Thursday, October 10, 2013

ಎಲೆ ಮತ್ತು ಜಿಟಿಕ್ಕಾಯಿ ಜುಗಲ್‍ಬಂದಿ






 ತನ್ನ ತೂಕ ಹೆಚ್ಚಿದೆಯೋ ಅಥವಾ ಎಲೆಯ ಕ್ಷಮತೆ ಜಾಸ್ತಿಯಿದೆಯೋ ನೋಡುವ ಪುಟ್ಟ ಸಾಹಸ. ಅತ್ತ ಗಾಳಿ ಬೀಸುತ್ತಿದ್ದರೆ, ಇತ್ತ ಇದು ಇನ್ನಷ್ಟು ಗಟ್ಟಿಯಾಗಿ ನಿಲ್ಲಲು ಪ್ರಯತ್ನಿಸುತಿತ್ತು. ಗಾಳಿಯಿಂದ ಒಂದು ಇಂಚಿನಷ್ಟು ಎಲೆ ಮೇಲೆ ಏರಿದರೂ ಕ್ಷಣಮಾತ್ರದಲ್ಲೇ ಎರಡೂ ಇಂಚಿನಷ್ಟು ಅದು ಕೆಳಗಿಳಿಯುತಿತ್ತು. ಅಪರೂಪದ ಈ ಜುಗಲ್‌ಬಂದಿ ಒಂದರ್ಥದಲ್ಲಿ ಪುಟ್ಟ ’ಬಲ ಪ್ರದರ್ಶನ’ ಕಂಡು ಬಂದದ್ದು  ಶಿಡ್ಲಘಟ್ಟ ತಾಲ್ಲೂಕಿನ  ಹನುಮಂತಪುರ ಗ್ರಾಮದ ಹೊರವಲಯದಲ್ಲಿ. ಒಮ್ಮೆ ಎಲೆಯ ಬಲ ಹೆಚ್ಚಾದರೆ, ಮಗದೊಮ್ಮೆ ಪುಟಾಣಿ ಪಕ್ಷಿಯ ಬಲ ವೃದ್ಧಿಯಾಗುತಿತ್ತು.

 ಚಂಚಲ ಮನಸ್ಸಿನಿಂದ ಕೂಡಿದ್ದ ಹಕ್ಕಿಯು ಒಮ್ಮೆ ಎಲೆಯ ಮೇಲೆ ಕೂರುತ್ತ, ಮತ್ತೊಮ್ಮೆ ರಕ್ಕೆ ಬಡಿಯುತ್ತ ಪುಟಿಯುತಿತ್ತು. ಇನ್ನೇನೂ ಹಾರಿಕೊಂದು ದೂರಕ್ಕೆ ಹಾರಿ ಹೋಗುತ್ತದೆಯೆಂದು ಭಾವಿಸುವಷ್ಟರಲ್ಲಿ ಅದು ಎಲೆಯ ಮೇಲೆ ಮತ್ತೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತಿತ್ತು. ಒಂಟಿಯಾಗಿದ್ದ ಹಕ್ಕಿಯು ತನಗೆ ಜೊತೆ ನೀಡಲು ಸಂಗಾತಿಯನ್ನು ಹುಡುಕುತ್ತಿರುವಂತೆಯೂ ಭಾಸವಾಗುತಿತ್ತು. ಸಂಗಾತಿಯ ಧ್ವನಿ ಕೇಳಿಸಿದರೂ ಸಾಕು ಉತ್ಸಾಹಗೊಳ್ಳುತ್ತಿದ್ದ ಪಕ್ಷಿಯು ಸುತ್ತಲೂ ಕಣ್ಣು ಹಾಯಿಸುತಿತ್ತು. ಒಲುಮೆಯ ದನಿ ಆಲಿಸುತ್ತಿರುವಾಗ ಕಿರಿಕಿರಿ ಮಾಡದಂತೆ ಎಲೆಯನ್ನು ಕಾಲಿನಿಂದ ಸೂಕ್ಷ್ಮವಾಗಿ ತಿವಿಯುತಿತ್ತು.

 ಅಂದ ಹಾಗೆ, ಈ ಪುಟ್ಟ ಹಕ್ಕಿಯ ಹೆಸರು ಜಿಟಿಕ್ಕಾಯಿ.  ಎಲೆಗಳ ಮರೆಯಲ್ಲಿ ಅಪರೂಪಕ್ಕೆ ಕಾಣಸಿಗುವ ಈ ಪಕ್ಷಿಯು ತುಂಬ ನಾಚಿಕೆ ಸ್ವಭಾವದ್ದು ಹೌದು. ಎಲ್ಲಿಯಾದರೂ ಸಂಚಲನ ಮತ್ತು ಜನರ ಚಟುವಟಿಕೆ ಗಮನಕ್ಕೆ ಬಂದರೆ, ನಿಮ್ಮ ಸಹವಾಸವೇ ಬೇಡವೆಂದು ಕೊಂಚ ದೂರಕ್ಕೆ ಹಾರಿ ಹೋಗುತ್ತದೆ. ಮೈಪೂರ್ತಿ ಸೌಂದರ್ಯದ ಗುಣ ಹೊಂದಿದ್ದರೂ ಅದನ್ನು ತೋರಿಸಿಕೊಡಲು ಅದು ಬಯಸುವುದಿಲ್ಲ.