ಈ ಬಾರಿಯ ಕೇರಳ ಪ್ರವಾಸ ತುಂಬ ಸುಸ್ತು ಮಾಡಿತ್ತು. ಕರ್ರಗೆ ಸೀದ ಬಾಳೆಕಾಯಿ ತರಹ ಆಗಿದ್ದೆ.
ಅಂಗಡಿಗೆ ಬಂದು ಉಸ್ಸಪ್ಪಾ... ಅನ್ನುವಷ್ಟರಲ್ಲಿ ವೆಂಕಟರಮಣನ ಫೋನ್..
"ಕೇರಳ ಬಿಡ್ತಾ?""ಅಂಗಡಿಗೆ ಬಂದಿದ್ದೀನಪ್ಪ""ಸ್ವಲ್ಪ ಅರ್ಜೆಂಟ್... ನಮ್ಮನೇಗೆ ಬರ್ತೀರಾ?"ಅವರ ಮನೆ ಅಂಗಡಿಗೆ ತುಂಬಾ ಹತ್ತಿರ. ನಾಲ್ಕು ಹೆಜ್ಜೆಯಷ್ಟೇ.
"ಸುಸ್ತಾಗಿದ್ದೀನಿ. ನೀನೇ ಬಾ" ಅಂದೆ.
"ಇಲ್ಲ. ಅರ್ಜೆಂಟ್ ಬನ್ನಿ" ಅನ್ನುತ್ತಾ ಫೋನಿಟ್ಟ.
ಹೋದೆ.
"ನೋಡಿ ನಮ್ಮ ಸೋನು ಈ ಡಬ್ಬದಲ್ಲಿ ಹುಳುಗಳನ್ನು ಹಿಡಿದಿಟ್ಟಿದ್ದಾಳೆ" ಎನ್ನುತ್ತಾ ಡಬ್ಬವನ್ನು ಮುಂದಿಟ್ಟ.
ಅವನ ಮಗಳು ಸೋನು ಒಂದು ರಟ್ಟಿನ ಡಬ್ಬಿಯಲ್ಲಿ ಹುಳಗಳನ್ನಿಟ್ಟಿದ್ದಳು. ಅದರಲ್ಲಿ ಕೆಲವಾಗಲೇ ಗೊಟಕ್ ಅಂದಿದ್ದವು!
"ನೋಡಿ ಮಲ್ಲಿ ಅಂಕಲ್ಗೆ ಕೊಡ್ಬೇಕು ಅಂತ ತಂದಿಟ್ಟಿದ್ದಾಳೆ" ಎಂದು ವೆಂಕಟರಮಣ ಅಂದಾಗ ನಂಗೇ ಒಂಥರಾ ಆಯ್ತು.
"ಸೋನು ಹಾಗಿಲ್ಲಾ ಎಲ್ಲಾ ಹುಳ ಮನೆಗೆ ತರ್ಬೇಡ. ಅವು ಊಟ ಇಲ್ದೆ ಸಾಯ್ತವೆ. ಅದೆಲ್ಲಿದೆ ಅಂತ ನನಗೆ ಹೇಳು ಸಾಕು" ಎಂದು ಆ ಪುಟ್ಟ ಪೊರಿಗೆ ಹೇಳಿದೆ.
ಸೋನು ಒಬ್ಬಳೇ ಅಲ್ಲ, ಅವಳಣ್ಣ ಹರೀಶ, ಅವರಕ್ಕಪಕ್ಕದ ಮನೆಯ ಹುಡುಗರು ಸ್ಟ್ಯಾನ್ಲಿ, ವ್ರೆಸ್ಲಿ ಎಲ್ಲ ಸಿಕ್ಕಸಿಕ್ಕ ಹುಳುಗಳನ್ನು ನನ್ನ ಅಂಗಡಿಗೇ ತಂದುಬಿಡುತ್ತಾರೆ.
"ಸಹವಾಸದಿಂದ ಸನ್ಯಾಸಿ ಕೆಟ್ಟ" ಎಂಬ ಗಾದೆಮಾತು ಏನೇನು ಅರ್ಥ ಕೊಡುತ್ತದೋ ಗೊತ್ತಿಲ್ಲ. ಆದರೆ, ನನ್ನ ಸಂಪರ್ಕಕ್ಕೆ ಬಂದವರು ಮಾತ್ರ ಸ್ವಲ್ಪ ಸ್ವಲ್ಪ ಹಾಳಾಗಿದ್ದಾರೆ!
ಇದಕ್ಕೆಲ್ಲ ಕಾರಣ ಆ ದಿನ ನಡೆದ ಘಟನೆ...
* * * * *
ಆ ದಿನ ಯಾವುದೋ ಹಬ್ಬವಿತ್ತು.
ಅಂಗಡಿಯಲ್ಲಿದ್ದ ನನಗೆ ಫೋನ್ ಮಾಡಿ,
"ಯಾವುದೋ ಹೊಸ ತರಹದ ಹುಳ ನಮ್ಮ ಮನೆ ಗೋಡೆ ಮೇಲಿದೆ ಬನ್ನಿ" ಎಂದು ಸ್ನೇಹಿತ ವೆಂಕಟರಮಣ ಕರೆದ.
ಇವರಿಗೆ ಹುಳು ನೋಡಿದ ತಕ್ಷಣ ನಾನೇ ಏಕೆ ನೆನಪಾಗುತ್ತೀನೋ?!
ಶಾಲೆಗೆ ರಜೆಯಿದ್ದುದರಿಂದ ಅವರ ಮನೆ ಬಳಿ ಮಕ್ಕಳ ಗುಂಪು ಸೇರಿತ್ತು. ವೆಂಕಟರಮಣನ ಮಕ್ಕಳು ಮತ್ತು ಅಕ್ಕಪಕ್ಕದ ಮನೆಯವರ ಮಕ್ಕಳು ಎಲ್ಲ ನನ್ನನ್ನು ಅನಕೊಂಡ ಹಾವು ಹಿಡಿಯಲು ಬಂದಿರುವನಂತೆ ಕುತೂಹಲದಿಂದ ನೋಡುತ್ತಿದ್ದರು. ಆ ಸಂದರ್ಭಕ್ಕೆ ತಕ್ಕಂತೆ ನಾನೂ ಸಹ ಒಂದು ಪ್ಲಾಸ್ಟಿಕ್ ಡಬ್ಬವನ್ನು ಹಿಡಿದುಕೊಂಡು ಹೋಗಿದ್ದೆ.

ಬಿಳಿ ಬಣ್ಣದ ಗೋಡೆ ಮೇಲೆ ಹಸಿರು ಹುಳು. ಕಬಂಧ ಬಾಹುಗಳಂತೆ ಅದಕ್ಕೆ ಹತ್ತಾರು ಕೈಗಳು ಮತ್ತು ಅದರ ಮೇಲೆಲ್ಲಾ ರೋಮಗಳು. ನೋಡಿದೊಡನೆಯೇ ನನ್ನ ರೋಮಗಳೂ ನಿಮಿರಿ ನಿಂತಿತು.
ಪ್ರತಿ ಕಂಬಳಿ ಹುಳಕ್ಕೂ ತನ್ನದೇ ಆದ ಆಹಾರ ಸಸ್ಯವಿರುತ್ತೆ. ಏಕಪತ್ನಿ ವ್ರತಸ್ಥರಂತೆ ಇವು ಏಕ ಸಸ್ಯ ವ್ರತಸ್ಥರು. ಈಗ ಇದರ ಆಹಾರ ಸಸ್ಯ ಯಾವುದು? ಅಲ್ಲೇ ಹತ್ತಿರದಲ್ಲಿ ಅಂದರೆ ಅವರ ಮನೆ ಬಾಗಿಲ ಪಕ್ಕದಲ್ಲಿ ಮನಿಪ್ಲಾಂಟ್ ಮತ್ತು ಪನ್ನೀರೆಲೆಯ ಗಿಡಗಳನ್ನು ಬೆಳೆಸಿದ್ದರು. ಆದರೆ ಆ ಗಿಡಗಳಲ್ಲಿ ಯಾವುದೇ ಹುಳಗಳಿರಲಿಲ್ಲ. ಆದರೂ ಪುಸ್ತಕದಲ್ಲಿ ಹುಡುಕಿದರಾಯ್ತು ಅಂದುಕೊಂಡು ಪ್ಲಾಸ್ಟಿಕ್ ಡಬ್ಬದಲ್ಲಿ ಈ ಎರಡೂ ಗಿಡಗಳ ಎರಡೆರಡು ಎಲೆಗಳನ್ನು ಹಾಕಿದೆ. ಒಂದು ಎಲೆ ಮೇಲೆ ಮೆಲ್ಲನೆ ಹುಳುವನ್ನು ಹತ್ತಿಸಿಕೊಂಡು ಮಕ್ಕಳಿಗೆಲ್ಲಾ ತೋರಿಸಿದೆ.
"ಇದನ್ನೇನ್ಮಾಡ್ತೀರ ಅಂಕಲ್?"
"ಫೋಟೋ ತೆಗೀತೀರಾ?"
ಅದು ಕಚ್ಚುತ್ತಾ?"...
ಟುಂಯ್.. ಟುಂಯ್.. ಎಂದು ಬಾಣ ಬಂದಂತೆ ಪ್ರಶ್ನೆಗಳು ತೂರಿ ಬಂದವು.
"ಈ ಹುಳು ಎಲೆ ತಿನ್ನುತ್ತೆ. ಆಮೇಲೆ ಗೂಡು ಕಟ್ಟಿಕೊಳ್ಳುತ್ತೆ. ಅದಕ್ಕೆ ಪ್ಯೂಪ ಅನ್ನುತ್ತಾರೆ. ಅದರಿಂದ ಚಿಟ್ಟೆ ಆಚೆ ಬರುತ್ತೆ. ಅದು ಆಚೆ ಬಂದಮೇಲೆ ನಿಮಗೆ ತೋರಿಸ್ತೀನಿ" ಎಂದು ಹೇಳಿ ಬಂದೆ.

ಮನೆಗೆ ಹೋಗಿ ಚಿಟ್ಟೆಗಳ ಪುಸ್ತಕದಲ್ಲಿ ಹುಡುಕಿದೆ. ಸಿಕ್ಕಿತು. ಈ ಹುಳು Common Baron ಚಿಟ್ಟೆಯ ಕಂಬಳಿಹುಳು. ಇದರ ಆಹಾರ ಸಸ್ಯ ಮಾವು! ನನಗೆ ಅಚ್ಚರಿಯಾಯ್ತು. ಏಕೆಂದರೆ ಆ ಹುಳು ಸಿಕ್ಕ ಸ್ಥಳದ ಬಳಿ ಮಾವಿನ ಗಿಡವಿರಲಿಲ್ಲ.
ವೆಂಕಟರಮಣನಿಗೆ ಫೋನ್ ಮಾಡಿದೆ.
"ನಿಮ್ಮನೆ ಹತ್ರ ಮಾವಿನ ಗಿಡ ಇದ್ಯಾ?" ಎಂದು ಕೇಳಿದೆ.
"ನಮ್ಮನೆ ಮುಂದೆ ಕಾಲುದಾರಿ ಇದ್ಯಲ್ಲ. ಅದರಾಚೆ ಗಿಡಗಳು ಬೆಳ್ಸಿದ್ದೀವಲ್ಲ. ಅದ್ರಲ್ಲಿ ಮಾವಿನ ಗಿಡವೂ ಇದೆ. ಸ್ವಲ್ಪ ದೊಡ್ಡದಾಗಿದೆ" ಅಂದ.
ಆ ಗಿಡದಿಂದ ಇಳಿದು ಕಾಲುದಾರಿಯನ್ನು ದಾಟಿ, ಅದ್ರಲ್ಲೂ ಎಷ್ಟೊಂದು ಚಕ್ರಗಳು(ವಾಹನಗಳು) ಶೂ ಚಪ್ಪಲಿಗಳನ್ನು ತಪ್ಪಿಸಿಕೊಂಡು ಬಂದು ಮನೆಗೋಡೆ ಹತ್ತುವುದು ಈ ಹುಳು ಕೈಲಿ ಆಗುತ್ತಾ? ಸಾಧ್ಯವಾ?

ಈ
"ಮಿಸ್ಸಿಂಗ್ ಲಿಂಕ್" ಹುಡುಕಲೇಬೇಕು ಎಂದು ಮತ್ತೆ ಅವರ ಮನೆ ಬಳಿ ಹೋದೆ. ಅಲ್ಲಿ ಸಿಕ್ಕಿತು ಈ ತಪ್ಪಿಹೋಗಿದ್ದ ಸಂಗತಿ!
ಹಬ್ಬ ಅಲ್ವಾ, ಅವರ ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟಿದ್ದರು. ಅದರಿಂದ ಬಂದ ಹುಳು ಗೋಡೆ ಹತ್ತಿರಬೇಕು.
"ಈ ಮಾವಿನ ಎಲೆ ಯಾವ ಗಿಡದ್ದು" ಎಂದು ವಿಚಾರಿಸಿದೆ.
"ಅಲ್ಲೇ ಇದೆಯಲ್ಲ ಆ ಗಿಡದ್ದು" ಅಂದರು.
ಆ ಗಿಡದ ಬಳಿ ಹೋಗಿ ಹುಡುಕಿದೆ. ಅಷ್ಟರಲ್ಲಿ ಹುಡುಗರೂ ನನಗೆ ಜೊತೆಯಾದರು. ಆ ಗಿಡದಲ್ಲಿ ಏಳೆಂಟು ಹುಳುಗಳಿದ್ದವು. ನಾನು ಎರಡನ್ನು ಮಾತ್ರ ಕೆಲಮಾವಿನ ಎಲೆಗಳೊಂದಿಗೆ ಡಬ್ಬದಲ್ಲಿ ಹಾಕಿ ತಂದೆ.
ಪ್ರತಿದಿನ ಅವಕ್ಕೆ ಫ್ರೆಶ್ ಮಾವಿನೆಲೆಯ ಮೃಷ್ಟಾನ್ನ ಭೋಜನ!
"ಅಂಕಲ್ ಚಿಟ್ಟೆ ಬಂತಾ?" ಎನ್ನುತ್ತಾ ಒಬ್ಬರಾದ ಮೇಲೊಬ್ಬರು ಹುಡುಗರು ಧಾಳಿಮಾಡತೊಡಗಿದರು.
"ಬಂದ ಮೇಲೆ ನಾನೇ ನಿಮ್ಮನ್ನು ಕರೀತೀನ್ರೋ. ಅದುವರೆಗೂ ಕಾಟ ಕೊಡ್ಬೇಡಿ" ಎಂದು ಹೇಳಿ ಸಾಗಹಾಕಿದೆ.
ಹುಳ ಪ್ಯೂಪ ಆಯ್ತು. ಒಂದು ವಾರಕ್ಕೆ ಚಿಟ್ಟೆ ಹೊರಕ್ಕೆ ಬಂತು. ಅದನ್ನು ಫೋಟೋ ತೆಗೆದೆ. ಡಬ್ಬದಲ್ಲಿಟ್ಟುಕೊಂಡು ತಂದು ಹುಡುಗರಿಗೆ ತೋರಿಸಿ ಹಾರಲು ಬಿಟ್ಟೆ. ಎಲ್ಲರೂ ತಮಗೇ ಹಾರಲು ಬಂದಂತೆ ಕುಣಿದಾಡಿದರು.
ಈಗ ಈ ಹುಡುಗರಲ್ಲೇ ಸ್ಪರ್ಧೆ ಏರ್ಪಟ್ಟಿದೆ! ಯಾವ ಆಕಾರದ ಎಂಥಹ ಹುಳು ಸಿಕ್ಕರೂ ತಂದು ನನ್ನ ಮುಂದಿಡುತ್ತಿದ್ದಾರೆ!
"ಹಾಗೆಲ್ಲ ತರಬೇಡ್ರೋ. ಅದೆಲ್ಲಿದೆ ಅಂತ ನನಗೆ ಬಂದು ಹೇಳಿ ಸಾಕು" ಎಂದು ಹೇಳಿ ಹೇಳಿ ಸಾಕಾಗಿದೆ.
ವೆಂಕಟರಮಣನ ಫೋನ್... "ನಮ್ಮ ಪಕ್ಕದ್ಮನೆಯವ್ರು ಹೇಳ್ತಿದ್ರು, ಈ ಎಲ್ಲ ಹುಳು, ಮಕ್ಕಳು, ಪಿಳ್ಳೆಗಳನ್ನೆಲ್ಲ ಅವರ ಅಂಗಡಿಗೆ ಕಳಿಸಿಬಿಡೋಣ ಅಂತ. ಹೆಂಗೆ...?"
ಹುಳುಗಳ ಶಾಪ... ಈ ಮಕ್ಕಳ ಅಮ್ಮಂದಿರ ಶಾಪ...
ಈಗ ನನ್ನ ಈ ಪಾಡನ್ನು ಪಡಿಪಾಟಲನ್ನು ಯಾರಿಗೆ ಹೇಳುವುದು...
ಓ my God see my ಪಾಡ್..!