Monday, December 6, 2010

ಮನೆಮನೆಗೂ ಆವರಿಸಿದ ಅಮೃತಬಳ್ಳಿ


ಶಿಡ್ಲಘಟ್ಟದ ಗೌಡರಬೀದಿಯ ಗೃಹಿಣಿ ಶಿವಲೀಲಮ್ಮ ರಾಜಣ್ಣ ತಮ್ಮ ಕಾಂಪೌಂಡಿಗೆ ಹಬ್ಬಿಸಿರುವ ಅಮೃತಬಳ್ಳಿ ಸಸ್ಯ.


ಕಳೆದ ವರ್ಷ ಹೆಚ್೧ಎನ್೧ ಸೋಂಕು ತೀವ್ರ ಸ್ವರೂಪದಲ್ಲಿ ವ್ಯಾಪಿಸಿದ್ದ ಸಂದರ್ಭದಲ್ಲಿ ಬಹುತೇಕ ಮಂದಿ ಆಯುರ್ವೇದ, ಹೋಮಿಯೋಪಥಿ ವೈದ್ಯಕೀಯ ಚಿಕಿತ್ಸಾ ಪದ್ಧತಿಗಳ ಜೊತೆಗೆ ಗಿಡಮೂಲಿಕೆ ಔಷಧಿಗಳ ಬಗ್ಗೆಯೂ ಚರ್ಚಿಸುತ್ತಿದ್ದರು. ಅವುಗಳಲ್ಲಿ ಅಮೃತಬಳ್ಳಿ ಕೂಡ ಒಂದು. ಅಮೃತಬಳ್ಳಿ ಬಗ್ಗೆ ನಂಬಿಕೆ ಮೂಡಿಸಿಕೊಂಡಿದ್ದ ಕೆಲವರು ಅದರ ಬಗ್ಗೆ ಮೊಬೈಲ್‌ನಲ್ಲಿ ಎಸ್ಎಂಎಸ್ ಮತ್ತು ಇಮೇಲ್ ಸಂದೇಶಗಳನ್ನೂ ಸಹ ರವಾನಿಸಿದ್ದರು.

ಪ್ರಚಾರದ ಪ್ರಭಾವವೋ ಅಥವಾ ಬೇರೆ ಕಾರಣವೋ ನಿಖರವಾಗಿ ಗೊತ್ತಿಲ್ಲ. ಆದರೆ ನಮ್ಮೂರಿನ ಬಹುತೇಕ ಮನೆಗಳಲ್ಲಿ ಅಮೃತಬಳ್ಳಿಯನ್ನು ಬೆಳೆಸಲಾಗುತ್ತಿದೆ. ಸುಂದರ ಚಪ್ಪರದ ರೂಪದಲ್ಲಿ ಮನೆ ಸುತ್ತಮುತ್ತಲೂ ಅದು ಬೆಳೆಯುತ್ತಿದೆ.


ಶಿಡ್ಲಘಟ್ಟದ ಗೌಡರಬೀದಿಯ ಗೃಹಿಣಿ ಶಾಂತಮ್ಮಮುನಿಕೃಷ್ಣಪ್ಪ ಅವರ ಮನೆಯ ಮೇಲೆಲ್ಲಾ ಹಬ್ಬಿರುವ ಅಮೃತಬಳ್ಳಿ ಸಸ್ಯ.

ಗೌಡರ ಬೀದಿಯಲ್ಲಿರುವ ಶಿವಲೀಲಮ್ಮ ರಾಜಣ್ಣ ತಮ್ಮ ಮನೆ ಎದುರಿನ ಕಾಂಪೌಂಡ್ ಮೇಲೆ ಅಮೃತಬಳ್ಳಿ ಬೆಳೆಸಿದ್ದರೆ, ಅದೇ ಬೀದಿಯ ಶಾಂತಮ್ಮಮುನಿಕೃಷ್ಣಪ್ಪ ಮನೆ ಮೇಲೆಲ್ಲಾ ಪಸರಿಸುವಂತೆ ಬೆಳೆಸಿದ್ದಾರೆ. ಷರಾಫ್ ಬೀದಿಯ ಮುರಳಿ ಮನೆಯ ಎರಡು ಅಂತಸ್ತುಗಳಲ್ಲೂ ಅಮೃತಬಳ್ಳಿ ಹರಡಿದ್ದು ಆಕರ್ಷಕವಾಗಿದೆ. ಹೀಗೆ ಪಟ್ಟಣದ ರಾಘವೇಂದ್ರಸ್ವಾಮಿ ಗುಡಿ ಬೀದಿ, ವಾಸವಿ ರಸ್ತೆ, ಹೌಸಿಂಗ್ ಬೋರ್ಡ್ ಮುಂತಾದ ಕಡೆ ಅಮೃತಬಳ್ಳಿ ಬೆಳೆಸಿದ್ದಾರೆ.


ಶಿಡ್ಲಘಟ್ಟ ತಾಲ್ಲೂಕಿನ ಕಂಬದಹಳ್ಳಿಯ ಗೋವಪ್ಪನವರ ವೆಂಕಟರಾಯಪ್ಪನವರ ಕಾಂಪೋಂಡಿಗೆ ಹಬ್ಬಿರುವ ಅಮೃತಬಳ್ಳಿ ಸಸ್ಯ.

ಹೃದಯಾಕಾರದ ಎಲೆ ಹೊಂದಿರುವ ಅಮೃತಬಳ್ಳಿಯ ಸಸ್ಯಶಾಸ್ತ್ರೀಯ ಹೆಸರು ಟೈನೋಸ್ಪೋರಾ ಕಾರ್ಡಿಫೋಲಿಯಾ. ಎಲ್ಲಾ ವಾತಾವರಣದಲ್ಲೂ ಹುಲುಸಾಗಿ ಬೆಳೆಯುವ ಇದಕ್ಕೆ ಸಂಸ್ಕೃತದಲ್ಲಿ ಗುಡುಚಿ, ಮಧುಪುರಾನಿ, ಅಮ್ರಿತಾ, ಕುಂಡಲಿನಿ, ಚಾಕ್ರಲಕ್ಷನಿಕಾ ಮುಂತಾದ ಹೆಸರುಗಳಿಂದ ಕರೆಯುತ್ತಾರೆ.
"ಜ್ವರ, ಶೀತ, ಅಧಿಕ ರಕ್ತದೊತ್ತಡ, ನೋವು, ವಾತ, ಮೈಕೈನೋವು, ಕಾಮಾಲೆ, ರಕ್ತಹೀನತೆ, ಹೃದ್ರೋಗ, ದಡಾರ, ಉಗುರುಸುತ್ತು, ಅಲರ್ಜಿ, ಸುಟ್ಟಗಾಯ, ಋತುಸ್ರಾವದ ತೊಂದರೆ, ಎದೆ ಹಾಲು ಕೊರತೆ, ಗರ್ಭಿಣಿಯರ ನಂಜು, ಚರ್ಮರೋಗ ಮುಂತಾದ ಅನೇಕ ಕಾಯಿಲೆಗಳಿಗೆ ಔಷಧಿ ಅಮೃತಬಳ್ಳಿ. ಸಕ್ಕರೆ ಖಾಯಿಲೆಗೆ ಅಮೃತಬಳ್ಳಿ ಎಲೆ, ಬೇವಿನ ಎಲೆ, ಬಿಲ್ವಪತ್ರೆಗಳನ್ನು ಒಣಗಿಸಿ ಪುಡಿಮಾಡಿ ಪ್ರತಿದಿನ ಬೆಳಿಗ್ಗೆ ಒಂದು ಚಮಚ ನೀರಿನೊಂದಿಗೆ ಸೇವಿಸಿದರೆ ಆರೋಗ್ಯ ಉತ್ತಮಗೊಳ್ಳುತ್ತದೆ. ಇದರ ಕಾಂಡದ ಕಷಾಯ ಶೀತ, ಕೆಮ್ಮು ಹಾಗೂ ಜ್ವರಕ್ಕೆ ಔಷಧಿ. ಹಾವು, ಚೇಳುಗಳ ಕಡಿತಕ್ಕೆ ಇದರ ಕಾಂಡವನ್ನು ತೇಯ್ದು ಹಚ್ಚಿದರೆ ವಿಷ ಕಡಿಮೆಯಾಗುತ್ತದೆ" ಎಂದು ವನ ಔಷಧಿಗಳ ಬಗ್ಗೆ ಅರಿವಿರುವ ಸ.ರಘುನಾಥ ತಿಳಿಸಿದರು.


ಶಿಡ್ಲಘಟ್ಟದ ಷರಾಫ್ ಬೀದಿಯ ಮುರಳಿಯವರ ಮನೆಯ ಎರಡು ಮಹಡಿಗೂ ಹಬ್ಬಿರುವ ಅಮೃತಬಳ್ಳಿ ಸಸ್ಯ.

"ನಾವು ಮೂರು ವರ್ಷಗಳಿಂದ ಅಮೃತಬಳ್ಳಿ ಬೆಳೆಸುತ್ತಿದ್ದೇವೆ. ಮನೆ ಬಳಿ ಅಥವಾ ಹೂತೋಟಗಳಲ್ಲಿ ಈ ಸಸ್ಯವನ್ನು ಬೆಳೆಸುವುದರಿಂದ ಹಾವು ಬರುವುದಿಲ್ಲ. ಇದು ಮನೆಮದ್ದಾಗಿ ಸದಾಕಾಲ ಬಳಕೆಗೆ ಬರುತ್ತದೆ. ನಮ್ಮ ಯಜಮಾನರಿಗೆ ಸಕ್ಕರೆ ಖಾಯಿಲೆಯಿರುವುದರಿಂದ ಅವರು ಪ್ರತಿನಿತ್ಯ ಬೆಳಿಗ್ಗೆ ನಾಲ್ಕು ಎಲೆಗಳನ್ನು ತಿನ್ನುತ್ತಾರೆ. ಸಣ್ಣ ಪುಟ್ಟ ಖಾಯಿಲೆಗಳಿಗೆ ನಾವು ಔಷಧಿ ಅಂಗಡಿಗೆ ಹೋಗುವುದೇ ಇಲ್ಲ. ಇದರ ಚಿಕ್ಕ ಕಾಂಡವನ್ನು ನೆಟ್ಟರೆ ಸಾಕು ಬೆಳೆಯುತ್ತದೆ. ನಮ್ಮಿಂದ ಅನೇಕರು ತೆಗೆದುಕೊಂಡು ಹೋಗಿ ಬೆಳೆಸುತ್ತಿದ್ದಾರೆ” ಎಂದು ಗೌಡರಬೀದಿಯ ಗೃಹಿಣಿ ಶಿವಲೀಲಮ್ಮ ರಾಜಣ್ಣ ತಿಳಿಸಿದರು.