Tuesday, August 26, 2008

ಸಹಜತೆಯೆಂಬ ವಿಸ್ಮಯ

ಮಗನ ಜನ್ಮದಿನ. ಹತ್ತಿರದ ವೀರಾಪುರ ಎಂಬ ಹಳ್ಳಿಯ ಗಣೇಶನ ಗುಡಿಗೆ ಹೆಂಡತಿ ಮಗನೊಂದಿಗೆ ಹೊರಟೆ. ಮದ್ಯಾಹ್ನ ೧೨ ಗಂಟೆಯಾಗಿತ್ತು. ದೇವಾಲಯಕ್ಕೆ ಬೀಗ ಹಾಕಿದ್ದರು. ಅಲ್ಲೇ ಪಕ್ಕದಲ್ಲಿರುವ ಅರ್ಚಕರ ಮನೆ ಮುಂದೆ ಬೈಕ್ ನಿಲ್ಲಿಸಿದೆ. ನನ್ನ ಹೆಂಡತಿ ಸೌಮ್ಯ ಹೋಗಿ ಕರೆದು ಬರುವಷ್ಟರಲ್ಲಿ ಬೈಕನ್ನು ದೇವಸ್ಠಾನದ ಬಳಿ ನಿಲ್ಲಿಸಲು ಬಂದೆ. ಆಗ ಸೌಮ್ಯ ಕೂಗಿದಂತೆ ಶಬ್ದವಾಗಿ ಹಿಂತಿರುಗಿ ನೋಡಿದೆ. ಸೌಮ್ಯಳ ಕೈಲಿದ್ದ ಪರ್ಸ್ ಕೋತಿಯ ಕೈಲಿದೆ. ಅದು ಅಲ್ಲೇ ಕಲ್ಲು ಚಪ್ಪಡಿಯ ಮೇಲೆ ಹತ್ತಿ ತನ್ನೆಲ್ಲ ದಂತಪಂಕ್ತಿಗಳನ್ನು ತೋರಿಸುತ್ತ ಹೆದರಿಸುತ್ತಿದೆ.
ಕಾಯಿ, ಹಣ್ಣು ಕಿತ್ತುಕೊಳ್ಳುವ ಕೋತಿಗಳು ಗೊತ್ತು. ಆದರೆ ಪರ್ಸ್ ಎಗರಿಸುವ ಈ ಆಧುನಿಕ ಕೋತಿ ನೋಡುತ್ತಿರುವುದು ಇದೇ ಮೊದಲು. ಹಣ್ಣು ಕಾಯಿಯಿರುವ ಬುಟ್ಟಿಯನ್ನು ಬಿಟ್ಟು ಪರ್ಸನ್ನೇ ಏಕೆ ಕಸಿಯಿತೋ? ಅಷ್ಟರಲ್ಲಿ ಈ ಘಟನೆ ಗಮನಿಸಿದ ಹಳ್ಳಿಗರಿಬ್ಬರು ನನ್ನಂತೆ ಹತ್ತಿರ ಹೋಗುವಷ್ಟರಲ್ಲಿ ಹುಷಾರಾದ ಕೋತಿ ಅಲ್ಲೇ ವಿಶಾಲವಾಗಿ ಬೆಳೆದಿರುವ ಆಲದ ಮರ ಏರತೊಡಗಿತು. 'ಏನಾಯ್ತು...' ಎನ್ನುತ್ತಾ ಇನ್ನೊಂದಿಬ್ಬರು ಸೇರಿದರು. 'ಕೋತಿ ಪರ್ಸ್ ಎತ್ತಿಕೊಂಡು ಹೋಗಿದೆ' ಎಂದು ಸೌಮ್ಯ ಕೋತಿಯೆಡೆ ತೋರಿಸುತ್ತಿದ್ದರೆ, ಅಲ್ಲಿ ಮರದ ಮೇಲೆ ಕುಳಿತು ಕೋತಿ ತಪಾಸಣೆ ಶುರುಮಾಡಿತ್ತು.

ಪರ್ಸಿಗೆ ಜಿಪ್ ಇಲ್ಲ. ಎರಡು ಲೋಹದ ಕಡ್ಡಿಗಳನ್ನು 's' ಆಕೃತಿಯಲ್ಲಿ ಬಾಗಿಸಿ ತುದಿಯಲ್ಲಿ ದಪ್ಪದಾಗಿದ್ದು, ಜೋರಾಗಿ ಒತ್ತಿದಾಗ ಒಂದಕ್ಕೊಂದು ಬೆಸೆದು ಲಾಕ್ ಆಗುತ್ತದೆ. ಈ ತರಹದ ಪರ್ಸ್ ಎಗರಿಸುತ್ತಿರುವುದು ಇದೇ ಮೊದಲಿರಬೇಕು. ಕೋತಿ ಹರಸಾಹಸ ಮಾಡುತ್ತಿದೆ. ತೆರೆಯಲಾಗುತ್ತಿಲ್ಲ. ತಿರುಗಿಸಿ ಕಚ್ಚುತ್ತಿದೆ. ಊಹೂಂ... ಪರ್ಸ್ ಎಗರಿಸುವುದಲ್ಲ ಅದನ್ನು ತೆರೆಯುವುದೂ ಒಂದು ಕಲೆಯೇ ಎಂಬುದು ಈ ಕಳ್ಳ ಕೋತಿಗೆಲ್ಲಿ ತಿಳಿಯಬೇಕು.

ಅಷ್ಟರಲ್ಲಿ ಸೌಮ್ಯಳ ಒಂದು ಮಾತು ಅಲ್ಲಿದ್ದ ನಾಲ್ಕೈದು ಜನರಲ್ಲಿ ಹೊಸ ಚೈತನ್ಯವನ್ನು ಮೂಡಿಸಿಬಿಟ್ಟಿತ್. ಅಲ್ಲಿದ್ದವರಲ್ಲೊಬ್ಬ 'ಪರ್ಸ್ ನಲ್ಲೇನಿದೆ?' ಎಂದು ಸಹಜ ಕುತೂಹಲವೆಂಬಂತೆ ಕೇಳಿದ. 'ನನ್ನ ಮೊಬೈಲಿದೆ' ಎಂದು ದುಗುಡಗೊಂಡ ಸೌಮ್ಯ ಉತ್ತರಿಸಿದಳು. ತಕ್ಷಣ ಚುರುಕಾದರು ಅಲ್ಲಿದ್ದವರು. ಒಬ್ಬ 'ಕ್ಯಾಟರ್ ಬಿಲ್ ತಾರೋ' ಎಂದು ಹುಡುಗನೊಬ್ಬನನ್ನು ಓಡಿಸಿದ. ಮತ್ತೊಬ್ಬರು ಸಣ್ಣ ಕಲ್ಲುಗಳನ್ನು ಆಯ್ದುಕೊಂಡರೆ, ಇನ್ನೊಬ್ಬರು 'ಅಂಗಡಿಯಿಂದ ಬಾಳೆಹಣ್ಣು ತನ್ನಿ' ಅಂದರು. ಬಾಳೆಹಣ್ಣು ತಂದುಕೊಟ್ಟೆ. ಅಷ್ಟರಲ್ಲಿ ಕ್ಯಾಟರ್ ಬಿಲ್ ಬಂತು.'Y' ಆಕಾರದ ಮರಕ್ಕೆ ರಬ್ಬರ್ ಕಟ್ಟಿರುತ್ತಾರೆ. ಅದರಲ್ಲಿ ಕಲ್ಲಿಟ್ಟು ಎಳೆದು ಗುರಿಯಿಟ್ಟು ಹೊಡೆಯುತ್ತಾರೆ. ಇದೊಂದು ಅದ್ಭುತ ಕಲೆಯೇ ಸರಿ. ಒಬ್ಬ ಕಲ್ಲನ್ನು ಗುರಿಯಿಟ್ಟು ಎಸೆಯುತ್ತಾನೆ. ಮುಂದಿದ್ದ ತಾರು ರಸ್ತೆಯಲ್ಲಿ ವಾಹನಗಳು ಬಂದು ಹೋಗುತ್ತಿದ್ದವು. ವಾಹನಗಳಿಗೆ ಬೀಳದಂತೆ ಅವು ಹೋದ ಮೇಲೆ ಕಲ್ಲನ್ನು ಎಸೆಯುತ್ತಿದ್ದರು.

ಅದೋ ಮಹಾನ್ ಚತುರ ಕೋತಿ. ಒಂದೊಂದೇ ರೆಂಬೆ ನೆಗೆಯುತ್ತಾ ಮೇಲೆ ಮೇಲೆ ಹತ್ತುತ್ತಿದೆ. ಅಲ್ಲಲ್ಲೇ ಕೂತು ಪರ್ಸ್ ತೆರೆಯಲು ಶತಪ್ರಯತ್ನ ಮಾಡುತ್ತಿದೆ. ಆ ಚಾಲಾಕು ಕೋತಿಗೆ ಈ ಚುರುಕು ಜನರೇ ಸಾಟಿ ಎಂಬಂತಿತ್ತು. ನಮಗಂತೂ ಕೋತಿ ಕಾಣಿಸದಾಯ್ತು. ಸುಮಾರು ಐವತ್ತು ಅಡಿಗೂ ಎತ್ತರದಲ್ಲಿ ರೆಂಬೆಯಿಂದ ರೆಂಬೆಗೆ ಹಾರುತ್ತಿದ್ದ, ಬಚ್ಚಿಟ್ಟುಕೊಳ್ಳುತ್ತಿದ್ದ ಆ ಕೋತಿಯನ್ನು ಗಮನಿಸಲು ನಮ್ಮ ಕಣ್ಣು ಸೋಲುತ್ತಿತ್ತು.
ಆಗ ಅಲ್ಲಿದ್ದವರೊಬ್ಬರು 'ಮೊಬೈಲ್ ಗೆ ರಿಂಗ್ ಕೊಡ್ರಿ' ಎಂದು ವಿಚಿತ್ರವಾದ ಐಡಿಯಾ ಕೊಟ್ಟರು. ನಾನು ನನ್ನ ಫೋನ್ ನಿಂದ ಕೋತಿಯ ಕೈಲಿರುವ ಪರ್ಸ್ ನಲ್ಲಿರುವ ಫೋನ್ ಗೆ ರಿಂಗಿಸತೊಡಗಿದೆ. ಆಗ ಏಕಕಾಲದಲ್ಲಿ ಕೆಲವು ಘಟನೆಗಳು ಜರುಗಿದವು. ಆ ಕೋತಿ ಅದೇನು ಮಂತ್ರ ಪಟಿಸಿತೋ ಪರ್ಸ್ ತೆಗೆದುಕೊಂಡಿತು. ನಾನು ಫೋನ್ ಮಾಡುತ್ತಿದುದರಿಂದ ರಿಂಗಣದ ಶಬ್ದ ಆಗಿಯೇ ಇರುತ್ತದೆ. ಕ್ಯಾಟರ್ ಬಿಲ್ ನಿಂದ ಬಾಣದಂತೆ ಹೊರಟ ಕಲ್ಲೊಂದು ಪಟಾರ್ ಎಂದು ಕೋತಿಗೆ ಬಡಿಯಿತು. ತಕ್ಷಣ ಗಾಬರಿಗೊಂಡ ಅದು ಪರ್ಸ್ ತಿರುಗಾ ಮುರುಗಾ ಮಾಡಿಬಿಟ್ಟಿತು. ಅಷ್ಟು ಎತ್ತರದಿಂದ ಮೊಬೈಲ್ ಸುಯ್ ಎಂದು ಬಂದುಬಿಟ್ಟಿತು. ಕಪಿಲ್ ದೇವ್ ರಿಚರ್ಡ್ ನ ಕ್ಯಾಚ್ ಹಿಡಿದದ್ದು ಹೆಚ್ಚಲ್ಲ. ಅಲ್ಲಿದ್ದವನೊಬ್ಬ ಅಷ್ಟೊಂದು ಚಾಕಚಕ್ಯತೆಯಿಂದ ಅದನ್ನು ಹಿಡಿದನೆಂದರೆ ಕಪಿಲ್ ಕೂಡ ತಲೆದೂಗಬೇಕು. ಹಿಂದೆಯೇ ಪರ್ಸ್ ನಿಂದ ಜಾರಿದ ಮನೆ ಬೀಗದ ಕೈ ಕೂಡ ಹಿಡಿದು ತಂದುಕೊಟ್ಟ. ಕೋತಿ ಪರ್ಸನ್ನು ಜಾಲಾಡತೊಡಗಿತ್ತು. ಇದ್ದ ಒಂದೆರಡು ಚಿಲ್ಲರೆ ಕಾಸು, ಕುಂಕುಮದ ಪೊಟ್ಟಣವನ್ನೂ ಎತ್ತಿ ಎಸೆಯಿತು. ಕೊನೆಗೆ ಪರ್ಸನ್ನೂ ಎಸೆಯಿತು. ಎಲ್ಲವನ್ನೂ ಆರಿಸಿಕೊಂಡು ಕ್ಯಾಚ್ ಹಿಡಿದವನಿಗೆ ಧನ್ಯವಾದ ಹೇಳಹೋದರೆ ಆತ ಬೀಡಿ ಹಚ್ಚುತ್ತಾ ರಿಲ್ಯಾಕ್ಸ್ ಆಗುತ್ತಿದ್ದ. ಧನ್ಯವಾದ ಹೇಳಿದರೆ, ಏನೂ ಆಗಿಯೇ ಇಲ್ಲವೆಂಬಂತೆ ಮುಗುಳ್ನಕ್ಕ. ಸಹಾಯ ಮಾಡುವುದು ಸಹಜ ಧರ್ಮವೇ ಹೊರತು ವಿಶೇಷವಾದುದ್ದೇನೂ ಇಲ್ಲ ಎಂಬ ನೆಲದತತ್ವದ ಪ್ರತಿರೂಪದಂತಿದ್ದ.

ಬಾಳೆಹಣ್ಣಿನ ಹಣ ಕೊಡಲು ಹೋದರೆ, 'ಪರ್‍ವಾಗಿಲ್ಲ ಬಿಡಿ' ಎಂದು ಅಂಗಡಿಯ ಹೆಂಗಸು ಅಂದರೂ ಹಣ ಕೊಟ್ಟು ಬಂದಳು ಸೌಮ್ಯ. ಪೂಜೆ ಮಾಡಿಸಿ ಹೊರಬಂದಾಗ ಅಲ್ಲಿ ಯಾರೂ ಇರಲೇ ಇಲ್ಲ. 'ಪರ್ಸ್ ನಲ್ಲಿದ್ದುದು ಅಷ್ಟೇನಾ?' ಎಂದು ಪ್ರಶ್ನಿಸಿದೆ. 'ನಾನೊಂದು ಲಕ್ಷ್ಮಿ ಫೋಟೋ ಇಟ್ಟುಕೊಂಡಿದ್ದೆ. ಅದು ಸಿಗಲೇಇಲ್ಲ' ಎಂದು ಮುಖ ಚಿಕ್ಕದು ಮಾಡಿಕೊಂಡಳು. ಅದುವರೆಗೂ ಮೌನ ಪ್ರೇಕ್ಷಕನಂತೆ ನೋಡುತ್ತಿದ್ದ ಮಗ ಓಂ, 'ಅಮ್ಮ ಅದು ಅಮ್ಮಕೋತಿನೋ, ಅಪ್ಪಕೋತಿನೋ?' ಎಂದು ಪ್ರಶ್ನೆ ಎಸೆದು ನಮ್ಮನ್ನು ತಬ್ಬಿಬ್ಬುಗೊಳಿಸಿಬಿಟ್ಟ.

Wednesday, August 20, 2008

ಆಕ್ ತೇಲ್ ನ ಫೇರಿಟೇಲ್


ಸಿಕ್ಕ ಸಿಕ್ಕ ಹುಳ ಹುಪ್ಪಟೆಗಳನ್ನು ಮನೆಗೆ ತರುವ ಅಭ್ಯಾಸ ಕೆಲ ಬಾರಿ ನನಗೆ ತೊಂದರೆಗಳನ್ನು ತಂದಿದೆ. ಒಮ್ಮೆ ತೋಟದಲ್ಲಿ ಅಡ್ಡಾಡುತ್ತಿದ್ದಾಗ ಮಾವಿನ ಗಿಡವೊಂದರಲ್ಲಿ ಎಲೆ ಕೆಳಗೆ ವಿಚಿತ್ರವಾದ ಹುಳಗಳು ಕಾಣಿಸಿದವು. ಎಲೆ ಹಸಿರು ಬಣ್ಣವಿದ್ದ ಅವು ಎಲೆಯನ್ನು ತಿನ್ನುತ್ತಿದ್ದುದು ನೋಡಿದೊಡನೆಯೆ ಇವು ಕಂಬಳಿ ಹುಳುಗಳು, ಮುಂದೆ ಚಿಟ್ಟೆಯಾಗಿ ರೂಪಾಂತರ ಹೊಂದುತ್ತವೆ ಎಂದು ತೀರ್ಮಾನಿಸಿಬಿಟ್ಟೆ. ನಾಲ್ಕೈದು ಹುಳುಗಳನ್ನು ಕೆಲವು ಮಾವಿನ ಎಲೆಗಳೊಂದಿಗೆ ಒಂದು ರಟ್ಟಿನ ಡಬ್ಬಿಯಲ್ಲಿ ಹಾಕಿ ಮನೆಗೆ ತಂದೆ. ಮನೆಗೆ ತರುವಾಗ ಒಂದು ಹುಳ ನನ್ನ ಕೈ ಮೇಲೆ ಬಿತ್ತು. ತಕ್ಷಣವೇ ನನ್ನ ಕೈಯೆಲ್ಲಾ ಉರಿ, ಕಡಿತ, ನೋವು ತಡೆಯಲಾಗದೆ ಎಣ್ಣೆ, ವಿಕ್ಸ್ ಏನೆಲ್ಲಾ ಹಚ್ಚಿದರೂ ಬಹಳ ಹೊತ್ತು ನರಳಿದೆ. ಇನ್ನು ಮನೆಯಲ್ಲಿ ಎಲ್ಲರೂ ಒಂದು ಸುತ್ತು ಉರಿಯ ಸುಖ ಅನುಭವಿಸಿ ನನ್ನನ್ನು ಶಪಿಸಿದರು. ಈ ಹುಳದ ರಕ್ಷಣಾ ತಂತ್ರವಿದು.



ಮಾರನೆ ದಿನ ನಮ್ಮ ಪಕ್ಕದ ತೋಟದ ನರಸಿಂಹಯ್ಯನಿಗೆ ಈ ಹುಳ ತೋರಿಸಿ ಇದರ ಹೆಸರು ಕೇಳಿದೆ. "ಇದು ಆಕ್ ತೇಲ್ ಸಾಮಿ. ಮೊದ್ಲು ಔಷ್ದ ಹೊಡ್ಸಿ. ಇದು ಗಿಡ್ದಾಗಿದ್ರೆ ಮಾವಿನ ಕಾಯಿ ಕೀಳಾಕೆ ಯಾರೂ ಬರಲ್ಲ" ಅಂದ. ಆಕ್ ತೇಲ್ ತೆಲುಗು ಪದ. ಅದನ್ನು ಕನ್ನಡೀಕರಿಸಿದರೆ "ಎಲೆ ಚೇಳು" ಎಂದಾಗುತ್ತೆ. ನಿಜವೇ. ಇದು ಎಲೆಯ ಮೇಲಿನ ಚೇಳೇ! ಕೈಗೆ ತಗುಲಿದರೆ ಥೇಟ್ ಚೇಳು ಕಡಿದಂತೆಯೇ. ಬಲ್ಲವನೇ ಬಲ್ಲ ಉರಿಯ ಸವಿಯ!



ಮನೆಯಲ್ಲಿ ಎಲೆ ತಿಂದು ಬೆಳೆದ ಹುಳ ಡಬ್ಬದಲ್ಲೇ ರೆಷ್ಮೆ ಹುಳದಂತೆ ಗೂಡು ನೇಯತೊಡಗಿತು. ಆಗ ಇದು ಚಿಟ್ಟೆಯಲ್ಲ ಪತಂಗ ಎಂದು ನನಗೆ ಮನವರಿಕೆಯಾಯಿತು. ಮೇಲೆ ಬಲೆ ನೇಯ್ದು ಕಂದು ಬಣ್ಣದ ಕಾಯಿಯಂತಾಗಿ ಡಬ್ಬಕ್ಕೆ ಅಂಟಿಕೊಂಡಿತ್ತು.




ಪತಂಗ ಚಿಟ್ಟೆಯ ಹತ್ತಿರ ಸಂಬಂಧಿ. ಎರಡೂ "ಲೆಪಿಡಾಪ್ಟೆರಾ" ವರ್ಗಕ್ಕೆ ಸೇರಿದವು. ಪತಂಗಗಳು ನಿಶಾಚರ ಜೀವಿಗಳು. ಆದರೆ ಕೆಲವು ಮುಸ್ಸಂಜೆ ಬೆಳಕಲ್ಲಿ ತಮ್ಮ ಚಟುವಟಿಕೆ ನಡೆಸಿದರೆ, ಕೆಲವು ಹಗಲು ವಾಸಿಗಳು.




ಕೆಲ ದಿನಗಳಾದ ಮೇಲೆ ಹೊರ ಬಂದಿದ್ದ ಪತಂಗದ ಫೋಟೊ ತೆಗೆದು ಕತ್ತಲಲ್ಲಿ ಹೊರಗೆ ಬಿಟ್ಟೆ. ಪತಂಗ ಹಸಿರು ಬಣ್ಣವಿದ್ದು ರೆಕ್ಕೆಯ ತುದಿ ಕಂದು ಬಣ್ಣವಿತ್ತು. ಇಂಟರ್ನೆಟ್ ನಲ್ಲಿ ಇದರ ಬಗ್ಗೆ ಹುಡುಕಿದಾಗ ಇದರ ಹೆಸರು "ಸ್ಮಾಲರ್ ಪರಾಸ". ಇದರ ವೈಜ್ಞಾನಿಕ ಹೆಸರು parasa chloris. ಕೆಲ ಪತಂಗಗಳ ಕಂಬಳಿ ಹುಳುಗಳು ಕೃಷಿಗೆ ಹಾನಿ ಮಾಡಿದರೆ, ರೇಷ್ಮೆಯಂತಹವು ಅತ್ಯಂತ ಲಾಭದಾಯಕ. ಚಿಟ್ಟೆಯಂತೆ ಬಣ್ಣ, ಬಳುಕು, ಲಾವಣ್ಯವಿಲ್ಲದಿದ್ದರೂ ಪತಂಗಗಳೂ ಸೌಂದರ್ಯದ ಖನಿಗಳೇ. ನಿಶಾಚರಿಗಳಾದ ಇವನ್ನು ನಾವು ನೋಡುವುದಿಲ್ಲವಷ್ಟೇ. ಉರಿಯೊಂದಿಗೆ ಇವುಗಳ ಸೌಂದರ್ಯವನ್ನೂ ಆಸ್ವಾದಿಸೋಣ!

Thursday, August 14, 2008

ಮುಂಜಾವಿನ ಮೋಹಕ ಚಳಿ


ಬೆಳ್ಳನೆ ಬೆಳಕಾಗಿ, ಸೂರ್ಯನ ಕಿರಣ ಸೋಕುವ ಮುಂಚಿನ ಅಮೂಲ್ಯ ಕ್ಷಣಗಳ 'ಚಳಿ' ಅನುಭವವನ್ನು ಶಬ್ಧ ಮತ್ತು ಚಿತ್ರದಲ್ಲಿ ನಿರೂಪಿಸುವ ಪ್ರಯತ್ನವಿದು.
ಮುಂಜಾವಿನ ಮಂಜಿನ ಸರಿ
ಇಳೆಗಿಳಿದಿತ್ತು,
ಭೂವ್ಯೋಮದ ಅಂತರವನು
ಅಳಿಸುತಲಿತ್ತು
ಸುರಲೋಕದ ಅಮೃತರಸ
ಬುವಿಜಡತೆಯನ್ನೆಲ್ಲ
ತೊಳೆ ತೊಳೆಯುತ ಕಣ್ ಬಿಡಿಸಲು
ಅವತರಿಸಿತ್ತೋ,
ಮೇಣ್ ಗಗನವೆ ಮಂಜಾಗುತ
ಕುಸಿಯುತ ಬಿತ್ತೋ
ಎಂಬಂತಿದೆ ಈ ಮಾಗಿಯ ಈ ಮಂಜಿನ ಆಟ
ಸುರಮಾಂತ್ರಿಕ ಸೃಜಿಸಿರುವೀ ಕಣ್ ಕಟ್ಟಿನ ಮಾಟ!
-ಜಿ.ಎಸ್.ಎಸ್.
ಬೆಚ್ಚಗೆ, ನಚ್ಚಗೆ ಕಂಬಳಿ ಮುಚ್ಚಿಕೊಂಡು ಮಲಗುವುದೂ ಸುಖವೇ...

ಮೈಚಳಿ ಕೊಡವಿ ಕಣ್ಬಿಟ್ಟಾಗ, ಮುಂದಿನ ಲೋಕವೆಲ್ಲಾ ಅನಂತತೆಯಲ್ಲಿ ಲೀನವಾಗುವಂತೆ ಮಂಜು ಆವರಿಸಿ ಜಗವೆಲ್ಲಾ ಕನಸಿನಂತೆ ಭಾಸವಾಗುವುದೂ ಸುಖವೇ...

ಅದೃಶ್ಯ ಮಂಜಿನ ಹಾದಿಯಲ್ಲಿ, ಪ್ರತಿ ಹೆಜ್ಜೆಯೂ ಅನ್ವೇಷಣೆಯಂತೆ, ಬಾಯಲ್ಲಿ ಸುಳ್ಳೇ ಹೊಗೆ ಬಿಡುತ್ತಾ ನಡೆವುದೂ ಸುಖವೇ...

ಪೂಜಾರಿಯ ನಡುಕ, ಪೇಪರಿನವನ ಕಟಕಟ, ಹಾಲಿನವನ ಮರಗಟ್ಟುವಿಕೆ ಚಳಿಯ ಬೇಷರತ್ ಕೊಡುಗೆಗಳು.

ಸುಡುಸುಡು ಕಾಫಿ, ಕೈ ಹೆಣೆದ ಸಂಗಾತಿ, ಕವುಚಿಕೊಳ್ಳುವ ಮುದ್ದು ಮಕ್ಕಳು, ಕಿವಿಮುಚ್ಚುವ ಮಫ್ಲರು, ಮೈಯಪ್ಪುವ ಶಾಲು... ಇವೆಲ್ಲಾ ಚುಮುಚುಮು ಚಳಿಯ ಅಮೂರ್ತ ಕ್ಷಣಗಳಲ್ಲಿ ಅವಿರ್ಭವಿಸುವ ಚುಂಬಕಗಳು.

ಮುತ್ತಿನ ಮಣಿಗಳನ್ನು ಹೊತ್ತಿರುವ ಎಲೆ, ಹೂ, ಜೇಡರಬಲೆ, ಚಿಟ್ಟೆ, ಹುಳ ಎಲ್ಲವೂ ಸ್ತಬ್ಧ ಮತ್ತು ಸಶಬ್ಧ. ಇಲ್ಲಿ ಮನಸ್ಸು ಮತ್ತು ಕಣ್ಣಿಗೆ ಮಾತ್ರ ಕೆಲಸ. ಹಬೆಯಂತೇಳುವ ಮಂಜಿನ ದೃಶ್ಯಾನುಭವಗಳು ಕಣ್ಣಿನಿಂದ ಮನಸ್ಸಿನೊಳಗೆ ತುಂಬುತ್ತಿದ್ದಂತೆ ತೇಲುವಂತಹ ಪ್ರಫುಲ್ಲತೆ.

ವ್ಯಾಸಲೀನ್, ಕೋಲ್ಡ್ ಕ್ರೀಮ್, ಸುರಿಯುವ ಮೂಗು, ಕರಕರ ಗಂಟಲು - ಈ ಎಲ್ಲಾ ಕಿರಿಕಿರಿ ಸಂಗಡವೇ ಗಡಗಡ ಗುದಗುಡುವ ಮನಸ್ಸನ್ನು ಚಳಿಯ ಕಿರ್ಗಾಳಿಗೆ, ಮಂಜಿಗೆ ಒಡ್ಡಿ ಸುಖಿಸೋಣ.