Thursday, June 27, 2013

’ದೇಶಭಕ್ತರ’ಹಳ್ಳಿಯಲ್ಲಿ ಈಗ ಪಾಕಪ್ರವೀಣರು!

ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯ ತೆಲುಗರ ಕೃಷ್ಣಪ್ಪ ಅವರ ತೋಟದಲ್ಲಿರುವ ಕ್ರಿ.ಶ. ೮೭೦ ರ ಶಿಲಾ ಶಾಸನದಲ್ಲಿ ಕೊರೆದ ಹಳೆಗನ್ನಡ ಲಿಪಿ ಮತ್ತು ವೀರನ ಚಿತ್ರವನ್ನು ಕೆತ್ತಿರುವುದು.

ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹುತಾತ್ಮರನ್ನು, ಹೋರಾಟಗಾರರನ್ನು ನೀಡಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮ. ಆಗಿನ ಕಾಲದಲ್ಲಿ ಈ ಗ್ರಾಮ ದೇಶಭಕ್ತರಹಳ್ಳಿ ಎಂದೇ ಪ್ರಸಿದ್ಧಿ ಗಳಿಸಿತ್ತು. ಸ್ವಾತಂತ್ರ್ಯ ಬಂದು ಒಂದು ತಲೆಮಾರೇ ಕಳೆದಿರುವ ಹೊತ್ತಿನಲ್ಲಿ ಗ್ರಾಮವು ಈಗ ಪಾಕಪ್ರವೀಣರ ತವರೂರು ಎಂದು ಖ್ಯಾತಿ ಗಳಿಸಿದೆ.
 ಭಕ್ತರಹಳ್ಳಿ ಗ್ರಾಮದ ಇತಿಹಾಸವನ್ನು ಸ್ಪಷ್ಟವಾಗಿ ತಿಳಿಪಡಿಸುವ ೧,೨೦೦ ವರ್ಷಗಳ ಹಿಂದಿನ ಶಿಲಾಶಾಸನವೊಂದಿದೆ. ಗ್ರಾಮದ ಹೊರವಲಯದಲ್ಲಿ ತೆಲುಗರ ಕೃಷ್ಣಪ್ಪ ಅವರ ತೋಟದಲ್ಲಿ ಪತ್ತೆಯಾಗಿರುವ ಕ್ರಿ.ಶ. ೮೭೦ ರ ಶಿಲಾ ಶಾಸನದಲ್ಲಿ ಕೊರೆದ ಹಳೆಗನ್ನಡ ಲಿಪಿಯು ಹೇಳುವಂತೆ, ’ಪಲ್ಲವ ನೊಳಂಬಾದಿರಾಜನ ಆಳ್ವಿಕೆಯಲ್ಲಿ ಕಕ್ಕರ ಎಂಬುವವನು ಮದಲೂರಿಗೆ ನುಗ್ಗಿ ಹಸುಗಳನ್ನು ಎಳೆದೊಯ್ಯುವಾಗ ತಿಂಗಣಿ ಮಾರನ ಮಗ ಮೇಲಿಯು ಅದನ್ನು ತಡೆದು ಹೋರಾಡಿ ವೀರಮರಣವನ್ನಪ್ಪಿದ. ಊರಿನ ಮಹಾಜನರು ಐದು ಕೊಳಗದಷ್ಟು ಬಿತ್ತುವ ಗದ್ದೆ ಮತ್ತು ಹೊಲವನ್ನು ಆತನ ಕುಟುಂಬದವರಿಗೆ ನೀಡಿದ್ದು, ಇದನ್ನು ಬೇರೆಯವರು ಅಪಹರಿಸಿದ್ದಲ್ಲಿ ಪಂಚಮಹಾಪಾತಕಗಳ ಪಾಪ ಸುತ್ತಿಕೊಳ್ಳುತ್ತದೆ’ ಎಂದು ಬರೆದು ವೀರನ ಚಿತ್ರವನ್ನೂ ಕೆತ್ತಲಾಗಿದೆ.


 ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯ ಗ್ರಾಮ ಪಂಚಾಯಿತಿ ಕಚೇರಿಯ ಆವರಣದಲ್ಲಿ ಭಕ್ತರಹಳ್ಳಿಯ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಗಾಂಧಿ ಪ್ರತಿಮೆ ಮತ್ತು ಹೋರಾಟಗಾರರ ಹೆಸರಿನ ಫಲಕವನ್ನು ಸ್ಥಾಪಿಸಲಾಗಿದೆ.

 ಗ್ರಾಮದ ಹಸುಗಳನ್ನು ಕದ್ದವರೊಂದಿಗೆ ಹೋರಾಡಿ ಮರಣವನ್ನಪ್ಪಿದ ಹಿನ್ನೆಲೆಯುಳ್ಳ ಗ್ರಾಮದಲ್ಲಿ ಮುಂದೆ ಸ್ವಾತಂತ್ರ್ಯ ಹೋರಾಟಗಾರರು ಹುಟ್ಟಿದರು. ಗ್ರಾಮದ ಹಿರಿಯರಾದ ಬಂಡಿ ನಾರಾಯಣಪ್ಪನವರ ಮನೆಯು ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಿಗೆ ಕೇಂದ್ರ ಸ್ಥಾನವಾಗಿತ್ತು. ೧೯೪೭ರಲ್ಲಿ ಶಿಡ್ಲಘಟ್ಟದ ತಾಲ್ಲೂಕು ಕಚೇರಿಯ ಮೇಲೆ ರಾಷ್ಟ್ರಧ್ವಜ ಹಾರಿಸುವ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಪೊಲೀಸರು ನಡೆಸಿದ ಗೋಲೀಬಾರಿನಲ್ಲಿ ಭಕ್ತರಹಳ್ಳಿಯ ನಾರಾಯಣಪ್ಪನವರ ವೆಂಕಟರವಣಪ್ಪ ಮತ್ತು ಕುಂಬಾರು ದೊಡ್ಡ ನಾರಾಯಣಪ್ಪ ಎಂಬ ಇಬ್ಬರು ದೇಶಭಕ್ತರು ವೀರಮರಣವನ್ನಪ್ಪಿದರು. ಹಲವಾರು ಮಂದಿ ಜೈಲು ಪಾಲಾದರು. ಹೀಗಾಗಿ ಭಕ್ತರಹಳ್ಳಿಯು ಆಗ ’ದೇಶಭಕ್ತರಹಳ್ಳಿ’ ಎಂದೇ ಖ್ಯಾತಿಯಾಯಿತು.
 ’ಸರ್ಕಾರಿ ಲೆಕ್ಕದಲ್ಲಿ ಭಕ್ತರಹಳ್ಳಿಯ ಕೇವಲ ೧೩ ಮಂದಿ ಮಾತ್ರ ಸ್ವಾತಂತ್ರ್ಯ ಹೋರಾಟಗಾರರೆಂದು ಗುರುತಿಸಲ್ಪಟ್ಟಿದ್ದಾರೆ. ಆದರೆ ಹಲವಾರು ಮಂದಿ ಈ ಹೋರಾಟದಲ್ಲಿ ಭಾಗಿಯಾಗಿದ್ದರು. ಭಂಡಿ ನಾರಾಯಣಪ್ಪ, ನಾಗಮಂಗಲದ ವೆಂಕಟರಾಯಪ್ಪ, ಪಟೇಲ್ ಮುನಿಶಾಮಿಗೌಡ, ಬಿ.ವೆಂಕಟರಾಯಪ್ಪ, ಬಿ.ಆರ್.ಕೆ.ಆರಾಧ್ಯ, ನಾರಾಯಣಸ್ವಾಮಿ ಗೌಡ, ಎಚ್.ಕಾಳಪ್ಪ, ಬಿ.ಆಂಜನೇಯಗೌಡ, ಭಂಡಿ ಕ್ಯಾತಣ್ಣ, ತೋಟಿ ರಂಗಪ್ಪ, ಬಿ.ಎನ್.ಪುಟ್ಟಣ್ಣ, ಬಿ.ಎಸ್.ಬಚ್ಚೇಗೌಡ, ಡಿ.ಮಾರಪ್ಪ, ತಳವಾರ ನಾರಾಯಣಪ್ಪ, ನಾಯಕರ ಮುನಿಯಪ್ಪ ಮತ್ತಿತರರು ಭಕ್ತರಹಳ್ಳಿಯ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು.
 ಶಿಡ್ಲಘಟ್ಟ ಕ್ಷೇತ್ರದ ಮಾಜಿ ಶಾಸಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಭಕ್ತರಹಳ್ಳಿಯ ಬಿ.ವೆಂಕಟರಾಯಪ್ಪ ಸ್ವಾತಂತ್ರ್ಯ ಹೋರಾಟಗಾರರಿಗೆ ಸರ್ಕಾರ ನೀಡುವ ಪಿಂಚಣಿಯನ್ನೂ ಪಡೆಯುತ್ತಿರಲಿಲ್ಲ. ಅವರನ್ನು ಗೌರವಿಸುವ ಸಲುವಾಗಿ ನಾನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷನಾದಾಗ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಗಾಂಧಿ ಪ್ರತಿಮೆ ಹಾಗೂ ಭಕ್ತರಹಳ್ಳಿಯ ಸ್ವಾತಂತ್ರ್ಯ ಹೋರಾಟಗಾರರ ಹೆಸರಿನ ಫಲಕವನ್ನು ಹಾಕಿಸಿದೆ’ ಎಂದು ಗ್ರಾಮದ ಧೀಮಂತ ವ್ಯಕ್ತಿಗಳನ್ನು ನೆನೆಯುತ್ತಾರೆ ಹಿರಿಯರಾದ ವೆಂಕಟಮೂರ್ತಿಯವರು.
 ಸ್ವಾತಂತ್ರ್ಯ ಬಂದು ಆರು ದಶಕಗಳಾಗಿವೆ. ಗ್ರಾಮದಲ್ಲಿ ಓಡಾಡಿದರೆ ಈಗಲೂ ಸ್ವಾತಂತ್ರ್ಯ ಸಂಗ್ರಾಮದ ದಿನಗಳ ವಾಸನೆ ಬಡಿಯುತ್ತದೆ. ಆಗಿನ ದಿನಗಳನ್ನು ಮೆಲುಕು ಹಾಕುವಂಥ ಮತ್ತು ಸ್ವಾತಂತ್ರ್ಯ ಹೋರಾಟಗಾರರೊಡನೆ ಒಡನಾಟ ಇಟ್ಟುಕೊಂಡಿದ್ದ ಕೆಲವೇ ಮಂದಿ ಈಗ ಗ್ರಾಮದಲ್ಲಿ ಉಳಿದುಕೊಂಡಿದ್ದಾರೆ. ಹಳೆಯ ದಿನಗಳನ್ನು ಕೆದಕಿದರೆ ಸಾಕು, ಅವರು ಹಳೆಯ ನೆನಪುಗಳ ಸರಮಾಲೆಯನ್ನೇ ಬಿಚ್ಚಿಡುತ್ತಾರೆ.

ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ೧೯೫೮ರಲ್ಲಿ ಜೈ ಭಾರತ್ ದೊಡ್ಡ ಪ್ರಮಾಣದ ಪ್ರಾಥಮಿಕ ಪತ್ತಿನ ವ್ಯವಸಾಯ ಸಂಘವನ್ನು ರೈತರ ಅಭ್ಯುದಯಕ್ಕಾಗಿ ಸ್ಥಾಪಿಸಲಾಗಿತ್ತು. ಆಗಿನ ಮುಖಂಡರಾದ ಎನ್.ವೆಂಕಟಸ್ವಾಮಿ, ಬಿ.ನಾರಾಯಣಸ್ವಾಮಿಗೌಡ, ಬಿ.ವೆಂಕಟರಾಯಪ್ಪ, ಎಂ.ಸುಬ್ಬರಾಯ, ಎಚ್.ಕಾಳಪ್ಪ, ಬಿ.ಮುನಿಶಾಮಿಗೌಡ, ಬಿ.ಎನ್.ಪುಟ್ಟಣ್ಣ, ಬಿ.ಆಂಜನೇಯಗೌಡ, ಬಿ.ಆರ್.ಕೆ.ಆರಾಧ್ಯ ಮತ್ತಿತರರಿದ್ದಾರೆ.

ಈಗ ಭಕ್ತರಹಳ್ಳಿ ಗ್ರಾಮ ಅಡುಗೆಭಟ್ಟರಿಂದ ಖ್ಯಾತಿ ಗಳಿಸಿದೆ. ಯಾವುದೋ ಒಂದು ಸಂದರ್ಭದಲ್ಲಿ ಗ್ರಾಮದ ವ್ಯಕ್ತಿಯೊಬ್ಬರು ಮದುವೆ ಮನೆಗಳಲ್ಲಿ ಅಡುಗೆ ಮಾಡುವ ಪರಿಣತಿ ಬೆಳೆಸಿಕೊಂಡರು. ಅವರ ಮಕ್ಕಳು ಕೂಡ ಅಡುಗೆ ಭಟ್ಟರಾದರು. ಅಷ್ಟಕ್ಕೇ ಸೀಮಿತರಾಗದೆ ಒಬ್ಬೊಬ್ಬರೂ ಒಂದೊಂದು ಅಡುಗೆ ಮಾಡುವ ಗುಂಪನ್ನು ಬೆಳೆಸಿಕೊಂಡಿದ್ದರ ಪರಿಣಾಮ ಈಗ ಈ ಗ್ರಾಮದಲ್ಲಿ ಸುಮಾರು ೨೦೦ ಮಂದಿ ಪಾಕಪ್ರವೀಣರಿದ್ದಾರೆ. ಸುತ್ತಮುತ್ತಲ ಗ್ರಾಮಗಳಲ್ಲದೆ, ದೂರದ ಊರುಗಳು, ಬೆಂಗಳೂರು ನಗರದವರೆಗೂ ಈ ಪಾಕ ಪ್ರವೀಣರು ತಮ್ಮ ಜನಪ್ರಿಯತೆ ಬೆಳೆಸಿಕೊಂಡಿದ್ದಾರೆ.  ತಾಲ್ಲೂಕಿನ ಹಲವಾರು ಮಂದಿ ನಿರುದ್ಯೋಗಿಗಳಿಗೆ ಉದ್ಯೋಗದಾತರಾಗಿದ್ದಾರೆ. ಕೃಷ್ಣಪ್ಪ ಅವರ ಬಿ.ವಿ.ಕೆ, ಕುಮಾರ್ ಅವರ ಎಸ್.ಆರ್.ಎಸ್, ಕೆಂಪೇಗೌಡ ಅವರ ಸಿ.ಎಸ್.ಪಿ, ಬೈರೇಗೌಡ ಅವರ ಬಿ.ಎಂ.ಬಿ, ಮುನೇಗೌಡ ಅವರ ಬಿ.ಎಂ.ಎಸ್ ಸಂಸ್ಥೆ ಮುಂತಾದ ಅಡುಗೆ ಕಾಂಟ್ರಾಕ್ಟರುಗಳು ಹೆಸರುವಾಸಿಯಾಗಿದ್ದಾರೆ. ಅವರಲ್ಲಿ ಕೆಲವರು ಸುಮಾರು ಎರಡು ಸಾವಿರ ಸಿಬ್ಬಂದಿಯೊಂದಿಗೆ ಹದಿನೈದು ಸಾವಿರ ಮಂದಿಗೆ ಅಡುಗೆ ಮಾಡಿರುವ ದಾಖಲೆಯೂ ಇದೆ. ಅಡುಗೆಗೆ ಸಂಬಂಧಿಸಿದ ಪಾತ್ರೆಗಳು, ಶಾಮಿಯಾನಾ ಮುಂತಾದವುಗಳನ್ನು ಹೊಂದಿರುವುದಲ್ಲದೆ ಬಾಡಿಗೆಗೆ ನೀಡುವ ವ್ಯವಸ್ಥೆಯನ್ನೂ ಇವರು ಹೊಂದಿದ್ದಾರೆ.

ಹೀಗೂ ರಕ್ಷಿಸಬಹುದು ವೀರಗಲ್ಲು

ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಗ್ರಾಮದ ಚೌಡೇಶ್ವರಿ ದೇವಾಲಯದಲ್ಲಿ ವೀರಗಲ್ಲುಗಳನ್ನು ಕಾಂಪೋಂಡ್‌ಗೆ ಅಳವಡಿಸಿ ಸಂರಕ್ಷಿಸಿರುವುದು.

ಪುರಾತನವಾದ, ಚಾರಿತ್ರಿಕ ಹಿನ್ನೆಲೆಯುಳ್ಳ ವೀರಗಲ್ಲುಗಳನ್ನು ಕೆಲವೆಡೆ ಮಾತ್ರ ವೀರರಗುಡಿ ಎಂದು ಕರೆದು ಪೂಜಿಸಿದರೆ, ಬಹುತೇಕ ಕಡೆಗಳಲ್ಲಿ ಇವುಗಳನ್ನು ನಿರ್ಲಕ್ಷಿಸಿರುವುದು ಕಂಡುಬರುತ್ತದೆ. ಆದರೆ ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಗ್ರಾಮದಲ್ಲಿ ಸುತ್ತಮುತ್ತ ಸಿಕ್ಕ ಎಲ್ಲ ವೀರಗಲ್ಲುಗಳನ್ನು ಅಂದವಾಗಿ ಕಾಂಪೋಂಡ್‌ಗೆ ಅಳವಡಿಸಿ ಸಂರಕ್ಷಿಸಿದ್ದಾರೆ.
 ಚೀಮಂಗಲ ಗ್ರಾಮದ ಚೌಡೇಶ್ವರಮ್ಮ ದೇವಾಲಯದ ಕಾಂಪೋಂಡ್ ಬಳಿ ಎಂಟು ವೀರಗಲ್ಲುಗಳನ್ನು ಸಂರಕ್ಷಿಸಲಾಗಿದೆ. ಕುದುರೆಯ ಮೇಲೆ ಕತ್ತಿ ಹಿಡಿದಿರುವ ವೀರನಿಗೆ ಚಾಮರ ಹಿಡಿದಿರುವ ಸೇವಕ, ಕಳಶ ಹೊತ್ತ ಮಹಿಳೆಯರು, ಕತ್ತಿ ಗುರಾಣಿ ಹಿಡಿದ ವೀರ, ಬಿಲ್ಲುಬಾಣ ಹಿಡಿದ ವೀರ, ಹಸುಗಳನ್ನು ಸಂರಕ್ಷಿಸಲು ಪ್ರಾಣತೆತ್ತ ವೀರ... ಹೀಗೆ ನಾನಾ ಚಿತ್ರಗಳನ್ನು ಕಲ್ಲಿನಲ್ಲಿ ಕೆತ್ತಲಾಗಿದೆ.
 ’ಗ್ರಾಮದಲ್ಲಿ ಮೊದಲು ವೀರಗುಡಿ ಎಂಬುದಿತ್ತು ಅಲ್ಲಿ ಕೆಲವು ಕಲ್ಲುಗಳಿದ್ದವು. ಅದೆಲ್ಲ ಕುಸಿದು ಹಾಳಾಗಿತ್ತು. ಚೌಡೇಶ್ವರಮ್ಮ ದೇವಾಲಯವನ್ನು ಜೀರ್ಣೋದ್ದಾರ ಮಾಡುವ ಸಂದರ್ಭದಲ್ಲಿ ಅವನ್ನು ಮತ್ತು ಗ್ರಾಮದ ಸುತ್ತಮುತ್ತ ಅಲ್ಲಲ್ಲಿ ಬಿದ್ದಿದ್ದ ಇಂಥಹ ಕಲ್ಲುಗಳನ್ನು ತಂದು ಕಾಂಪೋಂಡ್‌ಗೆ ಅಳವಡಿಸಿದೆವು. ನಮ್ಮ ಗ್ರಾಮಕ್ಕೆ ಸಂಬಂಧಿಸಿದ ವೀರರ ನೆನಪಿಗಾಗಿ ನಿರ್ಮಿಸಿರುವ ಸ್ಮಾರಕಗಳಿವು ಎಂದು ಹಿರಿಯರು ಹೇಳುತ್ತಾರೆ. ಅಂಥಹ ವೀರರ ಚಿತ್ರಗಳನ್ನು ಜೋಪಾನವಾಗಿರಿಸುವುದು ನಮ್ಮ ಕರ್ತವ್ಯ’ ಎನ್ನುತ್ತಾರೆ ಗ್ರಾಮದ ಆಂಜಿನಪ್ಪ.
 ’ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಈ ರೀತಿಯ ವೀರಗಲ್ಲುಗಳು ಮತ್ತು ಶಾಸನಗಳು ಅನಾಥವಾಗಿವೆ. ಗ್ರಾಮಗಳ ದೇವಾಲಯಗಳನ್ನು ದುರಸ್ಥಿ ಅಥವಾ ಜೀಣೋದ್ಧಾರ ಮಾಡುವಾಗ ಚೀಮಂಗಲದ ಚೌಡೇಶ್ವರಿ ದೇವಾಲಯದಂತೆ ವೀರಗಲ್ಲುಗಳನ್ನು ಜೋಡಿಸಿಟ್ಟರೆ, ದೇವಾಲಯದ ಅಂದವೂ ಹೆಚ್ಚುತ್ತದೆ ಮತ್ತು ವೀರಗಲ್ಲುಗಳ ಸಂರಕ್ಷಣೆಯೂ ಆಗುತ್ತದೆ’ ಎಂದು ಅಭಿಪ್ರಾಯಪಡುತ್ತಾರೆ ಗ್ರಾಮದ ಶಿಕ್ಷಕರು.

 ಕಾಂಪೋಂಡ್‌ಗೆ ಅಳವಡಿಸಿರುವ ವೀರಗಲ್ಲುಗಳು.

 ಕಾಂಪೋಂಡ್‌ಗೆ ಅಳವಡಿಸಿರುವ ವೀರಗಲ್ಲುಗಳು.

ಅಪರೂಪದ ವೀರಗಲ್ಲು.

Tuesday, June 25, 2013

ಕಲಾವಿದನ ಕನಸುಗಳು


ಶಿಡ್ಲಘಟ್ಟ ತಾಲ್ಲೂಕಿನ ತಿಪ್ಪೇನಹಳ್ಳಿಯ ಕಲಾ ಶಿಕ್ಷಕ ಎಂ.ನಾಗರಾಜು ಶಾಲೆಯ ಗೋಡೆಯ ಮೇಲೆ ರಾಷ್ಟ್ರಕವಿಯ ಚಿತ್ರ ಬಿಡಿಸುತ್ತಿರುವುದು.

 ನಗರಗಳಲ್ಲಿರುವಂತೆ ಗ್ರಾಮೀಣ ಭಾಗಗಳಲ್ಲಿ ಚಿತ್ರಕಲೆಯನ್ನು ಅಭ್ಯಸಿಸುವವರು ವಿರಳ. ಆದರೆ, ‘ಚಿತ್ರಕಲೆಯೇ ನನ್ನ ಉಸಿರು, ನಮ್ಮ ಹಳ್ಳಿಯಲ್ಲಿ ಒಂದು ಆರ್ಟ್ ಗ್ಯಾಲರಿ ಮಾಡಬೇಕು’ ಎಂಬ ಉನ್ನತ ಕನಸನ್ನು ಕಾಣುತ್ತಾ ಚಿತ್ರಕಲೆಯಲ್ಲಿ ಸಾಧನೆ ಮಾಡುತ್ತಿರುವ ಕಲಾಶಿಕ್ಷಕರೊಬ್ಬರು ಶಿಡ್ಲಘಟ್ಟ ತಾಲ್ಲೂಕಿನ ತಿಪ್ಪೇನಹಳ್ಳಿ ಗ್ರಾಮದಲ್ಲಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ತಿಪ್ಪೇನಹಳ್ಳಿಯ ಎಂ.ನಾಗರಾಜು ಚಿಕ್ಕಬಳ್ಳಾಪುರ ತಾಲ್ಲೂಕಿನ ಗಿಡ್ನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಾ ಶಿಕ್ಷಕರಾಗಿ ವೃತ್ತಿ ಮಾಡುತ್ತಲೇ ಜಲವರ್ಣ, ನಿಸರ್ಗ ಚಿತ್ರಗಳು, ಟೆರ್ರಾಕೋಟ, ತೈಲವರ್ಣ, ವರ್ಲಿ, ನೈಜಚಿತ್ರಣ, ನವ್ಯಕಲೆ, ಕಲ್ಪನಾ ಚಿತ್ರಗಳು, ಚಿಕಣಿ ಮುಂತಾದ ವಿವಿಧ ಪ್ರಕಾರಗಳ  ಚಿತ್ರಗಳನ್ನು ಬಿಡಿಸುತ್ತಿದ್ದಾರೆ.
 ಶಿಡ್ಲಘಟ್ಟ ತಾಲ್ಲೂಕಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ ರಜಾ ದಿನಗಳಲ್ಲಿ ಉಚಿತ ಕಲಾ ಶಿಬಿರಗಳನ್ನು ಏರ್ಪಡಿಸುತ್ತಾ ಗ್ರಾಮೀಣ ಮಕ್ಕಳನ್ನು ಕಲಾ ಶಿಕ್ಷಣದೆಡೆಗೆ ಸೆಳೆಯುತ್ತಿದ್ದಾರೆ. ಮಕ್ಕಳನ್ನು ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಲು ತಯಾರಿಗೊಳಿಸುತ್ತಿದ್ದಾರೆ.
 ಜಾನಪದ ಶಿವಗಂಗೆ ಕಲಾಮೇಳ, ಕಿನ್ನಾಳ ಕಲೆ ಕಾರ್ಯಾಗಾರ, ಜಲವರ್ಣ ನಿಸರ್ಗ ಚಿತ್ರಕಲಾ ಶಿಬಿರ, ಟೆರ್ರಾಕೋಟ ಕಲಾ ಶಿಬಿರ, ಆಳ್ವಾಸ್ ವರ್ಣ ಜಾಗೃತಿ ಬೃಹತ್ ಶಿಬಿರಗಳಲ್ಲಿ ಪಾಲ್ಗೊಂಡು ಅನುಭವ ಹೆಚ್ಚಿಸಿಕೊಂಡಿದ್ದಾರೆ. ವಿವಿಧ ಪುಸ್ತಕಗಳಿಗೆ ರೇಖಾ ಚಿತ್ರಗಳು ಮತ್ತು ವ್ಯಂಗ್ಯಚಿತ್ರಗಳನ್ನು ರಚಿಸಿದ್ದಾರೆ. ಕೆಲವು ಶಾಲೆಗಳನ್ನೂ ಚಿತ್ರಕಲೆಯಿಂದ ಅಲಂಕರಿಸಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗೀತಚಿತ್ರಗಳನ್ನು ರಚಿಸಿದ್ದಾರೆ. ಮೈಸೂರು ದಸರಾ ವಸ್ತು ಪ್ರದರ್ಶನಲ್ಲಿ ಪ್ರಶಸ್ತಿ ಸೇರಿದಂತೆ ವಿವಿಧ ಚಿತ್ರಕಲಾ ಪುರಸ್ಕಾರಗಳನ್ನು ಪಡೆದಿದ್ದಾರೆ.
 ‘ನಾನು ಚಿಕ್ಕಂದಿನಲ್ಲೇ ಚಿತ್ರಕಲೆಯಲ್ಲಿ ಆಕರ್ಷಿತನಾದೆ. ಹೈಸ್ಕೂಲಿನಲ್ಲಿದ್ದಾಗ ನನ್ನ ಶಿಕ್ಷಕರಾದ ನಟರಾಜ್ ಪ್ರೋತ್ಸಾಹದಿಂದ ತಾಲ್ಲೂಕು ಮಟ್ಟದ ಚಿತ್ರಕಲೆಯ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದೆ. ನಂತರ ಜಿಲ್ಲಾ ಮಟ್ಟದಲ್ಲೂ ಬಹುಮಾನ ಪಡೆದೆ. ಅಂದೇ ಚಿತ್ರಕಲೆಯಲ್ಲೇ ಮುಂದುವರೆಯಲು ಪಣತೊಟ್ಟೆ. ತುಮಕೂರಿನಲ್ಲಿನ ರವೀಂದ್ರ ಕಲಾನಿಕೇತನದಲ್ಲಿ ಐದು ವರ್ಷದ ಕೋರ್ಸ್ ಮುಗಿಸಿ ಊರಿಗೆ ವಾಪಸಾದೆ. ಆಗ ಕೆಲಸ ಸಿಗದೆ ಬೋರ್ಡ್ ಹಾಗೂ ಫಲಕಗಳನ್ನು ಬರೆಯುವ ಅಂಗಡಿ ತೆರೆದಿದ್ದೆ. ನಂತರ ಸರ್ಕಾರಿ ಕಲಾ ಶಿಕ್ಷಕನಾಗಿ ಕೆಲಸ ಸಿಕ್ಕ ಮೇಲೆ ಚಿತ್ರಕಲೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡೆ’ ಎಂದು ತಮ್ಮ ಕಲಾ ಜೀವನದ ಬಗ್ಗೆ ಎಂ.ನಾಗರಾಜು ತಿಳಿಸಿದರು.
 ‘ದಿವಂಗತ ಎಸ್.ಎಂ.ಪಂಡಿತ್ ಅವರ ಪ್ರೇರಣೆಯಿಂದ ಮೊದಲು ಕ್ಯಾಲೆಂಡರ್ ಆರ್ಟ್‌ಗಳನ್ನು ಮರುನಿರ್ಮಾಣದಲ್ಲಿ ಆಸಕ್ತಿಯಿತ್ತು. ನಂತರ ಪ್ರಕೃತಿ ಚಿತ್ರಗಳತ್ತ ಒಲವು ಹರಿಯಿತು. ಅರಸೂರ್, ಅಡಪದ್ ಮತ್ತು ಮಣಿ ಮುಂತಾದ ಹಿರಿಯ ಕಲಾವಿದರಿಂದ ಪ್ರೇರಿತನಾಗಿ ನೈಜ ಚಿತ್ರಕಲೆಯಿಂದ ಈಗ  ನವ್ಯದೆಡೆಗೆ ಆಸಕ್ತಿ ಹರಿದಿದೆ. ಸುಮಾರು ೫೦ ಕಲಾಕೃತಿಗಳನ್ನು ಈಗಾಗಲೇ ತಯಾರಿಸಿರುವೆ. ಮಾಸ್ಟರ್ ಆಫ್ ಫೈನ್ ಆರ್ಟ್ಸ್ ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವೆ. ನನ್ನ ಗುರುಗಳಿಂದಾಗಿ ನಾನು ಚಿತ್ರಕಲೆಯತ್ತ ಆಕರ್ಷಿತನಾದೆ. ಹಾಗಾಗಿ ಸೃಜನಶೀಲ ಮಕ್ಕಳಿಗೆ ಮಾರ್ಗದರ್ಶನ ನೀಡಿ ಚಿತ್ರಕಲೆಯಲ್ಲಿ ಸಾಧನೆ ಮಾಡುವಂತೆ ಮಾಡುವುದು ನನ್ನ ಪ್ರಮುಖ ಉದೇಶ. ನಮ್ಮ ಗ್ರಾಮದಲ್ಲಿ ಕಲಾ ಗ್ಯಾಲರಿಯೊಂದನ್ನು ನಿರ್ಮಿಸಿ ಕಲಾ ಕೇಂದ್ರವಾಗಿಸುವುದು ನನ್ನ ಕನಸು’ ಎಂದು ತಮ್ಮ ಆಸಕ್ತಿಯನ್ನು ವಿವರಿಸಿದರು.














Monday, June 24, 2013

ಪೊಲೀಸ್ ಅಧಿಕಾರಿಗೆ ಗಾಂಧಿ ಟೋಪಿ


ಶಿಡ್ಲಘಟ್ಟ ತಾಲ್ಲೂಕಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಚೌಡಸಂದ್ರದ ನಾರಾಯಣಪ್ಪ.

"ಶಿಡ್ಲಘಟ್ಟ ತಾಲ್ಲೂಕು ಕಂಬದಹಳ್ಳಿಯ ಮುನಿಶಾಮಪ್ಪ ಎಲ್ಲರೂ ನೋಡುತ್ತಿರುವಾಗಲೇ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ರ ತಲೆಯ ಮೇಲಿದ್ದ ಹ್ಯಾಟ್ ತೆಗೆದು ಗಾಂಧಿ ಟೋಪಿಯನ್ನು ಇಟ್ಟುಬಿಟ್ಟರು. ತಕ್ಷಣವೇ ಮಹಾತ್ಮ ಗಾಂಧೀಜಿಕಿ ಜೈ, ಸ್ವತಂತ್ರ್ಯ ಭಾರತ್ ಕೀ ಜೈ ಎಂಬ ಘೋಷಣೆಗಳು ಮೊಳಗಿದವು. ಮರುಕ್ಷಣವೇ ಪೊಲೀಸರು ಲಾಠೀ ಚಾರ್ಜ್ ಅಂದರು. ಸತ್ಯಾಗ್ರಹ ಮಾಡುತ್ತಿದ್ದವರನ್ನು ಚೆನ್ನಾಗಿ ಬಡಿದರು" ಎಂದು ತಮ್ಮ ಸ್ವಾತಂತ್ರ್ಯದ ಹೋರಾಟದ ನೆನಪುಗಳನ್ನು ತೆರೆದಿಟ್ಟರು ೯೩ ವರ್ಷದ  ಚೌಡಸಂದ್ರದ ನಾರಾಯಣಪ್ಪ.
 ‘ರೈಲ್ವೆ ಹಳಿಗಳ ಬಳಿ ಇದ್ದ ಕಲ್ಲುಗಳನ್ನು ಕೆಲವರು ಪೊಲೀಸರೆಡೆಗೆ ತೂರತೊಡಗಿದರು. ಫೈರ್ ಅಂದರು ಪೊಲೀಸರು. ಒಮ್ಮೆಗೇ ಢಮಾರ್ ಢಮಾರ್ ಎಂಬ ದೊಡ್ಡದಾದ ಸದ್ದು. ಸಬ್‌ಇನ್ಸ್‌ಪೆಕ್ಟರ್ ಸಿಡಿಸಿದ ಗುಂಡಿಗೆ ಇಬ್ಬರು ಸತ್ತರು. ನಮ್ಮನ್ನೆಲ್ಲಾ ಹಿಡಿದು ಜೈಲಿಗೆ ಹಾಕಿದರು. ಆನಂತರ ತಿಳಿಯಿತು ಪೊಲೀಸ್ ಪೇದೆಗಳು ಆಕಾಶಕ್ಕೆ ಗುಂಡು ಹಾರಿಸಿದ್ದರಂತೆ. ಅವರಿಗೂ ಸ್ವಾತಂತ್ರ್ಯದ ಹಂಬಲವಂತೆ. ಇಲ್ಲದಿದ್ದರೆ ಈ ಕಥೆ ಹೇಳಲು ನಾನು ಇರುತ್ತಿರಲಿಲ್ಲ ಮತ್ತು ಆ ದಿನ ನೂರಾರು ಹೆಣಗಳು ಉರುಳುತ್ತಿದ್ದವು. ಆದರೆ ಆ ದಿನ ಭಕ್ತರಹಳ್ಳಿಯ ಇಬ್ಬರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವ ತೆತ್ತಿದ್ದರು’.
 ನಾನಾಗ ಎರಡು ಮಕ್ಕಳ ತಂದೆ. ಅಷ್ಟಾಗಿ ವಿದ್ಯೆಯೂ ಇರಲಿಲ್ಲ. ಮಳ್ಳೂರಿನ ಪಾಪಣ್ಣ ನಮಗೆಲ್ಲಾ ಸತ್ಯಾಗ್ರಹ ಮಾಡಲು ಪ್ರೇರೇಪಿಸಿದರು. ಆಗ ಶಿಡ್ಲಘಟ್ಟದ ತಾಲ್ಲೂಕು ಕಚೇರಿಯ ಮುಂದೆ ಮುಷ್ಕರ ಪ್ರಾರಂಭಿಸಿದೆವು. ಸಂಜೆ ವೇಳೆಗೆ ಸೂರೇಗೌಡರು, ಕಂಪನಿ ಮುನಿವೆಂಕಟಪ್ಪ ಅವರ ಮನೆಗಳ ಬಳಿ ಸೇರುತ್ತಿದ್ದೆವು. ರಾತ್ರಿ ಹೊತ್ತಿಗೆ ನಮಗೆಲ್ಲಾ ಊಟ ಹಾಕುತ್ತಿದ್ದರು. ಸುಮಾರು ನೂರು ಜನ ಸೇರುತ್ತಿದ್ದೆವು. ಬಚ್ಚಹಳ್ಳಿಯ ಚಂಗಲರಾವ್ ಮುಂತಾದವರು ಭಾಷಣ ಮಾಡುತ್ತಿದ್ದರು. ೧೫ ದಿನಗಳಾದ ಮೇಲೆ ತುಮ್ಮನಹಳ್ಳಿಯಿಂದ ಅಲಂಕರಿಸಿದ ಎತ್ತುಗಳನ್ನು ಕಟ್ಟಿಕೊಂಡು ಅನ್ನದ ಗಾಡಿಗಳು ಬಂದವು. ಆಸ್ಪತ್ರೆ ಮೈದಾನದಲ್ಲಿ ನಮಗೆಲ್ಲಾ ಅನ್ನಸಂತರ್ಪಣೆ. ನಮ್ಮ ಹೋರಾಟ ತೀವ್ರಗೊಂಡಾಗ ರಿಸರ್ವ್ ವ್ಯಾನ್ ಬಂತು. ಆಗ ನಡೆದದ್ದು ಗೋಲೀಬಾರ್.
 ಹದಿನೈದು ದಿನಗಳ ಕಾಲ ಶಿಡ್ಲಘಟ್ಟ ಜೈಲಿನಲ್ಲಿ ಮತ್ತು ಒಂದು ತಿಂಗಳು ಮೂರು ದಿನ ಚಿಕ್ಕಬಳ್ಳಾಪುರದ ಜೈಲಿನಲ್ಲಿ ನಮ್ಮನ್ನು ಇಟ್ಟಿದ್ದರು. ಆಗ ಬಂತು ಸ್ವಾತಂತ್ರ್ಯ. ಮಧ್ಯರಾತ್ರಿಯ ಸ್ವಾತಂತ್ರ್ಯ. ೨೮೦ ಜನ ಇದ್ದೆವು. ನಮ್ಮ ಊರುಗಳಿಗೆ ವಾಪಸ್ ಕಳಿಸಿದರು. ನಮ್ಮ ಹೋರಾಟ ಸಾರ್ಥಕವಾದ ಭಾವದಿಂದ ಊರಿಗೆ ಮರಳಿದೆವು. ಹೋರಾಟ ಪ್ರಾರಂಭಿಸಿದಾಗ ನಮಗೆ ಇಷ್ಟು ಬೇಗ ಸ್ವಾತಂತ್ರ್ಯ ಸಿಗುವುದೆಂಬ ಕಲ್ಪನೆಯಿರಲಿಲ್ಲ. ಆದರೆ ನಮ್ಮ ಹೋರಾಟಕ್ಕೆ ಸಿಕ್ಕ ಫಲ ತೃಪ್ತಿ ತಂದಿತು.


ಕೋಲಾರ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ದೆಹಲಿಯಲ್ಲಿ ಆಗಿನ ಪ್ರಧಾನಿ ರಾಜೀವ್‌ಗಾಂಧಿಯವರನ್ನು ಭೇಟಿ ಮಾಡಿ ತೆಗೆಸಿಕೊಂಡ ಛಾಯಾಚಿತ್ರ.

ರಾಜೀವ್ ಗಾಂಧಿ ಪ್ರಧಾನಿಯಾದಾಗ ನಮ್ಮ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರನ್ನು ದೆಹಲಿಗೆ ಕರೆಸಿ ಗೌರವಿಸಿದರು. ಮೇಲೂರು ಸುಬ್ಬಣ್ಣ, ಮಳ್ಳೂರು ಮುನಿನಾಗಪ್ಪ, ಭಕ್ತರಹಳ್ಳಿ ಬಚ್ಚೇಗೌಡ, ಬಚ್ಚಹಳ್ಳಿ ಚಂಗಲರಾವ್, ಚೌಡಸಂದ್ರ ರಾಮಪ್ಪ, ಮೇಲೂರು ಸಂಜೀವಪ್ಪ, ಹುಜಗೂರು ಹನುಮಂತರಾಯಪ್ಪ, ಮಳ್ಳೂರು ಮುನಿಯಪ್ಪ, ಅಪ್ಪೇಗೌಡನಹಳ್ಳಿ ಪಿಳ್ಳಪ್ಪ ಮುಂತಾದವರು ದೆಹಲಿಗೆ ಹೋಗಿದ್ದೆವು. ಇವರಲ್ಲಿ ಬಹುತೇಕ ಮಂದಿ ಈಗಿಲ್ಲ’ ಎನ್ನುತ್ತಾ ತಮ್ಮ ಗತಕಾಲದ ನೆನಪುಗಳನ್ನು  ಹಂಚಿಕೊಂಡರು.
 

ಚಿಕ್ಕಬಳ್ಳಾಪುರ ಜಿಲ್ಲೆಯ ಸಾಹಿತಿಗಳು

 ಸಂತೇಕಲ್ಲಹಳ್ಳಿಯ ಲಕ್ಷ್ಮೀನರಸಿಂಹಶಾಸ್ತ್ರಿ.

 ಶಿಕ್ಷಣತಜ್ಞ  ಡಾ.ಎಚ್.ನರಸಿಂಹಯ್ಯ.

 ಶಾಸನತಜ್ಞ ಸಂತೇಕಲ್ಲಹಳ್ಳಿಯ ಡಾ.ಆರ್.ಶೇಷಶಾಸ್ತ್ರಿ.

ಚಿ.ಶ್ರೀನಿವಾಸರಾಜು.


 ದ್ವಿಭಾಷಾ ಪ್ರಾಂತ್ಯವೆಂದೇ ಹೆಸರಾದ ಚಿಕ್ಕಬಳ್ಳಾಪುರ ಜಿಲ್ಲೆಯ ಭಾಷೆಯನ್ನು ಕೆಲವರು ಕಂದೆಲುಗು ಎನ್ನುತ್ತಾರೆ. ಇಲ್ಲಿನವರು ಇಬ್ಬರು ತಾಯಂದಿರ ಮುದ್ದು ಕಂದಮ್ಮಗಳು. ಇಲ್ಲಿನ ಭಾಷಾ ಸೊಗಡು ವಿಶಿಷ್ಟವಾದುದು, ಸಾಹಿತ್ಯ ಅನನ್ಯವಾದುದು. ಇಲ್ಲಿ ನಡೆದಿರುವ ಸಾಹಿತ್ಯ ಮತ್ತು ಸಾಂಸ್ಕೃತಿಕ ಕೃಷಿ ಸಮೃದ್ಧವಾದುದು. ಇಲ್ಲಿನ ಜನ ಉರ್ದು, ತೆಲುಗನ್ನು ವ್ಯವಹಾರಿಕ ಭಾಷೆಯಾಗಿ ಬಳಸಿದರೂ ಕನ್ನಡ ನುಡಿಯನ್ನು ಉಳಿಸಿ ಬೆಳೆಸಿದ್ದಾರೆ.
  ಜನಪದ ಸಾಹಿತ್ಯ, ಮಹಿಳಾ ಸಾಹಿತ್ಯ, ಇಂಗ್ಲೀಷ್ ಸಾಹಿತ್ಯ, ಚಲನಚಿತ್ರ ಸಾಹಿತ್ಯ, ರಂಗಭೂಮಿ ಕಲೆ, ಕಲಾವಿದರು, ವಾಸ್ತುಶಿಲ್ಪ, ಚಿತ್ರಕಲೆ, ಛಾಯಾಚಿತ್ರ, ಸಂಗೀತ, ನೃತ್ಯ ಮುಂತಾದ ವಿವಿಧ ಕ್ಷೇತ್ರಗಳ ಸಾಹಿತಿ ಕಲಾವಿದರು ಜಿಲ್ಲೆಯಲ್ಲಿದ್ದಾರೆ. ಇಲ್ಲಿ ಜನಪದ ಕಲೆಗಳು ಹೇರಳವಾಗಿವೆ. ಶಿಲ್ಪ ಸೌಂದರ್ಯದ ದೇವಾಲಯ, ಚರ್ಚು, ಮಸೀದಿಗಳಿವೆ.
 ಜಿಲ್ಲೆಯಲ್ಲಿ ಹಲವು ಪ್ರಾಚೀನ ಶಾಸನ ಕವಿಗಳ ಉಲ್ಲೇಖವಿದೆ. ಪ್ರಾಚೀನ ಕವಿ ಚಿಂತಾಮಣಿಯ ಕಬ್ಜದ ನಾಗಮಯ್ಯ ಬರೆದ ಶಾಸನ, ಗೌರಿಬಿದನೂರಿನ ಮಲ್ಲಣಾರಾಧ್ಯ ಬರೆದಿರುವ ತಾಮ್ರ ಶಾಸನ, ಚಿಂತಾಮಣಿಯ ನೀಲಪ್ಪರ್, ಗೌರಿಬಿದನೂರು ನರಸಿಂಹಾಚಾರ್ಯ, ಚಿಂತಾಮಣಿಯ ಸ್ವಯಂಭೂ ಮತ್ತಿತರರ ಶಾಸನ ರಚನೆಗಳು ಇತಿಹಾಸದಲ್ಲಿ ದಾಖಲಾಗಿವೆ.
 ಜೈನ ಸಾಹಿತ್ಯಕ್ಕೆ ಸಂಬಂಧಿಸಿದ ’ಸಿರಿಭೂವಲಯ’ ಕೃತಿಯ ಕರ್ತೃ ಕುಮುದೇಂದು ನಂದಿ ಬಳಿಯ ಯಲುವಹಳ್ಳಿಯವರು. ಚಿಕ್ಕಬಳ್ಳಾಪುರದ ಬಾಡಾಲ ಸುಬ್ರಮಣ್ಯ ’ತಾರಾಶಶಾಂಕ’ ನಾಟಕದ ಕರ್ತೃವಾದರೆ, ಗೌರಿಬಿದನೂರು ಇಡಗೂರು ರುದ್ರಕವಿ ಕನ್ನಡದಲ್ಲಿ ಶಿವನಾಟಕ, ಮಾರ್ಕಂಡೇಯ ವಿಜಯ, ಹೊನ್ನಾವರದ ಹೊನ್ನೇಗೌಡನ ವಂಶಾವಳಿಯನ್ನು ರಚಿಸಿದ್ದಾರೆ. ಬಾಗೇಪಲ್ಲಿಯ ಸೋಮೇನಹಳ್ಳಿಯ ವೇದಾಂತಂ ರಾಘವಾಚಾರ್ಯಸ್ವಾಮಿ ’ಪಂಚವಿಂಶಧಿ ಪದ್ಧತಿ’ಗೆ ವ್ಯಾಖ್ಯೆ ಬರೆದಿದ್ದಾರೆ. ಗೌರಿಬಿದನೂರಿನ ಎಂ.ರಾಮರಾವ್ ಋಗ್ವೇದದ ಕೆಲವು ಭಾಗಗಳನ್ನು ಅನುವಾದಿಸಿ ಪ್ರಕಟಿಸಿದ್ದಾರೆ. ಚಿಕ್ಕಬಳ್ಳಾಪುರದ ಮಂಡಿಗಲ್ಲಿನ ರಾಮಾಶಾಸ್ತ್ರಿ, ವರದಾಚಾರ್ಯ, ಶ್ರೀರಂಗಾಚಾರ್ಯ, ರಾಜಗೋಪಾಲಾಚಾರ್ಯ, ಎ.ಕೇಶವಯ್ಯ, ಪಡತಲ ಗಂಗಾಧರಶಾಸ್ತ್ರಿ,  ಗೌರಿಬಿದನೂರಿನ ಎಂ.ನಂಜುಂಡಾರಾಧ್ಯ,  ಹೊಸಹುಡ್ಯದ ನಾಗೇಶಚಾರ್ಯ, ವೆಂಕಟರಮಣಯ್ಯ ಜಿಲ್ಲೆಯ ಪ್ರಮುಖ ಸಂಸ್ಕೃತ ಸಾಹಿತಿಗಳು.
 ನಂದಿಗ್ರಾಮದ ನಂದಿಮಲ್ಲಯ್ಯ ಪ್ರಭೋದ ಚಂದ್ರೋದಯಂ ಎಂಬ ತೆಲುಗು ನಾಟಕದ ಕರ್ತೃ. ೧೮೦೦ ರಲ್ಲಿದ್ದ ಪುಲ್ಲಕವಿ ಗೌರಿಬಿದನೂರಿನ ಹೊಸೂರಿನವರು. ೧೮೩೦ ರಲ್ಲಿದ್ದ ಶಿಡ್ಲಘಟ್ಟದ ಕುಂದಲಗುರ್ಕಿಯ ಚಂದ್ರಕವಿ ’ಶ್ರೀಕೃಷ್ಣ ಭೂವಲಯಮು’ ಕೃತಿಯ ಕರ್ತೃ. ಕೈವಾರ ತಾತಯ್ಯನೆಂದೇ ಹೆಸರುವಾಸಿಯಾದ ಚಿಂತಾಮಣಿಯ ಕೈವಾರದ ನಾರಣಪ್ಪ ತೆಲುಗನ್ನಡದ ಕವಿ. ಚಿಂತಾಮಣಿಯ ಹೊಸಹುಡ್ಯದ ವೇದಾಂತಂ ವೆಂಕಟರೆಡ್ಡಿ ವೇದಾಂತ ಪ್ರಕಾಶ, ವಿವೇಕ ರತ್ನಮಾಲ ಮುಂತಾದ ಕೃತಿಗಳ ಕರ್ತೃ. ಆಂಧ್ರದ ಜನಪ್ರಿಯ ಆಯುರ್ವೇದದ ಆಕರ ಗ್ರಂಥ ಬಸವರಾಜೀಯಂ ಕೃತಿಯನ್ನು ರಚಿಸಿರುವವರು ಗೌರಿಬಿದನೂರು ಹೊಸೂರಿನ ಕೊಟ್ಟೂರು ಬಸವರಾಜು. ಚಿಂತಾಮಣಿ ತಾಲ್ಲೂಕಿನ ಕೊಮಾರ್‍ಲು ರಾಮಚಂದ್ರಯ್ಯ, ಚಿಲಕಲನೇರ್ಪು ರಾಜಯೋಗಿ ವಸಂತಯ್ಯ ಮುಂತಾದವರು ತೆಲುಗನ್ನಡ ಸಾಹಿತಿಗಳು.
 ಶಿಡ್ಲಘಟ್ಟದ ಅಬ್ದುಲ್ ಹಸನ್ ಅದೀಬ್ ಕವಿ, ಸಾಹಿತಿ, ವಿಮರ್ಶಕ ಮತ್ತು ಇತಿಹಾಸಕಾರ. ಜವಹರುಲ್ ಬಾಲಘತ್(ಛಂದೋಗ್ರಂಥ), ಜವಾಹಿರ್ ಎ ಉರ್ದು(ವ್ಯಾಕರಣ ಗ್ರಂಥ), ಫಾಜಿ ಎ ಅಜಮ್(ಹೈದರಲಿ ಕುರಿತ ಚಾರಿತ್ರಿಕ ಗ್ರಂಥ), ರಾಜ್‌ನಾಮ(ಮೈಸೂರು ಒಡೆಯರ ಚರಿತ್ರೆ) ಬರೆದಿದ್ದಾರೆ.
 ಚಿಂತಾಮಣಿ ತಾಲ್ಲೂಕಿನ ಸಂತೇಕಲ್ಲಹಳ್ಳಿಯ ಲಕ್ಷ್ಮೀನರಸಿಂಹಶಾಸ್ತ್ರಿಗಳು, ಗೌರಿಬಿದನೂರು ಶ್ರಾವಂಡನಹಳ್ಳಿಯ ಓ.ಎನ್.ಲಿಂಗಯ್ಯ, ಎಂ.ಜಿ.ನಂಜುಂಡಾರಾಧ್ಯ, ಶಿಕ್ಷಣತಜ್ಞ  ಡಾ.ಎಚ್.ನರಸಿಂಹಯ್ಯ, ಡಾ.ಎಲ್.ಬಸವರಾಜು, ಪ್ರೊ.ಎನ್.ಬಸವಾರಾಧ್ಯ, ಬಾ.ರಾ.ಗೋಪಾಲ್, ವೈ.ಎಸ್.ಗುಂಡಪ್ಪ, ಹಂ.ಪಾ.ನಾಗರಾಜಯ್ಯ, ಡಾ.ಪ್ರಧಾನ ಗುರುದತ್ತ, ಕೈಪು ಲಕ್ಷ್ಮೀನರಸಿಂಹಶಾಸ್ತ್ರಿ, ಬಿ.ಜಿ.ಸತ್ಯಮೂರ್ತಿ, ಡಿ.ಪಾಳ್ಯದ ವಿ.ಗೋಪಾಲಕೃಷ್ಣ, ಜಿ.ಜ್ಞಾನಾನಂದ, ಚಿ.ಶ್ರೀನಿವಾಸರಾಜು, ಶಿಡ್ಲಘಟ್ಟದ ಚಾಗೆ ಕೃಷ್ಣಮೂರ್ತಿ, ಗೌರಿಬಿದನೂರು ಅನಂತಪದ್ಮನಾಭರಾವ್, ಕೆ.ನಾರಾಯಣಸ್ವಾಮಿ, ಪ್ರೊ.ಬಿ.ಗಂಗಾಧರಮೂರ್ತಿ, ಶಾಸನತಜ್ಞ ಚಿಂತಾಮಣಿಯ ಸಂತೇಕಲ್ಲಹಳ್ಳಿಯ ಡಾ.ಆರ್.ಶೇಷಶಾಸ್ತ್ರಿ, ಚಿಂತಾಮಣಿಯ ವೆಲ್ಲಾಸತ್ಯಂ, ಬಿ.ಆರ್.ಲಕ್ಷ್ಮಣರಾವ್, ಪ್ರೊ.ಎನ್.ಚಂದ್ರಪ್ಪ, ಗಂಜಿಗುಂಟೆ ನರಸಿಂಹಮೂರ್ತಿ, ಜಾನಪದ ತಜ್ಞ ಶಿಡ್ಲಘಟ್ಟದ ಜಿ.ಶ್ರೀನಿವಾಸಯ್ಯ ಮುಂತಾದ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕವಿ ಸಾಹಿತಿಗಳನ್ನು ಜಿಲ್ಲೆ ಒಳಗೊಂಡಿದೆ.

Saturday, June 22, 2013

ರೇಷ್ಮೆ ಕಾರ್ಖಾನೆ ಆರಂಭಿಸಿದ್ದ ಸರ್.ಎಂ.ವಿ



ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮಕ್ಕೆ ೧೯೫೨ರಲ್ಲಿ ಕಿಸಾನ್ ಸಿಲ್ಕ್ ಇಂಡಸ್ಟ್ರಿ ಎಂಬ ರೇಷ್ಮೆಯ ಕಾರ್ಖಾನೆಯನ್ನು ಉದ್ಘಾಟಿಸಲು ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಆಗಮಿಸಿದ್ದರು.

  ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ  ಜನಿಸಿದ್ದ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರಿಗೆ ಜಿಲ್ಲೆಯಲ್ಲಿ ಅದರಲ್ಲೂ ಗ್ರಾಮೀಣರಿಗೆ ಉದ್ಯೋಗ ಸಿಗುವಂತಹ ಕಾರ್ಖಾನೆಯೊಂದನ್ನು ಸ್ಥಾಪಿಸುವ ಕನಸಿತ್ತು. ಅದಕ್ಕೆಂದೇ ೧೯೫೨ರಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಕಿಸಾನ್ ಸಿಲ್ಕ್ ಇಂಡಸ್ಟ್ರಿ ಎಂಬ ರೇಷ್ಮೆಯ ಕಾರ್ಖಾನೆಯನ್ನು ಸ್ಥಾಪಿಸಿದ್ದಲ್ಲದೆ, ಅವರೇ ಆಗಮಿಸಿ ಉದ್ಘಾಟಿಸಿದ್ದರು.
 ಸುಮಾರು ೬೦ ವರ್ಷಗಳ ಹಿಂದೆಯೇ ದೂರದೃಷ್ಟಿಯುಳ್ಳ ಗ್ರಾಮೀಣ ಪ್ರಗತಿಯ ಯೋಜನೆಯನ್ನು ಸರ್.ಎಂ.ವಿ ಅವರು ರೂಪಿಸಿದ್ದರು. ಇಲ್ಲಿನ ಭೂಮಿ, ಹವಾಗುಣ ರೇಷ್ಮೆ ಗೂಡು ಹಾಗೂ ನೂಲು ತಯಾರಿಕೆಗೆ ಸೂಕ್ತವಾದುದು. ಇಲ್ಲಿನ ಜನರು ಇದರಿಂದ ಆರ್ಥಿಕ ಪ್ರಗತಿ ಕಾಣುವಂತಾಗಲೆಂದು ಅವರು ಕಿಸಾನ್ ಸಿಲ್ಕ್ ಇಂಡಸ್ಟ್ರಿಯನ್ನು ಪ್ರಾರಂಭಿಸಿದ್ದರು.
 ಮೇಲೂರಿನಿಂದ ಕಂಬದಹಳ್ಳಿಗೆ ಹೋಗುವ ರಸ್ತೆಯಲ್ಲಿ ಪ್ರಾರಂಭವಾದ ಕಿಸಾನ್ ಸಿಲ್ಕ್ ಇಂಡಸ್ಟ್ರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಪ್ರಾರಂಭವಾದ ಮೊಟ್ಟಮೊದಲ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
 ‘ಆಗ ಗ್ರಾಮವನ್ನೆಲ್ಲಾ ಸಿಂಗರಿಸಿದ್ದೆವು. ದಿವಾನರಾದ ವಿಶ್ವೇಶ್ವರಯ್ಯನವರು ಬರುತ್ತಾರೆಂದರೆ ಸುಮ್ಮನೆ ಮಾತೇ. ಮನೆಗಳ ಮುಂದೆಲ್ಲಾ ರಂಗೋಲಿ ಹಾಕಿ, ತಳಿರು ತೋರಣಗಳಿಂದ ಅಲಂಕರಿಸಿದ್ದೆವು. ಗ್ರಾಮವೆಲ್ಲಾ ಹಬ್ಬದ ಸಡಗರದಿಂದ ಸಂಭ್ರಮದಿಂದ ಕೂಡಿತ್ತು. ನಾನು ಚಪ್ಪರ ಹಾಕುವುದರಿಂದ ಹಿಡಿದು ತೋರಣ ಕಟ್ಟುವುದರೊಂದಿಗೆ ವೇದಿಕೆಯನ್ನು ಸಿಂಗರಿಸುವಲ್ಲಿ ತೊಡಗಿಸಿಕೊಂಡಿದ್ದೆ. ಅವರ ಮೆರವಣಿಗೆ, ಸಭೆ, ಭಾಷಣ ನೆನೆದರೆ ರೋಮಾಂಚನವಾಗುತ್ತದೆ. ನಮ್ಮ ಗ್ರಾಮದಲ್ಲಿ ಕಾರ್ಖಾನೆಯೊಂದನ್ನು ಸ್ಥಾಪಿಸಿ ನಮಗೆಲ್ಲಾ ಶ್ರಮಜೀವಿಗಳಾಗುವಂತೆ ಕರೆ ಕೊಟ್ಟ ಆ ಮಹಾನುಭಾವರ ಚಿತ್ರ ಇನ್ನೂ ಕಣ್ಣಮುಂದಿದೆ’ ಎಂದು ಹಳೆಯ ದಿನಗಳನ್ನು ಮೆಲುಕು ಹಾಕುತ್ತಾರೆ ೯೦ ವರ್ಷದ ಇಳಿವಯಸ್ಸಿನ ನಿವೃತ್ತ ಉಪಾಧ್ಯಾಯ ಎಂ.ರಾಮಯ್ಯ.
 ‘ಹಲವಾರು ಮುಖಂಡರು ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಳ್ಳೂರು ಜಿ.ಪಾಪಣ್ಣ, ಜಿ.ಪಿಳ್ಳಪ್ಪ, ಜಿ.ನಾರಾಯಣಪ್ಪ, ಕಂಬದಹಳ್ಳಿ ದೊಡ್ಡಪ್ಪಯ್ಯಣ್ಣ, ಪಟೇಲ್ ಪಿಳ್ಳೇಗೌಡರು, ಮೇಲೂರು ಎಂ.ಎಸ್.ವೆಂಕಟರೆಡ್ಡಿ, ಶಾನುಭೋಗ ಎಂ.ಎಸ್.ಸೀತಾರಾಮರಾವ್, ಮೇಲೂರು ಟಿ.ಬಚ್ಚಪ್ಪ ಮತ್ತಿತರರು ಅಂದಿನ ಸಭೆಯಲ್ಲಿ ಭಾಗವಹಿಸಿದ್ದರು’ ಎಂದು ಅವರು ತಮ್ಮ ನೆನಪಿನ ಬುತ್ತಿಯಿಂದ ಹೆಕ್ಕಿತೆಗೆದರು.

Thursday, June 20, 2013

ಚಿಕ್ಕಬಳ್ಳಾಪುರ ಶಿಡ್ಲಘಟ್ಟ ಪಾಳೇಗಾರರ ಗತ ಇತಿಹಾಸ


ಚಿಕ್ಕಬಳ್ಳಾಪುರ ಪಾಳ್ಳೇಗಾರ್ ಬಚ್ಚಣ್ಣ

 ಸುಮಾರು ಐದು ನೂರು ವರ್ಷಗಳ ಇತಿಹಾಸವಿರುವ ಚಿಕ್ಕಬಳ್ಳಾಪುರದ ಪಾಳೇಗಾರರ ವಂಶಸ್ಥರು ತಮ್ಮ ಗತ ಇತಿಹಾಸದ ನೆನಪುಗಳೊಂದಿಗೆ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸಿಸುತ್ತಿದ್ದಾರೆ.
 ಪಾಳೇಪಟ್ಟಿನ ನೆನಪಿಗಾಗಿ ಆಯುಧಗಳಾದ ಭರ್ಜಿ, ಕಡ್ಗ, ಈಟಿ ಮತ್ತು ಗುರಾಣಿ, ಕಬ್ಬಿಣದ ಪೆಟ್ಟಿಗೆ, ಲೆಕ್ಕಬರೆಯುವ ಆಸನ, ಹಳೆ ಪಾತ್ರೆ ಪಡಗಗಳು ಮತ್ತು ಕೃಷಿ ಉಪಕರಣಗಳನ್ನು ಉಳಿಸಿಕೊಂಡಿದ್ದಾರೆ. ಕಾಲದ ಹೊಡೆತಕ್ಕೆ ಸಿಕ್ಕ ಹಳೆಯ ಮನೆಯನ್ನು ಕೊಂಚ ಆಧುನೀಕರಿಸಿಕೊಂಡಿದ್ದಾರೆ. ಎಂದಿನ ಕೃಷಿ ಕೆಲಸದಲ್ಲಿ ತೊಡಗಿಕೊಳ್ಳುವ ಇವರಿಗೆ ತಮ್ಮ ಗತ ಇತಿಹಾಸದ ನೆನಪು ಮರುಕಳಿಸುವುದು ವರ್ಷಕ್ಕೊಮ್ಮೆ ಮನೆಯಲ್ಲಿರುವ ಕೆಲವೇ ಆಯುಧಗಳನ್ನು ಪೂಜೆಗೆ ತೆಗೆದಾಗ ಮಾತ್ರ.


 ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಪಾಳೇಗಾರ ಮನೆತನದ ಮಂಜುನಾಥ ಅವರ ಮನೆಯ ಉಪ್ಪರಿಗೆಯಲ್ಲಿ ಕಟ್ಟಿಟ್ಟಿರುವ ಆಯುಧಗಳಾದ ಈಟಿ, ಭರ್ಜಿ, ಕತ್ತಿ ಮತ್ತು ಬೀಜ ಬಿತ್ತಲು ಬಳಸುವ ಕೆತ್ತನೆಗಳಿರುವ ಹಲುವಿ.

 ‘೧೪೭೮ರಲ್ಲಿ ಈ ಮನೆತನದ ಮಲ್ಲಭೈರೇಗೌಡ ತನ್ನ ಮಗ ಮರಿಗೌಡನೊಂದಿಗೆ ಈಗ ಚಿಕ್ಕಬಳ್ಳಾಪುರ ಪಟ್ಟಣವಿರುವ ಸ್ಥಳದಲ್ಲಿ ಹಿಂದೆ ಇದ್ದ ಕೋಡಿಮಂಚನಹಳ್ಳಿ ಗ್ರಾಮಲ್ಲಿ ಕೋಟೆ ಕಟ್ಟಿ ಪೇಟೆಯನ್ನು ಸ್ಥಾಪಿಸಿದರಂತೆ. ಈ ಮನೆತನದವರು ಶಿಡ್ಲಘಟ್ಟವನ್ನು ಖರೀದಿಸುವ ಮೂಲಕ ತಮ್ಮ ಪಾಳೇಪಟ್ಟಿನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡು, ನಂದಿದುರ್ಗ, ಕಳವಾರದುರ್ಗ, ಗುಡಿಬಂಡೆ ಹಾಗೂ ಇಟ್ಕಲ್ ದುರ್ಗಗಳಲ್ಲಿ ಕೋಟೆಯನ್ನು ಕಟ್ಟುವ ಮೂಲಕ ಪಾಳೇಪಟ್ಟನ್ನು ಭದ್ರಪಡಿಸಿಕೊಂಡರು. ಮರಿಗೌಡ, ದೊಡ್ಡಭೈರೇಗೌಡ, ರಂಗಪ್ಪಗೌಡ, ಜೋಗಿಭೈರೇಗೌಡ ಮುಂತಾದವರು ಆಳ್ವಿಕೆಯನ್ನು ನಡೆಸಿದರು. ಬೈಚೇಗೌಡನ(೧೭೦೫-೧೭೨೧) ಆಳ್ವಿಕೆಯಲ್ಲಿ ಮೈಸೂರು ಅರಸರ ಮುತ್ತಿಗೆಯನ್ನು ಮರಾಠರ ಸಹಾಯದಿಂದ ಹಿಮ್ಮೆಟ್ಟಿಸಲಾಯಿತು.

 ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಪಾಳೇಗಾರ ಮನೆತನದ ಮಂಜುನಾಥ ಅವರ ಮನೆಯಲ್ಲಿರುವ ಪುರಾತನ ಕಬ್ಬಿಣದ ಪೆಟ್ಟಿಗೆಯ ಮೇಲೆ ಗಂಡುಬೇರುಂಡದ ಲಾಂಚನಗಳಿವೆ.

 ೧೭೬೨ರಲ್ಲಿ ಹೈದರಾಲಿಯು ಚಿಕ್ಕಬಳ್ಳಾಪುರದ ಕೋಟೆಗೆ ಮುತ್ತಿಗೆ ಹಾಕಿ ಮೂರು ತಿಂಗಳ ಕಾಲ ಹರಸಾಹಸ ಮಾಡಿದರೂ ಸ್ವಾಧೀನಪಡಿಸಿಕೊಳ್ಳಲಾಗದೇ ಐದು ಲಕ್ಷ ಪಗೋಡವನ್ನು ಪೊಗದಿಯಾಗಿ ಪಡೆದು ಮುತ್ತಿಗೆಯನ್ನು ಹಿಂಪಡೆದನು. ಹೈದರಾಲಿಯು ಸೈನ್ಯದೊಂದಿಗೆ ತೆರಳಿದೊಡನೆ ಪಾಳೇಗಾರ ಚಿಕ್ಕಪ್ಪಗೌಡ ಸಹಾಯಕ್ಕಾಗಿ ಮರಾಠ ಸೈನ್ಯವನ್ನು ಕರೆಸಿಕೊಂಡ. ಈ ಬೆಳವಣಿಗೆಯನ್ನು ಸಹಿಸದ ಹೈದರಾಲಿ ತಕ್ಷಣವೇ ಮರುಮುತ್ತಿಗೆ ಹಾಕಿ ಕೋಟೆಯನ್ನು ವಶಪಡಿಸಿಕೊಂಡನು. ಅದರ ಬೆನ್ನಲ್ಲೇ ನಂದಿದುರ್ಗ, ಕಳವಾರದುರ್ಗ, ಗುಡಿಬಂಡೆ, ಇಟ್ಕಲ್‌ದುರ್ಗ ಹಾಗೂ ಕೋಟೆಕೊಂಡಗಳನ್ನೂ ಸ್ವಾಧೀನಪಡಿಸಿಕೊಂಡನು. ಚಿಕ್ಕಬಳ್ಳಾಪುರ ಪಾಳೇಗಾರ ಚಿಕ್ಕಪ್ಪಗೌಡ ಮತ್ತವನ ಕುಟುಂಬವನ್ನು ಬಂಧಿಸಿ ಬೆಂಗಳೂರಿನ ಸೆರೆಮನೆಯಲ್ಲಿಡಲಾಯಿತು.
 ಸ್ವಲ್ಪಕಾಲ ಗ್ರಹಣಗ್ರಸ್ಥವಾಗಿದ್ದ ಈ ಪಾಳೇಪಟ್ಟಿಗೆ ಲಾರ್ಡ್ ಕಾರ್ನ್‌ವಾಲೀಸನು ನಾರಾಯಣಗೌಡ ಎಂಬುವರನ್ನು ನೇಮಿಸಿ ಜೀವಂತಿಕೆ ನೀಡಿದನು. ಆದರೆ ಇದರಿಂದ ವಿಚಲಿತನಾದ ಟಿಪ್ಪು ಸುಲ್ತಾನ್ ಮುತ್ತಿಗೆ ಹಾಕಿ ಚಿಕ್ಕಬಳ್ಳಾಪುರವನ್ನು ತನ್ನ ಕೈವಶಮಾಡಿಕೊಂಡನು. ೧೭೯೧ರಲ್ಲಿ ಬ್ರಿಟಿಷರು ನಂದಿದುರ್ಗವನ್ನು ವಶಪಡಿಸಿಕೊಂಡ ನಂತರ ಸ್ವಲ್ಪಕಾಲ ಅದರ ನಿಯಂತ್ರಣವನ್ನು ಪಾಳೇಗಾರರು ಹೊಂದಿದ್ದರು. ಆದರೆ ಟಿಪ್ಪು ಮತ್ತು ಬ್ರಿಟಿಷರ ನಡುವೆ ಸಂಧಾನ ಏರ್ಪಟ್ಟಿದ್ದರಿಂದ ಚಿಕ್ಕಬಳ್ಳಾಪುರ ಪಾಳೇಗಾರರು ಅಧಿಕಾರವಿಹೀನರಾದರು. ಇದರೊಂದಿಗೆ ಚಿಕ್ಕಬಳ್ಳಾಪುರ ಪಾಳೇಪಟ್ಟಿನ ಅವಸಾನವಾಯಿತು’.
 ‘ಪಾಳೇಗಾರ ಅಣ್ಣೀಗೌಡ(೧೬೮೭-೧೭೦೫) ತನ್ನ ಆಳ್ವಿಕೆಯ ಕಾಲದಲ್ಲಿ ಶಿಡ್ಲಘಟ್ಟವನ್ನು ಖರೀದಿಸಿ ಕೋಟೆ ಪೇಟೆಗಳನ್ನು ಕಟ್ಟಿಸಿದ್ದ. ಶಿಡ್ಲಘಟ್ಟ ತಾಲ್ಲೂಕಿನ ಬೂದಾಳದ ಬಳಿಯ ೧೬೩೧ರ ಶಾಸನ ಇಮ್ಮಡಿ ಬೈಚೇಗೌಡನು ದತ್ತಿ ಬಿಟ್ಟ ವಿಚಾರವನ್ನು ತಿಳಿಸಿದರೆ, ತಾಲ್ಲೂಕಿನ ಮಳ್ಳೂರು ಮತ್ತು ಮೇಲೂರಿನ ಶಾಸನಗಳು ೧೬೯೭ರಲ್ಲಿ ಗೋಪಾಲಗೌಡರು ದತ್ತಿ ಬಿಟ್ಟ ಅಂಶವನ್ನು ತಿಳಿಸುತ್ತದೆ’. 

ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಪಾಳೇಗಾರ ಮನೆತನದ ಮಂಜುನಾಥ್ ಮತ್ತು ಅವರ ತಂದೆ ವೆಂಕಟಪ್ಪಯ್ಯ.

 ‘ನಾವೀಗ ರೈತರು. ಪಾಳೇಗಾರಿಕೆ ಒಂದು ಇತಿಹಾಸವಷ್ಟೆ. ಮನೆಯಲ್ಲಿ ನಮ್ಮ ಮುತ್ತಾತ ಚಿಕ್ಕಬಳ್ಳಾಪುರ ಪಾಳ್ಳೇಗಾರ್ ಬಚ್ಚಣ್ಣನವರ ಕಪ್ಪು ಬಿಳುಪು ಚಿತ್ರವಿದೆ. ಕೆಲವು ಆಯುಧಗಳಿವೆ. ಅವನ್ನು ವರ್ಷಕ್ಕೊಮ್ಮೆ ಪೂಜಿಸುತ್ತೇವೆ. ಹಳೆಯ ಮನೆಯು ಶಿಥಿಲಗೊಳ್ಳುತ್ತಿದ್ದಂತೆ ದುರಸ್ತಿ ಮಾಡಿದ್ದೇವೆ. ನಮ್ಮ ಸಂಬಂಧಿಕರು ಮಾಗಡಿ ಬಳಿಯ ಹುಳಿಕಲ್‌ನಲ್ಲಿ ವಾಸವಿದ್ದು ಅವರಿನ್ನೂ ಹಳೆಯ ಮನೆಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಶಿಡ್ಲಘಟ್ಟ ತಾಲ್ಲೂಕಿನ ಎಸ್.ದೇವಗಾನಹಳ್ಳಿಯಲ್ಲೂ ನಮ್ಮ ಸಂಬಂಧಿಕರಿದ್ದಾರೆ. ನಮ್ಮ ನಿತ್ಯ ಬದುಕಿನ ಜಂಜಾಟದಲ್ಲಿ ಹಳೆಯ ಅನೇಕ ವಸ್ತುಗಳನ್ನು ಉಳಿಸಿಕೊಳ್ಳಲಾಗಿಲ್ಲ’ ಎಂದು ಮಲ್ಲಿಶೆಟ್ಟಿಪುರದ ಮಂಜುನಾಥ್ ಹೇಳುತ್ತಾರೆ.
 

Saturday, June 15, 2013

ಅಂಚೆ ಚೀಟಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ

 ೫೦ ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಅವರ ಅಂಚೆಚೀಟಿ.

 ಸಾಮಾನ್ಯವಾಗಿ ಯಾವುದೇ ಪ್ರಸಿದ್ಧ ಸಂಸ್ಥೆ ಅಥವಾ ವ್ಯಕ್ತಿಗೆ ನೂರು ವರ್ಷ ತುಂಬಿದಾಗ ವಿಶೇಷ ಅಂಚೆ ಚೀಟಿಯನ್ನು ಹೊರತರಲಾಗುತ್ತದೆ. ಕರ್ನಾಟಕಕ್ಕೆ ಇಂತಹ ಗೌರವ ತಂದುಕೊಟ್ಟವರಲ್ಲಿ ವಿಖ್ಯಾತ ಎಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ಮೊದಲಿಗರು.
 ಜೀವಂತವಿರುವಾಗಲೇ ವ್ಯಕ್ತಿಗಳ ಗೌರವಾರ್ಥ ಅಂಚೆ ಚೀಟಿ ಹೊರತರುವುದು ಭಾರತದಲ್ಲಂತೂ ಬಹಳ ಅಪರೂಪ. ೧೯೬೦ರ ಸೆಪ್ಟೆಂಬರ್ ೧೫ ರಂದು ಸರ್.ಎಂ.ವಿ. ಅವರಿಗೆ ನೂರು ವರ್ಷ ತುಂಬಿದ ದಿನದಂದೇ ಕೇಂದ್ರ ಸರ್ಕಾರ ಅವರ ಗೌರವಾರ್ಥ ಅಂಚೆ ಚೀಟಿಯನ್ನು ಹೊರತಂದಿತು. ವಿಶೇಷ ಅಂಚೆ ಚೀಟಿ ಸರಣಿಯಲ್ಲಿ ಕರ್ನಾಟಕಕ್ಕೆ ಲಭಿಸಿದ ಮೊದಲ ಅಂಚೆ ಚೀಟಿಯಿದು.
 ತಾವಿರುವಾಗಲೇ ತಮ್ಮ ಮೇಲೆ ಬಿಡುಗಡೆಯಾದ ಅಂಚೆ ಚೀಟಿಯನ್ನು ಕಂಡ ಅಪರೂಪದ ಭಾಗ್ಯಶಾಲಿ ಸರ್.ಎಂ.ವಿ. ೧೫ ಪೈಸೆ ಮುಖಬೆಲೆಯ ಈ ಅಂಚೆ ಚೀಟಿಯು ಅಶೋಕಸ್ತಂಭ ಜಲಚಿಹ್ನೆಯನ್ನು ಹೊಂದಿದ್ದು ಕಂದು ಮತ್ತು ಕ್ಯಾರಮೈನ್ ಮಿಶ್ರವರ್ಣದಲ್ಲಿ ಮುದ್ರಿತವಾಗಿದೆ.

 
 ಚಿಕ್ಕಬಳ್ಳಾಪುರ ತಾಲ್ಲೂಕು ಮುದ್ದೇನಹಳ್ಳಿಯಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯನವರ ಸಮಾಧಿ.

 ಚಿಕ್ಕಬಳ್ಳಾಪುರ ತಾಲ್ಲೂಕಿನ ಮ್ದುದೇನಹಳ್ಳಿ ಗ್ರಾಮದಲ್ಲಿ ಸೆಪ್ಟೆಂಬರ್ ೧೫, ೨೦೧೦ರಂದು  ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ೧೫೦ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಬಿಡುಗಡೆಯಾದ ವಿಶೇಷ ಅಂಚೆ ಲಕೋಟೆ.

 ೫೦ ವರ್ಷಗಳ ನಂತರ ಸರ್.ಎಂ.ವಿ ಅವರ ೧೫೦ ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ(೨೦೧೦ರಲ್ಲಿ) ಸರ್.ಎಂ.ವಿಶ್ವೇಶ್ವರಯ್ಯ ಅವರ ಸ್ಮರಣಾರ್ಥ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಐದು ರೂಗಳ ಮುಖಬೆಲೆಯ ವಿಶೇಷ ಅಂಚೆ ಲಕೋಟೆಯು ಸರ್.ಎಂ.ವಿ ಅವರ ಚಿತ್ರವಿರುವ ವಿಶೇಷ ಸೀಲ್, ಅವರು ವಾಸಿಸಿದ ಮನೆ ಹಾಗೂ ಅವರ ಭಾವಚಿತ್ರವನ್ನದು ಒಳಗೊಂಡಿದೆ.

 ಸರ್.ಎಂ.ವಿಶ್ವೇಶ್ವರಯ್ಯನವರ ಸೊಸೆ ಶಕುಂತಲಾ ಕೃಷ್ಣಮೂರ್ತಿ(ಬಲಭಾಗದಲ್ಲಿ ಕುಳಿತವರು).

 ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನಲ್ಲಿ ೧೯೭೮ರ ಗಣರಾಜ್ಯೋತ್ಸವದಂದು ಬಿಡುಗಡೆಯಾದ ವಿಶೇಷ ಅಂಚೆ ಲಕೋಟೆ.

೧೯೭೮ರಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ರೇಷ್ಮೆ ಕುರಿತಂತೆ ವಿಶೇಷ ಅಂಚೆ ಮುದ್ರೆಯನ್ನು ಬಿಡುಗಡೆ ಮಾಡಲಾಗಿತ್ತು. ಮೊಟ್ಟ ಮೊದಲ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘ ಸ್ಥಾಪನೆಯಾಗಿತ್ತು. ರೂರಾಪೆಕ್ಸ್(ರೂರಲ್ ಫಿಲಾಟಲಿ ಎಕ್ಸಿಬಿಷನ್) ನಡೆದ ಜ್ಞಾಪಕಾರ್ಥವಾಗಿ ವಿಶೇಷ ಅಂಚೆ ಲಕೋಟೆ ಹಾಗೂ ಮುದ್ರೆ(ಕ್ಯಾನ್ಸಲೇಷನ್) ಯನ್ನು ಅಂಚೆ ಇಲಾಖೆ ಹೊರತಂದಿತ್ತು. ಜಿಲ್ಲೆಯ ವಿಖ್ಯಾತ ಎಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ಅವರ ನಂತರ ಅಂಚೆ ಇಲಾಖೆಯಿಂದ ಮೇಲೂರಿನ ರೂರಾಪೆಕ್ಸ್ ಈ ಗೌರವಕ್ಕೆ ಪಾತ್ರವಾಗಿದೆ.
"೧೯೭೮ರ ಗಣರಾಜ್ಯೋತ್ಸವದಂದು ಮೊಟ್ಟಮೊದಲ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘವನ್ನು ಮೇಲೂರಿನಲ್ಲಿ ಪ್ರಾರಂಭಿಸಿದೆವು. ಕೃಷಿಗೆ ಸಂಬಂಧಿಸಿದ ಅಂಚೆ ಚೀಟಿಗಳದ್ದೇ ಪ್ರದರ್ಶನ ಏರ್ಪಡಿಸಿದ್ದೆವು. ವಿವಿಧ ದೇಶಗಳ ವೈವಿದ್ಯಮಯ ಅಂಚೆಚೀಟಿಗಳನ್ನು ಪ್ರದರ್ಶಿಸಿದ್ದೆವು. ಹೆಚ್ಚೆಚ್ಚು ರೇಷ್ಮೆ ಬೆಳೆಯಿರಿ ಎಂಬುದು ನಮ್ಮ ಧ್ಯೇಯವಾಕ್ಯವಾಗಿತ್ತು. ಅಂಚೆ ಇಲಾಖೆಯವರು ಈ ಕಾರ್ಯವನ್ನು ಗೌರವಿಸಿ ವಿಶೇಷ ಅಂಚೆ ಲಕೋಟೆಯನ್ನು ಅಂದು ಹೊರತಂದರು. ಇದು ನಮ್ಮ ಶಿಡ್ಲಘಟ್ಟ ತಾಲ್ಲೂಕಿಗೇ ಸಂದ ಗೌರವವಾಗಿತ್ತು. ಕೃಷಿಕನೇ ಭಾರತದ ಬೆನ್ನೆಲುಬು ಎಂಬ ಘೋಷ ವಾಕ್ಯ, ಕೃಷಿಕನ ಚಿತ್ರ ಹಾಗೂ ರೂರಾಪೆಕ್ಸ್ ಪ್ರಾರಂಭಿಸಿದ ದಿನ ಒಂದು ಬದಿಯಲ್ಲಿ ಮುದ್ರಿಸಿದ್ದರೆ, ಇನ್ನೊಂದು ಬದಿಯಲ್ಲಿ ಅಂಚೆ ಚೀಟಿಯ ಮೇಲೆ ಮೇಲೂರು ಅಂಚೆ ಕಚೇರಿಯ ಮುದ್ರೆ, ರೇಷ್ಮೆ ಹುಳು, ಹಿಪ್ಪುನೇರಳೆ ಎಲೆ, ಗೂಡಿನ ಚಿತ್ರ ಮತ್ತು ಹೆಚ್ಚು ರೇಷ್ಮೆ ಬೆಳೆಯಿರಿ ಎಂದಿರುವ ಮುದ್ರೆ ಒತ್ತಲಾಗಿತ್ತು. ಇದು ಅಂಚೆ ಇತಿಹಾಸದಲ್ಲಿ ದಾಖಲಾದ ಮೌಲಿಕ ವಸ್ತು" ಎಂದು ರೂರಾಪೆಕ್ಸ್ ಸಂಸ್ಥಾಪಕ ಎಂ.ಆರ್.ಪ್ರಭಾಕರ್ ತಿಳಿಸಿದರು.

ಶಿಡ್ಲಘಟ್ಟದಲ್ಲಿ ಗ್ರಾಮೀಣ ಅಂಚೆ ಚೀಟಿ ಸಂಗ್ರಹಕಾರರ ಸಂಘದ ಒಂದು ಸಾವಿರದ ಪ್ರದರ್ಶನವನ್ನು ವೀಕ್ಷಿಸುತ್ತಿರುವ ಆಸಕ್ತರು.


 ‘ಇದಾದ ನಂತರ ನಾವು ಹಿಂತಿರುಗಿ ನೋಡಲೇ ಇಲ್ಲ. ಶಾಲಾ, ಕಾಲೇಜುಗಳು, ವಿವಿಧ ಗ್ರಾಮಗಳು, ಊರುಗಳು ಮೊದಲಾದೆಡೆ ಅಂಚೆ ಚೀಟಿ ಪ್ರದರ್ಶಿಸುತ್ತಾ ಒಂದು ಸಾವಿರದ ಅಂಚೆ ಚೀಟಿ ಪ್ರದರ್ಶನವನ್ನು ಶಿಡ್ಲಘಟ್ಟದ ವಾಸವಿ ಕಲ್ಯಾಣಮಂಟಪದಲ್ಲಿ ಜನವರಿ ೧, ೨೦೦೦ರಂದು ನಡೆಸಿದೆವು. ಗ್ರಾಮಾಂತರದಲ್ಲಿಯೂ ಈ ವಿಶ್ವಮಾನ್ಯ ಹವ್ಯಾಸವನ್ನು ಪ್ರಚಾರಗೊಳಿಸಬೇಕು. ಇದರಿಂದಲೂ ಪ್ರಾಪಂಚಿಕ ಜ್ಞಾನ, ಇತಿಹಾಸ, ಕಲೆ, ಕ್ರೀಡೆ ಮುಂತಾದವುಗಳನ್ನು ಅರಿಯಬಹುದು. ನಮ್ಮ ಕಲೆ ಸಂಸ್ಕೃತಿಯ ಪ್ರದರ್ಶನವೂ ಇದರಿಂದ ಸಾಧ್ಯವಿದೆ’ ಎನ್ನುತ್ತಾರೆ ಅವರು.

Monday, June 10, 2013

ದೇಶಪ್ರೇಮಿಗಳ ಮನೆ


 ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ೧೯೨೦ ರಲ್ಲಿ ಬಂಡಿನಾರಾಯಣಪ್ಪ ಅವರು ಕಟ್ಟಿರುವ ಈ ಮನೆ ಸ್ವಾತಂತ್ರ್ಯ ಹೋರಾಟಗಾರರ ಕೇಂದ್ರ ಸ್ಥಾನವಾಗಿತ್ತು.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ವಿವಿಧ ಬಗೆಯ ವಿನ್ಯಾಸ ಮತ್ತು ಆಕಾರದ ಮನೆಗಳಿವೆ. ಅವು ತಮ್ಮದೇ ಆದ ಪ್ರಾಮುಖ್ಯತೆ ಹೊಂದಿವೆ. ಆದರೆ ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದಲ್ಲೊಂದು ವಿಶಿಷ್ಟ ಮನೆ ಇದೆ. ಇದು ಜಿಲ್ಲೆ ಮತ್ತು ತಾಲ್ಲೂಕಿನ ಪಾಲಿಗೆ ಐತಿಹಾಸಿಕ ಮನೆ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಿಗೆ ಈ ಮನೆಯೇ ಕೇಂದ್ರ ಸ್ಥಾನ.  ಮನೆ, ಗ್ರಾಮಗಳನ್ನು ತೊರೆದು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದವರಿಗೆ ಈ ಮನೆ ಆಶ್ರಯ ತಾಣವಾಗಿತ್ತು. ಸ್ವತಂತ್ರ್ಯ ಭಾರತದ ಕನಸನ್ನು ಕಂಡವರಿಗೆ ಆಶಾಜ್ಯೋತಿಯಾಗಿತ್ತು.
 ತಾಲ್ಲೂಕಿನ ಭಕ್ತರಹಳ್ಳಿಯ ಹಿರಿಯ ಮುತ್ಸದ್ಧಿ ಬಂಡಿ ನಾರಾಯಣಪ್ಪನವರು ೧೯೨೦ರಲ್ಲಿ ಸುಂದರ ವಾಸ್ತುಶಿಲ್ಪ ಶೈಲಿಯಲ್ಲಿ ಕಟ್ಟಿದ ಮನೆಯಿದು. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದವರಿಗೆ ಹಣಕಾಸಿನ ನೆರವು, ಗುಪ್ತ ಪತ್ರ ರವಾನೆ, ಕಾರ್ಯಾಚರಣೆಗಳ ಯೋಜನೆ ಎಲ್ಲವನ್ನೂ ಈ ಮನೆಯಿಂದಲೇ ರವಾನಿಸಲಾಗುತ್ತಿತ್ತು. ಸ್ವಾತಂತ್ರ್ಯ ಹೋರಾಟಗಾರರಿಗೆ ಬಂಡಿನಾರಾಯಣಪ್ಪ ಮಹಾಪೋಷಕರಾಗಿದ್ದರು.
  ಹಾಗಾಗಿ ಭಕ್ತರಹಳ್ಳಿ ಗ್ರಾಮದಲ್ಲಿ ಅತಿ ಹೆಚ್ಚು ಮಂದಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಸಾಧ್ಯವಾಯಿತು. ಈ ಹೋರಾಟದಲ್ಲಿ ಬ್ರಿಟಿಷ್ ಪೊಲೀಸರ ಗುಂಡಿಗೆ ಭಕ್ತರಹಳ್ಳಿಯ ಇಬ್ಬರು ಸ್ವಾತಂತ್ರ್ಯ ಹೋರಾಟಗಾರು ವೀರಮರಣವನ್ನಪ್ಪಿದರು ಮತ್ತು ಹಲವಾರು ಮಂದಿ ಜೈಲು ಪಾಲಾದರು. ಇದರಿಂದಾಗಿ ಭಕ್ತರಹಳ್ಳಿಯು ’ದೇಶಭಕ್ತರಹಳ್ಳಿ’ ಎಂದೇ ಖ್ಯಾತಿ ಪಡೆಯಿತು.
 ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ರಾಜಮನೆತನದ ಆಡಳಿತದ ಅವಧಿಯಲ್ಲಿ ಪ್ರಜಾಪ್ರತಿನಿಧಿ ಸಭೆಗೆ ನಾರಾಯಣಪ್ಪನವರು ಎರಡು ಬಾರಿ ಆಯ್ಕೆಯಾಗಿದ್ದರು. ಬಂಡಿ ಚಿಹ್ನೆಯಿಂದ ಆಯ್ಕೆಯಾಗಿದ್ದರಿಂದಾಗಿ ಅವರಿಗೆ ಬಂಡಿ ನಾರಾಯಣಪ್ಪ ಎಂದೇ ಹೆಸರು ರೂಢಿಗೆ ಬಂದಿತು. ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಜನರಲ್ಲಿ ಹಚ್ಚಿದವರಲ್ಲಿ ಅವರು ಪ್ರಮುಖರು. ಆಗ ಸ್ವಾತಂತ್ರ್ಯ ಹೋರಾಟಗಾರರಿಗೆ ಪೋಷಕರ ಅತ್ಯಗತ್ಯವಿತ್ತು.



ಬಂಡಿ ನಾರಾಯಣಪ್ಪ.

’ನಾರಾಯಣಪ್ಪ ಅವರು ಸ್ವಾತಂತ್ರ್ಯ ಹೋರಾಟಗಾರರಿಗೆ ಪೋಷಕರ ಸ್ಥಾನ ತುಂಬಿದ್ದಲ್ಲದೇ ತಮ್ಮ ಮಕ್ಕಳಾದ ಬಿ.ಎನ್.ಕ್ಯಾತಣ್ಣ ಮತ್ತು ಬಿ.ಎನ್.ಪುಟ್ಟಣ್ಣ ಅವರನ್ನೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು. ಬ್ರಿಟಿಷ್ ವಿರುದ್ಧದ ಚಳುವಳಿಯಲ್ಲಿ ಬಂಡಿ ನಾರಾಯಣಪ್ಪನವರ ಮಕ್ಕಳು ಜೈಲುಪಾಲಾದರು. ಸರ್ಕಾರಿ ಲೆಕ್ಕದಲ್ಲಿ ಭಕ್ತರಹಳ್ಳಿಯ  ೧೩ ಮಂದಿ ಮಾತ್ರ ಸ್ವಾತಂತ್ರ್ಯ ಹೋರಾಟಗಾರರೆಂದು ಪರಿಗಣಿಸಲಾಗಿದೆ. ಆದರೆ ಆಗ ಗ್ರಾಮದ ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಮಂದಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸ್ವಾತಂತ್ರ್ಯಕ್ಕಾಗಿ ಧೇನಿಸುವ, ಪ್ರಾರ್ಥಿಸುವ ಮತ್ತು ಹೋರಾಟಗಾರರಿಗೆ ನೆರವಾಗುವ ಕಾರ್ಯದಲ್ಲಿ ಭಾಗಿಯಾಗಿದ್ದರು. ಎಲ್ಲೆಡೆ ಅದೇ ಚರ್ಚೆಯಾಗುತ್ತಿತ್ತು’ ಎಂದು ಹಿರಿಯರಾದ ವೆಂಕಟಮೂರ್ತಿ ಹೇಳುತ್ತಾರೆ.
 ’ರಾಜ್ಯದ ಮೊಟ್ಟಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರಿಗೆ ಆಪ್ತರಾಗಿದ್ದ ಬಂಡಿ ನಾರಾಯಣಪ್ಪನವರು ಸಾಮಾನ್ಯರೇನು ಆಗಿರಲಿಲ್ಲ, ಕೆ.ಸಿ.ರೆಡ್ಡಿ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಕೋರಿ ಅವರು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಭೇಟಿಯಾಗಿದ್ದರು’ ಎಂದು ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ.
 ’ಆಗಿನ ಕಾಲದಲ್ಲಿ ನಡೆಯುತ್ತಿದ್ದ ಕವಾಯತು, ಕಾಂಗ್ರೆಸ್ ಮುಖಂಡರ ಬಿಳಿ ಜುಬ್ಬಾ, ಪೈಜಾಮ, ಹಾಫ್ ಕೋಟು, ಗಾಂಧಿ ಟೋಪಿ. ರಾಷ್ಟ್ರಪ್ರೇಮದ ಬಗ್ಗೆ ಭಾಷಣ. ತಾಲ್ಲೂಕು ಹಾಗೂ ಜಿಲ್ಲಾ ಮುಖಂಡರು ಬರುತ್ತಿದ್ದುದು, ಎಲ್ಲ ಕನಸಿನಂತೆ ಗೋಚರಿಸುತ್ತದೆ. ನಾವು ಆಗ ಶಾಲಾ ವಿದ್ಯಾರ್ಥಿಗಳು. ನಮಗೆಲ್ಲಾ ಇವರು ಮಾದರಿ ವ್ಯಕ್ತಿಗಳಾಗಿದ್ದರು. ಮುಂದೆ ನಾನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷನಾದಾಗ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಗಾಂಧಿ ಪ್ರತಿಮೆ ಹಾಗೂ ಸರ್ಕಾರಿ ಲೆಕ್ಕದಲ್ಲಿರುವ ಭಕ್ತರಹಳ್ಳಿಯ ಸ್ವಾತಂತ್ರ್ಯ ಹೋರಾಟಗಾರರ ಹೆಸರಿನ ಫಲಕವನ್ನು ಹಾಕಿಸಿದೆ’ ಎಂದು ವೆಂಕಟಮೂರ್ತಿ ವಿವರಿಸಿದರು.

Tuesday, June 4, 2013

ಜಂಗಮಕೋಟೆ ಎಂಬ ಸೃಷ್ಟಿ ಸ್ಥಾವರ

 
ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಬಳಿಯಿರುವ ವಿಚಿತ್ರ ರೂಪಗಳ ದೊಂಗರಗಳ ಸಾಲು.

ಬೃಹದಾಕಾರದ ಅಣಬೆ, ಮಲಗಿರುವ ಬಸವ, ಹುತ್ತ, ರಣ ಹ್ದದು ಮುಂತಾದ ಚಿತ್ರ ವಿಚಿತ್ರ ಆಕಾರಗಳು ಮಣ್ಣಿನಲ್ಲಿ ರೂಪುಗೊಂಡಿವೆ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯ ಬಳಿ. ಸುಗಟೂರು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಕಣಿವೆಗಳು ಅಥವಾ ದೊಂಗರಗಳಲ್ಲಿ ನೂರಾರು ವರ್ಷಗಳಿಂದ ಬೀಳುವ ಮಳೆ ಹಾಗೂ ಹರಿವ ನೀರು ವಿಶಿಷ್ಟವಾಗಿ ಮಣ್ಣುಗಡ್ಡೆಗಳನ್ನು ಕಲಾಕೃತಿಗಳಂತೆ ನಿರ್ಮಿಸಿದೆ.
 ಒಂದೆಡೆ ಪ್ರಪಾತದಂತೆ ಕಣಿವೆಯಿದ್ದರೆ, ಮತ್ತೊಂದೆಡೆ ಅಣಬೆಯಾಕಾರದ ದಿಬ್ಬವಿದೆ. ಯಾವ ಆಧಾರವೂ ಇಲ್ಲದೆ ನಿಂತಂತಿರುವ ಕಂಬಗಳ ಹಾಗೆ ನಡುಗಡ್ಡೆಗಳಿವೆ. ಕೆಲವು ಇನ್ನೇನು ಕುಸಿಯುವಂತೆ ಕಂಡರೆ ಇನ್ನು ಕೆಲವು ಕಲ್ಲಿನಂತೆ ಗಟ್ಟಿಯಾಗಿವೆ. ನೀರಿನ ಕೊರೆತದಿಂದಾಗಿ ಹಲವು ಆಕಾರಗಳನ್ನು ಹೊಂದಿರುವ ಇವು ಪ್ರತಿವರ್ಷವೂ ತಮ್ಮ ರೂಪ ಬದಲಿಸುತ್ತಿರುತ್ತವೆ.
 ಛಾಯಾಗ್ರಹಣಕ್ಕೆ, ಚಾರಣಕ್ಕೆ ಮತ್ತು ಪ್ರಕೃತಿಯ ಸೊಬಗನ್ನು ಸವಿಯುವವರಿಗೆ ಈ ಸ್ಥಳ ಪ್ರಿಯವಾಗುತ್ತದೆ. ನೆಲಮಟ್ಟಕ್ಕಿಂತ ಕೆಳಗಿರುವ ಕಂದರಗಳಲ್ಲಿ ರೂಪುಗೊಂಡಿರುವ ಅದ್ಭುತ ಶಿಲ್ಪಗಳ ದೃಶ್ಯಾವಳಿಗಳು ಸುಮಾರು ೧೦ ಕಿಮೀ ಉದ್ದಕ್ಕೂ ಅಂದರೆ ಹೊಸಕೋಟೆಯವರೆಗೂ ಮುಂದುವರೆದಿದೆ. ಅಲ್ಲಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸಿದ್ದರೂ ಪ್ರಕೃತಿಯ ಸೌಂದರ್ಯ ಸವಿಯಲು ಮತ್ತು ಸಾಹಸ ಕ್ರೀಡೆಗಳನ್ನು ಆಯೋಜಿಸಲು ಅಡ್ಡಿಯಾಗಿಲ್ಲ. ೧೦ ರಿಂದ ೩೦ ಮೀಟರ್‌ಗಳವರೆಗೂ ಆಳವಿರುವ ಈ ವಿಶಾಲ ಕಣಿವೆ ಅವರವರ ಭಾವಕ್ಕೆ ತಕ್ಕಂತೆ ತನ್ನ ರೂಪವನ್ನು ಪ್ರದರ್ಶಿಸುತ್ತದೆ.
 ‘ಕಾಲಾಂತರದಲ್ಲಿ ನೀರ ಹರಿವಿಗೆ ಸಿಲುಕಿ, ಮೆದು ಮಣ್ಣು ಕರಗಿ ಕೊಚ್ಚಿ ಹೋಗುತ್ತಾ ನುರುಜುಗಲ್ಲಿನ ಗಟ್ಟಿ ಮಣ್ಣು ಮಾತ್ರ ಉಳಿದು ಈ ದೊಂಗರಗಳು ಕುತೂಹಲ ಕೆರಳಿಸುವ ಚಿತ್ರ ವಿಚಿತ್ರ ಆಕೃತಿಗಳಾಗಿ ರೂಪುಗೊಂಡಿವೆ. ಸೃಷ್ಟಿಯ ಈ ಅದ್ಭುತ ತಾಣಕ್ಕೆ ಪ್ರಚಾರ ನೀಡಿ ಮೂಲಭೂತ ಸೌಕರ್ಯಗಳನ್ನು ಒಸದಿಸಿದಲ್ಲಿ ಚಾರಣ ಮತ್ತು ಸಾಹಸ ಪ್ರವಾಸೋದ್ಯಮದ ಒಂದು ಪ್ರಸಿದ್ಧ ಸ್ಥಳವಾಗುತ್ತದೆ. ನಾವು ಶಾಲಾ ಮಕ್ಕಳನ್ನು ಹೊರಸಂಚಾರಕ್ಕೆಂದು ಪ್ರತಿ ವರ್ಷ ಈ ಸ್ಥಳಕ್ಕೆ ಕರೆದೊಯ್ಯುತ್ತೇವೆ. ವಿದ್ಯಾರ್ಥಿಗಳಿಗೆ ಚಾರಣ, ಸಾಹಸ ಕ್ರೀಡೆ, ಪ್ರಕೃತಿ ವೀಕ್ಷಣೆ, ಔಷಧಿ ಸಸ್ಯಗಳ ಗುರುತಿಸುವಿಕೆ, ವನಭೋಜನ, ಕಾಡುಹಣ್ಣುಗಳ ರುಚಿ ಮುಂತಾದವುಗಳನ್ನು ಪರಿಚಯ ಮಾಡಿಕೊಡಲು ಇದು ಸೂಕ್ತ ಸ್ಥಳ’ ಎನ್ನುತ್ತಾರೆ ಶಿಕ್ಷಕ ಡಿ.ನಾರಾಯಣಸ್ವಾಮಿ.
 ‘ಜಂಗಮಕೋಟೆಯ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯದ ಪಕ್ಕದ ಕಾಲುದಾರಿಯಲ್ಲಿ ಸುಮಾರು ಒಂದು ಕಿಮೀ ದೂರ ಕ್ರಮಿಸಿ ಸಣ್ಣ ಗುಡ್ಡವೊಂದನ್ನು ಹತ್ತಿ ಇಳಿದರೆ ದೊಂಗರಗಳ ಸಾಲು ಕಾಣಿಸುತ್ತದೆ. ಶಿಡ್ಲಘಟ್ಟ ತಾಲ್ಲೂಕಿನ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಚಾರಣ, ಮೈನವಿರೇಳಿಸುವ ಅನುಭವ ನೀಡುವುದರೊಂದಿಗೆ ಅವರ ಮನೋಸ್ಥೈರ್ಯವನ್ನೂ ಹೆಚ್ಚಿಸಲು ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ಕೆಲವು ಕಡೆ ನೀರು ನಿಂತಿದ್ದು, ಕುರುಚಲು ಪೊದೆ ಗಿಡಗಳಿದ್ದು ಹಲವು ಹಕ್ಕಿ ಪ್ರಬೇಧಗಳನ್ನು ಗುರುತಿಸಬಹುದಾಗಿದೆ’ ಎಂದು ಅವರು ವಿವರಿಸಿದರು.


 ಮಣ್ಣಿನ ಛತ್ರಿ.

 ಬೃಹದಾಕಾರದ ಅಣಬೆಗಳು.

 ನೆಲದಾಳದ್ಲಲಿ ಕೊರೆತದಿಂದ ರೂಪುಗೊಂಡ ಹುತ್ತದ ರೀತಿಯ ಆಕೃತಿಗಳು.


 ನಡುವ್ಲೆಲಾ ಸವೆದು ಕುಸಿಯಬಹುದೆಂದು ಅನಿಸಿದರೂ ಭದ್ರವಾಗಿ ಸೆಟೆದು ನಿಂತ ಆಕೃತಿ.


 ಮಲಗಿರುವ ಒಂಟೆಯೋ ಅಥವಾ ರಹಹ್ದದಿನ ತಲೆಯೋ?


 ಭೂಮಿಯಿಂದ್ದೆದ ಶಿವಲಿಂಗ


 ಭೂಮಿಯೊಳಗಿನ ವಿಸ್ಮಯ.




Sunday, June 2, 2013

ತಲೆಗೆ ಕಾಯಿ ಒಡೆಸಿಕೊಳ್ಳುವ ಭಿನ್ನ ಕಲೆ


 ಗುರುವು ಇಬ್ಬರು ವೀರಕುಮಾರರ ತಲೆ ಮೇಲೆ ತೆಂಗಿನಕಾಯಿಯನ್ನು ಹೊಡೆದು ಕಾಯಿಪವಾಡ ಪ್ರದರ್ಶಿಸಿದರು.


ಜಾನಪದ ಆಚರಣೆಗಳು ವೈವಿದ್ಯಮಯ. ಅವುಗಳಲ್ಲಿ ಕೆಲವು ನೋಡಲು ಮೈನವಿರೇಳಿಸುವಂತೆ ಭೀಭತ್ಸವಾಗಿರುತ್ತವೆ. ಇಂಥಹ ವಿಶಿಷ್ಟವಾದ ಜನಪದ ಆಚರಣೆ ‘ತೆಂಗಿನಕಾಯಿ ಪವಾಡ’. ಕುರುಬ ಜನಾಂಗದವರು ನಡೆಸುವ ಈ ಜಾನಪದ ಕಲೆಯು ದೈವಾರಾಧಕ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ. ಚಿಕ್ಕವರಿಂದ ಹಿಡಿದು ಮುದುಕರವರೆಗೆ ತಮ್ಮ ತಲೆ ಮೇಲೆ ಕಾಯಿ ಒಡೆಸಿಕೊಳ್ಳುವ ದೃಶ್ಯ ಎಂಥವರಿಗಾದರೂ ಮೈನವಿರೇಳಿಸುವಂಥದ್ದು.
 ಸಮಾಜದಲ್ಲಿ ಹಾಲಿನಲ್ಲಿ ನೀರು ಬೆರೆಯುವಂತೆ ಬಾಳ್ವೆ ನಡೆಸುವರೆಂದು ಕುರುಬ ಜನಾಂಗದವರನ್ನು ಹಾಲು ಮತಸ್ಥರೆಂದು ಕರೆಯುತ್ತಾರೆ. ಇವರ ಕುಲದೈವ ಬೀರೇದೇವರು. ಈಶ್ವರ ಬೀರೇಶ್ವರನಾಗಿ ಭೂಲೋಕಕ್ಕೆ ಬಂದನೆಂದು ಇವರು ನಂಬುತ್ತಾರೆ. ಇವರು ತಮ್ಮ ಕುಲದೇವರನ್ನು ಪೂಜಿಸುವ ಆಚರಣೆಯನ್ನು ಕುರುಬರ ದ್ಯಾವರ ಎನ್ನುತ್ತಾರೆ. ತಮ್ಮ ಮೂಲ ದೇವಸ್ಥಾನದ ಬಳಿ ಸೇರಿ ಆಚರಿಸುವ ಹಬ್ಬವಿದು. ಭೀರೇಶ್ವರ, ಭತ್ಯೇಶ್ವರ, ಸ್ದಿದೇಶ್ವರ, ಅಬ್ಬಿಣಿ ಬೀರೇಶ್ವರ, ಇಟ್ಟೇಶ್ವರ, ಕಾಶಿ ಬೀರೇಶ್ವರ, ಅಜ್ಜ ಬೀರೇಶ್ವರ, ಗುರು ಮೂರ್ತೇಶ್ವರ, ಮೈಲಾರ ಲಿಂಗೇಶ್ವರ ಹೀಗೆ ವಿವಿಧ ಹೆಸರಿನ ಮನೆದೇವರನ್ನು ಇವರಲ್ಲಿ ಹಲವರು ಹೊಂದಿದ್ದಾರೆ.
 ದ್ಯಾವರದಲ್ಲಿ ತಮಟೆ ಎತ್ತನ್ನು ಕಳಸ ಹಾಗೂ ಭಂಡಾರದ ಪೆಟ್ಟಿಗೆಯೊಂದಿಗೆ ತೆಗೆದುಕೊಂಡು ಹೋಗಿ ಗುರು ಅಥವಾ ಜಂಗಮರಿಂದ ಪೂಜೆ ಮಾಡಲಾಗುತ್ತದೆ. ಗುರುವು, ತಮಟೆ ಎತ್ತಿನ ಪಾದ ಮತ್ತು ಹಣೆ ತೊಳೆದು ಪೂಜಿಸಿ ಬೀರಪ್ಪನನ್ನು ಹೊಗಳುತ್ತಾ ವೀರಮಕ್ಕಳು, ವೀರಗಾರ್ರು ಅಥವಾ ಈರಗಾರ್ರ ತಲೆ ಮೇಲೆ ತೆಂಗಿನಕಾಯಿಯನ್ನು ಹೊಡೆಯುತ್ತಾರೆ.
 ಈರಗಾರ್ರು ಆವೇಶ ಬಂದಂತೆ ‘ಭಲರೇ, ಭಾಲ್ವರೇ ವೀರ, ವೀರಾಧಿವೀರ, ವಿಸ್ಮಯಕಾರ, ದಶಾವತಾರ, ಭಗಿನಿಕುಮಾರ, ರಾರಾ ನಾ ಮ್ದುದುಲ ವೀರಭದ್ರ, ಭಲರೇ ಬಾಲ್ವರೇ ವೀರ’ ಎಂಬ ಘೋಷಣೆ ಕೂಗುತ್ತಿರುತ್ತಾರೆ. ಹುಡುಗರಿಂದ ಮುದುಕರವರೆಗೆ ತಮ್ಮ ತಲೆ ಮೇಲೆ ಕಾಯಿ ಹೊಡೆಸಿಕೊಳ್ಳಲು ಕೊರಳಿಗೆ ಹೂಮಾಲೆ ಹಾಕಿಕೊಂಡು ಗುರುಗಳಿಂದ ಆಶೀರ್ವಾದ ಪಡೆದುಕೊಂಡು ದಂಡಕಗಳನ್ನು ಹೇಳಿಸಿಕೊಂಡು ಸಿದ್ಧರಾಗಿರುತ್ತಾರೆ. ಹೀಗೆ ತಲೆ ಮೇಲೆ ಕಾಯಿ ಒಡೆಸಿಕೊಳ್ಳುವುದನ್ನು ತೆಂಗಿನಕಾಯಿ ಪವಾಡ ಎನ್ನುತ್ತಾರೆ. ಈ ಕಾಯಿ ಪವಾಡ ನೋಡಲು ಸಾವಿರಾರು ಮಂದಿ ಭಕ್ತಾದಿಗಳು ಕುತೂಹಲಿಗಳಾಗಿ ಸೇರಿರುತ್ತಾರೆ.



ಗುರುವು ವೀರಕುಮಾರರಿಗೆ ಚಾಟಿಯಿಂದ ಹೊಡೆಯುತ್ತಿರುವುದು.

 ‘ಈ ಪವಾಡದಲ್ಲಿ ಭಾಗವಹಿಸುವ ವೀರಮಕ್ಕಳು ಉಪವಾಸ ವ್ರತವನ್ನು ಕೈಗೊಂಡಿರುತ್ತಾರೆ. ಹೀಗೆ ಕಟ್ಟುನಿಟ್ಟಾಗಿ ಬಹಳ ಭಯ ಭಕ್ತಿಯಿಂದ ಇದಾಗ ಮಾತ್ರ ತಲೆ ಮೇಲೆ ಎಷ್ಟು ಕಾಯಿ ಒಡೆದರೂ ತಲೆಗೆ ಗಾಯವಾಗುವುದಿಲ್ಲ. ಒಂದು ವೇಳೆ ಕಾಯಿ ಕರಟ ತಗುಲಿ ರಕ್ತ ಬಂದ್ದಿದರೂ ಭಂಡಾರ ಹಚ್ಚುವುದರಿಂದ ದೇವರ ಶಕ್ತಿಯಿಂದ ಗಾಯ ವಾಸಿಯಾಗುತ್ತದೆ. ಅದಕ್ಕಾಗಿ ಯಾವುದೇ ರೀತಿಯ ಔಷಧಿ ಪಡೆಯಬೇಕಾದ ಅಗತ್ಯವಿಲ್ಲ. ಕೆಲವರು ನಿರಂತರವಾಗಿ ಕಾಯಿಗಳನ್ನು ಒಡೆಸಿಕೊಳ್ಳುತ್ತಾರೆ’ ಎಂದು ಕಾಯಿ ಒಡೆಯುವ ಕೈವಾರದ ಬಳಿಯ ಆಲಂಬಗಿರಿಯ ಗುರುಮಠದ ಗುರು ಸಿದ್ಧಲಿಂಗಾರಾಧ್ಯರು ಹೇಳುತ್ತಾರೆ.
 ‘ನಮ್ಮ ಜನಾಂಗದ ವಿಶಿಷ್ಟ ಆಚರಣೆಯಿದು. ಇದರ ಬಗ್ಗೆ ನಮಗೆ ಹೆಮ್ಮೆ ಇದೆ. ಐದು ಅಥವಾ ಒಂಬತ್ತು ವರ್ಷಗಳಿಗೊಮ್ಮೆ ನಡೆಯುವ ನಮ್ಮ ದ್ಯಾವರಗಳಲ್ಲಿ ಮಾತ್ರ ಇದನ್ನು ನಾವುಗಳು ನೋಡಲು ಸಾಧ್ಯವಿತ್ತು. ಈಗ ಕನಕದಾಸರ ಜಯಂತ್ಯುತ್ಸವದಲ್ಲಿ ಈ ಕಲಾವಿದರನ್ನು ಮತ್ತು ಗುರುಗಳನ್ನು ಕರೆಸುವುದರಿಂದಾಗಿ ಈ ಆಚರಣೆಯನ್ನು ಎಲ್ಲ ಜನರೂ ನೋಡಲು ಸಾಧ್ಯವಾಗಿದೆ. ಈ ರೀತಿ ಪ್ರತಿ ವರ್ಷ ಕರೆಸುತ್ತಿದ್ದರೆ, ಈ ಜಾನಪದ ಕಲಾ ಸಂಸ್ಕೃತಿಗೆ ಪ್ರೋತ್ಸಾಹವನ್ನು ನೀಡಿದಂತಾಗುವುದು’ ಎಂದು ಕೆ.ಕೆ.ಪೇಟೆಯ ಆರ್.ಎಂ.ನವೀನ್‌ಕುಮಾರ್ ಹೇಳಿದರು.