎಸ್.ಎಲ್.ಭೈರಪ್ಪ, ಚದುರಂಗ, ಜಿ.ಬಿ.ಜೋಶಿ, ಕೀರ್ತಿನಾಥ ಕುರ್ತಕೋಟಿ, ಸು.ರಂ.ಎಕ್ಕುಂಡಿ, ಜಿ.ಪಿ.ರಾಜರತ್ನಂ... ಅನೇಕ ಗಣ್ಯರ ಹಸ್ತಾಕ್ಷರಗಳಿವೆ. ಕೆಲಗಣ್ಯರು ಮತ್ತೊಮ್ಮೆ ಮಗದೊಮ್ಮೆ ಇವರ ಮನೆಗೆ ಬಂದಾಗ ಬದಲಾದ ಅವರ ವಿಳಾಸಗಳಿಂದ ಅವರ ಸಾಮಾಜಿಕ ಸ್ಥಾನಮಾನದ ಏರುಗತಿಯೂ ದಾಖಲಾಗಿದೆ.




ಡಾ.ಕಾಮತರು ಫೋಟೋ ಆಲ್ಬಂ ತಾವೇ ತಯಾರಿಸುತ್ತಿದ್ದರು. ಆಲ್ಬಂ ತೆರೆದರೆ ಚಿತ್ರಗಳು ಚಲನಚಿತ್ರದಂತೆ ಕಥೆ ಹೇಳುವ ರೀತಿ ಜೋಡಿಸಿರುತ್ತಿದ್ದರು. ಪ್ರತಿ ಫೋಟೋ ಕೆಳಗೂ ಆಕರ್ಷಕವಾದ ಶೀರ್ಷಿಕೆ ಕೊಡುವುದು ಅವರ ವೈಶಿಷ್ಟ್ಯ.
ಒಮ್ಮೆ ನಾಗಪುರದಲ್ಲಿ ತಮ್ಮ ಸಂಬಂಧಿಕರೊಬ್ಬರ ಮನೆಗೆ ಡಾ.ಕಾಮತರು ಹೋಗಿದ್ದರಂತೆ. ಅವರ ಮನೆಯಲ್ಲಿ ನಡೆದ ಔತಣಕೂಟಕ್ಕೆ ರಘು ಮಾಸೂರ್ಕರ್ ಎನ್ನುವವರು ಬಂದಿದ್ದರಂತೆ. ಮೂವತ್ತೆರಡರ ಹರೆಯದ ಲವಲವಿಕೆಯ, ಹಾಸ್ಯಮಿಶ್ರಿತ ಮಾತುಗಾರಿಕೆಯ ಆಕರ್ಷಕ ವ್ಯಕ್ತಿತ್ವ. ನೋಡಲೂ ತುಂಬಾ ಸುಂದರನಾಗಿದ್ದ ರಘು ಎಲ್ಲರಿಗೂ ಇಷ್ಟವಾಗಿಬಿಟ್ಟರಂತೆ.
ಒಮ್ಮೆ ನಾಗಪುರದಲ್ಲಿ ತಮ್ಮ ಸಂಬಂಧಿಕರೊಬ್ಬರ ಮನೆಗೆ ಡಾ.ಕಾಮತರು ಹೋಗಿದ್ದರಂತೆ. ಅವರ ಮನೆಯಲ್ಲಿ ನಡೆದ ಔತಣಕೂಟಕ್ಕೆ ರಘು ಮಾಸೂರ್ಕರ್ ಎನ್ನುವವರು ಬಂದಿದ್ದರಂತೆ. ಮೂವತ್ತೆರಡರ ಹರೆಯದ ಲವಲವಿಕೆಯ, ಹಾಸ್ಯಮಿಶ್ರಿತ ಮಾತುಗಾರಿಕೆಯ ಆಕರ್ಷಕ ವ್ಯಕ್ತಿತ್ವ. ನೋಡಲೂ ತುಂಬಾ ಸುಂದರನಾಗಿದ್ದ ರಘು ಎಲ್ಲರಿಗೂ ಇಷ್ಟವಾಗಿಬಿಟ್ಟರಂತೆ.
ಕ್ಯಾಂಡಿಡ್ ಫೋಟೋಗ್ರಫಿಯಲ್ಲಿ ಸಿದ್ಧಹಸ್ತರಾಗಿದ್ದ ಡಾ.ಕಾಮತರು ರಘು ಅವರ ಅನೇಕ ಚಿತ್ರಗಳನ್ನು ತೆಗೆದರಂತೆ. ದುರಂತವೆಂದರೆ ಎಲ್ಲರಿಗೂ ಅಷ್ಟೊಂದು ಪ್ರೀತಿಪಾತ್ರರಾಗಿದ್ದ ರಘು ದೇವರಿಗೂ ಪ್ರೀತಿಪಾತ್ರರೇ ಆದರೇನೋ ಅನ್ನುವಂತೆ ಬ್ರೈನ್ ಟ್ಯೂಮರ್ ಬಂದು ಕೆಲವೇ ದಿನಗಳಲ್ಲಿ ತೀರಿಕೊಂಡರಂತೆ. ಪಾಪ ಆಗ ಅವರಿಗೆ ಮದುವೆ ನಿಕ್ಕಿಯಾಗಿತ್ತಂತೆ.
ಬೆಂಗಳೂರಿನಲ್ಲಿದ್ದ ಕಾಮತರಿಗೆ ವಿಷಯ ತಿಳಿದು ದುಃಖವಾಗಿದೆ. ರಘು ಮಾಸೂರ್ಕರ್ ಅವರ ಚಿತ್ರಗಳನ್ನೆಲ್ಲಾ ತಮ್ಮ ಡಾರ್ಕ್ ರೂಮಿನಲ್ಲಿ ತೊಳೆದು ಆಲ್ಬಂ ತಯಾರಿಸಿದ್ದಾರೆ. ಅದರ ತಯಾರಿಕೆಯಲ್ಲಿ ವಿಕಾಸರೂ ಸಹಾಯ ಮಾಡಿದ್ದರಂತೆ. ಒಂದೊಂದು ಚಿತ್ರಕ್ಕೂ ಆಕರ್ಷಕ ಶೀರ್ಷಿಕೆಗಳು.. ಇಂಗ್ಲೀಷ್ ಮತ್ತು ಕನ್ನಡ ಎರಡರಲ್ಲೂ ಬರೆದಿದ್ದರಂತೆ. ಆಲ್ಬಂ ಪ್ಯಾಕ್ ಮಾಡಿ ಡಾ.ಕಾಮತರು ರಘು ಅವರ ತಂದೆ ತಾಯಿಗೆ ಕಳಿಸಿದ್ದಾರೆ. ಕಾಕತಾಳೀಯವೆಂದರೆ ಅದು ಅವರಿಗೆ ತಲುಪಿದ್ದು ಅವರ ಮೊದಲ ವರ್ಷದ ಪುಣ್ಯತಿಥಿಯಂದು! ಅವರೆಲ್ಲ ಅದನ್ನು ನೋಡಿ ತಮ್ಮ ಮಗನೇ ಹಿಂತಿರುಗಿ ಬಂದನೆಂದು ಆನಂದಪಟ್ಟರಂತೆ... ಕಣ್ಣೀರಿಟ್ಟರಂತೆ...
ಮುಂದೆ ೨೦೦೨ರ ಫೇಬ್ರವರಿಯಲ್ಲಿ ಡಾ.ಕೃಷ್ಣಾನಂದ ಕಾಮತರು ಹೃದಯಾಘಾತದಿಂದ ನಿಧನರಾದಾಗ ಆ ಸಮಯದಲ್ಲಿ ಡಾ.ಜ್ಯೋತ್ಸ್ನಾಕಾಮತರ ನೆರವಿಗೆ ಬಂದವರು ಇದೇ ರಘು ಮಾಸೂರ್ಕರ್ರ ಸಹೋದರಿ ಲಲಿತ ಕಾಯ್ಕಿಣಿ. "ಆಗ ಏನೂ ತೋಚದಂತಿದ್ದಾಗ ಇವರಿಂದಲೇ ಡಾ.ಕಾಮತರ ಕಣ್ಣುಗಳನ್ನು ದಾನಮಾಡುವಂತಾಯ್ತು" ಎಂದು ನೆನೆಸಿಕೊಳ್ಳುವರು ಜ್ಯೋತ್ಸ್ನಾ ಮೇಡಂ.
ಡಾ.ಕಾಮತರು ಮಧ್ಯಪ್ರದೇಶದಲ್ಲಿ ಅಧ್ಯಯನ ಪ್ರವಾಸ ಕೈಗೊಂಡಾಗ ಅಲ್ಲಿ ಫೋಟೋ ತೆಗೆಯಲಾಗದೆಡೆ ಅವರು ರೇಖಾಚಿತ್ರಗಳನ್ನು ಬಿಡಿಸಿದ್ದರು. ಅದರ ಸಂಗ್ರಹವನ್ನೂ ವಿಕಾಸರು ತೋರಿಸಿದರು.
ಡಾ.ಕಾಮತರ ಸಂಗ್ರಹ ಅಕ್ಷಯ ಪಾತ್ರೆಯಿದ್ದಂತೆ. ಅವರು ಕ್ಲಿಕ್ಕಿಸಿರುವ ಸುಮಾರು ಎರಡು ಲಕ್ಷ ಚಿತ್ರಗಳಲ್ಲಿ ಮೂರನೇ ಒಂದು ಭಾಗವಷ್ಟೇ ಅವರ ವೆಬ್ಸೈಟ್ನಲ್ಲಿರುವುದು. ಮುಂದಿನ ವರ್ಷ ವಿಕಾಸರು ಬಂದಾಗ ಇನ್ನಷ್ಟು ಕಾಮತರ ಬೆರಗುಗಳನ್ನು ತೋರಿಸಲಿ.
ನಮ್ಮ ಮನೆಯಲ್ಲಿ "Guest Book" ಇಟ್ಟಿರುವೆ. ನೀವೂ ಇಡುತ್ತೀರಲ್ವಾ?